ಸೂಚ್ಯಂಕ ದಾಖಲೆ ಮಟ್ಟ ತಲುಪಿದಾಗ ಲಾಭ-ನಷ್ಟ ಕಂಡ ಪ್ರಮುಖ ಷೇರುಗಳು ಯಾವವು?

stock
Published on

ಮುಂಬೈ: ಬಿಎಸ್​ಇ ಸೂಚ್ಯಂಕವು ಡಿಸೆಂಬರ್ 19 ರಂದು 122.10 ಅಂಕ ಹೆಚ್ಚಳ ಕಂಡು 71,437.19ರ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆ ಬರೆಯಿತು. ಈ ಸಂದರ್ಭದಲ್ಲಿ ಅಂದಾಜು 1,816 ಷೇರುಗಳ ಬೆಲೆಗಳು ಹೆಚ್ಚಾದರೆ, 1,811 ಷೇರುಗಳ ಬೆಲೆ ಕುಸಿದವು. ಅಲ್ಲದ, 135 ಷೇರುಗಳು ದರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಡಿ. 19ರಂದು ಏರಿಳಿತ ಕಂಡ ಕೆಲವೊಂದಿಷ್ಟು ಪ್ರಮುಖ ಷೇರುಗಳ ಬೆಲೆ ಚಿತ್ರಣ ಇಲ್ಲಿದೆ.

ಆಯಿಲ್ ಇಂಡಿಯಾ:
ಸರ್ಕಾರವು ವಿಂಡ್‌ಫಾಲ್ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಆಯಿಲ್ ಇಂಡಿಯಾದ ಷೇರುಗಳು ಶೇಕಡಾ 7 ರಷ್ಟು ಏರಿಕೆ ಕಂಡವು.

ವಿಜಯಾ ಡಯಾಗ್ನೋಸ್ಟಿಕ್ ಸೆಂಟರ್:
134.64 ಕೋಟಿ ರೂ.ಗಳಿಗೆ ಪಿಎಚ್ ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಕಂಪನಿಯ ಮಂಡಳಿಯು ಅನುಮೋದಿಸಿದ ನಂತರ ವಿಜಯಾ ಡಯಾಗ್ನೋಸ್ಟಿಕ್ ಸೆಂಟರ್‌ನ ಷೇರುಗಳು ಶೇಕಡಾ 2.79 ರಷ್ಟು ಲಾಭ ಗಳಿಸಿದವು.

ಬಯೋಕಾನ್ :
ಸುಧಾರಿತ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅಂದಾಜು 120 ದೇಶಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಬಯೋಸಿಮಿಲರ್ ವ್ಯವಹಾರದ ಪರಿವರ್ತನೆಯನ್ನು ಕಂಪನಿಯು ಪೂರ್ಣಗೊಳಿಸಿದ ನಂತರವೂ ಬಯೋಕಾನ್ ಷೇರುಗಳು 1.5 ಪ್ರತಿಶತದಷ್ಟು ಕುಸಿದವು.

ಐಡಿಎಫ್​ಸಿ: ಫಸ್ಟ್​ ಬ್ಯಾಂಕ್:
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐಡಿಎಫ್‌ಸಿ ಮತ್ತು ಐಡಿಎಫ್‌ಸಿ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪನಿಯ ವಿಲೀನವನ್ನು ಅನುಮೋದಿಸಿದ ನಂತರ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಷೇರುಗಳು ಶೇಕಡಾ 3 ರಷ್ಟು ಏರಿದವು.

ಝೀ :
ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ವಿಲೀನಕ್ಕೆ ಗಡುವು ವಿಸ್ತರಣೆಗೆ ಒಪ್ಪಿಗೆ ನಿರಾಕರಿಸಿದ ನಂತರ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಷೇರುಗಳು 3 ಪ್ರತಿಶತದಷ್ಟು ಕುಸಿದವು.

ಸ್ಪೈಸ್‌ಜೆಟ್:
ಗೋ ಫಸ್ಟ್ ಎಂದು ಕರೆಯಲ್ಪಡುವ ದಿವಾಳಿಯಾದ ಗೋ ಏರ್‌ಲೈನ್ಸ್ (ಇಂಡಿಯಾ) ಲಿಮಿಟೆಡ್‌ಗೆ ಬಿಡ್ಡಿಂಗ್‌ನಲ್ಲಿ ಕಂಪನಿಯು ತನ್ನ ಆಸಕ್ತಿಯನ್ನು ಖಚಿತಪಡಿಸಿದ ನಂತರ ಸ್ಪೈಸ್‌ಜೆಟ್ ಷೇರುಗಳು ಶೇಕಡಾ 2.91 ರಷ್ಟು ಏರಿಕೆ ಕಂಡವು.

ಇಂಡಿಯಾ ಗ್ಲೈಕೋಲ್ಸ್:
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಎಥೆನಾಲ್ ಪೂರೈಕೆಗಾಗಿ 1,164 ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ಕಂಪನಿ ಘೋಷಿಸಿದ ನಂತರ ಇಂಡಿಯಾ ಗ್ಲೈಕೋಲ್ಸ್ ಷೇರುಗಳು ಶೇಕಡಾ 8 ರಷ್ಟು ಏರಿಕೆ ಕಂಡವು.

ದೇವಯಾನಿ ಇಂಟರ್‌ನ್ಯಾಶನಲ್:
ಭಾರತದಲ್ಲಿ KFC ಮತ್ತು Pizza Hut ನಿರ್ವಾಹಕರಾಗಿರುವ ದೇವಯಾನಿ ಇಂಟರ್​ನ್ಯಾಷನಲ್​, ಥೈಲ್ಯಾಂಡ್‌ಗೆ ಪ್ರವೇಶವನ್ನು ಘೋಷಿಸಿದ ನಂತರ ಈ ಕಂಪನಿಯ ಷೇರುಗಳು 5.33 ಪ್ರತಿಶತದಷ್ಟು ಏರಿವೆ.

ಪಿಎನ್​ಸಿ ಇನ್ಫ್ರಾಟೆಕ್:
ಮಧ್ಯಪ್ರದೇಶದಲ್ಲಿ ಕಂಪನಿಯು ರೂ 1,174 ಕೋಟಿ ಯೋಜನೆಯನ್ನು ಪಡೆಉಕೊಂಡ ನಂತರ ಪಿಎನ್​ಸಿ ಇನ್ಫ್ರಾಟೆಕ್​ ಷೇರುಗಳು ಶೇ. 2.33 ಗಳಿಕೆ ಮಾಡಿವೆ.

ಅಪೊಲೊ ಟೈರ್:
ಅಪೊಲೊ ಟೈರ್ಸ್‌ನ ಷೇರುಗಳು 4 ಪ್ರತಿಶತದಷ್ಟು ಏರಿವೆ. 3.6 ಪ್ರತಿಶತ ಪಾಲನ್ನು ಅಥವಾ 2.3 ಕೋಟಿ ಷೇರುಗಳನ್ನು ಸಂಸ್ಥೆಯೊಂದು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದರಿಂದ ಈ ಏರಿಕೆಯಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net