More

    ಆ ಕ್ಷಣ..: ಜನರೇ ಕಾನೂನು ಕೈಗೆತ್ತಿಕೊಂಡಾಗ…

    ಆ ಕ್ಷಣ..: ಜನರೇ ಕಾನೂನು ಕೈಗೆತ್ತಿಕೊಂಡಾಗ...

    ಮಹಾರಾಷ್ಟ್ರದ ನಾಗಪುರದಲ್ಲಿ ಕಸ್ತೂರಬಾ ನಗರವೆನ್ನುವ ಕೊಳೆಗೇರಿಯಿದೆ. ಸುಮಾರು ನೂರು ಸಣ್ಣ ಮನೆಗಳಿರುವ ಈ ಕೊಳೆಗೇರಿಯಲ್ಲಿ ವಾಸವಿದ್ದ ಕಾಳಿಚರಣ್ ಯಾದವ್ ಹಾಲನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ಅವನ ಹಿರಿಯ ಮಗ ಭರತ್. ಅವನನ್ನು ಅಕ್ಕು ಎಂದೇ ಕರೆಯಲಾಗುತ್ತಿತ್ತು. ತನ್ನ ಹನ್ನೆರಡನೆಯ ವರ್ಷಕ್ಕೇ ಶಾಲೆಗೆ ಹೋಗುವುದನ್ನು ಬಿಟ್ಟ ಅಕ್ಕು ಕೆಟ್ಟ ಸಹವಾಸಕ್ಕೆ ಬಿದ್ದು ತನ್ನಂತೆಯೇ ಪೋಲಿಗಳಾಗಿದ್ದ ಯುವಕರ ಗುಂಪೊಂದನ್ನು ಕಟ್ಟಿಕೊಂಡು ಅಪರಾಧಗಳನ್ನು ಮಾಡಲಾರಂಭಿಸಿದ. ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಪಿಕ್ ಪಾಕೆಟ್ ಮಾಡುವುದು, ಬೀದಿ ಜೂಜಾಟವನ್ನಾಡಿಸುವುದು, ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಅವನ ತಂಡವು ತೊಡಗಿಕೊಂಡಿತ್ತು.

    ಅಕ್ಕು ಯಾದವ್​ಗೆ 17 ವರ್ಷ ವಯಸ್ಸಾದಾಗ ಆತ ಹಾದಿಹೋಕರನ್ನು ಮತ್ತು ಬಡಾವಣೆಯ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡಲಾರಂಭಿಸಿದ. ಅವನ ಬಗ್ಗೆ ದೂರುಗಳು ಬರತೊಡಗಿದಾಗ ಪೊಲೀಸರು ಅವನಿಗೆ ಎಚ್ಚರಿಕೆ ನೀಡಿದ್ದರು. ಕಸ್ತೂರಬಾ ನಗರದ ನಿವಾಸಿಯೊಬ್ಬಳ ಮೇಲೆ ಆತ ಅತ್ಯಾಚಾರ ಮಾಡಿದಾಗ ಜರಿಪಟ್ಕ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಯಿತು. ಆದರೆ ಸಂತ್ರಸ್ತೆಯನ್ನು ಅಕ್ಕು ಯಾದವ್ ಹೆದರಿಸಿದ್ದರಿಂದಲೂ ಹಾಗೂ ಮಾನ ಹೋಗುವುದೆಂಬ ಭಯದಿಂದಲೂ ಆಕೆ ಅತ್ಯಾಚಾರವಾದದ್ದನ್ನೇ ಅಲ್ಲಗಳೆದಳು. ಅಕ್ಕು ಬಚಾವಾದ. ಮೊದಲ ದೊಡ್ಡ ಅಪರಾಧದಲ್ಲಿಯೇ ತನಗೆ ಏನೂ ಆಗದಿದ್ದುದನ್ನು ಕಂಡು ಅಕ್ಕು ಇನ್ನಷ್ಟು ಧೈರ್ಯಗೊಂಡ. ಪ್ರತಿಭಾ ಉಕ್ಕುಂಡೆ ಎನ್ನುವವಳು ಅದೇ ಕೊಳೆಗೇರಿಯಲ್ಲಿ ನಡೆಸುತ್ತಿದ್ದ ಸಣ್ಣ ಕಿರಾಣಿ ಅಂಗಡಿಗೆ ಹೋಗಿ ವಸ್ತುಗಳನ್ನು ತೆಗೆದುಕೊಂಡು ಹಣ ಕೊಡುತ್ತಿರಲಿಲ್ಲ. ಪದೇಪದೆ ಹೀಗಾದಾಗ ಆಕೆ ಪೊಲೀಸರಿಗೆ ದೂರಿತ್ತಳು. ಅವರು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಅಬಲೆಯರಾದ ಸ್ತ್ರೀಯರನ್ನೇ ಗುರಿ ಮಾಡಿದರೆ ದೂರು ದಾಖಲಾಗಲಾರದು ಎನ್ನುವ ಕಾರಣದಿಂದ ಯಾದವ್ ಹೆಣ್ಣುಮಕ್ಕಳಿಗೆ ಚೂರಿ ತೋರಿಸಿ ಸುಲಿಗೆ ಮಾಡತೊಡಗಿದ. ವಯಸ್ಕರಾಗಲಿ, ಸಣ್ಣವರಾಗಲಿ, ಗೃಹಿಣಿಯರಾಗಲಿ ಎದುರಿಗೆ ಯಾರೇ ಬಂದರೂ ಅವರನ್ನು ಬೆದರಿಸಿ, ಹೊಡೆದು, ಸಿಕ್ಕ ವಸ್ತುವನ್ನು ಕಸಿಯಲಾರಂಭಿಸಿದ.

    ಒಮ್ಮೆ ಆತ ಮನೆಯೊಂದಕ್ಕೆ ನುಗ್ಗಿ ಮನೆಯ ಯಜಮಾನನನ್ನು ಇರಿದು ಅವನ ಎದುರೇ ಅವನ ಪತ್ನಿಯ ಮೇಲೆ ಅತ್ಯಾಚಾರಗೈದ. ಇನ್ನೊಮ್ಮೆ, ಹೊಸದಾಗಿ ಲಗ್ನವಾಗಿ ಬಡಾವಣೆಗೆ ಬಂದಿದ್ದ ಯುವತಿ ಮೇಲೆ ಆತನ ತಂಡದವರು ಗ್ಯಾಂಗ್​ರೇಪ್ ಮಾಡಿದರು. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಮನೆಯೊಂದರ ಮುಖ್ಯಸ್ಥನನ್ನು ವಿವಸ್ತ್ರನನ್ನಾಗಿಸಿ ಆತನ ಪತ್ನಿ ಹಾಗೂ ಹೆಣ್ಣು ಮಗಳ ಮುಂದೆಯೇ ಡಾನ್ಸ್ ಮಾಡಿಸಿದ. ಮುಂದೆ ಯಾದವ್ ಅತ್ಯಾಚಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ. ಅವನಿಂದ ದೌರ್ಜನ್ಯಕ್ಕೊಳಗಾದ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದ್ದರು.

    ಆತ ಇಷ್ಟೆಲ್ಲಾ ಕುಕೃತ್ಯಗಳನ್ನು ಮಾಡಿದರೂ ಪೊಲೀಸರು ಯಾವುದೇ ತೀವ್ರ ಕ್ರಮ ಕೈಗೊಂಡಿರಲಿಲ್ಲ. ಇದಲ್ಲದೆ ದೂರಿದವರ ಬಗ್ಗೆ ಅವನಿಗೇ ಮಾಹಿತಿ ನೀಡುತ್ತಿದ್ದರು. ದೂರು ನೀಡಿದವರನ್ನು ಯಾದವ್ ಇನ್ನಷ್ಟು ಹಿಂಸಿಸುತ್ತಿದ್ದ. ಪೊಲೀಸರೇ ಅವನ ಬೆಂಬಲಕ್ಕಿದ್ದಾರೆಂದು ಭಾವಿಸಿದ ಜನರು ದೂರುವುದನ್ನೇ ಬಿಟ್ಟರು. ಅವನಿಗೆ ಕಸ್ತೂರಬಾ ನಗರದ ‘ಗಬ್ಬರ್ ಸಿಂಗ್’ ಎಂಬ ಹೆಸರನ್ನು ಕೊಟ್ಟಿದ್ದರು.

    1999ರ ಜೂನ್ 16 ರಂದು ಗೃಹಿಣಿಯೊಬ್ಬರನ್ನು ಹೆದರಿಸಿದ ಅಕ್ಕು ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಬಿಚ್ಚಿಕೊಡಲು ಹೇಳಿದ. ಆಕೆ ಕೊಡದಿದ್ದಾಗ ಎರಡೂ ಕಿವಿಗಳನ್ನು ಕತ್ತರಿಸಿ ತಿವಿದು ಕೊಲೆ ಮಾಡಿದ. ಅವಳ ದೇಹವನ್ನು ಹತ್ತಿರದಲ್ಲಿದ್ದ ರೈಲ್ವೆ ಹಳಿಗಳ ಮೇಲೆ ಬಿಸಾಕಿದ. ಈ ಪ್ರಕರಣದಲ್ಲಿ ಕೊಲೆ ಮತ್ತು ಸುಲಿಗೆಯ ಕೇಸ್ ದಾಖಲಾಗಿ ಆತ ಜೈಲಿಗೆ ಹೋದ. ಅದೇ ಸಮಯದಲ್ಲಿ ಅವನ ವಿರುದ್ಧ ಗೂಂಡಾ ಕಾಯ್ದೆಯನ್ವಯ ಪ್ರಕರಣ ದಾಖಲಾಯಿತು. ಆದರೆ ಆತ ಒಂದು ವರ್ಷದಲ್ಲಿಯೇ ಜೈಲಿನಿಂದ ಹೊರಬಂದು ಮತ್ತೆ ಅಪರಾಧಗಳನ್ನು ಮಾಡಲಾರಂಭಿಸಿದ. ಕೊಲೆ ಪ್ರಕರಣವೂ ಕೋರ್ಟಿನಲ್ಲಿ ಬಿದ್ದುಹೋಯಿತು. 26 ಪ್ರಕರಣಗಳಲ್ಲಿ ಶಾಮೀಲಾಗಿದ್ದರೂ ಯಾದವ್ ಪೊಲೀಸರಿಗೆ ಹೆದರುತ್ತಿರಲಿಲ್ಲವಾದ್ದರಿಂದ ಅವನನ್ನು ಗಡೀಪಾರು ಮಾಡಲಾಯಿತು. ಆದರೂ ಆತ ಕಸ್ತೂರಬಾ ಬಡಾವಣೆಗೆ ಬಂದು ಜನರಿಗೆ ತೊಂದರೆ ಕೊಡುವುದನ್ನು ಮುಂದುವರಿಸಿದ್ದ.

    2004 ರ ಆಗಸ್ಟ್ 6ರಂದು ಯಾದವ್ ಮತ್ತು ಅವನ ಸಂಗಡಿಗರು ರತ್ನ ಎನ್ನುವವಳ ಮನೆಗೆ ನುಗ್ಗಿ ಹಣ ಕೇಳಿದರು. ಆಕೆ ನಿರಾಕರಿಸಿದಾಗ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ಹೆದರಿಸಿದರು. ರತ್ನಳ ಪಕ್ಕದ ಮನೆಯಲ್ಲಿ ಉಷಾ ಎನ್ನುವ 22 ವರ್ಷ ವಯಸ್ಸಿನ ಯುವತಿಯಿದ್ದಳು. ಆಕೆ ಆ ಬಡಾವಣೆಯಲ್ಲಿ ಪದವೀಧರೆಯಾದ ಪ್ರಥಮ ದಲಿತ ಯುವತಿಯಾಗಿದ್ದಳು. ಆಕೆಗೆ ಪಂಜಾಬಿನಲ್ಲಿ ನೌಕರಿ ದೊರೆತಿದ್ದು ಕೆಲವೇ ದಿನಗಳಲ್ಲಿ ಹೊರಡಬೇಕಾಗಿತ್ತು. ಆಕೆಯ ಸೋದರನೂ ವಕೀಲನಾಗಿದ್ದು ಆತ ಕೆಲಕಾಲ ಅಕ್ಕು ಯಾದವ್​ನ ಗೆಳೆಯನಾಗಿದ್ದ. ಗಲಾಟೆಯನ್ನು ಕೇಳಿ ಹೊರಬಂದ ಉಷಾ ಅಕ್ಕು ಯಾದವ್​ನ ಜತೆಗೆ ವಾದಕ್ಕಿಳಿದು ಅವನನ್ನು ಹಿಮ್ಮೆಟ್ಟಿಸಿದಳು. ರತ್ನ ಪೊಲೀಸ್ ದೂರು ಕೊಡಲು ಹಿಂಜರಿದಾಗ ತಾನೇ ಹೋಗಿ ದೂರನ್ನಿತ್ತಳು. ಇದರಿಂದ ಕುಪಿತನಾದ ಯಾದವ್ ಅದೇ ಸಂಜೆ ಉಷಾ ಮನೆಯಲ್ಲಿ ಒಬ್ಬಳೇ ಇದ್ದಾಗ ಆಸಿಡ್ ಬಾಟಲಿ ಹಿಡಿದುಕೊಂಡು ಬಂದು ಬಾಗಿಲು ಬಡಿದು, ರೇಪ್ ಮಾಡಿ ಕೊಲೆಗೈಯ್ಯುವುದಾಗಿ ಬೆದರಿಸಿದ. ಉಷಾ ಪೊಲೀಸರಿಗೆ ಫೋನ್ ಮಾಡಿದಳು. ಯಾರೂ ಸಹಾಯಕ್ಕೆ ಬರಲಿಲ್ಲ. ಆಗ ಆಕೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರಿನಿಂದ ಗ್ಯಾಸನ್ನು ಹೊರಬಿಟ್ಟು ಕೈಯಲ್ಲಿ ಕಡ್ಡಿಪೆಟ್ಟಿಗೆ ಹಿಡಿದು ‘ನೀನೇನಾದರೂ ಮನೆಯೊಳಗೆ ನುಗ್ಗಿದರೆ ನಾನು ಕಡ್ಡಿ ಗೀರುವೆ, ನನ್ನ ಜತೆಗೆ ನಿನ್ನನ್ನೂ, ನಿನ್ನ ಗೆಳೆಯರನ್ನೂ ಸ್ಪೋಟದಲ್ಲಿ ಸಾಯಿಸುವೆ’ ಎಂದು ಬೆದರಿಸಿ ಅವನನ್ನು ಹಿಮ್ಮೆಟ್ಟಿಸಿದಳು.

    ನಂತರ ಉಷಾ ಬಡಾವಣೆಯ ಇತರ ಕೆಲವು ಹೆಣ್ಣುಮಕ್ಕಳನ್ನು ಜೊತೆಮಾಡಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರಿತ್ತಳು. ಈ ಗುಂಪು ಠಾಣೆಯಿಂದ ವಾಪಸಾಗುವಾಗ ಯಾದವನ ಮನೆಯ ಮುಂದೆ ನೆರೆದು ಘೊಷಣೆಗಳನ್ನು ಕೂಗಿ ಅವನ ಮನೆಯ ಮೇಲೆ ಕಲ್ಲುಗಳನ್ನೆಸೆಯಿತು. ಮನೆಯನ್ನು ಸುಡಲು ಗುಂಪಿನಲ್ಲಿದ್ದ ಕೆಲವರು ಹೊರಟಾಗ ಯಾದವ್ ಓಡಿಹೋಗಿ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದ. ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು. 2004ರ ಆಗಸ್ಟ್ 13ರ ಮಧ್ಯಾಹ್ನ 3 ಗಂಟೆಗೆ ಯಾದವ್​ನ ಜಾಮೀನು ಅರ್ಜಿ ವಿಚಾರಣೆಯ ಪ್ರಯುಕ್ತ ಅವನನ್ನು ಪೊಲೀಸ್ ಬೆಂಗಾವಲಿನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಯಾದವ್ ಮತ್ತೆ ಜಾಮೀನಿನ ಮೇಲೆ ಹೊರಬಂದು ತಮಗೆ ತೊಂದರೆ ನೀಡುತ್ತಾನೆ ಎಂದು ಭಾವಿಸಿದ ಕಸ್ತೂರಬಾ ನಗರದ ಸುಮಾರು 200 ಜನರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದರು. ಇವರಲ್ಲಿ ಬಹುತೇಕರು ಸ್ತ್ರೀಯರಾಗಿದ್ದರು. ಅವರೆಲ್ಲರ ಕೈಯಲ್ಲಿ ದೊಣ್ಣೆಗಳು, ಚಾಕು, ಖಾರದಪುಡಿ ಇತ್ಯಾದಿ ಇದ್ದವು. ಅಕ್ಕು ಕೋರ್ಟ್ ಹಾಲ್​ಗೆ ಹೋಗುವಾಗ ಉಷಾಳನ್ನು ನೋಡಿ ‘ವೇಶ್ಯೆ’ ಎಂದು ಮೂದಲಿಸಿದ.

    ನ್ಯಾಯಾಲಯದ ಏಳನೇ ಕೋರ್ಟ್ ಹಾಲಿನ ಕಟಕಟೆಗೆ ಅಕ್ಕು ಯಾದವ್​ನನ್ನು ಪೊಲೀಸರು ಕರೆತರುತ್ತಲೇ ಒಳಗೆ ನುಗ್ಗಿದ ಉದ್ರಿಕ್ತ ಮಹಿಳೆಯರ ಗುಂಪು ಅವನ ಮೇಲೆರಗಿತು. ಹೆದರಿದ ಪೊಲೀಸರು ಅಲ್ಲಿಂದ ಓಡಿಹೋದರು. ಯಾದವ್​ನನ್ನು ಕೆಳಗೆ ಬೀಳಿಸಿದ ಹೆಂಗಸರು ಅವನನ್ನು ದೊಣ್ಣೆ ಮತ್ತು ಕಲ್ಲುಗಳಿಂದ ಮನಸಾರೆ ಥಳಿಸಿದರು, ಚಾಕುವಿನಿಂದ ತಿವಿದರು, ಕಾಲಿನಿಂದ ಒದ್ದರು. ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯದ ಒಳಗಡೆಯೇ ಆತ ಅಸುನೀಗಿದ. ಆ ಸಮಯದಲ್ಲಿ ನ್ಯಾಯಾಧೀಶರು ತಮ್ಮ ಚೇಂಬರಿನಲ್ಲಿಯೇ ಇದ್ದರು. ಹೆಂಗಳೆಯರು ಕೊಲೆ ಮಾಡಿದವರು ತಾವೇ ಎಂದು ಹೇಳಿ ತಮ್ಮನ್ನೆಲ್ಲಾ ಬಂಧಿಸಲು ಪೊಲೀಸರಿಗೆ ತಾಕೀತು ಮಾಡಿದರು. ಹಾಗೂಹೀಗೂ ಅವರನ್ನು ಸಮಾಧಾನಪಡಿಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಅಕ್ಕುವಿನ ಶವವನ್ನು ಆಸ್ಪತ್ರೆಗೆ ಒಯ್ದರು. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಅವನಿಗೆ 73 ತಿವಿತದ ಗಾಯಗಳಾಗಿದ್ದು ಆತನ ಶಿಶ್ನವನ್ನು ಕತ್ತರಿಸಲಾಗಿದೆಯೆಂದು ವರದಿ ಮಾಡಿದರು. ಉದ್ರಿಕ್ತ ಗುಂಪಿನಲ್ಲಿ ಕೊಲೆ ಮಾಡಿದವರು ನಿಖರವಾಗಿ ಯಾರೆಂದು ತಿಳಿಯಲಿಲ್ಲ. ಅಕ್ಕುವಿನ ಸೋದರರ ಹೇಳಿಕೆಯ ಮೇರೆಗೆ ಉಷಾಳೇ ಕೊಲೆಗೆ ಕುಮ್ಮಕ್ಕು ನೀಡಿದಳೆಂದು ಅವಳನ್ನೂ ಸೇರಿ ಕಸ್ತೂರಬಾ ನಗರದ ಏಳು ಸ್ತ್ರೀಯರು ಮತ್ತು ನಾಲ್ವರು ಪುರುಷರನ್ನು ಪೊಲೀಸರು ಬಂಧಿಸಿದರು.

    ನಾಗಪುರದ ಪೊಲೀಸರು ಅಕ್ಕು ಯಾದವ್ ಜೊತೆ ಶಾಮೀಲಾಗಿದ್ದ ಕಾರಣ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ಸಾರ್ವಜನಿಕರು ಒತ್ತಾಯ ಮಾಡಿದರು. ಸಿಐಡಿ 22 ಜನರ ಮೇಲೆ ಆರೋಪಪಟ್ಟಿ ಸಲ್ಲಿಸಿತು. ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ವಿಚಾರಣೆ ನಡೆದು 2014ರ ನವೆಂಬರ್ 11 ರಂದು ಸೂಕ್ತ ಸಾಕ್ಷಾ್ಯಧಾರವಿಲ್ಲದ ಕಾರಣ ಎಲ್ಲಾ ಆರೋಪಿಗಳನ್ನೂ ಖುಲಾಸೆ ಮಾಡಲಾಯಿತು. ನ್ಯಾಯಾಧೀಶ ಸೂರ್ಯವಂಶಿಯವರು ಜರಿಪಟ್ಕ ಠಾಣೆಯ ಪೊಲೀಸರು ಅಕ್ಕುವಿನ ಜತೆ ಶಾಮೀಲಾಗಿದ್ದು ಅವನಿಗೆ ಸಹಾಯಮಾಡುತ್ತಿದ್ದುದಾಗಿ ತೀರ್ಪಿನಲ್ಲಿ ಟೀಕಿಸಿ, ಇಲಾಖಾ ಕ್ರಮ ಕೈಗೊಳ್ಳಲು ತಿಳಿಸಿದರು. ‘ಜನರೇ ಕಾನೂನನ್ನು ಕೈಗೆತ್ತಿಕೊಂಡಾಗ ಸೋಲುವುದು ಕಾನೂನೇ; ಕಾನೂನು ಸೋತಾಗ ಸ್ವಾತಂತ್ರ್ಯವೇ ಕ್ಷೀಣಿಸುತ್ತದೆ’ ಎಂದ ರಾಬರ್ಟ್ ಕೆನಡಿಯ ಮಾತುಗಳನ್ನು ಪೊಲೀಸರು ನೆನಪಿಟ್ಟು ದುಷ್ಟರನ್ನು ನಿಗ್ರಹಿಸಿದಾಗ ಮಾತ್ರ ಸಮಾಜವು ಭದ್ರವಾಗುತ್ತದೆ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts