More

    ಯಕ್ಷಗಾನ ಪ್ರದರ್ಶನಗಳ ಪುನರುತ್ಥಾನ: ಶಾಸಕ ಸುಕುಮಾರ ಶೆಟ್ಟಿ

    ಕೊಲ್ಲೂರು: ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪರಂಪರೆಯ ಪರಿಮಿತಿಯಲ್ಲಿ ಯಕ್ಷಗಾನ ಪ್ರದರ್ಶನಗಳ ಪುನರುತ್ಥಾನವಾಗಬೇಕು ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಆಶಿಸಿದರು.
    ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಶನಿವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ 2019ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಯಕ್ಷಗಾನ ಶಾಸ್ತ್ರೀಯ ಕನ್ನಡ ಪದಗಳನ್ನೇ ಬಳಕೆ ಮಾಡಿ ತನ್ನ ಪ್ರಬುದ್ಧತೆ ಕಾಪಾಡಿಕೊಂಡು ಬಂದಿದೆ. ನಮ್ಮ ಧರ್ಮ, ಸಂಸ್ಕೃತಿ ಹಾಗೂ ಪುರಾಣ ಕಥೆಗಳು ಇಂದಿನವರೆಗೂ ಈ ಮಣ್ಣಿನಲ್ಲಿ ಉಳಿಸುವಲ್ಲಿ ಯಕ್ಷಗಾನ ಪ್ರಮುಖ ಪಾತ್ರವಹಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಅಗಲಿದ ಯಕ್ಷಚೇತನರಿಗೆ ನುಡಿನಮನ ಸಲ್ಲಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ ಕುಮಾರ್ ಶೆಟ್ಟಿ, ಕ್ಷೇತ್ರ ಪುರೋಹಿತ ನರಸಿಂಹ ಭಟ್, ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಬಾಬು ಬೆಕ್ಕೇರಿ ಉಪಸ್ಥಿತರಿದ್ದರು.

    ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಕೆ.ಎಂ.ಶೇಖರ್ ಕಾರ್ಯಕ್ರಮ ನಿರೂಪಿಸಿದರು. ಅನಂತರ ಹಟ್ಟಿಯಂಗಡಿ ಮೇಳದವರಿಂದ ಭೀಷ್ಮ ವಿಜಯ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು.

    ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ
    ಕಲಾವಿದ ಅಂಬಾತನಯ ಮುದ್ರಾಡಿ ಅವರಿಗೆ ಒಂದು ಲಕ್ಷ ರೂ.ನಗದು, ಫಲಕದೊಂದಿಗೆ ಪಾರ್ತಿಸುಬ್ಬ ಪ್ರಶಸ್ತಿ, ಡಾ.ರಾಮಕೃಷ್ಣ ಗುಂದಿ ಅವರಿಗೆ 50 ಸಾವಿರ ರೂ.ನಗದು ಸಹಿತ ಗೌರವ ಪ್ರಶಸ್ತಿ ಹಾಗೂ ಆರ‌್ಗೋಡು ಮೋಹನದಾಸ್ ಶೆಣೈ, ಮಹಮ್ಮದ್ ಗೌಸ್, ಮುರೂರು ರಾಮಚಂದ್ರ ಹೆಗಡೆ, ಎಂ.ಎನ್.ಹೆಗಡೆ ಹಳವಳ್ಳಿ, ಹಾರಾಡಿ ಸರ್ವೋತ್ತಮ ಗಾಣಿಗ ಮತ್ತು ದಿ.ನಲ್ಲೂರು ಜನಾರ್ದನ ಆಚಾರ್ಯ ಅವರ ಪರವಾಗಿ ಪತ್ನಿ ಶಾರದಾ ಆಚಾರ್ಯ ಅವರಿಗೆ 25 ಸಾವಿರ ರೂ. ನಗದು ಸಹಿತ 2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯದ ಪುಸ್ತಕವನ್ನು ಶಾಸಕರು ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts