More

    ಯಕ್ಷಗಾನ ಪ್ರದರ್ಶನಕ್ಕೂ ಕರೊನಾ ನೆರಳು

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಚೆಂಡೆ ಸದ್ದು, ಭಾಗವತರ ಕಂಚಿನ ಕಂಠ, ನವರಸಗಳ ಗಾಯನ, ಮಾತು ಆಲಿಸದೆ ತಿಂಗಳೇ ಉರುಳಿದೆ. ಕರಾವಳಿ ಗಂಡುಕಲೆ ಯಕ್ಷಗಾನ ತನ್ನ ಸ್ವಂತ ನೆಲದಲ್ಲೇ ಮೊದಲ ಬಾರಿಗೆ ಸದ್ದುಗದ್ದಲವಿಲ್ಲದೆ ವರ್ಷದ ಸೇವೆಯನ್ನು ಪೂರ್ಣಗೊಳಿಸುವ ಸೂಚನೆ ಗೋಚರಿಸುತ್ತಿದೆ.

    ಮೇ 3ರ ತನಕ ಕರೊನಾ ಲಾಕ್‌ಡೌನ್ ಇದೆ. ನಂತರ ಲಾಕ್‌ಡೌನ್ ಸಡಿಲಿಕೆಯಾದರೂ ಯಕ್ಷಗಾನದಂತಹ ದೊಡ್ಡ ಗುಂಪು ಸೇರುವ ಕಾರ್ಯಕ್ರಮಗಳಿಗೆ ತಕ್ಷಣ ಅನುಮತಿ ಸಿಗುವುದು ಅನುಮಾನ.
    ಪತ್ತನಾಜೆ ದಿನ (ಮೇ 24) ಯಕ್ಷಗಾನ ಮೇಳಗಳು ವರ್ಷದ ಕೊನೆಯ ಸೇವೆಯಾಟ ಪ್ರದರ್ಶಿಸಿ ಕಲಾವಿದರು ಗೆಜ್ಜೆ ಬಿಚ್ಚುವುದು ಸಂಪ್ರದಾಯ. ಇನ್ನು ಹೆಚ್ಚು ಕಡಿಮೆ 35 ದಿನಗಳಷ್ಟೇ ಬಾಕಿ. ಈ ಅವಧಿಯಲ್ಲಿ ಮತ್ತೆ ಯಕ್ಷಗಾನ ಪ್ರದರ್ಶನಗಳು ನಡೆಯುವುದು ಬಹುತೇಕ ಅನುಮಾನ. ಮುಂದಿನ ಪ್ರದರ್ಶನಗಳ ಬಗ್ಗೆ ಇದುವರೆಗೆ ಹೆಚ್ಚಿನ ಯಕ್ಷಗಾನ ಮೇಳಗಳ ಆಯೋಜಕರು ಅಂತಿಮ ತೀರ್ಮಾನ ಕೈಗೊಳ್ಳದಿದ್ದರೂ, ಪ್ರದರ್ಶನ ನೀಡುವ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ.
    ಬಹುತೇಕ ಯಕ್ಷಗಾನ ಮೇಳಗಳಿಗೆ ಹರಕೆಯಾಟಗಳೇ ಜೀವಾಳ. ಈ ಬಾರಿ ಪತ್ತನಾಜೆ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ನಡೆಯುವ ಪ್ರದರ್ಶನಗಳನ್ನಷ್ಟೇ ಯಕ್ಷಗಾನ ಅಭಿಮಾನಿಗಳು ನಿರೀಕ್ಷಿಸಬಹುದು.

    ಧರ್ಮಸ್ಥಳ ಮೇಳ ನಿರ್ಧಾರ
    ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಈ ವರ್ಷದ ತಿರುಗಾಟ ಪೂರ್ಣಗೊಳಿಸುತ್ತಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬಪ್ಪನಾಡು ಮೇಳ ಮತ್ತು ಗೋಳಿಗರಡಿ ಮೇಳದ ಆಯೋಜಕರು ಕೂಡ ವರ್ಷದ ಪ್ರದರ್ಶನ ಕೊನೆಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಟೀಲು ಮೇಳದ ಈ ವರ್ಷದ ಪ್ರದರ್ಶನ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಶ್ರೀಹರಿ ನಾರಾಯಣ ಆಸ್ರಣ್ಣ ತಿಳಿಸಿದ್ದಾರೆ. ಮೇಳದ ಕಲಾವಿದರು ಹಾಗೂ ಇತರ ಕೆಲವು ಮೇಳದ ಯಜಮಾನರ ಜತೆ ಮಾತುಕತೆ ನಡೆಸಲಾಗಿದ್ದು, ಲಾಕ್‌ಡೌನ್ ಅವಧಿ ಮುಗಿದ ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಮೇಳದ ಯಜಮಾನ ಕಿಶನ್ ಹೆಗ್ಡೆ ತಿಳಿಸಿದ್ದಾರೆ.

    ಲಾಕ್‌ಡೌನ್‌ನಿಂದಾಗಿ ಕಟೀಲು ಆರೂ ಮೇಳಗಳ ತಿರುಗಾಟ ನಿಂತಿದ್ದರೂ ಚೌಕಿಯ ದೇವರಿಗೆ ನಿತ್ಯ ಪೂಜೆ ನಡೆಯುತ್ತಿದೆ. ಲಾಕ್‌ಡೌನ್ ತೆಗೆದರೆ ತಿರುಗಾಟ ಮುಂದುವರಿಸಬೇಕೇ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಏ.20ರಂದು ಸರ್ಕಾರ ಯಾವ ರೀತಿ ಆದೇಶ ನೀಡುತ್ತದೆ ಎಂಬುದನ್ನು ಗಮನಿಸಿ ದೇವಳದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಣಯಿಸಲಾಗುವುದು.
    – ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ
    ಕಟೀಲು ಯಕ್ಷಗಾನ ಮೇಳಗಳ ಯಜಮಾನ

    ಯಕ್ಷಗಾನ ಕಲಾವಿದರಿಗೆ ವೇತನ ಕಡಿತವಿಲ್ಲ
    ಕುಂದಾಪುರ: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳ ಯಕ್ಷಗಾನ ಮೇಳಗಳ ಕಲಾವಿದರು, ಸಿಬ್ಬಂದಿ ಸಂಬಳ ಕಡಿತ ಮಾಡದಂತೆ ಆದೇಶ ಮಾಡಲಾಗಿದೆ ಎಂದು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
    ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಕರೊನಾ ಜಾಗೃತಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,ಸಾಲಿಗ್ರಾಮ ಹಾಗೂ ಪೆರ್ಡೂರು ಡೇರೆ ಮೇಳಗಳಿಗೂ ದೇವಸ್ಥಾನಕ್ಕೂ ನೇರ ಸಂಬಂಧವಿಲ್ಲದ ಕಾರಣ ಪರಿಹಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪೂಜಾರಿ ಹೇಳಿದರು.

    ಮೀನುಗಾರರ ಉಳಿತಾಯ ಪರಿಹಾರ ನಿಧಿ ಕಳೆದ ಮೂರು ವರ್ಷದಿಂದ ಬಂದಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ, 5.50 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ಪಾವತಿಸುವ ವ್ಯವಸ್ಥೆ ಮಾಡುತ್ತದೆ.
    – ಕೋಟ ಶ್ರೀನಿವಾಸ ಪೂಜಾರಿ
    ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts