More

    ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕ್ಯೂಟ್ ; ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಮಾಹಿತಿ

    ಚಿಕ್ಕಬಳ್ಳಾಪುರ: ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಡೀ ದಿನ ಪ್ರವಾಸದ ಮುದ ಅನುಭವಿಸುವಂತಾಗಲು ಮತ್ತು ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಟೂರಿಸಂ ಸರ್ಕ್ಯೂಟ್ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.

    ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸೋಮವಾರ ತಾಲೂಕಿನ ಶ್ರೀ ಭೋಗನಂದೀಶ್ವರ ದೇವಸ್ಥಾನ ಆವರಣದಲ್ಲಿ ಕೈಗೊಂಡಿದ್ದ ಜಿಲ್ಲಾ ಪ್ರವಾಸಿ ತಾಣಗಳ ಚಿತ್ರಕಲೆ ಬಿಡಿಸುವ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ವಿಶ್ವವಿಖ್ಯಾತ ನಂದಿಬೆಟ್ಟ, ರಂಗಸ್ಥಳ, ಶ್ರೀನಿವಾಸ ಸಾಗರ ಸೇರಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳನ್ನೊಳಗೊಂಡಂತೆ ಟೂರಿಸಂ ಸರ್ಕ್ಯೂಟ್ ನಿರ್ಮಿಸುವ ಮೂಲಕ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಧಾರ್ಮಿಕ ಪುಣ್ಯಕ್ಷೇತ್ರ ಶ್ರೀನಿವಾಸಾಗರದ ಬಳಿ ಆಕರ್ಷಕ ಪಾರ್ಕ್ ನಿರ್ಮಾಣ ಮಾಡಿ, ಪ್ರವಾಸಿಗರನ್ನು ಸೆಳೆಯುವಂತಾಗಲು ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ರಂಗಸ್ಥಳದಲ್ಲಿ 21 ಎಕರೆ ಜಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದ್ದು, ಅಮಾನಿ ಗೋಪಾಲಕೃಷ್ಟ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಪ್ರಸ್ತಾವನೆ ತಯಾರಿಸಲಾಗಿದೆ ಎಂದು ವಿವರಿಸಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್, ಚಿತ್ರಕಲಾ ಶಿಕ್ಷಕರಾದ ಸಿ.ಎಲ್.ಸತೀಶ್, ಸಂತೋಷ್ ಕುಮಾರ್, ಅರುಣ್ ಸೇರಿ ಮತ್ತಿತರರು ಇದ್ದರು.

    ಕಂದವಾರ ಎಕೋ ಥೀಮ್ ಪಾರ್ಕ್ : ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆ ಬಳಿ ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ 8.10 ಕೋಟಿ ರೂ. ವೆಚ್ಚದಲ್ಲಿ ಕಂದವಾರ ಎಕೋ ಥೀಮ್ ಪಾರ್ಕ್‌ನ್ನು ನಿರ್ಮಿಸಲಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆರ್.ಲತಾ ತಿಳಿಸಿದರು. ಶೀಘ್ರದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದ್ದು ಪ್ರವಾಸಿಗರ ಮನಸೆಳೆಯುವ ರೀತಿಯಲ್ಲಿ ಪರಿಸರಸ್ನೇಹಿ ಉದ್ಯಾನ, ಸರಳ ಜಿಮ್, ಪಾಕಿರ್ಂಗ್ ವ್ಯವಸ್ಥೆ, ಮಕ್ಕಳ ಆಟದ ಆಟಿಕೆಗಳು, ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳ, ಸಂಗೀತ ಕಾರಂಜಿ, ಬೋಟಿಂಗ್, ಕಲಾಗ್ರಾಮದ ಮಳಿಗೆಗಳು, ಪಾದಾಚಾರಿ ಸೇತುವೆ, ವನೌಷಧ ಸಸ್ಯಗಳು ಸೇರಿ ಹಲವು ವೈಶಿಷ್ಟ್ಯಗಳನ್ನೊಳಗೊಂಡಿರಲಿದೆ. ಉದ್ಯಾನದ ಯಾವುದೇ ಸ್ಥಳದಲ್ಲಿ ಕುಳಿತರೂ ಸುಶ್ರಾವ್ಯ ಸಂಗೀತದ ನಾದ ಕೇಳುವ ವ್ಯವಸ್ಥೆ ಇಲ್ಲಿನ ವಿಶೇವಾಗಿದೆ ಎಂದರು.

    ಗಮನ ಸೆಳೆದ ಚಿತ್ರ ಕಲೆ: ಶಿಬಿರದಲ್ಲಿ ಚಿತ್ರಕಲಾ ಶಿಕ್ಷಕರು ಮತ್ತು ಚಿತ್ರಕಲಾ ಪರಿಷತ್ನ ವಿದ್ಯಾರ್ಥಿಗಳು ರಚಿಸಿರುವ ನಂದಿ, ರಂಗಸ್ಥಳ, ಮುದ್ದೇನಹಳ್ಳಿ ಸೇರಿ ಪ್ರವಾಸಿತಾಣದ ಚಿತ್ರಗಳ ಪ್ರದರ್ಶನ ಗಮನ ಸೆಳೆದವು. ಸ್ವತಃ ಜಿಲ್ಲಾಧಿಕಾರಿ ಆರ್.ಲತಾ ಕುಂಚದಲ್ಲಿ ಸಹಿ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ರಚನೆಯಾಗಿರುವ ಕಲಾತ್ಮಕ ಚಿತ್ರಗಳನ್ನು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿ, ಸಂರಕ್ಷಿಸಲಾಗುತ್ತದೆ. ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಉಡುಗೋರೆಯಾಗಿ ನೀಡುವ ಮೂಲಕ ಜಿಲ್ಲೆಯ ಪ್ರಸಿದ್ಧ ತಾಣಗಳ ಬಗ್ಗೆ ಗಮನ ಸೆಳೆಯುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts