More

    ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹ

    ಮಂಡ್ಯ: ಒಕ್ಕಲಿಗ ಸಮುದಾಯಕ್ಕೆ ನೀಡಿರುವ ಮೀಸಲಾತಿ ಅಡಿಯಲ್ಲಿ ಹಲವು ಸಮುದಾಯಗಳು ಸೇರಿಕೊಂಡಿವೆ. ಶೇ.4ರಷ್ಟು ಮೀಸಲಾತಿ ಕೊಟ್ಟಿರುವುದು ಸಾಕಾಗುವುದಿಲ್ಲ. ನಮಗೂ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದರು.
    ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಉದ್ಘಾಟನೆ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಿಗೆ ಅಭಿನಂದನೆ, ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ, ಬಾಲಗಂಗಾಧರನಾಥ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸೇರಿದಂತೆ ಒಕ್ಕಲಿಗ ಸಮುದಾಯದಿಂದ ತನ್ನದೇ ಆದ ಇತಿಹಾಸ ನೀಡಿದ ಮಹನೀಯರ ಪಟ್ಟಿ ಹೆಚ್ಚುತ್ತಲೇ ಇರುತ್ತದೆ ಎಂದರು.
    ಸ್ವತಂತ್ರ ಭಾರತದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ ಹೆಮ್ಮೆಯ ಎಚ್.ಡಿ.ದೇವೇಗೌಡ ಅವರು ನಮ್ಮ ಒಕ್ಕಲಿಗರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇತಿಹಾಸ ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸುಮಾರು 700 ವರ್ಷಗಳ ಕಾಲ ಆಳಿದ ಗಂಗಾ ಸಾಮ್ರಾಜ್ಯವನ್ನು ಮರೆಯಲು ಆಗುವುದಿಲ್ಲ. ನಾಡಪ್ರಭು ಕೆಂಪೇಗೌಡರಿಗೂ, ಗಂಗಾ ಸಾಮ್ಯಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. 10ನೇ ಶತಮಾನದವರೆಗೂ ಗಂಗಾ ಸಾಮ್ರಾಜ್ಯ ತಮಿಳುನಾಡಿನವರೆಗೂ ಪಸರಿಸಿತ್ತು ಎಂದು ಹೇಳಿದರು.
    ಸ್ವಾತಂತ್ರ್ಯದ ನಂತರ ಭಾಷಾವಾರು ಪ್ರಾಂತ್ಯಗಳಿಗಷ್ಟೇ ಕರ್ನಾಟಕ ನಿಗದಿಯಾಯಿತು. ಈಗಲೂ ಕರ್ನಾಟಕ ಹಾಗೂ ತಮಿಳುನಾಡು ಅಕ್ಕಪಕ್ಕದಲ್ಲಿಯೇ ಇದೆ. ಆದರೂ ಕೆಲವರು ನಾಡಪ್ರಭು ಕೆಂಪೇಗೌಡ ಅವರು ತಮಿಳುನಾಡಿನವರು ಎಂದು ಪ್ರಶ್ನೆ ಮಾಡುತ್ತಾರೆ. 200 ವರ್ಷಗಳ ಹಿಂದಿನ ಪರಂಪರೆ ಹಾಗೂ ಗಂಗಾ ಸಾಮ್ರಾಜ್ಯದಲ್ಲಿ ನೋಡಿದರೆ ಕಾಣುತ್ತದೆ ಕೆಂಪೇಗೌಡರು ನಮ್ಮವರೇ ಎಂಬುದು. ನಾಡನ್ನಾಳುವ ಶಕ್ತಿ ಒಕ್ಕಲಿಗ ಸಮುದಾಯಕ್ಕೆ ಇದೆ ಎಂದು ಶ್ಲಾಘಿಸಿದ ಅವರು, ಯಾರಿಗೆ ಚರಿತ್ರೆ ಗೊತ್ತಿದಿಯೋ ಅವರು ಚರಿತ್ರೆ ನಿರ್ಮಿಸಲು ಸಾಧ್ಯ ಎಂಬುದನ್ನು ಮಹನೀಯರೆಲ್ಲ ತಿಳಿಸಿ ಹೋಗಿದ್ದಾರೆ. ಕೆಂಪೇಗೌಡರ ಹೆಸರಿನಲ್ಲಿ ನಮ್ಮ ಸಮುದಾಯ ಒಂದಾಗುವ ಗುಣಗಳು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ನಮ್ಮ ಸಮುದಾಯಕ್ಕೂ ಮೀಸಲಾತಿ ಹೆಚ್ಚಿಸಬೇಕು ಎಂದು ಕೇಳುತ್ತಿದ್ದೇವೆ. ಕಾನೂನು ಮುರಿದು ಹೋಗುವುದು ಬೇಡ ಎಂಬುದನ್ನು ಗಮನದಲ್ಲಿಟ್ಟುಕೊಂಡಿದ್ದೇವೆ ಎಂದರು.
    ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಒಕ್ಕಲಿಗ ಸಮಾಜದ ವಿಚಾರ ಬಂದಾಗ ಯಾವಾಗಲು ಸದಾ ನಿಮ್ಮ ಜತೆ ಇರುತ್ತೇವೆ. ನಾನು ಸರ್ಕಾರದ ಸಚಿವನಾಗಿರಬಹುದು. ಆದರೆ ಸಮಾಜದ ವಿಚಾರ ಬಂದಾಗ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಮೈಸೂರು, ಮಂಡ್ಯ, ಬೆಂಗಳೂರು ಹೀಗೆ ಯಾವುದೇ ಜಿಲ್ಲೆಯಲ್ಲಾದರೂ ಸರಿಯೇ ಸಮಸ್ಯೆಗಳು ಬಂದಾಗ ನಾನು ಮತ್ತು ಕೆ.ಸಿ.ನಾರಾಯಣಗೌಡ ಅವರು ಸಮಾಜದ ಒಟ್ಟಿಗೆ ಇರುವುದಾಗಿ ತಿಳಿಸಿದರು.
    ಕೆಂಪೇಗೌಡ ಅವರು ಕೇವಲ ಒಂದು ಜಿಲ್ಲೆಗೆ ಮೀಸಲಾಗಿರಲಿಲ್ಲ ಎಂಬುವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಯಿಂದ ಮಣ್ಣನ್ನು ತೆಗೆದುಕೊಂಡು ಬಂದು ಕೆಂಪೇಗೌಡರ ಪ್ರತಿಮೆಯು ಉದ್ಘಾಟನೆಗೊಳ್ಳುವ ದಿನದಂದು ಒಟ್ಟುಗೂಡಿಸಿ ಪೂಜೆಯನ್ನು ಮಾಡುವ ಮೂಲಕ ಗೌರವ ನೀಡಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯಲ್ಲಿ ನಡೆಯುತ್ತಿರುವ ಕುಂಭಮೇಳ ಕಾರ್ಯಕ್ರಮದ ನೇತೃತ್ವವನ್ನು ಸುತ್ತೂರು ಶ್ರೀಗಳು ಮತ್ತು ಡಾ.ನಿರ್ಮಲಾನಂದನಾಥ ಶ್ರೀಗಳು ವಹಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಸಮಾಜದ ಎಲ್ಲರೂ ಆಗಮಿಸಿ ಯಶಸ್ವಿ ಗೊಳಿಸಿಕೊಡು ಮನವಿ ಮಾಡಿದರು.
    ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನಲ್ಲಿಗೆರೆ ಬಾಲು, ರಾಘವೇಂದ್ರ ಮುದ್ದನಘಟ್ಟ, ಅಶೋಕ್ ಜಯರಾಮು, ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ, ಮುಖಂಡರಾದ ಎಚ್.ಎನ್.ಯೋಗೇಶ್, ಗಣಿಗ ರವಿಕುಮಾರ್, ಎಂ.ಎಸ್.ಚಿದಂಬರ್, ಕಲ್ಲಹಳ್ಳಿ ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts