More

    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತದ ಮುಂದಿದೆ ಸವಾಲಿನ ಹಾದಿ…

    ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗುರುವಾರದಿಂದ ನಡೆಯಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಪ್ರವಾಸಿ ಭಾರತ ತಂಡಕ್ಕೆ ಪ್ರತಿಷ್ಠೆಯ ಸಮರವಾಗಿದೆ. 2018-19ರ ಪ್ರವಾಸದ ಗೆಲುವಿನ ಸಾಧನೆ ಪುನರಾವರ್ತಿಸಲು ಭಾರತ ತಂಡ ಪಣತೊಟ್ಟಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಫೈನಲ್‌ಗೇರುವ ದೃಷ್ಟಿಯಿಂದಲೂ ಭಾರತಕ್ಕೆ ಇದು ಮಹತ್ವದ ಸರಣಿಯಾಗಿದೆ.

    ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ತಂಡ ಸದ್ಯ 2ನೇ ಸ್ಥಾನದಲ್ಲಿದೆ. ಕರೊನಾ ವೈರಸ್ ಹಾವಳಿಯಿಂದ ಕೆಲ ಸರಣಿಗಳು ರದ್ದು-ಮುಂದೂಡಿಕೆಯಾದ ಬಳಿಕ ಐಸಿಸಿ, ಅಂಕಪದ್ಧತಿಯ ಮಾನದಂಡವನ್ನೇ ಬದಲಾಯಿಸಿದ್ದು, ಒಟ್ಟು ಅಂಕಗಳಿಗೆ ಬದಲಾಗಿ ಶೇಕಡಾವಾರು ಅಂಕಗಳಿಕೆಯ ಲೆಕ್ಕಾಚಾರದಲ್ಲಿ ಸ್ಥಾನ ನಿರ್ಧಾರ ಮಾಡಲಾಗುತ್ತಿದೆ. ಇದರಿಂದ ಡಬ್ಲ್ಯುಟಿಸಿ ಫೈನಲ್‌ಗೇರಲು ಭಾರತಕ್ಕೆ ಸವಾಲಿನ ಹಾದಿ ನಿರ್ಮಾಣವಾಗಿದೆ.

    ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 2-0ಯಿಂದ ಸರಣಿ ಗೆದ್ದು, ಪೂರ್ಣ 120 ಅಂಕಗಳನ್ನು ಬಾಚಿಕೊಂಡ ಬಳಿಕ ಭಾರತದ ಮೇಲೆ ಒತ್ತಡ ಹೆಚ್ಚಾಗಿದೆ. ಮುಂಬರುವ ಪಾಕಿಸ್ತಾನ ವಿರುದ್ಧದ ಸರಣಿಯಲ್ಲೂ ನ್ಯೂಜಿಲೆಂಡ್ 2-0ಯಿಂದ ಗೆದ್ದರೆ ಒಟ್ಟು ಅಂಕಗಳಿಕೆ 420ಕ್ಕೇರಲಿದ್ದು, ಶೇ. 70 ಅಂಕ ಗಳಿಸಿದಂತಾಗುತ್ತದೆ.

    ಭಾರತ ತಂಡ ಸದ್ಯ ಒಟ್ಟು 360 ಅಂಕ ಮತ್ತು ಶೇ. 75 ಅಂಕ ಹೊಂದಿದೆ. ಆದರೆ ಅಗ್ರ 2 ಸ್ಥಾನದೊಳಗೆ ಉಳಿದುಕೊಳ್ಳಬೇಕಾದರೆ ಭಾರತ ತಂಡಕ್ಕೆ ಮುಂಬರುವ ಆಸ್ಟ್ರೇಲಿಯಾ ಮತ್ತು ತವರಿನ ಇಂಗ್ಲೆಂಡ್ ವಿರುದ್ಧದ ಸರಣಿ ನಿರ್ಣಾಯಕವಾಗಿರುತ್ತದೆ.

    ಆಸೀಸ್, ಇಂಗ್ಲೆಂಡ್ ವಿರುದ್ಧ ಭಾರತ ತಲಾ 4 ಪಂದ್ಯಗಳ ಸರಣಿ ಆಡಲಿದ್ದು, ಪ್ರತಿ ಗೆಲುವಿಗೆ 30 ಮತ್ತು ಡ್ರಾಕ್ಕೆ 10 ಅಂಕ ಪಣಕ್ಕಿದೆ. ಕಿವೀಸ್ ತಂಡಕ್ಕಿಂತ ಮೇಲಿನ ಸ್ಥಾನದಲ್ಲೇ ಉಳಿದುಕೊಳ್ಳಬೇಕಾದರೆ ಭಾರತಕ್ಕೆ ಒಟ್ಟು 240ರಲ್ಲಿ ಕನಿಷ್ಠ 150 ಅಂಕ ಅಗತ್ಯವಿದೆ. 5 ಪಂದ್ಯಗಳಲ್ಲಿ ಗೆಲ್ಲುವ ಅಥವಾ 4ರಲ್ಲಿ ಗೆದ್ದು 3ರಲ್ಲಿ ಡ್ರಾ ಸಾಧಿಸುವ ಮೂಲಕವೂ ಈ ಅಂಕವನ್ನು ಕಲೆಹಾಕಬಹುದಾಗಿದೆ.

    ಭಾರತ ತಂಡ ತವರಿನಲ್ಲಿ ಸದೃಢ ದಾಖಲೆ ಹೊಂದಿರುವುದರಿಂದ ಇಂಗ್ಲೆಂಡ್ ವಿರುದ್ಧ ಪೂರ್ಣ 120 ಅಂಕಗಳನ್ನು ಕಲೆಹಾಕುವ ನಿರೀಕ್ಷೆ ಇಡಬಹುದು. ಆದರೆ ಆಗಲೂ ಆಸ್ಟ್ರೇಲಿಯಾದಲ್ಲಿ ಕನಿಷ್ಠ 1 ಗೆಲುವು ಕಾಣುವುದು ಅಥವಾ 3ರಲ್ಲಿ ಡ್ರಾ ಸಾಧಿಸುವುದು ಅಗತ್ಯವಾಗಿರುತ್ತದೆ. ಒಂದು ವೇಳೆ ಆಸೀಸ್‌ನಲ್ಲಿ 1-2ರಿಂದ ಸರಣಿ ಸೋತರೆ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಿಂದ 110 ಅಂಕ ಗಳಿಸಿದರೂ ಸಾಕಾಗುತ್ತದೆ.

    ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆಸೀಸ್ ಸದ್ಯ ಒಟ್ಟು 296 ಮತ್ತು ಶೇ. 82.2 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ ಒಟ್ಟು 292 ಮತ್ತು ಶೇ. 60.8 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. 2021ರ ಜೂನ್​ನಲ್ಲಿ ಲಾಡ್ರ್ಸ್​ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿಯ ಫೈನಲ್‌ಗೆ ಏರಲು ಇವೆರಡು ತಂಡಗಳು ಕೂಡ ಸ್ಪರ್ಧೆಯಲ್ಲಿವೆ.

    ಭಾರತ ವಿರುದ್ಧ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧವೂ 3 ಪಂದ್ಯಗಳ ಸರಣಿ ಆಡುವ ನಿರೀಕ್ಷೆ ಇದೆ. ಆದರೆ ಭಾರತ ವಿರುದ್ಧ ಸರಣಿ ಗೆದ್ದರೆ ಆಸೀಸ್ ಸುಲಭವಾಗಿ ಡಬ್ಲ್ಯುಟಿಸಿ ಫೈನಲ್‌ಗೇರುವುದನ್ನು ಖಚಿತಪಡಿಸಿಕೊಳ್ಳಲಿದೆ. ಭಾರತ ವಿರುದ್ಧ ಸೋತರೆ ಆಸೀಸ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ ಕನಿಷ್ಠ 2-0ಯಿಂದ ಸರಣಿ ಗೆಲ್ಲುವುದು ಅನಿವಾರ‌್ಯವಾಗಲಿದೆ.

    ಇಂಗ್ಲೆಂಡ್ ತಂಡವೂ ಭಾರತ ಪ್ರವಾಸಕ್ಕೆ ಮುನ್ನ ಶ್ರೀಲಂಕಾದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಾಗಿದ್ದು, ಈ ಸರಣಿಯ ಲಿತಾಂಶವೂ ಡಬ್ಲ್ಯುಟಿಸಿ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

    ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts