More

    Web Exclusive | ನನೆಗುದಿಗೆ ಬಿದ್ದಿದ್ದ ರೈಲು ಮಾರ್ಗಗಳಿಗೆ ಜೀವಕಳೆ: 10 ಹೊಸ ಮಾರ್ಗಗಳ ಸರ್ವೆ ಪೂರ್ಣ, ವರದಿ ಕಳುಹಿಸಲು ರೈಲ್ವೆ ಮಂಡಳಿ ಸೂಚನೆ

    | ಆನಂದ ಅಂಗಡಿ ಹುಬ್ಬಳ್ಳಿ

    ನನೆಗುದಿಗೆ ಬಿದ್ದಿದ್ದ ರಾಜ್ಯದ 10 ಹೊಸ ರೈಲು ಮಾರ್ಗಗಳು ಹಳಿ ಏರುವ ಲಕ್ಷಣ ಗೋಚರಿಸಲಾರಂಭಿಸಿದೆ. ನೈಋತ್ಯ ರೈಲ್ವೆ ವಲಯ ಕಳೆದ ಎರಡ್ಮೂರು ವರ್ಷಗಳಿಂದ ಇದುವರೆಗೆ ಹಲವಾರು ಹೊಸ ಮಾರ್ಗಗಳ ಸರ್ವೆ ನಡೆಸಿದೆ. ಈ ಪೈಕಿ ಸರ್ವೆ ಪೂರ್ಣಗೊಂಡ ರಾಜ್ಯದ 10 ಹೊಸ ಮಾರ್ಗಗಳ ವರದಿಯನ್ನು ಮತ್ತೊಮ್ಮೆ ಕಳುಹಿಸುವಂತೆ ರೈಲ್ವೆ ಮಂಡಳಿಯಿಂದ ನೈಋತ್ಯ ವಲಯಕ್ಕೆ ಸೂಚನೆ ಬಂದಿದೆ.

    11 ಹೊಸ ಯೋಜನೆಗಳ ಪೈಕಿ ಧಾರವಾಡ-ಬೆಳಗಾವಿ ಮಧ್ಯದ 73 ಕಿಮೀ ಉದ್ದದ ನೇರ ರೈಲು ಮಾರ್ಗವೂ ಇದ್ದು, ಇದಕ್ಕೆ ರೈಲು ಮಂಡಳಿ ಈಗಾಗಲೇ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ಮೊದಲ ಹಂತವಾಗಿ 50 ಕೋಟಿ ರೂ. ಒದಗಿಸಿದೆ. ಆದರೆ, ಹಾಸನ-ಮಂಗಳೂರು ಮಧ್ಯದ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ, ಕೊಪ್ಪಳ-ಸಿಂಧನೂರ, ನಂದಿಕೂರ – ಕಾರ್ಕಳ – ಉಜಿರೆ – ಚಾರ್ಮಡಿ – ಮುಡಿಗೆರೆ, ಕೊಪ್ಪಳ – ಧಾರವಾಡ ಹಾಗೂ ಇನ್ನುಳಿದ 10 ಹೊಸ ಮಾರ್ಗಗಳು ರೈಲ್ವೆ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದ್ದವು. ಸರ್ವೆ ಪೂರ್ಣಗೊಂಡ ಈ ಮಾರ್ಗಗಳಿಗೆ ಅನುಮೋದನೆ ದೊರೆಯುವುದೋ ಅಥವಾ ಇಲ್ಲವೋ ಎಂಬ ಜಿಜ್ಞಾಸೆ ಸರ್ವೆ ಪೂರ್ಣಗೊಂಡ ಪ್ರದೇಶಗಳ ವ್ಯಾಪ್ತಿಯ ಜನರಲ್ಲಿ ಮೂಡಿತ್ತು. ಇದೀಗ, ರೈಲ್ವೆ ಮಂಡಳಿಯ ಸೂಚನೆ ಹಿನ್ನೆಲೆಯಲ್ಲಿ ಈ 10 ಹೊಸ ಮಾರ್ಗಗಳು ಅನುಷ್ಠಾನಕ್ಕೆ ಬರಬಹುದೆಂಬ ಆಶಯ ಮತ್ತೆ ಗರಿಗೆದರಿದೆ. ಸರ್ವೆ ಪೂರ್ಣಗೊಂಡ ಹೊಸ ಮಾರ್ಗಗಳ ವರದಿಯನ್ನು ಮತ್ತೊಮ್ಮೆ ಸಿದ್ಧಪಡಿಸುವ ಕಾರ್ಯಕ್ಕೆ ನೈಋತ್ಯ ವಲಯದ ಅಧಿಕಾರಿಗಳು ಮುಂದಾಗಿದ್ದಾರೆ.

    ಹೊಸ ರೈಲು ಮಾರ್ಗಗಳಿವು: ಹಾಸನ-ಮಂಗಳೂರು (189 ಕಿಮೀ) ಡಬ್ಲಿಂಗ್, ಕೊಪ್ಪಳ-ಸಿಂಧನೂರು ಹೊಸ ಮಾರ್ಗ (88 ಕಿಮೀ), ಕೊಲ್ಲಾಪುರ-ಧಾರವಾಡ (220.60 ಕಿಮೀ), ಗುಂಜಿ-ಕುಲೇಮ್ (113 ಕಿಮೀ), ನಂದಿಕೂರ- ಕಾರ್ಕಳ – ಉಜಿರೆ – ಚಾರ್ಮಡಿ – ಮುಡಿಗೆರೆ (136 ಕಿಮೀ), ಆಲಮಟ್ಟಿ – ಕೊಪ್ಪಳ (125 ಕಿಮೀ), ಹಿಂದುಪುರ – ಚಿತ್ರದುರ್ಗ (132 ಕಿಮೀ), ಚಿತ್ರದುರ್ಗ – ಆಲಮಟ್ಟಿ (264 ಕಿಮೀ), ಸಿದ್ದಾಪುರ, ಶಿರಸಿ, ಮುಂಡಗೋಡ ಮತ್ತು ತಡಸ ಮಾರ್ಗವಾಗಿ ತಾಳಗುಪ್ಪ-ಹುಬ್ಬಳ್ಳಿ (158 ಕಿಮೀ), ಕೊಟುಮಚಗಿ- ನರೇಗಲ್- ಗಜೇಂದ್ರಗಡ- ಹನುಮಸಾಗರ, ಇಳಕಲ್ ಮತ್ತು ಲಿಂಗಸೂರ ಮಾರ್ಗವಾಗಿ ಗದಗ-ಕೃಷ್ಣಾ (221 ಕಿಮೀ).

    ಈ ಮೊದಲು ಸರ್ವೆ ನಡೆಸಿದ್ದ ವಿವಿಧ ಹೊಸ ಮಾರ್ಗಗಳ ವರದಿಯನ್ನು ಕಳುಹಿಸುವಂತೆ ರೈಲ್ವೆ ಮಂಡಳಿ ನಿರ್ದೇಶನ ನೀಡಿದೆ. ಇನ್ನೂ 2 ರಿಂದ 4 ತಿಂಗಳೊಳಗೆ ಹೊಸ ವರದಿಯನ್ನು ಕಳುಹಿಸಲಾಗುವುದು.

    | ಇ. ವಿಜಯಾ ಡಿಜಿಎಂ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts