More

    ಮೂರನೇ ತರಗತಿ ವಿದ್ಯಾರ್ಥಿನಿಯ ಪುಟ್ಟ ಅಹವಾಲನ್ನೂ ಗಂಭೀರವಾಗಿ ಪರಿಗಣಿಸಿದ ಸಿಎಂ ಕಚೇರಿ: ಏಕೆ ಎಂದು ತಿಳಿಸಿದ ಮುಖ್ಯಮಂತ್ರಿ

    ಬೆಂಗಳೂರು: ವಿಜಯವಾಣಿ ಓದುಗರ ವಿಭಾಗಕ್ಕೆ ಮೂರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬರೆದ ಪತ್ರ ಸಿಎಂ ಕಚೇರಿಯನ್ನು ತಲುಪಿದ್ದಲ್ಲದೆ, ಅದಕ್ಕೆ ಅಧಿಕಾರಿಗಳು ಕ್ಷಿಪ್ರಗತಿಯಲ್ಲಿ ಸ್ಪಂದಿಸಿ ಕ್ರಮ ಜರುಗಿಸಿದ್ದೂ ಆಗಿದೆ. ಇದೀಗ ಆ ವಿಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಪುಟ್ಟ ಬಾಲಕಿಯ ಅಹವಾಲನ್ನೂ ಗಂಭೀರವಾಗಿ ಪರಿಗಣಸಿದ್ದೇಕೆ ಎಂಬುದನ್ನೂ ತಿಳಿಸಿದ್ದಾರೆ.

    ಶಾಲಾ-ಕಾಲೇಜು ಬಳಿ ತಂಬಾಕು ಮಾರಾಟ ನಿಷೇಧಿಸಿದ್ದರೂ, ಅಂಗಡಿಗಳಲ್ಲಿ ನಿಯಮ ಮೀರಿ ಮಾರಾಟ ಮಾಡುತ್ತಿದ್ದ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕೈಕಂಬ ಪಿಲಿಕಜೆ ನಿವಾಸಿ 3ನೇ ತರಗತಿ ವಿದ್ಯಾರ್ಥಿನಿ ಅಯೊರ ‘ವಿಜಯವಾಣಿ’ ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿಗೆ ಪತ್ರಿಕೆ ತಲುಪಿಸಿದ ಎರಡು ಗಂಟೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಕೈಕಂಬದ ಮೂರನೇ ತರಗತಿಯಲ್ಲಿ ಓದುವ ಪುಟ್ಟ ಬಾಲಕಿ ಅಯೊರ ತನ್ನ ಶಾಲೆಯ ಸಮೀಪದ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ನಮಗೆ ಪತ್ರ ಬರೆದು ಮನವಿ ಮಾಡಿದ್ದಳು. ಬಾಲಕಿಯ ಸಮಸ್ಯೆ ಚಿಕ್ಕದಾದರೂ ಕಾನೂನಿನ ಬಗ್ಗೆ ಆಕೆಗಿರುವ ಅರಿವು ಮತ್ತು ಅಕ್ರಮದ ವಿರುದ್ಧ ಧ್ವನಿಯೆತ್ತುವ ಧೈರ್ಯ ಕಂಡು ಖುಷಿಯಾಯಿತು ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬಾಲಕಿಯ ಪತ್ರ ತಲುಪಿದ ಕೆಲವೇ ಕೆಲವು ಗಂಟೆಗಳ ಒಳಗೆ ನಮ್ಮ ಕಚೇರಿಯ ಸಾರ್ವಜನಿಕ ಕುಂದುಕೊರತೆಗಳ ವಿಭಾಗದ ವಿಶೇಷಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಕೂಡಲೆ ಅಧಿಕಾರಿಗಳ ತಂಡ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದ ಸ್ಥಳಕ್ಕೆ ತೆರಳಿ, ತಪ್ಪಿತಸ್ಥನಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದೆ ಎಂದು ಸಿಎಂ ತಿಳಿಸಿದ್ದಾರೆ.

    ಬಾಲಕಿಯ ಕೋರಿಕೆ ಚಿಕ್ಕದಾದರೂ ಸರ್ಕಾರ ತಮ್ಮ ಅಹವಾಲನ್ನೂ ಆಲಿಸಿ, ಸಮಸ್ಯೆ ಬಗೆಹರಿಸುತ್ತದೆ ಎಂಬ ವಿಶ್ವಾಸ ಮಕ್ಕಳಲ್ಲಿ ಬಂದರೆ ತಮ್ಮ ಸುತ್ತಮುತ್ತ ನಡೆಯುವ ಅಕ್ರಮ-ಅನ್ಯಾಯಗಳನ್ನು ಖಂಡಿಸುತ್ತಾರೆ. ಅವರಲ್ಲಿ ಈ ಆತ್ಮಸ್ಥೈರ್ಯ ತುಂಬುವುದು ನಮ್ಮ ಜವಾಬ್ದಾರಿಯಾಗಿದೆ ಎಂದಿರುವ ಸಿಎಂ, ಬಾಲಕಿಯ ಪುಟ್ಟ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇಕೆ ಎಂಬುದನ್ನೂ ಈ ಮೂಲಕ ವಿವರಿಸಿದ್ದಾರೆ.

    ಬಾಲಕಿ ಬರೆದ ಪತ್ರಕ್ಕೆ ಎರಡು ಗಂಟೆಯಲ್ಲೇ ಸಿಎಂ ಕಚೇರಿ ಸ್ಪಂದನೆ; ವಿಜಯವಾಣಿಗೆ ಮನವಿ ಮಾಡಿದ್ದ 3ನೇ ತರಗತಿ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts