More

    ಯಡಮೊಗೆಯಲ್ಲಿ ಅಕ್ರಮ ಕ್ವಾರಿ

    ಶ್ರೀಪತಿ ಹೆಗಡೆ ಹಕ್ಲಾಡಿ ಯಡಮೊಗೆ
    ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆ ಗ್ರಾಮದಲ್ಲಿರುವ ಅಕ್ರಮ ಕೆಂಪುಕಲ್ಲು ಕ್ವಾರಿ ಇದ್ದು ಪಶ್ಚಿಮಘಟ್ಟದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಿದೆ. ಇಲ್ಲಿನ ಮೂಕಾಂಬಿಕಾ ರಕ್ಷಿತಾರಣ್ಯ, ಸರ್ಕಾರ ಕೆಲವು ಪಂಗಡಗಳಿಗೆ ನೀಡಿದ ಭೂಮಿಗಳಲ್ಲಿ ಕ್ವಾರಿ ನಿರಂತರ ನಡೆಯುತ್ತಿದೆ. ಅಧಿಕಾರಿಗಳು ಸುಮ್ಮನಿದ್ದು ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

    ಕೆಂಪುಕಲ್ಲು ಕ್ವಾರಿಯಿಂದಾಗಿ ಹರಡುವ ಧೂಳಿನಿಂದ ಡಾಂಬರು ರಸ್ತೆ ಮಣ್ಣಿನ ರಸ್ತೆಯಂತಾಗಿದೆ. ಹೊಸಬಾಳು ಕುಬ್ಜಾ ನದಿಗೆ ನಿರ್ಮಿಸಿದ ಸೇತುವೆಯೂ ಕಲ್ಲು ಸಾಗಾಟ ವಾಹನಗಳ ಸಂಚಾರಕ್ಕೆ ಕುಸಿದಿದ್ದು ಪ್ರಸಕ್ತ 6 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಕಮಲಶಿಲೆ -ಹೊಸಂಗಡಿ ಸಂಪರ್ಕ ರಸ್ತೆಯಲ್ಲಿ ಮೋರಿ -ಸೇತುವೆಗಳಿಗೆ ಅಪಾಯದ ಭೀತಿಯಿದೆ. ಭಾರ ತುಂಬಿದ ಲಾರಿಗಳ ಸಂಚಾರದಿಂದ ಯಡಮೊಗೆ ರಸ್ತೆಯಲ್ಲಿರುವ ಎರಡು ಸೇತುವೆಯೂ ಶಿಥಿಲಗೊಂಡಿವೆ. ದೂರು ನೀಡಿದರೆ ದಾಳಿ ಮಾಡುವ ಮೊದಲೇ ಕ್ವಾರಿ ಮಾಲೀಕರಿಗೆ ಸೂಚನೆ ಸಿಗುತ್ತದೆ. ಅಧಿಕಾರಿಗಳು ಬರುವಷ್ಟರಲ್ಲಿ ಯಂತ್ರಗಳನ್ನು ಬಚ್ಚಿಡಲಾಗುತ್ತದೆ. ಕ್ವಾರಿ ಮಾಲೀಕರು ಮಾಹಿತಿ ನೀಡಲೆಂದೇ ಪ್ರತಿನಿಧಿಗಳನ್ನು ಕಾವಲಿಡುತ್ತಾರೆ. ಯಡಮೊಗೆಯಲ್ಲಿ ಹೊಸದಾಗಿ ರಸ್ತೆ ಮಾಡುತ್ತಿದ್ದು, ಕಲ್ಲು ಸಾಗಾಟದ ಲಾರಿಗಳ ಸಂಚಾರಕ್ಕೆ ಸಮಸ್ಯೆ ಆಗುತ್ತದೆಂದು ಕೆಲಸಕ್ಕೂ ಅಡ್ಡಿ ಮಾಡಲಾಗುತ್ತಿದೆ.

    ಸ್ಥಳೀಯ ವಾಹನ, ಶಾಲಾ ಮಕ್ಕಳಿಗೆ ತಿರುಗಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗಣಿಗಾರಿಕೆಯಿಂದ ಗ್ರಾಮ ಪಂಚಾಯಿತಿಗೆ ಕಂದಾಯ ಬರುವುದಿಲ್ಲ. ಯಡಮೊಗೆ ಗ್ರಾಮ ವ್ಯಾಪ್ತಿಯಲ್ಲಿ 60 -70 ಕಡೆ ಹಗಲು -ರಾತ್ರಿ ಎನ್ನದೆ ಕಲ್ಲು ಕ್ವಾರಿ ನಡೆಯುತ್ತಿದ್ದು, ವನ್ಯಜೀವಿ ಸಂತತಿ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಪಶ್ಚಿಮಘಟ್ಟದ ತಳಪಾಯಕ್ಕೂ ಅಪಾಯ ತರಲಿದೆ. ಕೆಂಪು ಧೂಳು ಪರಿಸರ ವಿಷಮ ಸ್ಥಿತಿ ಮುಟ್ಟಲಿದೆ.

    ಐತಿಹಾಸಿಕ ಕುರುಹುಗಳ ನಾಶ: ಕಮಲಶಿಲೆ, ಯಡಮೊಗೆ ಐತಿಹಾಸಿಕ ಕುರುಹಗಳ ತಾಣ. ನಾಥ ಪಂಥದವರ ಯಾತ್ರಾಸ್ಥಳ. ದೇವಸ್ಥಾನ, ನಾಥ ಪಂಥದ ಶಾಸನಗಳು, ಕೋಟೆ ಕೊತ್ತಲಗಳು ಶಿಲೆಕಲ್ಲು ಭರಾಟೆಗೆ ನೆಲಸಮವಾಗಿವೆ. ನಾಥ ಪಂಥದ ಬಗ್ಗೆ ಇನ್ನಷ್ಟು ಮಾಹಿತಿ ಸಿಗುವ ಶಿಲಾಶಾಸನಗಳು, ಕೋಟೆ ಕೊತ್ತಲಗಳ ಅವಶೇಷಗಳಡಿ ಗೌಪ್ಯವಾಗಿರುವ ಸಂಗತಿಗಳು ಗಣಿಗಾರಿಕೆಗೆ ನಿರ್ನಾಮವಾಗಿವೆ. ಹಲವರಿ ಮಠ, ನಾಥ ಪಂಥದ ಸಿದ್ದೇಶ್ವರ ದೇವಸ್ಥಾನ ಅವಶೇಷಗಳನ್ನು ಗಣಿಗಾರಿಕೆ ನಾಶ ಮಾಡಿದೆ. ಕಮಲಶಿಲೆ ಸುಪಾರ್ಶ್ವ ಗುಹೆ ಬಳಿ ಕೂಡ ಕ್ವಾರಿ ನಿರ್ಮಾಣ ಪ್ರಯತ್ನ ನಡೆದಿದ್ದು, ಸರ್ಕಾರ ನಿಷೇಧಿಸಿದೆ. 300 ಎಕರೆ ಡೀಮ್ಡ್ ಅರಣ್ಯ ಕ್ವಾರಿಗೆ ನಾಶವಾಗಿದೆ. ಬೇರೆಯವರ ಜಾಗದಲ್ಲಿ ಕ್ವಾರಿ ಮಾಡಿ, ಜಾಗದ ಮಾಲೀಕರು ಲಕ್ಷದ ಲೆಕ್ಕದಲ್ಲಿ ಪೆನಾಲ್ಟಿ ಕಟ್ಟಿದ್ದೂ ಇದೆ.

    40 ವರ್ಷಗಳ ಹಿಂದಿನಿಂದಲೂ ಇಲ್ಲಿ ಕ್ವಾರಿ ನಡೆಯುತ್ತಿದೆ. ಅಧಿಕಾರಿಗಳ ಸಹಕಾರದಿಂದ ಕೋಟ್ಯಂತರ ರೂ. ಮೌಲ್ಯದ ಕೆಂಪುಕಲ್ಲು ಅಕ್ರಮವಾಗಿ ಸಾಗಾಟ ಆಗುತ್ತಿದೆ. ಇಡೀ ಗ್ರಾಮ ಗಣಿಗಾರಿಕೆಯಿಂದ ಕಣ್ಮರೆ ಆಗುವ ಮುಂಚೆಯೇ ಶಾಶ್ವತವಾಗಿ ಕಡಿವಾಣ ಹಾಕುವ ಅಗತ್ಯ ಇದೆ. ಜತೆಗೆ ತಪ್ಪಿತಸ್ಥರಿಂದ ಸರ್ಕಾರದ ಬೊಕ್ಕಸಕ್ಕೆ ಅದ ನಷ್ಟ, ಪರಿಸರ ಮೇಲೆ ಅನಾಚಾರ ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
    -ಶಶಿಧರ್ ಹೆಮ್ಮಣ್ಣ ಪರಿಸರವಾದಿ

    ಯಡೆಮೊಗೆ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಕ್ವಾರಿ ಬಗ್ಗೆ ಅದರ ಹಿನ್ನೆಲೆ, ಪರವಾನಗಿ ಮುಂತಾದ ಸಂಗತಿಗಳ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳಿಂದ ವರದಿ ತರಿಸಿ ಪರಿಶೀಲಿಸುತ್ತೇನೆ. ಅಕ್ರಮ ಕ್ವಾರಿ ಹಾಗೂ ಡೀಮ್ಡ್, ರಕ್ಷಿತಾರಣ್ಯ, ವನ್ಯಜೀವಿ ಮೀಸಲು ಪ್ರದೇಶದಲ್ಲಿ ಗಣಿ/ಕ್ವಾರಿ ನಡೆಸಲು ಅವಕಾಶವಿಲ್ಲ. ಅಲ್ಲಿಯ ವಾಸ್ತವ ಸಂಗತಿ ಪರಿಶೀಲಿಸಿ, ವರದಿಗೆ ಸೂಚಿಸಲಾಗುತ್ತದೆ. ಅಕ್ರಮ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆ ತಪ್ಪಿತಸ್ಥರಿಗೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುತ್ತದೆ.
    -ಕೆ.ರಾಜು, ಉಪ ವಿಭಾಗಾಧಿಕಾರಿ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts