More

    ಬಿಜೆಪಿಯವರಿಗೆ ಆಡಳಿತ ಅನುಭವ ಇಲ್ಲ; ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪ

    ಯಲಬುರ್ಗಾ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ, ಅನಾಚಾರವೇ ಹೆಚ್ಚಾಗಿದೆ. ಎರಡು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು.

    ಬಿಜೆಪಿಯವರಿಗೆ ಆಡಳಿತದ ಅನುಭವವಿಲ್ಲ. 17 ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ, ವಾಮಮಾರ್ಗದಿಂದ ಸರ್ಕಾರ ರಚಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಜನಪರ ಕಾಳಜಿ ಇಲ್ಲದ ಸರ್ಕಾರ ಇದೆ. ಈ ಸರ್ಕಾರ ಆಡಳಿತ ನಡೆಸಲು ಅಯೋಗ್ಯವಾಗಿದೆ ಎಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

    ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಉಪ ಚುನಾವಣೆಯಲ್ಲಿ ಹಣ ಹಂಚುವುದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಸ್ಕಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಆಪಾದಿಸಿದರು.

    ಸಾರಿಗೆ ನೌಕರರು ಒಂದು ವಾರದಿಂದ ಮುಷ್ಕರ ನಡೆಸುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ. ಆದರೆ, ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ನೈತಿಕ ಬೆಂಬಲ ಇದೆ. ಸರ್ಕಾರ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಬಿ.ಎಂ.ಶಿರೂರು, ರಾಮಣ್ಣ ಸಾಲಬಾವಿ, ಸಂಗಣ್ಣ ಟೆಂಗಿನಕಾಯಿ, ಮಹಾಂತೇಶ ಗಾಣಿಗೇರ್, ಶರಣಪ್ಪ ಕೊಪ್ಪಳ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts