More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ: ವಾಹನ ಸಂಚಾರ ಸಾಮಾನ್ಯ, ಜನ ಕಡಿಮೆ

    ಮಂಗಳೂರು/ಬಂಟ್ವಾಳ/ಕಡಬ: ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾದ ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನದವರೆಗೆ ರಸ್ತೆಯಲ್ಲಿ ಬಸ್ ಹೊರತುಪಡಿಸಿ ವಾಹನ ಸಂಚಾರ ಸಾಮಾನ್ಯವಾಗಿದ್ದು, ಜನರ ಓಡಾಟ ಕಡಿಮೆಯಾಗಿರುವುದು ಕಂಡುಬಂತು. 2 ಗಂಟೆ ಬಳಿಕ ಜನ ಸಂಚಾರ ಇಳಿಕೆಯಾಗಿದೆ.

    ದಿನಸಿ, ತರಕಾರಿ, ಮಾಂಸ, ಹಾಲು ಸಹಿತ ಅಗತ್ಯ ವಸ್ತುಗಳ ಅಂಗಡಿಗಳು, ಬೀದಿಬದಿ ವ್ಯಾಪಾರಕ್ಕೆ ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಮಂಗಳೂರಿನಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಅಗತ್ಯ ವಸ್ತುಗಳ ಸಾಗಾಟದ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಟೊ ರಿಕ್ಷಾಗಳು ಓಡಾಟ ನಡೆಸಿದವು. ಸರ್ಕೀಟ್ ಹೌಸ್, ನಂತೂರು, ಕ್ಲಾಕ್ ಟವರ್ ಮೊದಲಾದ ಕಡೆ ಪೊಲೀಸರು ವಾಹನ ತಪಾಸಣೆ ನಡೆಸಿದರು.

    ಮಂಗಳೂರಿನಲ್ಲಿ ಬೆಳಗ್ಗೆ ಬೆರಳೆಣಿಕೆಯಷ್ಟು ಖಾಸಗಿ, ಸಿಟಿ ಬಸ್‌ಗಳು ರಸ್ತೆಗಿಳಿದಿದ್ದರೂ ಪ್ರಯಾಣಿಕರಿಲ್ಲದ ಕಾರಣ ಅವುಗಳೂ ಮಧ್ಯಾಹ್ನ ವೇಳೆಗೆ ಸಂಚಾರ ಸ್ಥಗಿತಗೊಳಿಸಿದವು. ಸರ್ಕಾರಿ ಬಸ್‌ಗಳ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಬಸ್‌ಗಳಲ್ಲಿ ಕಚೇರಿಗಳಿಗೆ ಬರುವವರು ಮಧ್ಯಾಹ್ನ ಮನೆಗೆ ಹಿಂತಿರುಗಿದರು.

    ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮೂಡುಬಿದಿರೆ ಮೊದಲಾದ ತಾಲೂಕು ಕೇಂದ್ರಗಳಲ್ಲೂ ವಾಹನ ಹಾಗೂ ಜನ ಸಂಚಾರ ವಿರಳವಾಗಿತ್ತು. ಬಂಟ್ವಾಳದಲ್ಲಿ ಮಿಶ್ರ ಪ್ರತಿಕ್ರಿಯೆ ಇದ್ದು, ಹೆಚ್ಚಿನ ಅಂಗಡಿಗಳು ತೆರೆದಿದ್ದವು. ವಾಹನ ಸಂಚಾರವೂ ಎಂದಿನಂತಿತ್ತು. ಬಸ್ ನಿಲ್ದಾಣ ಖಾಲಿಯಾಗಿತ್ತು. ಗ್ರಾಮೀಣ ಭಾಗದಲ್ಲೂ ಜನಜೀವನವೂ ಸಹಜವಾಗಿತ್ತು. ಕೇರಳ ಗಡಿ ಭಾಗಗಳಲ್ಲಿ ಪೊಲೀಸರು ತಪಾಸಣೆ ಬಿಗುಗೊಳಿಸಿದ್ದಾರೆ. ಸೋಮವಾರ ಬೆಳಗ್ಗೆ 5 ಗಂಟೆಗೆ ವಾರಾಂತ್ಯ ಕರ್ಫ್ಯೂ ಕೊನೆಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts