More

    ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ

    ಸಿ.ಎನ್.ವಿಜಯ್ ಪಿರಿಯಾಪಟ್ಟಣ
    ಮಾರ್ಚ್ ಆರಂಭದಲ್ಲೇ ತಾಲೂಕಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಗರಿಷ್ಠ ಉಷ್ಣಾಂಶ 34 ಡಿಗ್ರಿ ತಲುಪಿದ್ದು, ಮಧ್ಯಾಹ್ನ ಸಾರ್ವಜನಿಕರು ಮನೆಯಿಂದ ಹೊರ ಬರಲು ಪರದಾಡುವಂತಾಗಿದೆ.

    ತಾಲೂಕಿನ ಬಹುತೇಕ ಕೆರೆಗಳು ನೀರಿಲ್ಲದೆ ಒಣಗುತ್ತಿವೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳಲ್ಲೂ ನೀರಿನ ಲಭ್ಯತೆಯ ಪ್ರಮಾಣ ಕಡಿಮೆಯಾಗಿದ್ದು, ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

    ಅಡಕೆ, ತೆಂಗು, ಬಾಳೆ, ಕಾಫಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಪಿರಿಯಾಪಟ್ಟಣ ತಾಲೂಕು ಬರಪೀಡಿತ ತಾಲೂಕೆಂದು ಘೋಷಣೆಯಾಗಿದ್ದು ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರು ಮಧ್ಯಾಹ್ನದ ವೇಳೆಯಲ್ಲಿ ಜಮೀನಿನಲ್ಲಿ ಕೆಲಸ ನಿರ್ವಹಿಸಲು ಹಾಗೂ ಇತರೆ ಚಟುವಟಿಕೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟ ಕೂಡ ಕಡಿಮೆಯಾಗಿದ್ದು, ಬಿಸಿಲಿನ ಹೆಚ್ಚಳ ಸಾರ್ವಜನಿಕರ ಮೇಲೆ ಪರಿಣಾಮ ಬೀರಿದೆ.

    ಬಿಸಿಲ ಹೆಚ್ಚಳದಿಂದ ಪಟ್ಟಣದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದ್ದು, ಸಂಜೆ ಹಾಗೂ ಬೆಳಗ್ಗಿನ ಸಮಯದಲ್ಲಿ ಮಾತ್ರ ಗ್ರಾಹಕರು ಕಾಣಿಸಿಕೊಳ್ಳುತ್ತಿದ್ದಾರೆ. ದಣಿವು ತಣಿಸಿಕೊಳ್ಳಲು ಸಾರ್ವಜನಿಕರು ಕಲ್ಲಂಗಡಿ, ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

    ಪಿರಿಯಾಪಟ್ಟಣ ವ್ಯಾಪ್ತಿಯ ದೊಡ್ಡಕೆರೆ, ಚಿಕ್ಕಕೆರೆ, ತಾವರೆಕೆರೆ, ತಾತನಹಳ್ಳಿ ಕೆರೆ, ಅಂಕನಹಳ್ಳಿ ಕೆಂಗಟ್ಟೆ ಸೇರಿದಂತೆ ವಿವಿಧ ಕೆರೆಗಳು ಬರಿದಾಗಿವೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನೀರಿನ ಮೂಲಗಳಲ್ಲೂ ಕೂಡ ನೀರಿನ ಅಭಾವ ಉಂಟಾಗಿದೆ.

    ಪುರಸಭೆ ವತಿಯಿಂದ ಅಬ್ಬೂರು, ವಿನಾಯಕ ಬಡಾವಣೆ, ರಾಜಪುರ ಮತ್ತು ಬೆಟ್ಟದಪುರ ರಸ್ತೆಗಳಲ್ಲಿ ಹೊಸದಾಗಿ ನಾಲ್ಕು ಬೋರ್ವೆಲ್‌ಗಳನ್ನು ಕೊರೆಸಲಾಗಿದ್ದು, ಎರಡು ಬೋರ್ವೆಲ್‌ಗಳಲ್ಲಿ ಮಾತ್ರ ನೀರು ಲಭ್ಯವಾಗಿದೆ. ಬೆಟ್ಟದಪುರ ರಸ್ತೆಯಲ್ಲಿರುವ ಎರಡು ಖಾಸಗಿ ಬೋರ್‌ವೆಲ್‌ಗಳನ್ನು ಒಪ್ಪಂದದ ಆಧಾರದ ಮೇಲೆ ಗುತ್ತಿಗೆಗೆ ಪಡೆದು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಗಿರಗೂರು ಬಳಿ ನದಿಯಲ್ಲಿ ಹರಿವು ಕಡಿಮೆಯಾದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮರಳಿನ ಮೂಟೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ನೀರಿನ ಅಭಾವದಿಂದ ಪುರಸಭೆ ವ್ಯಾಪ್ತಿಯಲ್ಲಿ ವಾರಕ್ಕೆ ಎರಡರಿಂದ ಮೂರು ದಿನಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ಕಂಡುಬಂದಲ್ಲಿ ನೀರು ಪೂರೈಕೆ ಮಾಡಲು ಪುರಸಭೆ ವತಿಯಿಂದ ಟ್ಯಾಂಕರ್‌ಗಳ ಸಿದ್ಧಪಡಿಸಿಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ಮಳೆಯಾಗದಿದ್ದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts