More

    ಸ್ವಾಮಿ ವಿವೇಕಾನಂದರಲ್ಲಿ ವಿಶ್ವಮಾನವನ ಅನಾವರಣ: ಸ್ವಾಮಿ ವೀರೇಶಾನಂದ ಸರಸ್ವತೀ ಅಂಕಣ

    ಸ್ವಾಮಿ ವಿವೇಕಾನಂದರಲ್ಲಿ ವಿಶ್ವಮಾನವನ ಅನಾವರಣ: ಸ್ವಾಮಿ ವೀರೇಶಾನಂದ ಸರಸ್ವತೀ ಅಂಕಣಮಾನವ ಇತಿಹಾಸದ ಆಮೂಲಾಗ್ರ ಅಧ್ಯಯನ ಹತ್ತಾರು ಸೋಜಿಗದ ಅಂಶಗಳನ್ನು ತೆರೆದಿಡುತ್ತದೆ. ಜಗತ್ತು ಕಂಡ ಮಹಾನ್ ವ್ಯಕ್ತಿಗಳ ವೈಶಿಷ್ಟ್ಯವೆಂದರೆ ಅವರ ಮರ್ತ್ಯಬದುಕು ಸ್ಮಶಾನದಲ್ಲಿ ಪರಿಸಮಾಪ್ತಿಯಾದರೂ ಅವರ ಸಂದೇಶಗಳಿಗೆ ಕಾಮಧೇನು ಸ್ವರೂಪವಿದೆ. ಅವು ಚಿರಂಜೀವಿಯೋ ಎಂಬಂತೆ ನಾಗರಿಕತೆಯೊಂದಿಗೆ ಸುದೀರ್ಘವಾಗಿ ಪಯಣಿಸುತ್ತವೆ! ಇದನ್ನರಿತೇ ವಿವೇಕಿಗಳು ಹೇಳಿದ್ದು, ‘ಜಗತ್ತಿನ ಜನಸಂಖ್ಯೆಯಲ್ಲಿ ಬಹುಸಂಖ್ಯೆಯ ಜನರು ಬದುಕಿದ್ದರೂ ಸತ್ತಿರುತ್ತಾರೆ! ಅತ್ಯಲ್ಪ ಪ್ರಮಾಣದ ಜನರು ಸತ್ತನಂತರವೂ ಬದುಕಿರುತ್ತಾರೆ!! ಹೆಚ್ಚೆಚ್ಚು ಜೀವಂತರಾಗಿರುತ್ತಾರೆ!!!’

    ಜನ್ಮತಃ ಮೃಗವೆಂದೆನಿಸಿರುವ ಜೀವಿಯು ಸಂಸ್ಕಾರಗಳಿಂದ ಮಾನವನೆಂದು ಮತ್ತು ಸಾಧನೆಯಿಂದ ದೇವರೆಂದು ‘ಪರಿಗಣಿತನಾಗುತ್ತಾನೆ’ ಎಂದಿದ್ದಾರೆ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು. ವ್ಯಕ್ತಿಯು ವಿಕಾಸದ ಈ ಸಮೀಕರಣವಾದ ಮೃಗ-ಮಾನವ-ದೈವ ಎಂಬ ಹಂತಗಳಲ್ಲಿ ಹಾದು ಮುಕ್ತನಾಗಲು ಅದೆಷ್ಟು ಜನ್ಮಗಳು ಬೇಕೋ ಊಹಿಸುವುದೂ ಕಷ್ಟಸಾಧ್ಯ! ಆದರೂ ಅಳಿಯುವುದು ಕಾಯ, ಉಳಿಯುವುದು ಕೀರ್ತಿ ಎಂಬುದು ಅನುಭಾವಿಗಳ ಉಕ್ತಿ.

    ‘ಜೀವನವೆಂಬುದು ಬದುಕುವುದಕ್ಕಾಗಿದೆಯೇ ಹೊರತು ಸಾಯುವುದಕ್ಕಲ್ಲ’ ಎಂದಿದ್ದಾನೆ ಸಾಕ್ರಟೀಸ್. ‘ಜೀವನವೆಂಬ ರಣರಂಗದಲ್ಲಿ ಹೇಡಿಯಾದವನು ದುಃಖಿಸುವುದು ಶತಃಸಿದ್ಧ’ ಎಂದಿದ್ದಾನೆ ಅಲೆಗ್ಸಾಂಡರ್. ಜೀವನವೆಂಬುದೊಂದು ಪ್ರವಾಹ, ಇತರ ಪ್ರವಾಹಗಳಂತೆ ಒಂದೇ ದಿಕ್ಕಿನಲ್ಲಿ ಹರಿಯುವುದಿಲ್ಲವೆಂಬುದೇ ವೈಶಿಷ್ಟ್ಯ! ಜನರ ಜೀವನಶೈಲಿ, ಆಯ್ದುಕೊಂಡ ಆದರ್ಶಗಳು ಮತ್ತು ಸಾಧಿಸಿದ ಹಂತಗಳು ವೈವಿಧ್ಯಮಯ. ಸಮಾಜದ ವಾಸ್ತವ ಕುರಿತು ಲಿಂಕನ್ ಹೀಗೆನ್ನುತ್ತಾನೆ: ‘ಬಲಿಷ್ಠರನ್ನು ದುರ್ಬಲಗೊಳಿಸುವುದು ಸುಲಭಸಾಧ್ಯ, ದುರ್ಬಲರನ್ನು ಬಲಿಷ್ಠರನ್ನಾಗಿಸುವುದು ಕಷ್ಟಸಾಧ್ಯ. ಕೆಲಸ ಮಾಡಿ ಸತ್ತವರಿಗಿಂತ ಚಿಂತೆ ಮಾಡಿ ಸತ್ತವರೇ ಅಧಿಕ…’. ‘ಮೂರ್ಖರನ್ನು ಅಕ್ಷರಸ್ಥರನ್ನಾಗಿಸಬಹುದೇನೋ, ಆದರೆ ವಿಚಾರವಂತರನ್ನಾಗಿಸಲಾಗದು’ ಎಂದಿದ್ದಾರೆ ಲಿಯೋ ಟಾಲ್​ಸ್ಟಾಯ್. ಸಹಾಯ ಮಾಡುವ ಹೃದಯವಂತನಿಗಷ್ಟೇ ತಪ್ಪು ಗುರ್ತಿಸಿ ಹೇಳುವ ಹಾಗು ತಿದ್ದುವ ಅಧಿಕಾರ ಇರುವುದೆಂಬುದು ಲೋಕೋಕ್ತಿ.

    ಶ್ರೀರಾಮಕೃಷ್ಣ-ವಿವೇಕಾನಂದರ ಜೀವನಸಂದೇಶ ಗಳಿಂದು ಜಗಜ್ಜಾಹೀರಾಗಿವೆ. ‘ಇವರೀರ್ವರೂ ವಿಶ್ವಾತ್ಮನ ಅದ್ಭುತ ಸ್ವರಮೇಳ. ವಿವೇಕಾನಂದರ ಜೀವನವು ಮೂವತ್ತುಕೋಟಿ ಜನರ ಎರಡು ಸಾವಿರ ವರ್ಷಗಳ ಆಧ್ಯಾತ್ಮಿಕ ಜೀವನದ ಸಮಗ್ರತೆಯನ್ನೇ ಸೂಚಿಸುತ್ತದೆ’ ಎಂದಿದ್ದಾರೆ ನೊಬೆಲ್ ಪುರಸ್ಕೃತ ರೋಮಾರೋಲಾ. ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡುವುದರಿಂದ ಭಾರತವನ್ನು ಆಮೂಲಾಗ್ರವಾಗಿ ಅರಿಯಲು ಸಾಧ್ಯವೆಂದ ನೊಬೆಲ್ ಪುರಸ್ಕೃತ ರವೀಂದ್ರನಾಥ್ ಟ್ಯಾಗೋರರು ಒಂದೆಡೆಯಾದರೆ, ‘ಭಾರತದಲ್ಲಿ ಹಿಂದೂಧರ್ಮವನ್ನು ಸಂರಕ್ಷಿಸಿದವರು, ರಾಜಕೀಯ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಅವರು ಬಾರದೇ ಇದ್ದಿದ್ದರೆ ನಮ್ಮ ಧರ್ಮ ಉಳಿಯುತ್ತಿರಲಿಲ್ಲ, ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ’ ಎಂದರು ಚಕ್ರವರ್ತಿ ರಾಜಗೋಪಾಲಾಚಾರಿ. ‘ಸ್ವಾಮಿ ವಿವೇಕಾನಂದರ ಕೃತಿಗಳು ಜನರಲ್ಲಿ ರಾಷ್ಟ್ರಪ್ರಜ್ಞೆ-ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿದವು. ಭಾರತದ ಸ್ವಾತಂತ್ರ್ಯ ಚಳವಳಿಯ ಮೂಲ ಅವರ ಸಂದೇಶಗಳೇ ಆಗಿದ್ದವು’ ಎಂದರು ಸುಭಾಷ್. ಕೋಲ್ಕತ್ತಾದ ಯುವಕ ನರೇಂದ್ರನಾಥ ದತ್ತ ಯತಿಧರ್ಮ ಸ್ವೀಕರಿಸಿ ಸ್ವಾಮಿ ವಿವೇಕಾನಂದರಾಗಿ, ವಿಶ್ವಪರ್ಯಟನೆ ಗೈದು ವಿಶ್ವಮಾನವರಾಗಿ ಅನಾವರಣಗೊಂಡ ವಿಚಾರಗಳ ಆಮೂಲಾಗ್ರ ಅಧ್ಯಯನ ಅವಶ್ಯಕ ಹಾಗೂ ಸ್ತುತ್ಯಾರ್ಹ ಆವಿಷ್ಕಾರ.

    ಬಾಲಕ ನರೇಂದ್ರ: ಜನ್ಮನೀಡಿದ ಮಾತಾಪಿತೃಗಳು, ಲಾಲಿಸಿ ಪೋಷಿಸಿದ ಕೌಟುಂಬಿಕ ಪರಿಸರವು ಬಾಲ್ಯದಿಂದಲೇ ನರೇಂದ್ರನಿಗೆ ಸಾಮಾನ್ಯ ಮನಸ್ಸುಗಳ ಊಹೆಗೂ ಎಟುಕದಷ್ಟು ಮಹತ್ತರ ಧ್ಯೇಯೋದ್ದೇಶಗಳ ಹೂರಣವನ್ನಿತ್ತು ಅಸಾಧಾರಣ ಬದುಕಿಗೆ ಸನ್ನದ್ಧಗೊಳಿಸಿದ್ದು ಸುಳ್ಳಲ್ಲ. ಮನೆಬಾಗಿಲಿಗೆ ಬರುತ್ತಿದ್ದ ಭಿಕ್ಷುಕರಿಗೆ ಕೈಗೆಟಕುವ ವಸ್ತು-ವಸ್ತ್ರಗಳನ್ನು ಕೈಎತ್ತಿ ದಾನಮಾಡುತ್ತಿದ್ದ ಪುಟ್ಟ ಬಾಲಕ ನರೇಂದ್ರನ ನಡವಳಿಕೆ ಒಂದೆಡೆ ವಿಶೇಷವೆನಿಸಿದರೆ, ಮತ್ತೊಂದೆಡೆ ವಿವಿಧ ಮತಧರ್ಮಗಳಿಗೆ ಸೇರಿದ ಕಕ್ಷಿದಾರರಿಗೆ ತಂದೆ ವಿಶ್ವನಾಥದತ್ತರು ವ್ಯವಸ್ಥೆ ಮಾಡಿದ್ದ ಪ್ರತ್ಯೇಕ ಹುಕ್ಕಾಗಳನ್ನು ಆಸ್ವಾದಿಸಿ ಎಲ್ಲ ಹುಕ್ಕಾಗಳ ರುಚಿಯೂ ಒಂದೇ ಎಂಬ ತೀರ್ವನಕ್ಕೆ ಬಂದವನು ಇವನು! ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ಅತ್ಯುತ್ತಮ ಭಾಷಣಶೈಲಿಯಿಂದ, ಸಮಾಜದ ದಿಗ್ಗಜರೆನಿಸಿದ್ದ ಸುರೇಂದ್ರನಾಥ ಬ್ಯಾನರ್ಜಿಯವರಿಂದ ಶ್ಲಾಘಿಸಲ್ಪಟ್ಟದ್ದು ಒಂದೆಡೆಯಾದರೆ ಕಾಲೇಜು ವಿದ್ಯಾರ್ಥಿಯಾಗಿ ಅಂದಿನ ಪ್ರಾಂಶುಪಾಲ ಪೊ›. ವಿಲಿಯಂ ಹೇಸ್ಟಿರವರಿಂದ ‘ಜಗತ್ತಿನ ಹತ್ತಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ ನನಗೆ ದೊರೆತ ಅಪೂರ್ವ ಶಿಷ್ಯರತ್ನ ನರೇಂದ್ರ’ ಎಂಬ ಹೆಗ್ಗಳಿಕೆಗೂ ಪಾತ್ರನಾದ.

    ಜನ್ಮಭೂಮಿಯ ಸಮಗ್ರ ಅರಿವನ್ನು ತನ್ನದಾಗಿಸಿ ಕೊಂಡು ಇಡೀ ಜಗತ್ತಿನ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಇತಿಹಾಸವನ್ನು ಪೂರ್ವಗ್ರಹವಿಲ್ಲದೆ, ಆಮೂಲಾಗ್ರವಾಗಿ ಅಧ್ಯಯನಗೈದ ಯುವಕನೇ ನರೇಂದ್ರನಾಥ. ಮರಳು-ಸಕ್ಕರೆಯ ಮಿಶ್ರಣ ಎಂದೆನಿಸಿದ್ದ ಸಮಗ್ರ ವಿಶ್ವದ ವಿಚಾರದಲ್ಲಿ ಮರಳನ್ನು ಉಪೇಕ್ಷಿಸದೆ, ಸಕ್ಕರೆಯನ್ನು ಅತ್ಯುತ್ಕೃಷ್ಟ ವಿಧಾನಗಳಿಂದ ಅರಿಯುವ ಎದೆಗಾರಿಕೆ ನರೇಂದ್ರನದ್ದಾಗಿತ್ತು. ವಿಶ್ವವನ್ನು ಅರಿಯುವ, ಪ್ರೀತಿಸುವ ಹಾಗೂ ಅದರ ಯೋಗ್ಯ ಮುನ್ನಡೆಗೆ ಚಿಂತಿಸುವ ವಿಶ್ವಪ್ರೇಮಿ, ಔದಾರ್ಯಸಂಪನ್ನ ವ್ಯಕ್ತಿ ನರೇಂದ್ರನಾಗಿದ್ದನು.

    ಯುವಕ ನರೇಂದ್ರನಾಥ: ವಿವಿಧ ಮತಧರ್ಮಗಳ ಅನುಯಾಯಿಗಳಲ್ಲಿ ಶ್ರದ್ಧೆ-ಬದ್ಧತೆಗಳನ್ನು ಪ್ರತಿಷ್ಠಾಪಿಸಿ, ಅವತಾರವರಿಷ್ಠರೆಂದು ಗೌರವಿಸಲ್ಪಟ್ಟ ಭಗವಾನ್ ಶ್ರೀರಾಮಕೃಷ್ಣರು ತಮ್ಮ ಸಮಕಾಲೀನ ದಿಗ್ಗಜರೊಂದಿಗೆ ಶಿಷ್ಯ ನರೇಂದ್ರನಾಥನನ್ನು ಹೋಲಿಸಿಕೊಂಡು, ‘ಜಗನ್ಮಾತೆ ಲೋಕಶಿಕ್ಷಣ ಕಾರ್ಯಕ್ಕಾಗಿ ಹಿಂದೆ ಶಂಕರಾಚಾರ್ಯರಿಗೆ ಅನುಗ್ರಹಿಸಿದ್ದಂತೆ ಈಗ ನರೇಂದ್ರನಾಥನನ್ನು ಅನುಮತಿಸಿ ಆಶೀರ್ವದಿಸಿದ್ದಾಳೆ. ಇವನು ಜಗತ್ತಿನಲ್ಲೊಂದು ಉತ್ಕಾ›ಂತಿಯನ್ನು ಮೂಡಿಸುವುದು ಸತ್ಯಸ್ಯ ಸತ್ಯ…’ಎಂದರು. ಕಣ್ಣುಮುಚ್ಚಿ ದೇವರನ್ನು ನೋಡುವ ವಿಧಾನವನ್ನು ಮೀರಿ ಕಣ್ಣು ತೆರೆದು ದೇವರನ್ನು ನೋಡುವ ವಿನೂತನ ವೇದಾಂತ ತತ್ತ್ವಕ್ಕೆ ವಾರಸುದಾರನಾಗಿ ನರೇಂದ್ರನು ಜಗತ್ತಿನ ಆರ್ತರ, ದೀನರ, ದರಿದ್ರರ, ದಲಿತರ, ರೋಗಿಗಳ, ಅಶಕ್ತರ ಕಣ್ಣೀರನ್ನು ಒರೆಸುವ ಕಾಮಧೇನುವಾಗುತ್ತಾನೆ.

    ತನ್ನನ್ನು ಅಪೂರ್ವ ಬ್ರಹ್ಮಚಾರಿಯಾಗಿ ರೂಪಿಸಿಕೊಂಡ ನರೇಂದ್ರನಾಥ ದೈಹಿಕ, ಮಾನಸಿಕ ಮತ್ತು ವಾಕ್ ಸಂಯಮವನ್ನು ಸಾಧಿಸಿಕೊಂಡಿದ್ದ. ಶ್ರೀ ಶಂಕರಾಚಾರ್ಯರು ನಿರ್ದೇಶಿಸಿದಂತೆ, ನರೇಂದ್ರನಾಥನು ವೈದಿಕ ಗ್ರಂಥಗಳನ್ನು ಆಮೂಲಾಗ್ರವಾಗಿ ಅಧ್ಯಯನಗೈದು, ಬ್ರಹ್ಮವಸ್ತುವಿನ ಆಧಾರದಲ್ಲೇ ನಡೆಯುತ್ತಾ ಎಲ್ಲವೂ ಬ್ರಹ್ಮದಲ್ಲೇ ನೆಲೆಸಿದೆ, ಅರ್ಥಾತ್ ಎಲ್ಲದರಲ್ಲೂ ದೇವರನ್ನೇ ಕಾಣುತ್ತೇನೆ ಎಂಬ ಮಹಾನ್ ತತ್ತಾ್ವನುಷ್ಠಾನಿಯಾದನು.

    ಪರಿವ್ರಾಜಕ ಸಂನ್ಯಾಸಿಯಾಗಿ: ಬುದ್ಧದೇವ ಹಾಗೂ ಶಂಕರ ಭಗವತ್ಪಾದರಂತೆ ಸ್ವಾಮಿ ವಿವೇಕಾನಂದರು ಸಂನ್ಯಾಸಿಗಳ ಸಂಘವನ್ನು ಸ್ಥಾಪಿಸಿದರು. ದಶನಾಮಿ ಸಂಪ್ರದಾಯಕ್ಕೆ ಒಳಪಟ್ಟು ಅದ್ವೈತ ತತ್ತ್ವದ ಅನುಷ್ಠಾನವನ್ನು ವಿಶ್ವದಲ್ಲಿ ಮೂಡಿಸಿದರು. ರಾಜಕೀಯ ಸ್ವಾತಂತ್ರ್ಯವಿಲ್ಲದೆ ದಾಸ್ಯದಲ್ಲಿ ತೊಳಲಾಡುತ್ತಿದ್ದ ಭಾರತೀಯರಲ್ಲಿ, ಬೂದಿಮುಚ್ಚಿದ ಕೆಂಡದಂತಿದ್ದ ಅಧ್ಯಾತ್ಮ ಶಕ್ತಿಯನ್ನು ಜಾಗೃತಗೊಳಿಸಿದರು. ಅಜ್ಞಾನಿಗಳಿಗೆ ಬೆಳಕನ್ನಿತ್ತಿದ್ದು ಒಂದೆಡೆಯಾದರೆ ಆಧುನಿಕ ಶಿಕ್ಷಿತರಿಗೆ ಅಧಿಕ ಬೆಳಕನ್ನೇ ನೀಡಬೇಕಾಯಿತು. ತನ್ನ ಉದ್ಧಾರಕ್ಕೆ ದೈವವನ್ನು ನೆಚ್ಚಿಕೊಂಡಿದ್ದ ಮತ್ತು ಮರಣಾನಂತರ ಸ್ವರ್ಗಾಪೇಕ್ಷಿಗಳಾಗಿದ್ದ ಭಾರತೀಯರಿಗೆ, ‘ದೈವಶ್ರದ್ಧೆಗೆ ಆತ್ಮಶ್ರದ್ಧೆಯೇ ಅಡಿಪಾಯ; ಇದಿಲ್ಲದಿದ್ದರೆ ಕೇವಲ ದೈವಶ್ರದ್ಧೆಯ ಕಟ್ಟಡ ಅಲುಗಾಡುತ್ತದೆ, ಯಾವಾಗ ಬೇಕಾದರೂ ಕುಸಿಯಲೂಬಹುದು! ಆತ್ಮಶ್ರದ್ಧೆಯನ್ನು ಉಪೇಕ್ಷಿಸದೆ ದೈವಶ್ರದ್ಧೆಯನ್ನು ಊರ್ಜಿತಗೊಳಿಸಿಕೊಳ್ಳಬೇಕು. ಸಾಧನೆ ಪ್ರಾಮಾಣಿಕವಾಗಿ ಸಾಗಿದಾಗ ಇವು ಪರ್ಯಾಯ ಪದಗಳೆಂಬ ಅರಿವು ಮೂಡುತ್ತದೆ’ ಎಂದು ಮನದಟ್ಟು ಮಾಡಿಕೊಟ್ಟರು. ಜನನಿ, ಜನ್ಮಭೂಮಿ ಹಾಗೂ ಸಂಸ್ಕೃತಿಯನ್ನು ನಿರ್ಲಕ್ಷಿಸಿ ಸ್ವದೇಶದಲ್ಲಿಯೇ ನಿರಾಶ್ರಿತರಂತೆ ಬದುಕುತ್ತಿದ್ದ ಭಾರತೀಯರಿಗೆ ಪುನರ್ಜನ್ಮವಿತ್ತು ಮುನ್ನಡೆಸಿದರು.

    ಭಾರತದ ಉದ್ದಗಲಕ್ಕೂ ಸಂಚರಿಸುತ್ತಾ ಸ್ವಾಮಿ ವಿವೇಕಾನಂದರು ಲೋಕಗುರು ಶ್ರೀಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ಪ್ರತಿಪಾದಿಸಿದ್ದ, ಬ್ರಹ್ಮತ್ವವು ಪರಿಪೂರ್ಣವಾದದ್ದು, ವಿಕಾರವಿಲ್ಲದ್ದು, ಆದಿ ಅಂತ್ಯಗಳಿಲ್ಲದ್ದು, ಸಜಾತಿ ವಿಜಾತಿಯ ಭೇದ ಮೀರಿದ್ದು ಮತ್ತು ನಾನಾತ್ವವನ್ನು ಮೀರಿದ್ದು, ಏಕವೂ ಅದ್ವಯವೂ ಆದದ್ದು, ಮಾತಿಗೆ ಅಗೋಚರವೂ, ಶುದ್ಧವೂ, ಜ್ಞಾನಸ್ವರೂಪವೂ ಮತ್ತು ಅಸದೃಶವೂ ಆಗಿದೆ ಎಂಬ ಮಹಾನ್ ತತ್ತ್ವವನ್ನು ಮನವರಿಕೆ ಮಾಡಿಕೊಟ್ಟರು.

    ‘ಪೌರುಷದಿಂದ ಪ್ರಯತ್ನ ಮಾಡದಿದ್ದರೆ ಎಂಥ ದೈವಬಲವೂ ನಮ್ಮ ತಮಸ್ಸನ್ನು ತೊಲಗಿಸಲಾರದು. ಸರ್ವಶಕ್ತಿಸ್ವರೂಪಿಣಿಯಾದ ಜಗನ್ಮಾತೆಯ ಸಂತಾನ ನಾವೆಂಬುದನ್ನು ಸದಾ ನೆನಪಿನಲ್ಲಿಡೋಣ, ನಕಾರಾತ್ಮಕ ಭಾವನೆಗಳನ್ನು ಅದೊಂದು ಅಂಟುರೋಗವೇ ಎಂಬಂತೆ ಹೊಸಕಿ ಹಾಕೋಣ. ಜನರ ಹೊಗಳಿಕೆ, ತೆಗಳಿಕೆಗಳಿಗೆ ಗಮನ ಕೊಡದೆ ಆದರ್ಶವನ್ನು ಮುಂದಿರಿಸಿಕೊಂಡು ಸಿಂಹಪರಾಕ್ರಮದಿಂದ ಕಾರ್ಯಪ್ರವೃತ್ತರಾಗೋಣ’ ಎಂಬ ವಿವೇಕವಾಣಿಯು ಭಾರತೀಯರ ಮೇಲೆ ಅಗಾಧ ಪರಿಣಾಮ ಬೀರಿ ಜಗತ್ತನ್ನೂ ಸರಿದಾರಿಯಲ್ಲಿ ಮುನ್ನಡೆಸಲು ಸಶಕ್ತವಾಗಿಸಿತು.

    ವಿಶ್ವಗುರು-ವಿಶ್ವಮಾನವ: ಭಾರತವು ಲೌಕಿಕ ಸಂಪನ್ಮೂಲಗಳ ಕೊರತೆಯಿಂದ ನಿತ್ರಾಣಸ್ಥಿತಿ ತಲುಪಿದ್ದು ಒಂದೆಡೆಯಾದರೆ ಈ ಸಂಪನ್ಮೂಲಗಳ ಆಧಿಕ್ಯದಿಂದ ಪಾಶ್ಚಾತ್ಯ ಜಗತ್ತು ಆಲಸ್ಯ ಸ್ಥಿತಿಯಲ್ಲಿ ನರಳುತ್ತಿತ್ತು.

    ಸ್ವಾಮಿ ವಿವೇಕಾನಂದರ ಅವತರಣದ ಉದ್ದೇಶವು ಮಾತೃಭೂಮಿಯ ಉತ್ಥಾನದ ನಿಮಿತ್ತವಾದರೂ ವಿಶ್ವದಲ್ಲಿ ಆಧ್ಯಾತ್ಮಿಕ ಸಂಚಲನಗೈಯ್ಯುವುದೇ ಪ್ರಮುಖವಾದುದಾಗಿತ್ತು. ಆದ್ದರಿಂದಲೇ ಭಗವದಿಚ್ಛೆಯಂತೆ ಅವರು ಅಮೆರಿಕಾದ ವಿಶ್ವಧರ್ಮಸಮ್ಮೇಳನದಲ್ಲಿ ಭಾಗವಹಿಸಲು ಸಮ್ಮತಿಸಿದ್ದು. ಅವರೊಬ್ಬ ವಿಶ್ವಮಾನವರಾಗಿ ಜಗತ್ತಿಗೆ ಬುದ್ಧಿ ಹೇಳಿದ ಪರಿ ಮನೋಜ್ಞವಾಗಿದೆ. ‘ನನ್ನ ಧರ್ಮವಷ್ಟೇ ಉಳಿಯುತ್ತದೆ ಎನ್ನುವವರ ಕುರಿತು ಜಗತ್ತು ಕನಿಕರ ಪಡುತ್ತದೆ. ಜಗತ್ತಿನ ಪ್ರತಿಯೊಂದು ಧರ್ಮವೂ ತನ್ನ ಧ್ವಜದ ಮೇಲೆ ಯುದ್ಧವಲ್ಲ-ಸಹಕಾರ, ನಾಶವಲ್ಲ-ಸ್ವೀಕಾರ ಮತ್ತು ವೈಮನಸ್ಯವಲ್ಲ-ಶಾಂತಿ ಸಹಬಾಳ್ವೆ ಎಂದು ದಾಖಲಿಸುತ್ತದೆ. ಜಗತ್ತಿನಲ್ಲಿ ಮತಾಂತರವೆಂಬುದೇ ಪಿಡುಗು. ಪ್ರತಿಯೊಂದು ಧರ್ಮದವರೂ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಳ್ಳದೆ, ಉಳಿದ ಧರ್ಮಗಳ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು ತನ್ನದೇ ಆದ ಬೆಳವಣಿಗೆಯ ನಿಯಮಾನುಸಾರವಾಗಿ ಬೆಳೆಯಬೇಕು…’ ಎಂದು ಸಾರಿದರು.

    ಸ್ವಾಮಿ ವಿವೇಕಾನಂದರು ತಮ್ಮ ಪ್ರಭಾವಶಾಲಿ ವ್ಯಕ್ತಿತ್ವ, ವಿಶ್ವವನ್ನೇ ತಬ್ಬುವ ವಿಶ್ವಾತ್ಮ ಭಾವದಿಂದ ಜಗತ್ತಿನ ಪ್ರತಿಷ್ಠಿತರೆನಿಸಿದ್ದ ಪೊ›. ಜಾನ್ ಹೆನ್ರಿ ರೈಟ್, ವಿಜ್ಞಾನಿ ಹಿರಮ್ ಮ್ಯಾಕ್ಸಿಮ್ ನಾಸ್ತಿಕವಾದಿ ಇಂಗಲ್​ಸಾಲ್, ಖ್ಯಾತ ವಾಣಿಜ್ಯೋದ್ಯಮಿ ಜಾನ್. ಡಿ. ರಾಕ್​ಫೆಲ್ಲರ್ ಮೊದಲಾದವರ ಮನಸೂರೆಗೊಂಡರು.

    ಕೇವಲ ಲೌಕಿಕ ಭೋಗಜೀವನದ ವೈಭವದ ನಾಗಾಲೋಟದಲ್ಲಿ ಸಾಗುತ್ತಿದ್ದ ಪಾಶ್ಚಾತ್ಯರಿಗೆ, ‘ಅದಾಗಲೇ ಜ್ವಾಲಾಮುಖಿಯ ಮೇಲೆ ಕುಳಿತಿರುವ ನೀವು ತ್ವರಿತವಾಗಿ ಅಧ್ಯಾತ್ಮವನ್ನು ಅಳವಡಿಸಿಕೊಳ್ಳದಿದ್ದರೆ ಯಾವುದೇ ಕ್ಷಣದಲ್ಲೂ ಸ್ಪೋಟಿಸಬಹುದು’ ಎಂದೆಚ್ಚರಿಸಿದರು. ಅಮೆರಿಕಾದ ಕರಿಯ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ, ಮಾನವೋದ್ಧಾರ ಚಟುವಟಿಕೆಗಳಲ್ಲಿ ಧನಸಹಾಯವಿತ್ತು ಶ್ರಮಿಸಲು ಜಾನ್.ಡಿ. ರಾಕ್​ಫೆಲ್ಲರನನ್ನು ಪ್ರೇರೇಪಿಸಿದರು.

    ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಲ್ಲಿ ಬಹಳಷ್ಟು ವಿಚಾರಗಳು ವಿವೇಕಾನಂದರ ತತ್ತ್ವಚಿಂತನೆಗಳೇ ಆಗಿವೆ ಎಂಬುದು ಗಮನಾರ್ಹ. ಇದಕ್ಕೆ ವಿಶ್ವಸಂಸ್ಥೆಯ ಡೈರೆಕ್ಟರ್ ಜನರಲ್ ಫೆಡರಿಕೋ ಮೇಯರ್ ಅವರ ಭಾಷಣವೇ ದಾಖಲೆ. ವಿಶ್ವಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮೇರಿಕಾದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಭಾಷಣದಲ್ಲೂ ‘ವಿವೇಕಾನಂದರ ಮಾತುಗಳನ್ನು ಜಗತ್ತು ನಿರ್ಲಕ್ಷಿಸಬಾರದಿತ್ತು…’ ಎಂಬ ಸತ್ಯವೇ ಪರೋಕ್ಷವಾಗಿ ವ್ಯಕ್ತವಾಗಿದೆ!

    ಅಮೆರಿಕಾದ ಮಿಸ್ ಮೇರಿ ಹೇಲ್ ಅವರಿಗೆ ಸ್ವಾಮಿ ವಿವೇಕಾನಂದರು ಹೀಗೆ ಬರೆಯುತ್ತಾರೆ: “I had to work till I am at death’s door and had to spend nearly the whole of that energy in America, so that Americans may learn to be more broader and more spiritual…’ ‘ವಿಶ್ವಮಾನವ’ದ ಸ್ವರೂಪವನ್ನೇ ತಮ್ಮಲ್ಲಿ ಅನಾವರಣಗೊಳಿಸಿಕೊಂಡ ಸ್ವಾಮಿ ವಿವೇಕಾನಂದರು ವಿಶ್ವಪ್ರೇಮಿಯಾದರು, ವಿಶ್ವಗುರುವಾದರು! ಶ್ರೀರಾಮಕೃಷ್ಣರು ನುಡಿದಂತೆ, ‘ಜಗನ್ಮಾತೆಯಿಂದ ಲೈಸೆನ್ಸ್ ಪಡೆದ ನನ್ನ ನರೇನ್ ಲೋಕಶಿಕ್ಷಣ ಮಾಡುತ್ತಾನೆ’ ಎಂಬ ಸತ್ಯವಚನವು ಸಾಕ್ಷಾತ್ತಾಗಿ ಸಾಕಾರಗೊಂಡಿರುವುದನ್ನು ಜಗತ್ತು ಇಂದು ಹೆಮ್ಮೆಯಿಂದ ದಾಖಲಿಸಿದೆಯಲ್ಲವೇ!

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts