More

    ಮಾಸಾಂತ್ಯದಲ್ಲಿ ವಿವಿ ಪರೀಕ್ಷೆ ಸಾಧ್ಯತೆ

    ಮಂಗಳೂರು: ಸರ್ಕಾರ ಅನುಮತಿ ನೀಡಿದರೆ, ಜುಲೈ ಅಂತ್ಯಕ್ಕೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಬಾಕಿ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿವಿ ಚಿಂತನೆ ನಡೆಸಿದೆ.

    ಜುಲೈ 19ರ ಬಳಿಕ ಕಾಲೇಜುಗಳಲ್ಲಿ ಭೌತಿಕ ತರಗತಿ ನಡೆಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ ಶೇ.70ರಷ್ಟು ಪರೀಕ್ಷೆಗಳು ನಡೆದಿದ್ದು, ಕರೊನಾ 2ನೇ ಅಲೆಯ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಶೇ.30ರಷ್ಟು ಬಾಕಿ ಇವೆ. ಸದ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯುತ್ತಿದೆ. ಸ್ನಾತಕೋತ್ತರ ಪದವಿ ಪರೀಕ್ಷೆ ನಡೆದಿಲ್ಲ.

    ವಿವಿ ವ್ಯಾಪ್ತಿಯ ಎಲ್ಲ ಕಾಲೇಜು ಪ್ರಾಂಶುಪಾಲರ ಸಭೆ ಸೋಮವಾರ ನಡೆದಿದ್ದು, ಪರೀಕ್ಷೆ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಎಲ್ಲರೂ ಪರೀಕ್ಷೆಗೆ ಸಹಮತ ವ್ಯಕ್ತಪಡಿಸಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೇರಳ ಸೇರಿದಂತೆ ಹೊರರಾಜ್ಯದ ಹಾಗೂ ವಿದೇಶದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕರೊನಾ ಕಡಿಮೆಯಾಗದೆ, ಅವರು ಪರೀಕ್ಷೆ ಬರೆಯಲು ಬರುವುದು ಕಷ್ಟ. ಅದಕ್ಕಾಗಿ ಕಳೆದ ವರ್ಷದಂತೆ, ಅವರು ಇರುವ ಸ್ಥಳದ ಸಮೀಪದ ವಿವಿ ಜತೆ ಒಡಂಬಡಿಕೆ ಮಾಡಿಕೊಂಡು ಅಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಕಳೆದ ವರ್ಷ ಈ ವಿಧಾನ ಯಶಸ್ವಿಯಾಗಿತ್ತು. ಈ ವರ್ಷವೂ ಮತ್ತಷ್ಟು ಪರಿಣಾಮಕಾರಿಯಾಗಿ ಪರೀಕ್ಷೆ ನಡೆಸಲಾಗುವುದು. ಶುಲ್ಕ ಕಟ್ಟಿ ಯಾವುದಾದರೂ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ವಿವಿಯಿಂದ ಸಮಸ್ಯೆಯಾಗದಂತೆ ಪಾರದರ್ಶಕ, ಪರಿಣಾಮಕಾರಿಯಾಗಿ ಪರೀಕ್ಷೆ ನಡೆಸಲು ಬದ್ಧ. ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.

    10 ದಿನ ಮುಂಚಿತವಾಗಿ ಮಾಹಿತಿ: ಪರೀಕ್ಷೆ ದಿನಾಂಕ ನಿರ್ಧರಿಸಿ 10 ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಪ್ರೊ.ಯಡಪಡಿತ್ತಾಯ ತಿಳಿಸಿದ್ದಾರೆ. ಈ ಅವಧಿಯಲ್ಲಿ ಮತ್ತೆ ಸಿದ್ಧತೆ ಮಾಡಿಕೊಳ್ಳಲು ಅವಕಾಶವಿದೆ. ಈ ಸಂದರ್ಭ ಆನ್‌ಲೈನ್ ಕ್ಲಾಸ್ ಸ್ಥಗಿತಗೊಳಿಸಲಾಗುತ್ತದೆ. ನಡೆದಿರುವ ಪರೀಕ್ಷೆಗಳ ಡಿಜಿಟಲ್ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದ ಮೌಲ್ಯಮಾಪನದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದರು.

    ವಿದ್ಯಾರ್ಥಿಗಳಿಗೆ ಆದ್ಯತೆಯಲ್ಲಿ ಲಸಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿವಿ ಸಿಬ್ಬಂದಿಗೆ ಶೇ.33ರಷ್ಟು ಲಸಿಕೆ ನೀಡಲಾಗಿದೆ. 47 ಸಾವಿರ ಮಂದಿ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 240 ಲಸಿಕಾ ಶಿಬಿರ ನಡೆಸಲಾಗಿದೆ. ಕಳೆದ ವಾರ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಪೂರೈಕೆಯಾಗದ ಕಾರಣ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ನಿಧಾನವಾಗಿತ್ತು. ಈ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬರುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಸಿಬ್ಬಂದಿಗೆ ಆದ್ಯತೆ ನೆಲೆಯಲ್ಲಿ ಒದಗಿಸಲಾಗುವುದು ಎಂದು ಲಸಿಕೆ ಮೇಲ್ವಿಚಾರಕ ಡಾ.ರಾಜೇಶ್ ತಿಳಿಸಿದ್ದಾರೆ.

    ಬಾಕಿ ಇರುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ. ಸರ್ಕಾರ ಅನುಮತಿ ನೀಡಿದ ಬಳಿಕವೇ ದಿನಾಂಕ ಪ್ರಕಟ ಮಾಡಲಾಗುವುದು. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಆನ್‌ಲೈನ್ ತರಗತಿಗಳು ನಡೆಯುತ್ತಿವೆ.
    ಪ್ರೊ.ಪಿ.ಎಸ್.ಯಡಪಡಿತ್ತಾಯ ಕುಲಪತಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts