More

    ವಿಟ್ಲಕ್ಕೆಂದು ತಾಲೂಕು ಪಟ್ಟ?

    ನಿಶಾಂತ್ ಬಿಲ್ಲಂಪದವು ವಿಟ್ಲ
    ವಿಟ್ಲ ತಾಲೂಕಾಗಬೇಕೆಂಬ ಐವತ್ತು ವರ್ಷಗಳ ಬೇಡಿಕೆ ಪತ್ರ ವ್ಯವಹಾರ, ಹೋರಾಟದಲ್ಲೇ ಮುಂದುವರಿದಿದೆ. ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಕಳೆದುಕೊಂಡ ನಂತರ ಈ ಕ್ಷೇತ್ರ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಜನರ ಬೇಡಿಕೆಗಳು ಈಡೇರುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದ್ದು, ಈ ವರ್ಷ ಮತ್ತೆ ರಾಜ್ಯ ಬಜೆಟ್ ಎದುರಾಗುತ್ತಿದ್ದಂತೆ ತಾಲೂಕಿನ ಕನಸು ಜನರಲ್ಲಿ ಚಿಗುರಿದೆ.

    ಬ್ರಿಟಿಷರ ವಶದಲ್ಲಿದ್ದ ತುಳುನಾಡು, ಸೌತ್ ಕೆನರಾ ಆಗಿ ಮದ್ರಾಸ್ ಪ್ರಾಂತ್ಯದಲ್ಲಿ ವಿಲೀನಗೊಂಡು, ವಿಟ್ಲ ಸೀಮೆಯ ಮೂರು ಗ್ರಾಮಗಳ ಹೊರತು ಹದಿಮೂರು ಗ್ರಾಮಗಳು 1962ರ ತನಕ ಪುತ್ತೂರು ತಾಲೂಕಿನ ಭಾಗವಾಗಿತ್ತು. ಬ್ರಿಟೀಷ ಕಾಲದಲ್ಲೇ ವಿಟ್ಲದಲ್ಲಿ ಪೊಲೀಸ್ ಠಾಣೆ ಹಾಗೂ ಉಪನೋಂದಣಿ ಕಚೇರಿಯನ್ನು ಹೊಂದಿ ತಾಲೂಕು ಸ್ಥಾನಕ್ಕೆ ಅರ್ಹತೆ ಹೊಂದಿತ್ತು.
    ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಟ್ಲ ತಾಲೂಕು ಕೇಂದ್ರವಾಗದೆ, ಬೆಳ್ತಂಗಡಿಯ ಭಾಗವಾಗಿದ್ದ, ಬಂಟ್ವಾಳ ತಾಲೂಕು

    ಕೇಂದ್ರವಾಯಿತು. ಇದರಿಂದ ವಿಟ್ಲ ಸೀಮೆಯ ನಾಗರಿಕರು 13 ಕಿ.ಮೀ. ದೂರದಲ್ಲಿರುವ ಪುತ್ತೂರನ್ನು ಬಿಟ್ಟು 18 ಕಿ.ಮೀ. ದೂರದ ಬಂಟ್ವಾಳ ತಾಲೂಕು ಕೇಂದ್ರಕ್ಕೆ ಶರಣಾಗಬೇಕಾಯಿತು. ಬೇಡಿಕೆಗಳು ಪ್ರತಿ ವರ್ಷವೂ ಕಾಗದಗಳ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೈಗೆ ತಲುಪಿದರೂ ಪ್ರಯೋಜನವಾಗಿಲ್ಲ.

    ವಿಟ್ಲ ಹೋಬಳಿಗೆ ಇಬ್ಬರು ಶಾಸಕರು. ಇಬ್ಬರಿಗೂ ಈ ಭಾಗ ದೂರದಲ್ಲಿದೆ. ಹೀಗಾಗಿ ಇಲ್ಲಿನ ಜನರ ಬೇಡಿಕೆಗಳಿಗೆ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲ. ತಾಲೂಕು ಕೇಂದ್ರದ ಕನಸು ಹಾಗೇ ಉಳಿದುಕೊಂಡಿದೆ. ಪ್ರತಿ ಬಜೆಟ್ ಮಂಡಣೆಯ ಸಮಯದಲ್ಲೂ ವಿಟ್ಲ ತಾಲೂಕು ಕೇಂದ್ರದ ಘೋಷಣೆಯಾಗುತ್ತಾ ಎಂದು ನಾಗರಿಕರು ಕಾಯುವುದು ಮಾತ್ರ ತಪ್ಪುವುದಿಲ್ಲ.

    ವಿವಿಧ ಸಮಿತಿಗಳ ಮುಂದೆ ಬೇಡಿಕೆ:ವಿಟ್ಲದ ಬಾಬು ಶೆಟ್ಟಿ, ದೇವಸ್ಯ ನಾರಾಯಣ ಭಟ್, ಮಾಜಿ ಸಚಿವ ವಿಠಲದಾಸ ಶೆಟ್ಟಿ ಮೊದಲಾದವರು 1973ರಲ್ಲಿ ತಾಲೂಕು ಪುನಾರಚನೆ ಬಗ್ಗೆ ಅಧ್ಯಯನ ನಡೆಸಲು ವಾಸುದೇವ ರಾವ್ ಸಮಿತಿಗೆ ಮನವಿ ನೀಡಿದ್ದರು. ಬಳಿಕ 1985ರಲ್ಲಿ ಹುಂಡೇಕರ್ ಸಮಿತಿಯ ಮುಂದೆ ಕೂಡೂರು ಕೃಷ್ಣ ಭಟ್ಟರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. 2009ರಲ್ಲಿ ಮತ್ತೆ ಎಂ.ಬಿ.ಪ್ರಕಾಶ್ ಸಮಿತಿಗೆ ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, ಮುರುವ ಮಹಾಬಲ ಭಟ್ ನೇತೃತ್ವದಲ್ಲಿ ಮನವಿ ಸಲಿಸಲಾಗಿದೆ.

    ನಿರಂತರ ಹೋರಾಟ: 2013ರ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಹಾಗೂ ಮೂಡುಬಿದಿರೆ ತಾಲೂಕಾಗಿ ಘೋಷಣೆಯಾಗುವ ಸಂದರ್ಭ ವಿಟ್ಲ ತಾಲೂಕು ಹೋರಾಟಕ್ಕೆ ಮತ್ತೆ ರೆಕ್ಕೆ ಪುಕ್ಕಗಳು ಬಂತು. ವಿವಿಧ ಮುಖಂಡರ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಿ 2013ರಲ್ಲಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ನೀಡಲಾಯಿತು. ಆದರೆ ಆ ಬಳಿಕ ಉಳ್ಳಾಲ ಹಾಗೂ ಮೂಲ್ಕಿ ತಾಲೂಕು ಕೇಂದ್ರವಾಗಿ ಘೋಷಣೆಯಾದರೂ, ವಿಟ್ಲ ನಿರ್ಲಕ್ಷ್ಷೃಕ್ಕೆ ಒಳಗಾಯಿತು. 2018ರ ಜ.2ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ವಿಟ್ಲ ಪೇಟೆಯ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಡೆ ನಡೆಸಿ ತಾಲೂಕು ಹೋರಾಟ ಬೇಡಿಕೆ, 2018ರ ಫೆ.1ರಿಂದ ಮುಖ್ಯಮಂತ್ರಿಗಳಿಗೆ ಕಾರ್ಡ್ ಚಳವಳಿ ನಡೆಸಲಾಯಿತು.

    ಜನರಿಗೆ ಅಗತ್ಯವಿರುವ ಕುದ್ದುಪದವು ವಿದ್ಯುತ್ ಸಬ್‌ಸ್ಟೇಶನ್, ಅಳಿಕೆ ವಿದ್ಯಾಸಂಸ್ಥೆಯವರ ಬಹು ಬೇಡಿಕೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಸುಪಾಸಿನ ಗ್ರಾಮಗಳಿಗೆ ವಿಸ್ತರಣೆ ನನೆಗುದಿಯಲ್ಲಿದೆ. ಶಾಸಕರಿಗೆ ನಾನಾ ರೀತಿಯ ಮನವಿ ನೀಡಲಾಗಿದೆ. ಆದರೆ ಸೌಲಭ್ಯಗಳು ಈ ಭಾಗಕ್ಕೆ ಲಭಿಸುತ್ತಿಲ್ಲ. ತಾಲೂಕು ಕೇಂದ್ರ ಬೇಡಿಕೆ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.
    -ರಾಮಣ್ಣ ಶೆಟ್ಟಿ ಪಾಳಿಗೆ
    ಅಧ್ಯಕ್ಷರು, ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts