More

    ಎಡೆಯೂರು ಸಿದ್ಧಲಿಂಗೇಶ್ವರ ರಥೋತ್ಸವ ಈ ಬಾರಿ ಸರಳ

    • ಮಹದೇವಸ್ವಾಮಿ

    ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು 15ನೇ ಶತಮಾನದಲ್ಲಿ ಜೀವಿಸಿದ್ದ ಮಹಾಮಹಿಮರು. ಏಳುನೂರು ವಿರಕ್ತರು ಹಾಗೂ ಮುನ್ನೂರು ಜಂಗಮರೊಂದಿಗೆ ಭಾರತವನ್ನೆಲ್ಲಾ ಸಂಚರಿಸಿ ಶರಣ ಧರ್ಮ ಪುನಃ ಪ್ರತಿಷ್ಠಾಪನೆಗೆ ಶ್ರಮಿಸಿದವರು. ಧರ್ಮ ಪ್ರಚಾರ ಕಾರ್ಯ ಮಾಡುತ್ತ ಕೊನೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರಿಗೆ ಬಂದು ನೆಲೆಸಿದರು.

    ಹತ್ತಿರದ ಕಗ್ಗೆರೆಯ ತೋಟವೊಂದರಲ್ಲಿ ತಪಸ್ಸನ್ನಾಚರಿಸಿದರು. ಭಕ್ತರು ಪೂಜಿಸಿ ತೋಂಟದ ಸಿದ್ಧಲಿಂಗಸ್ವಾಮಿಗಳು ಎಂದು ಕರೆದರು. 12 ವರ್ಷ ತಪಸ್ಸಿಗೆ ಕುಳಿತ ಯತಿಗಳ ಸುತ್ತ ಹುತ್ತ ಬೆಳೆಯಿತು. ಹಸುವೊಂದು ನಿತ್ಯವೂ ತಾನಾಗಿಯೇ ಬಂದು ಆ ಹುತ್ತದ ಮೇಲೆ ಹಾಲು ಹರಿಸುತ್ತಿತ್ತು. ಚೋಳಬಸವಾರಾಧ್ಯರಿಗೆ ನಿರಂಜನ ಪೀಠಾಧಿಕಾರವನ್ನು ವಹಿಸಿ 1470ನೇ ಇಸವಿಯ ಚೈತ್ರಶುದ್ಧ ಸಪ್ತಮಿಯ ದಿವಸ ಅಭಿಜಿನ್ ಮಹೂರ್ತದಲ್ಲಿ ಭಕ್ತವೃಂದದ ಜಯಘೊಷದ ನಡುವೆ ನಿರ್ವಿಕಲ್ಪ ಶಿವಯೋಗ ಸಮಾಧಿಯಲ್ಲಿ ಪ್ರವೇಶಿಸಿದರು.

    ಅದಾಗಿ 551 ವರ್ಷಗಳು ಸಂದಿದ್ದರೂ, ಸ್ವಾಮಿ ದೀರ್ಘ ಶಿವಯೋಗದಲ್ಲಿದ್ದು ನಂಬಿದವರಿಗೆ ಅಪೇಕ್ಷಿತ ವರಗಳನ್ನೀಯುವ ಮಹಾಶಿವಯೋಗಿಗಳಾಗಿದ್ದಾರೆ. ಜೀವಂತ ಸಮಾಧಿಯನ್ನು ಹೊಂದಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ. ಸ್ವಾಮಿಯ ನಿರ್ವಿಕಲ್ಪ ಶಿವಯೋಗ ಸಮಾಧಿಯ ದಿನ ಮತ್ತು ವೇಳೆಯನ್ನು ಅನುಸರಿಸಿ ನಂದಿಧ್ವಜ ಪೂಜೆಯೊಂದಿಗೆ ಅಭಿಜಿನ್ ಮಹೂರ್ತದಲ್ಲಿ ಪ್ರತಿ ವರ್ಷ ರಥೋತ್ಸವ ನಡೆಯುತ್ತದೆ.

    ಈ ಮಹಾರಥೋತ್ಸವ ನಾಡಿನಾದ್ಯಂತ ಪ್ರಸಿದ್ಧವಾದದ್ದು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಇಲ್ಲಿಗೆ ಭಕ್ತರ ಮಹಾಪೂರವೇ ಹರಿದುಬರುತ್ತದೆ. ಆದರೆ ಈ ಸಲ ಕರೊನಾದಿಂದಾಗಿ ಇಡೀ ಪ್ರಕ್ರಿಯೆ ಸಾಂಕೇತಿಕವಾಗಿರಲಿದೆ. ಎಲ್ಲಾ ಧಾರ್ವಿುಕ ವಿಧಿವಿಧಾನಗಳು, ಪೂಜೆ ಪುನಸ್ಕಾರಗಳು ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿವೆ. ಪ್ರತಿ ವರ್ಷ ಯುಗಾದಿ ಹಬ್ಬದ 7 ದಿನಗಳ ನಂತರ ಜಾತ್ರೆ ನಡೆಯುತ್ತದೆ. 15 ದಿನ ನಿರಂತರವಾಗಿ ನಡೆಯುವುದು ಇದರ ವಿಶೇಷ. ಆದರೆ ಕರೊನಾ ಕಾರಣಕ್ಕೆ ದನಗಳ ಪರಿಷೆ ಮತ್ತು ಎಲ್ಲಾ ಉತ್ಸವಗಳನ್ನು ಈ ಬಾರಿ ರದ್ದು ಪಡಿಸಲಾಗಿದೆ.

    ಹರದನಹಳ್ಳಿಯ ಸಿದ್ಧಲಿಂಗೇಶ್ವರರು

    ಚಾಮರಾಜನಗರದ ಹರದನಹಳ್ಳಿಯಲ್ಲಿ ಅಪಾರ ದೈವಿಕ ನಂಬಿಕೆಯನ್ನು ಹೊಂದಿದ್ದ ಜ್ಞಾನಾಂಬೆ ಹಾಗೂ ಮಲ್ಲಿಕಾರ್ಜುನ ದಂಪತಿಗೆ ಮಕ್ಕಳಿರಲಿಲ್ಲ. ಮಗುವನ್ನು ಕರುಣಿಸುವಂತೆ ಪರಶಿವನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕದಳೀವನದಲ್ಲಿ ಮಗುವೊಂದು ಸಿಕ್ಕಿತು. ಆ ಮಗುವಿನ ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಇದ್ದ ಕಾರಣ ಪರಶಿವನಿಂದ ದೊರೆತ ಮಗುವಿದು ಎಂದು ತಮ್ಮದಾಗಿಸಿಕೊಂಡರು. ಮುಂದೆ ಆ ಮಗುವಿಗೆ ಸಿದ್ಧಲಿಂಗೇಶ್ವರ ಎಂದು ನಾಮಕರಣ ಮಾಡಿದರು ಎಂಬುದು ಭಕ್ತರ ನಂಬಿಕೆ. ಇನ್ನೊಂದು ಪ್ರತೀತಿಯ ಪ್ರಕಾರ, ಸಿದ್ಧಲಿಂಗೇಶ್ವರ ಎಂಬುದಾಗಿ ಭಕ್ತರೇ ನಾಮಕರಣ ಮಾಡಿದರು.

    ಅಪರೂಪದ ರಥ

    ರಾಜ್ಯದಲ್ಲಿಯೇ ಅಪರೂಪವಾದ ರಚನೆಯಿಂದ ಕೂಡಿದ ರಥ ಎಡೆಯೂರಿನದು. ರಥಕ್ಕೆ ಸುಮಾರು 6 ಅಡಿ ಎತ್ತರದ 6 ಕಲ್ಲಿನ ಚಕ್ರಗಳಿವೆ. ರಥದ ಮೇಲೆ ಆಕರ್ಷಕ, ವೈವಿಧ್ಯಮಯ ಕೆತ್ತನೆಗಳಿದ್ದು ತುದಿಯಲ್ಲಿ ಕಳಸವಿದೆ. ರಥಕ್ಕೆ ಬಣ್ಣಬಣ್ಣದ ಬಾವುಟಗಳನ್ನು ಕಟ್ಟಿ ಸಿಂಗರಿಸಲಾಗುತ್ತದೆ. ಚಿತ್ರದುರ್ಗದ ಮೋಕ್ಷಗುಂಡಲ ಶ್ರೀನಿವಾಸ ಅವಧಾನಿಗಳವರ ತೋಟದಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಷಡಕ್ಷರಿ ಮಂತ್ರದ ಮಹಿಮೆಯನ್ನು ಬಣ್ಣಿಸಿರುವ ವಚನ ಶಿಲಾಶಾಸನವಾಗಿ ಕೆತ್ತಲ್ಪಟ್ಟಿದೆ.

    ಕೋಟ್

    ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಪರಿಷೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಸ್ವಾಮಿಯ ರಥೋತ್ಸವವನ್ನು ಸರಳವಾಗಿ, ಕೋವಿಡ್ ಮಾರ್ಗಸೂಚಿಗಳ ಅನ್ವಯ ಆಚರಿಸಲಾಗುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾ ಪೂಜೆ ವಿಧಿವಿಧಾನಗಳು ನಡೆದ ಬಳಿಕ ಸಾಂಕೇತಿಕವಾಗಿ ಸ್ವಾಮಿಯ ರಥೋತ್ಸವ ನಡೆಯಲಿದೆ.

    | ಲಕ್ಷ್ಮೀ ಕಾರ್ಯನಿರ್ವಾಹಕ ಅಧಿಕಾರಿ,

    ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts