More

    ಕರೊನಾ ಸಂಕಷ್ಟದಲ್ಲಿ ಎದ್ದುನಿಂತ ಮಹಿಳಾ ಮಾರುಕಟ್ಟೆ

    ಜಗತ್ತಿನಲ್ಲಿ ಒಳಿತು, ಕೆಡುಕುಗಳು ಏಕಕಾಲದಲ್ಲಿ ಒಂದು ಕಡೆಯಿಂದ ಘಟಿಸುತ್ತ ಹೋಗುತ್ತಿರುತ್ತವೆ ಎನ್ನುತ್ತಾರೆ. ಕೆಟ್ಟದ್ದರ ಗರ್ಭದಿಂದಲೇ ಒಳ್ಳೆಯದು ಹುಟ್ಟಿ ಬರುವುದನ್ನು ನೋಡಲು ವ್ಯವಧಾನ, ಸೌಹಾರ್ದತೆಗಳ ಅಗತ್ಯವಿದೆ. ಕರೊನಾಸುರ ಜಗತ್ತನ್ನು ಆಕ್ರಮಿಸಿ ತನ್ನ ತೆಕ್ಕೆಗೆ ಮನುಷ್ಯನ ಪ್ರಾಣ, ಜೀವನವನ್ನು ತೆಗೆದುಕೊಂಡು, ಜಗತ್ತಿನ ಆಗುಹೋಗುಗಳನ್ನೇ ಸ್ತಬ್ಧವಾಗಿಸುತ್ತ ಮೂರು ನಾಲ್ಕು ತಿಂಗಳು ಕಳೆದಿದ್ದಾನೆ. ಜಗತ್ತಿನ ಅತಿ ಬಲಾಢ್ಯ ರಾಷ್ಟ್ರಗಳು ಆರ್ಥಿಕವಾಗಿ ಸೋತು ಸುಣ್ಣವಾಗಿ ಮಂಡಿಯೂರಿರುವಾಗ ನಮ್ಮ ದೇಶದ ಆರ್ಥಿಕತೆ ಇನ್ನಿಲ್ಲದಂತೆ ನೆಲಕಚ್ಚಿ ಮಕಾಡೆ ಮಲಗಲು ಎಷ್ಟು ಸಮಯ ಬೇಕಾದೀತು ಹೇಳಿ? ಲಾಕ್​ಡೌನ್ ಹೆಸರಿನಲ್ಲಿ ವೈರಸ್ ಪ್ರಸರಣವನ್ನು ತಡೆ ಹಿಡಿಯುವುದರಲ್ಲಿ ಅರ್ಧವಾಸಿಯಾದರೂ ಸಫಲರಾಗಿದ್ದೇವೆಂದು ಖುಷಿ ಪಟ್ಟುಕೊಳ್ಳುವುದನ್ನು ತಡೆಯುವಂತೆ ಆರ್ಥಿಕತೆಯ ಕುಸಿತ ನಮ್ಮ ದೇಶವನ್ನು ಕಂಗಾಲು ಮಾಡಿದೆ. ಮುಚ್ಚಲ್ಪಟ್ಟ ಕಾರ್ಖಾನೆಗಳು, ಉದ್ದಿಮೆಗಳು, ಹೋಟೆಲ್ಲುಗಳು, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆ ಇವೆಲ್ಲ ಆರ್ಥಿಕ ಚಟುವಟಿಕೆಯ ಜೀವನಾಡಿಗಳಾದ ಬೇಡಿಕೆ-ಪೂರೈಕೆ ಇವೆರಡನ್ನೂ ಕಂಗಾಲು ಮಾಡಿದವು.

    ಕರೊನಾ ಸಂಕಷ್ಟದಲ್ಲಿ ಎದ್ದುನಿಂತ ಮಹಿಳಾ ಮಾರುಕಟ್ಟೆಲಾಕ್​ಡೌನ್ ಘೊಷಣೆ ಆಗುತ್ತಿದ್ದಂತೆ ಕಂಗಾಲಾದ ಗ್ರಾಹಕರು-‘ಪ್ಯಾನಿಕ್ ಬಯಿಂಗ್’ ಎಂಬ ಅನಗತ್ಯ ಖರೀದಿ ಹಾಗೂ ಶೇಖರಣೆಯಲ್ಲಿ ತೊಡಗಿಬಿಟ್ಟರು. ಮುಂದೆ ಸಿಗುತ್ತದೆಯೋ ಇಲ್ಲವೋ ಎಂಬ ಭಯದಲ್ಲಿ ಬೇಕಾದ್ದು ಬೇಡದ್ದು ಎಲ್ಲವನ್ನೂ ಚೀಲ ತುಂಬಿ ತಂದು ಮನೆಯಲ್ಲಿ ಪೇರಿಸಿಡತೊಡಗಿದರು. ಇದರ ಪರಿಣಾಮ ಬೆಲೆಯೇರಿಕೆ ಲೆಕ್ಕಾಚಾರ ಮೀರಿ ಮೆರೆಯ ತೊಡಗಿತ್ತು. ಒಂದಕ್ಕೆರಡು ಬೆಲೆಯಲ್ಲಿಯೂ ವಸ್ತುಗಳು ನಿರಾಯಾಸವಾಗಿ ಮಾರಾಟವಾಗಿಬಿಟ್ಟವು. ಮನೆಯಿಂದ ಹೊರಗೆ ಹೋಗದ ಕುಟುಂಬ ಲಾಕ್​ಡೌನ್ ಸಂದರ್ಭದಲ್ಲಿ ಒಂದಕ್ಕೆರಡು ಬಳಕೆಯನ್ನು ರೂಢಿಗತ ಮಾಡಿಕೊಂಡಿತು. ಮಹಿಳೆಯರು ಗಂಡ-ಮಕ್ಕಳಿಗೆ ಅಟ್ಟುಣಿಸುವುದರಲ್ಲಿ ಸೋತು ಹೋದರು. ಸದಾ ಬಾಯಿರುಚಿಗಾಗಿ ಹಂಬಲಿಸುವ ಮಕ್ಕಳು, ಮಾಡಿದ್ದೇ ಮಾಡಬೇಡ ಎಂದು ಪೀಡಿಸುವ ಪತಿಮಹಾಶಯ, ಅನಾರೋಗ್ಯದ ಭಯದಲ್ಲೂ ಸಮಯ ಕಳೆಯಲು ಬಾಯಾಡಿಸಲು ಹುಡುಕುವ ಹಿರಿಯರು… ಕಂಗೆಟ್ಟ ಕೆಲ ಗೃಹಿಣಿಯರು ಕನಲಿ ಕ್ರುದ್ಧರಾದರು. ತಮ್ಮ ಗಂಡಂದಿರಿಗೆ ಸೌಟು ನೀಡಿ, ‘ಬನ್ನಿ ಬೇಕಾದ್ದು ಬೇಯಿಸಿಕೊಳ್ಳಿ’ ಎಂದು ಜಾಡಿಸುವಷ್ಟರ ಮಟ್ಟಿಗೆ ಕೆಲ ಕುಟುಂಬಗಳು ಕದನ ಕುತೂಹಲಿ ರಾಗವನ್ನು ಆಲಾಪಿಸತೊಡಗಿದವು. ಕೆಲ ಗಂಡಸರು ಸಹ ಸೌಟು ಹಿಡಿದು ಅಡುಗೆಮನೆಯಲ್ಲಿ ಪಾಕಪ್ರಯೋಗಕ್ಕಿಳಿದು ಫೋಟೋ ತೆಗೆದು ಫೇಸ್​ಬುಕ್ಕಿನಲ್ಲಿ ಹಾಕಿ ಕೊಳ್ಳತೊಡಗಿದರು.

    ಫೇಸ್​ಬುಕ್ಕಿನಲ್ಲಿ ಕೌನ್ಸೆಲಿಂಗ್, ಯೋಗ, ಆಂಟಿ ಡಿಪ್ರೆಷನ್ ಪ್ರೋಗ್ರಾಮ್್ಸ ಎಂದು ಅನೇಕ ಬಗೆಯ ಪೋಸ್ಟ್​ಗಳು ಗರಿಗೆದರಿದವು. ಕರೊನಾಸುರ ಇವುಗಳನ್ನೆಲ್ಲ ನೋಡುತ್ತ ಅಟ್ಟಹಾಸ ಮುಂದವರಿಸಿಯೇ ಇದ್ದ (ಇದ್ದಾನೆ).

    ಜಾಲತಾಣದಲ್ಲಿ ಸಾಹಿತ್ಯ, ಸಂಗೀತ, ಕಥೆ, ಕಾವ್ಯವಾಚನ-ಹೀಗೆ ಅವರವರ ಆಸಕ್ತಿಗೆ ಅನುಗುಣವಾಗಿ ಗುಂಪೊಂದನ್ನು ರಚಿಸಿಕೊಂಡು ವಿಚಾರ ವಿನಿಮಯ ಮಾಡಿಕೊಳ್ಳುತ್ತ ವಿಶೇಷಗಳಿದ್ದರೆ ಹಂಚಿಕೊಳ್ಳುವ ಉಪಯುಕ್ತ ವೇದಿಕೆಯನ್ನಾಗಿ ಬಳಸಿಕೊಳ್ಳುವವರು ಅನೇಕರಿದ್ದಾರೆ. ಅವರ ಜೀವನಾನುಭವಗಳು, ಉತ್ಸಾಹದ ಚಟುವಟಿಕೆಗಳು ಎಲ್ಲರನ್ನೂ ಸುಲಭವಾಗಿ ತಲುಪುತ್ತವೆ.

    ಹೀಗೆ ಕರೊನಾ ಸಂಕಷ್ಟದ ದಿನಗಳಲ್ಲಿ ಭಾವನಾತ್ಮಕವಾಗಿ ಅನೇಕ ಗೆಳತಿಯರನ್ನು ಒಂದು ವೇದಿಕೆಯಡಿ ತಂದು ಒಟ್ಟುಗೂಡಿಸಿ ರಚನಾತ್ಮಕ ಗುಂಪೊಂದಕ್ಕೆ ಕೈ ಇಕ್ಕಿದವರು, ಮುಂಬೈಯಲ್ಲಿ ವಾಸಿಸುತ್ತ, ಕರ್ನಾಟಕದಲ್ಲಿ ಉಸಿರಾಡುತ್ತ ತಮ್ಮ ಸಕ್ರಿಯ ಚಟುವಟಿಕೆಗಳಿಗೆ ಹೆಸರಾದ ಅಪರ್ಣಾ ರಾವ್. ಈಗಾಗಲೇ ಜಯಲಕ್ಷಿ್ಮ ಪಾಟೀಲ್ ಅವರು ರಚಿಸಿದ ‘ಅಂತಃಪುರ’ ಎಂಬ ಸಾಹಿತ್ಯಾಸಕ್ತ ಮಹಿಳೆಯರ ಗುಂಪೊಂದು ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಅದರ ಅನುಭವವನ್ನು ಬಳಸಿಕೊಂಡ ಅಪರ್ಣಾ ರಾವ್ ‘ಮಹಿಳಾ ಮಾರುಕಟ್ಟೆ’ ಎಂಬ ವಿನೂತನ ಪ್ರಯೋಗವನ್ನು ಕರೊನಾ ಕಾಲದಲ್ಲಿಯೇ ಆರಂಭಿಸಿ ಸಫಲರಾಗಿದ್ದಾರೆ.

    ಇದೊಂದು ಅನೌಪಚಾರಿಕ ಮಹಿಳಾ ಗುಂಪಾಗಿದ್ದು ಇಲ್ಲಿ ಮಹಿಳೆಯರು ತಾವು ಉತ್ಪಾದಿಸುವ ಗೃಹೋಪಯೋಗಿ (ಹೆಚ್ಚಾಗಿ ಖಾದ್ಯವಸ್ತುಗಳು ಮಾರಾಟವಾಗುತ್ತಿವೆ) ವಸ್ತುಗಳನ್ನು ಪರಿಚಯಿಸಬಹುದು. ಅವರಿಂದ ಬೆಲೆ, ಪ್ರಮಾಣ, ಸಂಪರ್ಕದ ನಂಬರ್ ಮೊದಲಾದ ವಿವರಗಳನ್ನು ಜಾಲತಾಣದಲ್ಲಿಯೇ ಪಡೆದ ಸದಸ್ಯೆಯರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿ ತಮಗೆ ಬೇಕೆನಿಸಿದವರಿಂದ ತರಿಸಿಕೊಳ್ಳಬಹುದು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಮೊದಲಾದ ಮಲೆನಾಡಿನ ಪ್ರದೇಶಗಳಿಗೆ ಮೀಸಲಾದ ಕೆಲವು ಖಾದ್ಯಗಳು, ಕರಾವಳಿ, ಉತ್ತರ ಕರ್ನಾಟಕದ ಸ್ವಾದಿಷ್ಟ ಪದಾರ್ಥಗಳು ಈ ವೇದಿಕೆಯ ಮೂಲಕ ಪರಿಚಯವಾಗಿದ್ದೇ ತಡ, ಹಲಸಿನಕಾಯಿಯ ಚಿಪ್ಸ್, ಹಪ್ಪಳ, ಬಾಳೆಹಣ್ಣಿನ ಸುಕೇಳಿ, ಬಾಳೆಕಾಯಿ ಹಪ್ಪಳ, ಅರಿಶಿಣ ಪುಡಿ, ಕಷಾಯದ ಹುಡಿ, ಕಾಡು ಜೇನುತುಪ್ಪ, ಕಾಳುಮೆಣಸು, ಕಾಡಿನ ಸಾಂಬಾರು ಪದಾರ್ಥಗಳು… ಎಲ್ಲವೂ ರಾಸಾಯನಿಕದ ಸೋಂಕಿಲ್ಲದೆ ಮನೆಯಲ್ಲಿಯೇ ಬೆಳೆದು ಮನೆಯವರಿಗಾಗಿ ಕಾಪಿಟ್ಟು ಕೊಳ್ಳುವ ಪದಾರ್ಥಗಳು.

    ಹೀಗೆ ಪರಿಚಯಿಸಲ್ಪಟ್ಟ ಮಲೆನಾಡಿನ ಖಾದ್ಯ ಪದಾರ್ಥಗಳ ಪರಿಚಯದಿಂದಾಗಿ ಒಮ್ಮೆಲೇ ಈ ಪದಾರ್ಥಗಳಿಗೆ ಬೇಡಿಕೆ ಪ್ರಾಪ್ತವಾಗಿ ಹೊಸದೊಂದು ಮಾರುಕಟ್ಟೆಯನ್ನೇ ನಿರ್ಮಾಣ ಮಾಡಿಬಿಟ್ಟಿತು. ಅದುವೇ ‘ಮಹಿಳಾ ಮಾರುಕಟ್ಟೆ’ ಎಂದು ಇವತ್ತು ಫೇಸ್​ಬುಕ್​ನಲ್ಲಿ ಪ್ರಸಿದ್ಧವಾದ, ತನ್ನ ಗುಣಮಟ್ಟದ ಏಕೈಕ ಹಿರಿಮೆಯಿಂದಾಗಿ ಜನಮೆಚ್ಚುಗೆ ಪಡೆದ ಮಹಿಳೆಯರ ಸಾಧನೆ. ಇದುವರೆಗೆ ಹಳ್ಳಿಗಳಲ್ಲಿ ಕೊಳೆತು ಬಿದ್ದು ಹೋಗುತ್ತಿದ್ದ ಹಲಸಿನಕಾಯಿಗಳು ಸುಂದರವಾದ ಚಿಪ್ಸ್ ಪ್ಯಾಕೆಟ್​ಗಳಾಗಿ ಬೆಂಗಳೂರಿಗೆ ಕೊರಿಯರ್ ಮೂಲಕ ಸರಬರಾಜಾಗುತ್ತಿರುವ ವೇಗ, ವ್ಯಾಪ್ತಿಯನ್ನು ನೋಡಿದ ನನ್ನಂಥ ಅರ್ಥಶಾಸ್ತ್ರದ ಪ್ರಾಧ್ಯಾಪಕಿಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ಹೇಳಿಕೊಳ್ಳಲಾಗುತ್ತಿಲ್ಲ.

    ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನೇ ಕಾಣದ, ಗಂಡ ಕೊಟ್ಟರೆ ಪುಡಿಗಾಸಿನ ದರ್ಶನವಾಗುವ ಕೆಲ ಹತಭಾಗ್ಯ ಮಹಿಳೆಯರು ಇದ್ದಾರೆ. ಪದವಿ ಪಡೆದು ಭವಿಷ್ಯ ನಿರ್ವಣದ ಕನಸು ಕಾಣುವ ಉತ್ಸಾಹಿ ಯುವತಿಯರಿದ್ದಾರೆ. ತಮ್ಮ ಸುದೀರ್ಘ ಜೀವನಾನುಭವದಿಂದ ಅನೇಕ ಕಾಯಿಲೆ ಕಸಾಲೆಗಳಿಗೆ ಮನೆಮದ್ದಿನ ಮೂಲಕ ಉಪಶಮನ ಸಾಂತ್ವನ ನೀಡುವ ಅಜ್ಜಿಯರಿದ್ದಾರೆ. ತಮ್ಮ ಮನೆಯಂಗಳದ ಜೇನು, ಬಾಳೆಕಾಯಿ, ಹಲಸಿನಕಾಯಿಗಳನ್ನು ಸಂಸ್ಕರಿಸಿ ಮಾರುತ್ತೇವೆ ಎಂದರೆ ಪ್ರೀತಿಯಿಂದ ಸಹಕರಿಸುವ ಗೃಹಸ್ಥರು ಇದ್ದಾರೆ. ಇವರೆಲ್ಲರ ಪ್ರತಿಭೆಗಳನ್ನು ಬಳಸಿಕೊಂಡು ಈ ಗ್ರಾಮೀಣ ಉತ್ಪಾದನೆಯು ಅತಿ ಕಡಿಮೆ ಸಮಯದಲ್ಲಿ ಗ್ರಾಹಕಸ್ನೇಹಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದು ವಿಸ್ಮಯವೇ ಸರಿ.

    ‘ನಾನು ಇಂದು ಶಿರಸಿಯಿಂದ ಚಿಪ್ಸ್ ತರಿಸಿಕೊಂಡೆ. ಅದ್ಭುತವಾದ ರುಚಿ ಅನುಭವಿಸಿದೆ’ ಎಂಬಂಥ ಫೋಟೋ ಸಮೇತ ಪೋಸ್ಟ್ ಗಳು ಕಾಣತೊಡಗಿದ್ದೆ ಮಹಿಳಾ ಮಾರುಕಟ್ಟೆಯ ವ್ಯಾಪ್ತಿ ತನ್ನಿಂತಾನೇ ಹಿಗ್ಗತೊಡಗಿತು. ಈಗ ಈ ಗುಂಪಿನಲ್ಲಿ ಅಂದಾಜು ಏಳು ನೂರು ಸದಸ್ಯೆಯರು ಇರಬಹುದು.

    ಮೊದಮೊದಲು ಖಾದ್ಯ ವಸ್ತುಗಳಿಗೆ ಮೀಸಲಾದಂತೆ ಇದ್ದ ಈ ಮಹಿಳಾ ಮಾರುಕಟ್ಟೆ ಕ್ರಮೇಣ ಸೀರೆ, ಗೃಹಾಲಂಕಾರ ವಸ್ತುಗಳು, ಅಶಕ್ತ ಹಿರಿಯ ನಾಗರಿಕರಿಗೆ ಬಳಸುವ ಡೈಪರ್​ನಂಥ ಸೂಕ್ಷ್ಮ ಗೃಹೋಪಯೋಗಿ ವಸ್ತುಗಳ ಪೂರೈಕೆವರೆಗೂ ಚಾಚಿಕೊಂಡಿದೆ. ಗ್ರಾಹಕಿಯರ ಮತ್ತು ಪೂರೈಕೆದಾರರ ನಡುವಿನ ಸಂಕೋಚದ ಪೊರೆ ಕಳಚಿ ತಮ್ಮಲ್ಲಿರುವ ಸಂಪನ್ಮೂಲಗಳನ್ನು ಮಾರುಕಟ್ಟೆಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಉತ್ಪಾದಕರು ಪ್ರಾರಂಭಿಸಿದ್ದಾರೆ. ‘ನಾನು ಆರ್ಕಿಟೆಕ್ಟ್, ಮನೆಗಳಿಗೆ ಯೋಜನೆ, ವಿನ್ಯಾಸಗಳನ್ನು ಮಾಡಿಕೊಡಬಲ್ಲೆ’ ಎಂದೊಬ್ಬರು ಬರೆದುಕೊಂಡರೆ ‘ನಮ್ಮಲ್ಲಿಂದ ಹೌಸ್ ನರ್ಸ್​ಗಳನ್ನು ಒದಗಿಸುತ್ತೇವೆ’ ಎಂಬಂಥ ಅಗತ್ಯಸೇವೆಗಳ ಪ್ರಸ್ತಾಪವೂ ಬರತೊಡಗಿದೆ.

    ಅರ್ಥಶಾಸ್ತ್ರದಲ್ಲಿ ‘ಸರಕು ಸೇವೆ’ ಎಂಬ ಎರಡು ಶಬ್ದಗಳು ಒಟ್ಟಿಗೆ ಬಳಸಲ್ಪಡುತ್ತವೆ. ಈ ಮಹಿಳಾ ಮಾರುಕಟ್ಟೆಯು ಸರಕಿನ ಜತೆಗೆ ಸೇವೆಯನ್ನು ವ್ಯಾಪ್ತಿಯೊಳಗೆ ಸೇರಿಸಿಕೊಂಡಿರುವುದು ತುಂಬ ವ್ಯವಸ್ಥಿತ ಮಾರುಕಟ್ಟೆಯೊಂದರ ಹೊಳಹನ್ನು ನೀಡುತ್ತಿದೆ. ನಗರದ ಉದ್ಯೋಗಸ್ಥ ಮಹಿಳೆಯರಿಗೆ ಎಷ್ಟೊಂದು ಸೇವೆಗಳ ಅಗತ್ಯವಿದೆ! ಪಾಕಶಾಲೆಯಲ್ಲಿ ಸಮಯ ಕಳೆಯಲಾರದ ಆಫೀಸಿನ ಕೆಲಸಗಳಲ್ಲಿ ವ್ಯಸ್ತವಾಗಿರುವ ಯುವತಿಯರಿಗೆ ಅಚ್ಚುಕಟ್ಟಾಗಿ ಮನೆಯೂಟ ತಯಾರಿಸಿ ಆಫೀಸಿಗೆ ತಲುಪಿಸುವ ವ್ಯವಸ್ಥೆಯೂ ಪ್ರಾರಂಭವಾಗಿದೆ. ಈ ವ್ಯವಸ್ಥೆ ನಗರಗಳಲ್ಲಿ ಮೊದಲಿನಿಂದಲೂ ಇದೆ ಎಂಬುದು ನಿಜವಾದರೂ ಈ ಮಹಿಳಾ ಮಾರುಕಟ್ಟೆಯ ಸದಸ್ಯೆಯರಿಗೆ ಮೀಸಲಾದ ನೂತನ ವ್ಯವಸ್ಥೆ ಇದು. ಶುಚಿ ರುಚಿಯಾದ ಮನೆಯೂಟ ಕೈಗೆಟಕುವ ದರದಲ್ಲಿ ದೊರಕುವಂತಿದ್ದರೆ ಯಾರಿಗೆ ಬೇಡ? ಕೆಲ ಮಹಿಳೆಯರು ಅದನ್ನು ವ್ಯಾಪಾರಿ ಮನೋಭಾವವನ್ನು ಮೀರಿದ ಕಾಳಜಿ ಮತ್ತು ಸ್ನೇಹದಿಂದ ಕೈಗೆತ್ತಿಕೊಂಡು ಊಟ ಸರಬರಾಜು ಮಾಡಲು ತೊಡಗಿದ್ದಾರೆ. ಸ್ವಾಭಿಮಾನ, ಸ್ವಾವಲಂಬನೆ

    ಈ ಮಾರುಕಟ್ಟೆಯ ಪ್ರಮುಖ ಲಕ್ಷಣ. ಸಹಕಾರಿ ತತ್ತ್ವ ನಮ್ಮ ಮಹಿಳಾ ಆರ್ಥಿಕತೆಗೆ ಹೊಂದುವ ಸಾಧುಪ್ರಕಾರ. ಆದರೆ ಸ್ಪರ್ಧಾತ್ಮಕ ಮಾರುಕಟ್ಟೆಗೆ ಅದರದ್ದೇ ಆದ ಕೆಲವು ನಿರ್ಭಾವುಕ ಬೆಳವಣಿಗೆಗಳು ಇರುತ್ತವೆ. ಅಂಥ ಯಾವುದೇ ಸ್ವಾರ್ಥಪರ ತರಲೆಗಳು ಮಹಿಳಾ ಮಾರುಕಟ್ಟೆಯಲ್ಲಿ ಹುಟ್ಟಿಕೊಳ್ಳದಿರಲಿ, ನಮ್ಮ ಗ್ರಾಮೀಣ ಮುಗ್ಧ ಮಹಿಳಾ ಶಕ್ತಿಯನ್ನು ಶೋಷಿಸದಿರಲಿ ಮತ್ತು ನಮ್ಮ ಉತ್ಸಾಹಿ ಗ್ರಾಹಕಿವೃಂದವನ್ನು ನಿರಾಸೆಗೊಳಿಸದಿರಲಿ ಎಂದು ಆಶಿಸುತ್ತ ಮಹಿಳಾ ಮಾರುಕಟ್ಟೆಗೆ ಶುಭ ಕೋರುತ್ತೇನೆ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts