More

    ರಾಷ್ಟ್ರ ನಿರ್ಮಾಣಕ್ಕೆ ವಿಶ್ವಕರ್ಮರ ಕೊಡುಗೆ ಹಿರಿದು

    ಪಿರಿಯಾಪಟ್ಟಣ: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಮುಂದುವರಿದಂತೆ ವಿಶ್ವಕರ್ಮರ ಜೀವನಶೈಲಿ ಬದಲಾದರೂ ಕುಲಕಸುವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ವಿಶ್ವಕರ್ಮ ಸಮುದಾಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ 20 ಎಕರೆ ಜಾಗ ನೀಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ವಿಶ್ವಕರ್ಮ ನಿಗಮದ ಕಚೇರಿ ನಿರ್ಮಾಣಕ್ಕೆ ಬಿಡಿಎಗೆ ಅರ್ಜಿ ಸಲ್ಲಿಸಿದರೆ ನಿವೇಶನ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದ ಸಚಿವರು, ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾದರೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

    ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಜಗತ್ತನ್ನು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ ಎಂದರಲ್ಲದೆ, ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

    ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಮಹಾಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಿಗೂ ಅನುಕೂಲವಾದ ಕೆಲಸವನ್ನು ಮಾಡುತ್ತಿದೆ. ಎಲ್ಲ ಧರ್ಮಗಳ ಪಾರಂಪರಿಕ ಕಟ್ಟಡಗಳ ನಿರ್ಮಾಣದಲ್ಲೂ ವಿಶ್ವಕರ್ಮ ಸಮಾಜದ ಕೊಡುಗೆ ಇದೆ. ಪಂಚ ಕಸುಬುಗಳ ಮೂಲಕ ವಿಶ್ವಕರ್ಮ ಸಮಾಜ ರಾಷ್ಟ್ರ ನಿರ್ಮಾಣದ ಕೆಲಸ ಮಾಡುತ್ತಿದ್ದು, ಕಾಲ ಬದಲಾದಂತೆ ನಾಗರಿಕತೆ ಬೆಳವಣಿಗೆಯಾಗುತ್ತದೆ. ಕುಲ ಕುಸುಬುಗಳನ್ನು ಹೊಸ ತಂತ್ರಜ್ಞಾನದ ಜತೆಗೆ ಹೊಸ ವಿನ್ಯಾಸಗಳತ್ತ ಗಮನಹರಿಸಿ ಉತ್ತಮ ಕೊಡುಗೆಗಳು ನೀಡಬೇಕು ಎಂದು ಸಮುದಾಯಕ್ಕೆ ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಎಸ್.ಸಿ.ಮಹೇಶ್, ಕೆ.ಪಿ.ದಕ್ಷಿಣಾಮೂರ್ತಿ, ಸರಿಗಮಪ ಸೀಸನ್-19ರ ವಿಜೇತೆ ಕುಮಾರಿ ಪ್ರಗತಿ ಬಡಿಗಾರ್ ಅವರನ್ನು ಸನ್ಮಾನಿಸಲಾಯಿತು.

    ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಮಹೇಶ್ ಆಚಾರ್, ಮುಖಂಡರಾದ ಹಿರಣ್ಣಯ್ಯ, ತಿರುನೀಲಕಂಠ, ಡಿ.ಟಿ.ಸ್ವಾಮಿ, ತಾಲೂಕಿನ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ವಿಶ್ವಕರ್ಮ ಮಹಿಳಾ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts