More

    Web Exclusive | ಪಶು ವಿವಿ ಇಬ್ಭಾಗ ಸನ್ನಿಹಿತ?: ಸಿಎಂ ತವರಿನಲ್ಲಿ ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ತಯಾರಿ, ಕಲ್ಯಾಣ ಕರ್ನಾಟಕಕ್ಕೆ ಬರೆ

    | ಸ.ದಾ. ಜೋಶಿ ಬೀದರ್

    ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸುವ ವಿಷಯದಲ್ಲಿ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಘೊರ ಅನ್ಯಾಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವಾಗಲೇ ಇಲ್ಲಿರುವ ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಭಜಿಸಲು ಪ್ರಯತ್ನಿಸುತ್ತಿದೆ ಎಂಬ ಚರ್ಚೆ ಬಿಗಿ ಹಿಡಿದಿದೆ. ಹೀಗಾದಲ್ಲಿ ಬಿಜೆಪಿ ಸರ್ಕಾರ ಈ ಭಾಗಕ್ಕೆ ಮತ್ತೊಂದು ಬರೆ ಎಳೆದಂತಾಗಲಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇನ್ನೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ತವರಿನ ಜನರ ಒತ್ತಡಕ್ಕೆ ಮಣಿದು ಸ್ವತಃ ಸಿಎಂ ಇನ್ನೊಂದು ವಿವಿ ಸ್ಥಾಪನೆ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬರುವ ಬಜೆಟ್​ನಲ್ಲಿ (ಮಾ.8) ಘೊಷಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಒಂದೊಮ್ಮೆ ಇಂಥ ನಿರ್ಣಯ ಕೈಗೊಂಡಿದ್ದೇ ಆದಲ್ಲಿ ಆರ್ಥಿಕ ಸಂಕಷ್ಟ , ಖಾಲಿ ಹುದ್ದೆಗಳಿಂದ ನರಳುತ್ತಿರುವ ಬೀದರ್ ವಿವಿ ಬರುವ ದಿನಗಳಲ್ಲಿ ಕೇವಲ ಕಾಲೇಜಿಗೆ ಸೀಮಿತವಾಗುವುದು ಸ್ಪಷ್ಟ.

    ವಿವಿ ಅಧೀನ ಏಳು ಪಶು ವೈದ್ಯಕೀಯ ಕಾಲೇಜು (ಬೀದರ್, ಶಿವಮೊಗ್ಗ, ಬೆಂಗಳೂರು, ಹಾಸನ, ಗದಗ, ಅಥಣಿ, ಪುತ್ತೂರು), ಎರಡು ಹೈನು ವಿಜ್ಞಾನ ಕಾಲೇಜು (ಬೆಂಗಳೂರು, ಕಲಬುರಗಿ), ಮಂಗಳೂರಿನಲ್ಲಿ ಒಂದು ಮೀನುಗಾರಿಕೆ ಕಾಲೇಜಿದೆ. 10 ವಿವಿಧ ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರಗಳಿವೆ. ಕೊಡಗು, ಶಿವಮೊಗ್ಗದಲ್ಲಿ ವಿಶೇಷ ಸಂಶೋಧನಾ ಸಂಸ್ಥೆಗಳಿವೆ. ತುಮಕೂರು, ಹಾವೇರಿ, ಹಾಸನ, ಯಾದಗಿರಿ ಮತ್ತು ಚಾಮರಾಜನಗರದಲ್ಲಿ ತಲಾ ಒಂದು ಪಾಲಿಟೆಕ್ನಿಕ್ ಕಾಲೇಜು ಕಾರ್ಯನಿರ್ವಹಿಸುತ್ತಿವೆ. ಹೆಬ್ಬಾಳ, ಹೆಸರಘಟ್ಟ, ಅಂಕೋಲಾದಲ್ಲಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರಗಳಿವೆ. ವಿಜಯಪುರ, ಮಂಗಳೂರಿನಲ್ಲಿ ಕೃಷಿ ವಿಜ್ಞಾನ ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲಿನ ಶೇ.70ರಷ್ಟು ಶಿವಮೊಗ್ಗದಲ್ಲಿ ಸ್ಥಾಪಿಸುವ ಹೊಸ ವಿವಿಗೆ ಹಾಗೂ ಉಳಿದವುಗಳನ್ನು ಬೀದರ್ ವಿವಿಯಲ್ಲಿ ಮುಂದುವರಿಸುವ ಬೇಡಿಕೆ ಮಂಡಿಸಲಾಗಿದೆ. ತವರಿನವರ ಈ ಬೇಡಿಕೆಗೆ ಸ್ಪಂದಿಸಲು ಸಿಎಂ ಜತೆ ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಸಹ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಇದು ವಿವಿ ಇಬ್ಭಾಗ ಸನ್ನಿಹಿತ ಎಂಬ ಚರ್ಚೆಗೆ ಕಾರಣವಾಗಿದೆ.

    ನಂಜುಂಡಪ್ಪ ವರದಿ ಆಧರಿಸಿ ಬೀದರ್​ನಲ್ಲಿ (ನಗರ ಹೊರವಲಯದ ಕಮಠಾಣ ಹತ್ತಿರ) 2005ರಲ್ಲಿ ಈ ವಿವಿ ಸ್ಥಾಪಿಸಲಾಗಿದೆ. ಪಶು ವೈದ್ಯ ಹಾಗೂ ಪಾಲಿಟೆಕ್ನಿಕ್​ನ ವಿವಿಧ ಕೋರ್ಸ್​ಗಳಲ್ಲಿ ಪ್ರತಿವರ್ಷ ಸುಮಾರು 800 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಬೀದರ್ ಕರ್ನಾಟಕದ ಉತ್ತರದ ತುದಿಯಲ್ಲಿದೆ. ಇಲ್ಲಿ ವಿವಿ ಇರುವ ಕಾರಣಕ್ಕೆ ರಾಜ್ಯದ ದಕ್ಷಿಣ ಭಾಗದ 15ಕ್ಕೂ ಅಧಿಕ ಜಿಲ್ಲೆ ಜನರಿಗೆ (ವಿದ್ಯಾರ್ಥಿ ಮತ್ತವರ ಪಾಲಕರು) ತಿರುಗಾಡಲು ಸಮಸ್ಯೆಯಾಗುತ್ತಿದೆ. ಆರ್ಥಿಕ ಹೊರೆಯೂ ಆಗುತ್ತಿದೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗದ ಪಶು ವೈದ್ಯ ಕಾಲೇಜಿನ 173 ಎಕರೆ ವಿಶಾಲ ಜಾಗದಲ್ಲಿ ಇನ್ನೊಂದು ವಿವಿ ಸ್ಥಾಪಿಸಬೇಕು. ಇಲ್ಲಿ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಸೌಕರ್ಯಗಳು ಬೇಗ ಲಭ್ಯವಾಗಲಿವೆ ಎಂಬುದನ್ನು ಆ ಭಾಗದವರು ಸರ್ಕಾರದ ಮುಂದಿಟ್ಟ ಪ್ರಸ್ತಾವನೆ. ಇದರ ಮೇಲೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಆದರೆ ವಿವಿ ಇಬ್ಭಾಗ ಮಾಡಿದ್ದಾದರೆ ಈ ಭಾಗಕ್ಕೆ ಯಾವ ರೀತಿ ಅನ್ಯಾಯವಾಗಲಿದೆ ಎಂಬ ಬಗ್ಗೆ ಇಲ್ಲಿನವರ್ಯಾರೂ ಧ್ವನಿ ಎತ್ತುವ, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡದಿರುವುದು ಸೋಜಿಗದ ಸಂಗತಿ.

    ಪರೋಕ್ಷ ಮುಚ್ಚುವ ಹುನ್ನಾರ: ಬೀದರ್​ನಲ್ಲಿ ವಿವಿ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ ಈವರೆಗೆ ವಿವಿ ಕೇಂದ್ರ ಸ್ಥಾನದಲ್ಲಿ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳು ಆಗಿಲ್ಲ. 16 ವರ್ಷದ ಬಳಿಕವೂ ವಿವಿ ಇಲ್ಲಿ ಮುಖ್ಯ ಆಡಳಿತ ಕಚೇರಿ ಹೊಂದಿಲ್ಲ. ಬೋಧಕ, ಬೋಧಕೇತರ ಸೇರಿ 1000ಕ್ಕಿಂತ ಹೆಚ್ಚು ಹುದ್ದೆ ಮಂಜೂರಾದರೂ ಶೇ.50 ಭರ್ತಿ ಮಾಡಿಲ್ಲ. ಗುತ್ತಿಗೆ ಆಧಾರದ ಸಿಬ್ಬಂದಿಯಿಂದಲೇ ಕೆಲಸ ನಡೆಸಲಾಗುತ್ತಿದೆ. ಪ್ರತಿ ಹಂತದಲ್ಲಿ ವಿವಿಯನ್ನು ಕಡೆಗಣಿಸಲಾಗಿದೆ. ಒಂದು ರೀತಿಯಲ್ಲಿ ಬೀದರ್ ವಿವಿಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎನ್ನಬಹುದು.

    ಬಿಜೆಪಿ ನಾಯಕರು ಗಪ್​ಚುಪ್: ಕಳೆದೆರಡು ವಾರಗಳಿಂದ ಪಶು ವಿವಿ ಇಬ್ಭಾಗದ ಚರ್ಚೆ ಜೋರಾಗಿದೆ. ಪರ-ವಿರೋಧ ಶುರುವಾಗಿದೆ. ಆದರೆ ಈ ಭಾಗದ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಗಪ್​ಚುಪ್ ಕುಳಿತಿರುವುದು ವಿಚಿತ್ರ. ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುವ ಪ್ರಭು ಚವ್ಹಾಣ್ ಖುದ್ದು ಪಶು ಸಂಗೋಪನೆ ಖಾತೆ ಸಚಿವರು. ವಿವಿಗೆ ಇವರು ಸಹ ಕುಲಾಧಿಪತಿ. ಆದರೆ ಈವರೆಗೂ ವಿವಿ ಇಬ್ಭಾಗ ಬಗ್ಗೆ ಒಂದೂ ಹೇಳಿಕೆ ನೀಡಿಲ್ಲ. ಏನಾದರೂ ಬೆಳವಣಿಗೆ ನಡೆಯುತ್ತಿವೆಯೇ ಎಂದು ಕೇಳಿದರೆ ಅಂಥದ್ದೇನೂ ಇಲ್ಲಾರಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

    ಹಲವು ಯೋಜನೆಗಳ ಎತ್ತಂಗಡಿ, ಮಹತ್ವದ ಕೆಲಸ ನನೆಗುದಿಗೆ ಬಿದ್ದಿರುವ ಸಂದರ್ಭದಲ್ಲೇ ಪಶುವೈದ್ಯ ವಿವಿ ಇಬ್ಭಾಗ ಮಾಡಲಾಗುತ್ತಿದೆ ಎನ್ನುತ್ತಿರುವುದು ಸುತಾರಾಂ ಒಪ್ಪಲಾಗದು. ಸಂವಿಧಾನದ 371(ಜೆ) ಪ್ರಕಾರ ಸಿಎಂ ಅವರು ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಬೇಕೇ ವಿನಃ ಅನ್ಯಾಯ ಮಾಡಬಾರದು. ವಿವಿ ಇಬ್ಭಾಗ ಮಾಡಿದರೆ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ.

    | ರಾಜಶೇಖರ ಪಾಟೀಲ್ ಹುಮನಾಬಾದ್ ಶಾಸಕ

    ಸ್ವಾಮೀಜಿಯ ಇಶಾರೆಗೇ ತಂತಾನೇ ಚಲಿಸಿ ತೇರುಮನೆ ಸೇರಿಕೊಂಡ ರಥ; ವಿಡಿಯೋ ವೈರಲ್​..

    ಸರಗಳ್ಳನ ತಳ್ಳಿ ಕೆಡವಿದಳು, ಆದರೂ ಆಕೆಗೆ ಇರಿದು ಆತ ಪರಾರಿ; ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಳು 2 ವರ್ಷದ ಮಗುವಿನ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts