More

    ಪ್ಯಾರಾಲಿಸಿಸ್‌ ಇಂಜಕ್ಷನ್‌ ಪಡೆದ ಗೃಹಿಣಿ ಸಾವಿನ ಪ್ರಕರಣ-ತನಿಖಾ ಸಮಿತಿ ರಚನೆ ಡಿಎಚ್‌ಒ ಹೇಳಿಕೆ

    ಕಾರವಾರ: ಪ್ಯಾರಾಲಿಸಿಸ್‌ ಇಂಜಕ್ಷನ್ ಪಡೆದ ಗೃಹಿಣಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಲು ತಜ್ಞರ ತಂಡ ರಚಿಸಲಾಗುವುದು ಎಂದು ಡಿಎಚ್‌ಒ ಡಾ.ಅನ್ನಪೂರ್ಣ ವಸ್ತ್ರದ ತಿಳಿಸಿದರು.
    ಹಳಗಾದ ಸೇಂಟ್ ಮೇರೀಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಅಲ್ಲಿನ ಔಷಧಗಳನ್ನು ಪರಿಶೀಲಿಸಿದರು. ರೋಗಿಗಳನ್ನು ಮಾತನಾಡಿಸಿದರು. ಮೃತರ ಕುಟುಂಬದವರು ಹಾಗೂ ವೈದ್ಯರ ಹೇಳಿಕೆಗಳನ್ನು ಪಡೆದರು.
    ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸೇಂಟ್ ಮೇರೀಸ್‌ ಆಸ್ಪತ್ರೆ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿದೆ. ಇತರ ಸಂಬಂಧಪಟ್ಟ ಸರ್ಕಾರಿ ಅನುಮತಿಗಳನ್ನು ಪಡೆದುಕೊಂಡಿದೆ. ವೈದ್ಯರೂ ಇದ್ದಾರೆ. ಪಾರ್ಶ್ವ ವಾಯುವಿಗೆ ಚಿಕಿತ್ಸೆ ನೀಡಲು ಸಿಟಿ ಸ್ಕ್ಯಾನ್‌ ವ್ಯವಸ್ಥೆ ಬೇಕು. ಅಲ್ಲದೆ, ನರ ರೋಗ ತಜ್ಞರಿರಬೇಕು. ಆದರೆ, ಆಸ್ಪತ್ರೆಯಲ್ಲಿ ಆ ವ್ಯವಸ್ಥೆ ಇಲ್ಲ. ಆಸ್ಪತ್ರೆಯಲ್ಲಿ ಸಾಮಾನ್ಯ ಟಾನಿಕ್ ಇಂಜಕ್ಷನ್ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಸೋಮವಾರ ನಡೆದ ಪ್ರಕರಣದ ಬಗ್ಗೆ ತಜ್ಞರ ತನಿಖೆಯಿಂದ ಮಾತ್ರ ಸತ್ಯಾಸತ್ಯ ಹೊರಬೀಳಲು ಸಾಧ್ಯ. ಸಮಿತಿಯೊಂದನ್ನು ರಚಿಸಿ ತನಿಖಾ ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದರು.
    ಗೃಹಿಣಿ ಸಾವು:
    ಬೆನ್ನು ನೋವಿಗೆ ಎಂದು ಹಳಗಾದ ಸೇಂಟ್ ಮೇರೀಸ್ ಆಸ್ಪತ್ರೆಯಲ್ಲಿ ಸೋಮವಾರ ಇಂಜಕ್ಷನ್ ಪಡೆದ ಸೊಲ್ಲಾಪುರ ಮೂಲದ ಸದ್ಯ ಕೊಪ್ಪಳದ ನಿವಾಸಿ ಚಾರ್‌ಟೆಡ್ ಅಕೌಂಟೆಂಟ್ ಸ್ವಪ್ನಾ ಅಕ್ಷಯ ರಾಯ್ಕರ್(32)ಸ್ಥಳದಲ್ಲೇ ಕುಸಿದು ಬಿದ್ದು ಎಚ್ಚರ ತಪ್ಪಿದ್ದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ ನಂತರ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು.

    ಇದನ್ನೂ ಓದಿ: ನಿಲ್ಕುಂದ ದೇವಿಮನೆಯಲ್ಲಿ ಚಿರತೆ ಕಾಟ


    ಸ್ವಪ್ನಾ ಅವರ ತಂದೆ ಕೇಶವ ಪಾವಸ್ಕರ್ ಅವರಿಗೆ ಎರಡು ವರ್ಷಗಳ ಹಿಂದೆ ಪಾರ್ಶ್ವ ವಾಯು ಕಾಣಿಸಿಕೊಂಡಿತ್ತು. ಅವರು ಹಳಗಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದರು. ಈ ಬಾರಿ ವೈದ್ಯಕೀಯ ಪರೀಕ್ಷೆಗೆ ಬರುವಾಗ ಮಗಳು ಸ್ವಪ್ನಾ, ಪತ್ನಿ ಹಾಗೂ ಅಳಿಯನನ್ನು ಕರೆತಂದಿದ್ದರು. ಬೆನ್ನು ನೋವು ಹಾಗೂ ಮುಂದೆ ಪಾರ್ಶ್ವ ವಾಯು ಆಗದಂತೆ ತಡೆಯುತ್ತದೆ ಎಂಬ ಕಾರಣಕ್ಕೆ ವಿಟಾಮಿನ್ ಇಂಜಕ್ಷನ್‌ನ್ನು ಕೇಶವ ಪಾವಸ್ಕರ್ ದಂಪತಿ ಹಾಗೂ ಮಗಳು ಅಳಿಯ ಕೂಡ ಪಡೆದುಕೊಂಡಿದ್ದರು. ಅದರಲ್ಲಿ ಸ್ವಪ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಮ್ಮ ಪತ್ನಿಯ ಸಾವಿನ ಬಗ್ಗೆ ಸಂಶಯವಿದ್ದು, ತನಿಖೆ ನಡೆಸಬೇಕು ಎಂದು ಅಕ್ಷಯ ರಾಯ್ಕರ್ ಚಿತ್ತಾಕುಲಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪ್ಯಾರಾಲಿಸಿಸ್‌ ಆಸ್ಪತ್ರೆ

    ಕ್ರಿಶ್ಚಿಯನ್ ಮಿಶನರಿ ಸಹಾಯದಿಂದ ಸದಾಶಿವಗಡ -ಔರಾದ್ ರಾಜ್ಯ ಹೆದ್ದಾರಿ ಪಕ್ಕ ಎಂಬ ಊರಿನಲ್ಲಿ ಸೇಂಟ್ ಮೇರೀಸ್ ಸೆಂಟರ್ ಫಾರ್ ಡಿಸೇಬಲ್ಡ್ ಆ್ಯಂಡ್ ಪ್ಯಾರಲಿಸ್ಟಿಕ್ ಟ್ರಸ್ಟ್ ಎಂಬ ಕ್ರಿಶ್ಚಿಯನ್ ಮಿಷನರಿಯಿಂದ ಪಾರ್ಶ್ವವಾಯು ಆಸ್ಪತ್ರೆಯನ್ನು ಕಳೆದ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಇಲ್ಲಿ ಇಂಜಕ್ಷನ್ ಪಡೆದ ಪಾರ್ಶ್ವವಾಯು ಆದವರು ಚೇತರಿಸಿಕೊಳ್ಳುತ್ತಾರೆ ಎಂಬುದು ಹಲವರ ನಂಬಿಕೆ ಉತ್ತರ ಕರ್ನಾಟಕ ಭಾಗದಿಂದ ಪ್ರತಿನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡಿ ಇಂಜಕ್ಷನ್ ಪಡೆಯುತ್ತಾರೆ. ಇಂಜಕ್ಷನ್ ಪಡೆಯಲು ಬೆಳಗ್ಗೆ 3 ಗಂಟೆಯಿಂದಲೇ ಆಸ್ಪತ್ರೆಯ ಎದುರು ಜನ ಸರದಿಯಲ್ಲಿ ನಿಲ್ಲುತ್ತಾರೆ.

    ವಿಟಾಮಿನ್ ಬಿ-12 ಇಂಜಕ್ಷನ್ ನೀಡಿದ್ದೇವೆ
    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್‌ ಲೀಸಾ ಅವರು, ಬೆನ್ನು ಸೊಂಟ ನೋವಿದೆ ಎಂದು ಹೇಳಿದ ಸ್ವಪ್ನ ರಾಯ್ಕರ್ ಅವರಿಗೆ ವೈದ್ಯರ ಸಲಹೆ ಪಡೆದು ವಿಟಮಿನ್-ಬಿ12 ಅಂಶಗಳಿರುವ “ಮೆಥೈಲ್ಕೋಬಾಲಮಿನ್-ವೆಸ್ಕೋಬಾಲ್-1000′ ಎಂಬ ಇಂಜಕ್ಷನ್ ನೀಡಲಾಗಿದೆ. ಇಂಜಕ್ಷನ್ ಪಡೆಯುವ ಮುಂಚೆ ರಕ್ತದೊತ್ತಡ ಪರೀಕ್ಷೆ ಮಾಡಲಾಗಿದೆ. ರಕ್ತ ಹೀನತೆ ಅಥವಾ ಅನಿಮಿಯಾ ಇದ್ದಲ್ಲಿ ನೀಡಲಾಗುವ ವಿಟಮಿನ್ ಇಂಜಕ್ಷನ್ ಇದಾಗಿದೆ. ಇಂಜಕ್ಷನ್ ಪಡೆದ ಕೆಲವೇ ಕ್ಷಣದಲ್ಲಿ ಸ್ವಪ್ನಾ ಕುಸಿದು ಬಿದ್ದರು. ನಾವು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆವು. ಆದರೂ ಚೇತರಿಸಿಕೊಳ್ಳದ ಕಾರಣ ನಮ್ಮದೇ ವಾಹನದಲ್ಲಿ ಆಕ್ಸಿಜನ್ ಹಾಗೂ ಇಬ್ಬರು ಸಿಬ್ಬಂದಿಯೊಂದಿಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಅಲ್ಲಿ ಅವರು ಮೃತಟ್ಟಿದ್ದಾರೆ. ಸಾವು ಹೇಗಾಗಿದೆ ಎಂದು ತನಿಖೆ ನಡೆಯಬೇಕಿದೆ. ನಾವು ಎಲ್ಲ ವೈದ್ಯಕೀಯ ಕರ್ತವ್ಯಗಳನ್ನು ನಿಭಾಯಿಸಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts