More

    ತೃತೀಯ ಲಿಂಗಿಯರಿಂದ ಯಕ್ಷಗಾನ ಸೇವೆ: ಇತಿಹಾಸದಲ್ಲೇ ಮೊದಲ ಬಾರಿ ಆಯೋಜನೆ

    ಹರೀಶ್ ಮೋಟುಕಾನ ಮಂಗಳೂರು
    ಸಮಾಜದಿಂದ ಉಪೇಕ್ಷಿಸಲ್ಪಟ್ಟ ತೃತೀಯ ಲಿಂಗಿಗಳು(ಮಂಗಳಮುಖಿಯರು) ದೇವರ ಆರಾಧಕರು. ಇದಕ್ಕೆ ನಿದರ್ಶನವಾಗಿ ಐವರು ತೃತೀಯ ಲಿಂಗಿಗಳು ಇತಿಹಾಸದಲ್ಲೇ ಮೊದಲ ಬಾರಿ ಯಕ್ಷಗಾನ ಆಯೋಜಿಸಿ ಶ್ರೀದೇವಿಯ ಸೇವೆ ಮಾಡಲು ನಿರ್ಧರಿಸಿದ್ದಾರೆ.

    ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಫೆ.25ರಂದು ಸಾಯಂಕಾಲ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಿದ್ದಾರೆ. ಸುಮಾರು 1,500ದಷ್ಟು ಜನ ಸೇರಲಿದ್ದು, ಅಷ್ಟೂ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಅಶೋಕನಗರ, ದಂಬೇಲ್‌ನಲ್ಲಿ ವಾಸವಿರುವ ತೃತೀಯ ಲಿಂಗಿ ಐಶ್ವರ್ಯ ಪರಿವಾರದವರು ಈ ಯಕ್ಷಗಾನ ಆಯೋಜಿಸಿದ್ದಾರೆ. ದೇಣಿಗೆ ಪಡೆಯದೆ ತಾವು ಕೆಲಸ ಮಾಡಿ ಸಂಪಾದನೆ ಮಾಡಿ ಉಳಿಸಿದ ಹಣ ದೇವಿಯ ಸೇವೆಗೆ ವಿನಿಯೋಗಿಸಲು ಮುಂದಾಗಿದ್ದಾರೆ. ಇವರ ನಡೆಗೆ ಮೆಚ್ಚುಗೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

    ಕುಲಶೇಖರದಲ್ಲಿ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ್ದರೂ, ದೂರ ಮಾಡಿದರು. ನನ್ನಂತೆ ಮಂಗಳಾದೇವಿ, ಪಂಪ್‌ವೆಲ್ ಮೊದಲಾದೆಡೆಯ ಐವರು ಬಾಡಿಗೆ ಮನೆಯಲ್ಲಿ ಜತೆಯಾಗಿದ್ದೇವೆ. ಎಲ್ಲರೂ ಪದವೀಧರರು. ಸೆಕ್ಸ್ ವರ್ಕ್ ಮಾಡದೆ ಗೌರವಯುತವಾಗಿ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ದುಂದು ವೆಚ್ಚ ಮಾಡದೆ ಉಳಿತಾಯ ಮಾಡಿ ಒಳ್ಳೆಯ ಕೆಲಸಗಳಿಗೆ ಉಪಯೋಗಿಸುತ್ತಿದ್ದೇವೆ ಎಂದು ಐಶ್ವರ್ಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ದೇವರಲ್ಲಿ ಪ್ರಾರ್ಥಿಸಿ ನಾವು ಕೆಲಸ ಆರಂಭಿಸುತ್ತೇವೆ. ದೇವಿಯ ಆಶೀರ್ವಾದ ಸಿಕ್ಕಿದೆ. ಹಾಗಾಗಿ ಭಕ್ತಿಯಿಂದ ಸೇವಾರೂಪದಲ್ಲಿ ದೇವಿಗೆ ಪ್ರಿಯವಾದ ಯಕ್ಷಗಾನ ಸೇವೆಯಾಟ ಆಡಿಸುತ್ತಿದ್ದೇವೆ. ಪಾವಂಜೆ ಮೇಳದಲ್ಲಿ ಒಂದು ವರ್ಷದ ತನಕ ಮುಂಗಡ ಬುಕ್ಕಿಂಗ್ ಆಗಿದ್ದರೂ, ನಮ್ಮ ಮೇಲಿನ ಗೌರವದಿಂದ ಪಟ್ಲ ಸತೀಶ್ ಶೆಟ್ಟಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

    ಮಂಗಳಮುಖಿಯರು ಹುಟ್ಟಿದ ಹಬ್ಬಗಳಿಗೆ ದೊಡ್ಡಮಟ್ಟದಲ್ಲಿ ಪಾರ್ಟಿ ಮಾಡುವುದು ಸಾಮಾನ್ಯ. ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ದಿನ ಇತ್ತು. ದೇವಿಯ ಸೇವೆಯಾಗಿ ಯಕ್ಷಗಾನ ಆಡಿಸುವ ಸಂಕಲ್ಪ ಇತ್ತು. ಆ ದಿನ ಫೆ.25ರಂದು ಕೂಡಿ ಬಂದಿದೆ. ಸಾರ್ವಜನಿಕರು ಸಹಕಾರ ನೀಡಬೇಕು.
    ಐಶ್ವರ್ಯ ದಂಬೆಲ್
    ಯಕ್ಷಗಾನ ಸೇವಾರ್ಥಿ ತೃತೀಯ ಲಿಂಗಿ

    ತೃತೀಯಲಿಂಗಿಯರು ಯಕ್ಷಗಾನ ಸೇವೆ ಮಾಡಿಸುವುದು ಇತಿಹಾಸದಲ್ಲೇ ಮೊದಲು. ಅವರು ಕಷ್ಟದಲ್ಲಿ ಜೀವನ ಮಾಡುತ್ತಿದ್ದರೂ, ಯಕ್ಷಗಾನ ಸೇವೆ ಮಾಡಿಸಿ ಕಲಾವಿದರೊಂದಿಗೆ ನಾವು ಕೂಡ ಇದ್ದೇವೆ ಎಂಬುದನ್ನು ತೋರಿಸಿದ್ದಾರೆ. ಯಾವ ಮೇಳ ಎನ್ನುವುದು ಮುಖ್ಯ ಅಲ್ಲ. ಅವರಿಗೆ ಅಂಥ ಮನಸ್ಸು ಬಂದಿರುವುದು ನಿಜವಾಗಿಯೂ ಮೆಚ್ಚುವಂತದ್ದು.
    ಪಟ್ಲ ಸತೀಶ್ ಶೆಟ್ಟಿ
    ಸಂಚಾಲಕರು, ಪಾವಂಜೆ ಮೇಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts