More

    ಹೆಲಿಕಾಪ್ಟರ್​ ಪತನದಲ್ಲಿ ಮರಣಹೊಂದಿದ ಕೋಬ್​ ಬ್ರಿಯಾಂಟ್​ ಅವರ ಹಳೇ ಸ್ಟೋರಿಯೊಂದನ್ನು ಟ್ವೀಟ್​ ಮಾಡಿ, ಕೆಲಸ ಕಳೆದುಕೊಂಡ ಪತ್ರಕರ್ತೆ…

    ವಾಷಿಂಗ್ಟನ್​: ಲಾಸ್​ ಏಂಜಲೀಸ್​ನ ಗುಡ್ಡಗಾಡು ಪ್ರದೇಶದಲ್ಲಿ ಭಾನುವಾರ ಹೆಲಿಕಾಪ್ಟರ್ ಪತನಗೊಂಡು ಅಮೆರಿಕದ ಬಾಸ್ಕೆಟ್​ ಬಾಲ್ ದಿಗ್ಗಜ ಕೋಬ್​ ಬ್ರಿಯಾಂಟ್​ ಹಾಗೂ ಅವರ ಪುತ್ರಿ ಜಿಯಾ ದುರಂತ ಸಾವಿಗೀಡಾಗಿದ್ದಾರೆ.

    ಕೋಬ್​ ಸಾವಿಗೆ ಇಡೀ ಕ್ರೀಡಾ ಜಗತ್ತು ಕಣ್ಣೀರು ಹಾಕಿದೆ. ಕ್ರೀಡಾ ಪ್ರೇಮಿಗಳು ಮರುಗಿದ್ದಾರೆ. ಆದರೆ ಇಲ್ಲೊಬ್ಬಳು ಪತ್ರಕರ್ತೆ ಕೋಬ್​ ಅವರ ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್​ ಮಾಡಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ.
    ಅಮೆರಿಕದ ಪ್ರಸಿದ್ಧ ದಿನಪತ್ರಿಕೆ ವಾಷಿಂಗ್ಟನ್​ ಪೋಸ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಫೆಲಿಷಿಯಾ ಸೊನ್ಮೆಜ್  ಎಂಬುವರು ಕೋಬ್​ ಮೃತಪಟ್ಟ ಬೆನ್ನಲ್ಲೇ ಅನಗತ್ಯವಾಗಿ ಕೋಬ್​ ಅವರ ಹಳೇ ಅತ್ಯಾಚಾರ ಪ್ರಕರಣವೊಂದರ ಸ್ಟೋರಿಯ ಲಿಂಕ್​ ಶೇರ್​ ಮಾಡಿದ್ದರು.

    2003ರಲ್ಲಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದವಳೊಬ್ಬಳು ಕೋಬ್​ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಿದ್ದಳು. ಅಲ್ಲದೆ ತನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಹೇಳಿದ್ದಳು. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಕೋಬ್​ ಬ್ರಿಯಾಂಟ್​ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕೋಬ್​ ತಾವು ಆರೋಪ ಮಾಡಿದ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದು ನಿಜ. ಆದರೆ ಬಲವಂತ ಮಾಡಿಲ್ಲ, ಹಲ್ಲೆಯನ್ನು ಮಾಡಿಲ್ಲ ಎಂದೂ ಹೇಳಿದ್ದರು. ಕೋಬ್​ರನ್ನು ಬಂಧಿಸಿದ ಎರಡೇ ದಿನದಲ್ಲಿ ಅವರಿಗೆ ಜಾಮೀನು ಸಿಕ್ಕಿತ್ತು. 25,000 ಡಾಲರ್​ ಶ್ಯೂರಿಟಿ ಬಾಂಡ್​ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

    2016ರಲ್ಲಿ ಡೇಲಿ ಬೀಸ್ಟ್​ ಎಂಬ ಅಮೆರಿಕದ ಸುದ್ದಿ ಮತ್ತು ಅಭಿಪ್ರಾಯ ಸಂಗ್ರಹಣಾ ವೆಬ್​ಸೈಟ್​ ಕೋಬ್​ ಅತ್ಯಾಚಾರ ಪ್ರಕರಣದ ಬಗ್ಗೆ ಒಂದು ಸ್ಟೋರಿ ಪ್ರಕಟಿಸಿದೆ. ಕೋಬ್​ ಬ್ರಿಯಾಂಟ್ಸ್​ ಡಿಸ್ಟರ್ಬಿಂಗ್​ ರೇಪ್​ಕೇಸ್​​: ದಿ ಡಿಎನ್​ಎ ಎವಿಡೆನ್ಸ್​, ದಿ ಎಕ್ಯೂಸರ್ಸ್​ ಸ್ಟೋರಿ ಮತ್ತು ಹಾಫ್​ ಕನ್ಫೆಷನ್​ (ಕೋಬ್​ ಬ್ರಿಯಾಂಟ್​ ಅವರ ಗೊಂದಲದ ಅತ್ಯಾಚಾರ ಪ್ರಕರಣ; ಡಿಎನ್​ಎ ಪುರಾವೆ, ಆರೋಪಿಯ ಕತೆ ಮತ್ತು ಅರ್ಧ ತಪ್ಪೊಪ್ಪಿಗೆ) ಎಂದು ಅದಕ್ಕೆ ಹೆಡ್​ಲೈನ್​ ಕೊಟ್ಟಿತ್ತು.
    ಈಗ ಅವರು ಮೃತಪಟ್ಟ ಮೇಲೆ ವಾಷಿಂಗ್ಟನ್​ ಪೋಸ್ಟ್​ನ ಪತ್ರಕರ್ತೆ ಫೆಲಿಷಿಯಾ ಸೊನ್ಮೆಜ್ ಅದೇ ಸುದ್ದಿಯ ಲಿಂಕ್​ನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು.

    ಈ ಟ್ವೀಟ್ ಸಿಕ್ಕಾಪಟೆ ವೈರಲ್​ ಆಗಿತ್ತು. ಸಾವಿರಗಳಷ್ಟು ಲೈಕ್ಸ್​ ಬಂದಿದ್ದವು. ಹಾಗೇ ಹಲವು ಕಾಮೆಂಟ್​ಗಳನ್ನೂ ನೆಟ್ಟಿಗರು ಮಾಡಿದ್ದರು. ಆದರೆ ಟ್ವೀಟ್​ನ್ನು ವಿರೋಧಿಸಿ ಕಾಮೆಂಟ್ ಮಾಡಿದ್ದವರೇ ಹೆಚ್ಚಾಗಿದ್ದರು. ಆ ಬಗ್ಗೆ ಸೊನ್ಮೆಜ್ ಅವರೇ ಮತ್ತೆ ಟ್ವೀಟ್ ಮೂಲಕ ಹೇಳಿಕೊಂಡಿದ್ದರು.

    ನಾನು ಕೋಬ್​ ಬಗ್ಗೆ ಮಾಡಿದ ಟ್ವೀಟ್​ ನನ್ನ ಕಣ್ಣು ತೆರೆಸಿತು. ಹೆಚ್ಚುಕಡಿಮೆ 10,000 ಜನರು ಕಾಮೆಂಟ್​, ಇಮೇಲ್​ ಮೂಲಕ ನನ್ನನ್ನು ನಿಂದಿಸಿದ್ದಾರೆ. ಕೆಲವರಂತೂ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಆದರೆ ನಾನು ಶೇರ್​ ಮಾಡಿದ ಸ್ಟೋರಿ ಮೂರು ವರ್ಷಗಳ ಹಿಂದೆಯೇ ಪಬ್ಲಿಶ್​ ಆಗಿದ್ದು. ಅದು ನಾನು ಬರೆದಿದ್ದೂ ಅಲ್ಲ ಎಂದಿದ್ದಾರೆ.
    ಆದರೆ ಈ ಟ್ವೀಟ್​ ವಿರುದ್ಧ ಕೋಬ್​ ಅಭಿಮಾನಿಗಳು, ನೆಟ್ಟಿಗರು ಹೇಗೆ ತಿರುಗಿಬಿದ್ದಿದ್ದರು ಎಂದರೆ ಫೈರ್​ ಫೆಲಿಷಿಯಾ ಸೊನ್ಮೆಜ್ (#FireFeliciaSonmez )ಎಂದು ಹ್ಯಾಷ್​ಟ್ಯಾಗ್​ ಸೃಷ್ಟಿಯಾಗಿತ್ತು. ಬಳಿಕ ಫೆಲಿಷಿಯಾ ಆ ಟ್ವೀಟ್​ನ್ನು ಡಿಲೀಟ್​ ಮಾಡಿದ್ದಾರೆ.

    ವಾಷಿಂಗ್ಟನ್​ ಪೋಸ್ಟ್​ ಪತ್ರಿಕೆಯ ಮ್ಯಾನೇಜಿಂಗ್​ ಎಡಿಟರ್​ ಟ್ರೇಸಿ ಗ್ರಾಂಟ್​ ಅವರು ಫೆಲಿಷಿಯಾ ಅವರನ್ನು ಕೆಲಸದಿಂದ ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಕೋಬ್​ ಮರಣದ ನಂತರ ಫೆಲಿಷಿಯಾ ಅವರು ಮಾಡಿರುವ ಟ್ವೀಟ್​ ನಮ್ಮ ಪತ್ರಿಕೆಯ ಸಾಮಾಜಿಕ ಜಾಲತಾಣದ ನೀತಿಯನ್ನು ಉಲ್ಲಂಘಿಸಿದೆ. ಹಾಗಾಗಿ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ ಎಂದಿದ್ದಾರೆ. ಫೆಲಿಷಿಯಾ ವಾಷಿಂಗ್ಟನ್​ ಪೋಸ್ಟ್​ನಲ್ಲಿ ಪೊಲಿಟಿಕಲ್​ ವರದಿಗಾರ್ತಿಯಾಗಿದ್ದಳು ಎನ್ನಲಾಗಿದೆ.(ಏಜೆನ್ಸೀಸ್​)

    ಹೆಲಿಕಾಪ್ಟರ್​ ಪತನದಲ್ಲಿ ಮರಣಹೊಂದಿದ ಕೋಬ್​ ಬ್ರಿಯಾಂಟ್​ ಅವರ ಹಳೇ ಸ್ಟೋರಿಯೊಂದನ್ನು ಟ್ವೀಟ್​ ಮಾಡಿ, ಕೆಲಸ ಕಳೆದುಕೊಂಡ ಪತ್ರಕರ್ತೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts