More

    ಹೆಸರು ಕೈಬಿಡುವ ಮುನ್ನ ಪರಿಶೀಲಿಸಿ: ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಸೂಚನೆ

    ಮಂಡ್ಯ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಂದರ್ಭದಲ್ಲಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ವ್ಯಕ್ತಿಯ ವಾಸಸ್ಥಳಕ್ಕೆ ತೆರಳಿ ಮಹಜರ್ ಮಾಡಿ ನಂತರ ಕೈಬಿಡುವುದರ ಕುರಿತು ಕ್ರಮವಹಿಸಬೇಕು ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಹೆಸರು ಸೇರ್ಪಡೆ, ಕೈಬಿಡಲು, ತಿದ್ದುಪಡಿ ಸಂಬಂಧ ನಿಗದಿತ ನಮೂನೆಗಳಲ್ಲಿ ಅರ್ಜಿ ಸ್ವೀಕರಿಸಲಾಗಿದೆ. ಸೂಕ್ಷ್ಮಹಾಗೂ ಅತಿಸೂಕ್ಷ್ಮಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ಸ್ವಯಂಪ್ರೇರಿತರಾಗಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಬಾರದು. ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ತಿಳಿಸಿದರು.
    18 ವರ್ಷ ಮೇಲ್ಪಟ್ಟವರು ಮತದಾನದಿಂದ ವಂಚಿತರಾಗಬಾರದು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಹೆಸರು ಸೇರ್ಪಡೆ ಮಾಡಿ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗದೆ ಇರುವವರನ್ನು ತಪ್ಪದೆ ಮುಂದಿನ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸೇರ್ಪಡೆಗೆ ಕ್ರಮವಹಿಸಿ ಎಂದು ತಿಳಿಸಿದರು.
    ಪಟ್ಟಿ ಪರಿಷ್ಕರಣೆಯ ಹಕ್ಕುಗಳು ಮತ್ತು ಆಕ್ಷೇಪಣೆಯ ಅವಧಿಯಲ್ಲಿ 53,220 ಅರ್ಜಿ ಸ್ವೀಕೃತವಾಗಿದೆ. ಇದರಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ ಫಾರ್ಮ್ 6 ರಲ್ಲಿ 24,526 ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ ವಿವಿಧ ಕಾರಣಗಳಿಂದ 5 ಸಾವಿರ ಅರ್ಜಿ ತಿರಸ್ಕೃತವಾಗಲಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಫಾರ್ಮ್ 7 ರಲ್ಲಿ 19,454 ಅರ್ಜಿ ಸ್ವೀಕೃತವಾಗಿದ್ದು, ಇದರಲ್ಲಿ ವಿವಿಧ ಕಾರಣಗಳಿಂದ 4400 ಅರ್ಜಿ ತಿರಸ್ಕೃತವಾಗಲಿದೆ. ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಸಂಬಂಧಿಸಿದಂತೆ 9,240 ಅರ್ಜಿಗಳು ಸ್ವೀಕೃತವಾಗಿದೆ. ಜಿಲ್ಲೆಯಲ್ಲಿ ಇರುವಂತಹ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟು ಕೆಲಸ ನಿರ್ವಹಿಸುವಂತೆ ತಿಳಿಸಿದರು.
    ಅಂಗವಿಕಲರಿಗೆ ಮತದಾನದ ಅವಕಾಶ ನೀಡಲು ಜಿಲ್ಲೆಯಲ್ಲಿರುವ ಎಲ್ಲ ಅಂಗವಿಕಲರ ಪಾಲಕರು ತಪ್ಪದೇ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು. ಈವರೆಗೆ ಜಿಲ್ಲೆಯಲ್ಲಿ 22,674 ಅಂಗವಿಕಲರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ಹೆಚ್ಚಿನ ಕಾಳಜಿ ವಹಿಸಿ ಜಿಲ್ಲಾಧಿಕಾರಿ, ಸಿಇಒ, ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳು ಒಟ್ಟಿಗೆ ಸೇರಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಉಪವಿಭಾಗಾಧಿಕಾರಿಗಳಾದ ಕೀರ್ತನಾ, ಮಹಮದ್ ಅಕ್ರಂ, ತಹಸೀಲ್ದಾರ್‌ಗಳಾದ ರೂಪಾ, ನರಸಿಂಹ ಮೂರ್ತಿ, ಕುಂಞ ಅಹಮದ್, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಸ್ವಾಮೀಗೌಡ, ಚುನಾವಣಾ ತಹಸೀಲ್ದಾರ್ ದೀಪಕ್ ಇತರರಿದ್ದರು.
    ಸಭೆಯ ನಂತರ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲಾಧಿಕಾರಿಯೊಂದಿಗೆ ಮಂಡ್ಯದ ಗಾಂಧಿನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸ್ವೀಕೃತವಾಗಿರುವ ಫಾರ್ಮ್ 6 ಹಾಗೂ 7 ಕುರಿತು ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts