

ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 15 ಮಂದಿ ಮೃತ.
ಇಂಫಾಲದ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಿಎಂ ಯುಮ್ನಮ್ ಖೇಮ್‌ಚಂದ್ ಸಿಂಗ್.
ಮೃತಪಟ್ಟವರು ಸೇವಿಸಿದ್ದ ಮದ್ಯವನ್ನು ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ತರಲಾಗಿತ್ತು.
ಇಂಫಾಲ (ಮಣಿಪುರ): ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 15 ಮಂದಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಕಳೆದ 48 ಗಂಟೆಯಲ್ಲಿ 180ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನ.18 ಮತ್ತು 20ರ ನಡುವೆ 15 ಸಾವು ಸಂಭವಿಸಿದೆ,. ಕಿಶನ್ ಹ್ರಾಂಗ್‌ಬಂಗ್ ಅನಲ್ (32), ಹ್ರಾಂಗ್‌ಬಂಗ್ ಬೆರುವಂಗ್ ಅನಲ್ (50), ಹ್ರಾಂಗ್‌ಬಂಗ್ ಮೊಹ್ರಿಂಗ್ ಅನಲ್ (46), ಆರ್‌ಡಿ ಅಂಗ್ನಾಹಿರಿಂಗ್ ಅನಲ್ (37), ಕೆಐ ರಾಮ್ಟಿಯಾಂಗ್ ಅನಲ್ (44), ಎನ್‌ಎಲ್ ಮೊಥಾಹ್ರಿಂಗ್ ಅನಲ್, ಟಿಎಸ್ ಆಶಿಂಗ್ ಮತ್ತು ಟಿಎಸ್ ಲವ್ಲಿ ಎಂದು ಗುರುತಿಸಲಾಗಿದೆ. ಮತ್ತಷ್ಟು ಜನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಚಂದೇಲ್ ಪೊಲೀಸ್ ವರಿಷ್ಠಾಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ನಕಲಿ ಮದ್ಯ ಸೇವಿಸಿ ಅಸ್ವಸ್ಥಗೊಂಡ ಕೆಲವು ತಮ್ಮ ಮನೆಗಳಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಥವಾ ಚಕ್ಪಿಕರೋಂಗ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾದ ನಂತರ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಸೇವಿಸಿದ ಮದ್ಯವನ್ನು ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ಖರೀದಿ ಮಾಡಲಾಗಿತ್ತು. ಚಂದೇಲ್ ಜಿಲ್ಲೆಯಲ್ಲಿ ಭಟ್ಟಿ ಇಳಿಸಿಲ್ಲ. ಜೊತೆಗೆ ಮದ್ಯ ಖರೀದಿ ಮಾಡಿಲ್ಲ. ಇಲ್ಲಿಯವರೆಗೂ ಮೃತಪಟ್ಟವರ ಪೈಕಿ ಐದು ಪ್ರಕರಣಗಳು ಸುಗ್ನು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತವೆ ಎಂದು ಚಂದೇಲ್ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹರಡಬೇಡಿ ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಚಂದೇಲ್ ಜಿಲ್ಲಾಧಿಕಾರಿಗಳು ಗುರುವಾರ ಸಾರ್ವಜನಿಕ ಆರೋಗ್ಯ ಸಲಹೆಯನ್ನು ಹೊರಡಿಸಿದ್ದು, ಸಾವುಗಳಿಗೆ ನಿಖರವಾದ ಕಾರಣವನ್ನು ವೈದ್ಯಕೀಯವಾಗಿ ಮತ್ತು ವೈಜ್ಞಾನಿಕವಾಗಿ ಇನ್ನೂ ದೃಢಪಡಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದು ಹೇಳಾಗಿದೆ.
ಮದ್ಯ ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು, ತಲೆನೋವು, ತಲೆತಿರುಗುವಿಕೆ, ಮಸುಕಾದ ದೃಷ್ಟಿ ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸಲಹೆಯಲ್ಲಿ ಕೋರಲಾಗಿದೆ. ಅಲ್ಲದೆ, ಅದೇ ಅನುಮಾನಾಸ್ಪದ ಮೂಲದಿಂದ ಮದ್ಯ ಸೇವಿಸಿರುವವರು ಯಾವುದೇ ರೋಗಲಕ್ಷಣಗಳು ಕಂಡುಬರದಿದ್ದರೂ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೂಚಿಸಲಾಗಿದೆ.
ಶಂಕಿತ ಮದ್ಯವನ್ನು ಸೇವಿಸುವುದು, ಮಾರಾಟ ಮಾಡುವುದು, ಹಂಚಿಕೊಳ್ಳುವುದು ಅಥವಾ ವಿಲೇವಾರಿ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿರುವ ಆಡಳಿತವು, ಕಲಬೆರಕೆ ಮದ್ಯದ ತಯಾರಿಕೆ, ಸಂಗ್ರಹಣೆ ಅಥವಾ ಮಾರಾಟದ ಬಗ್ಗೆ ಮಾಹಿತಿ ಇದ್ದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಿದೆ.
ಮುಖ್ಯಮಂತ್ರಿ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಪಶ್ಚಿಮ ಇಂಫಾಲದ ಶಿಜಾ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಪೂರ್ವ ಇಂಫಾಲದ ಬಬಿನಾ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವವರಿಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು,ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಹೇಳಿದರು, (ಏಜೆನ್ಸೀಸ್).