More

    ಗ್ರಾಮ ಪಂಚಾಯಿತಿ ಕದನದಲ್ಲಿ ಮಹಿಳೆಯರಿಗೆ ಮಣೆ

    ಬೆಳಗಾವಿ: ಸದ್ಯ ಗ್ರಾಪಂ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು, ಇಲ್ಲಿ ಮಹಿಳಾಮಣಿಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಜಿಲ್ಲೆಯ ಒಟ್ಟು ಸ್ಥಾನಗಳಲ್ಲಿ ಪುರುಷರಿಗಿಂತ 315ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಹಳ್ಳಿ ಕದನದಲ್ಲಿ ನಾರಿಯರು ಕಾದಾಟಕ್ಕೆ ಅಣಿಗೊಂಡಿದ್ದಾರೆ.

    ಒಟ್ಟು 8,195 ಗ್ರಾಪಂ ಸದಸ್ಯ ಸ್ಥಾನಗಳ ಪೈಕಿ 4,255 ಸ್ಥಾನಗಳು ಮೀಸಲಾಗಿದ್ದು, ಶೇ.50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧೆ ಮಾಡಲಿದ್ದಾರೆ. ಇದರಿಂದಾಗಿ ಹೆಚ್ಚಿನ ಗ್ರಾಪಂಗಳಲ್ಲಿ ಈ ಹಿಂದೆ ಚುನಾಯಿತರಾದ ಸದಸ್ಯರಿಗೆ ಈ ಬಾರಿ ಸ್ಪರ್ಧೆಗೆ ಅವಕಾಶ ಇಲ್ಲದಾಗಿದೆ.

    ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಆದರೆ, ಗ್ರಾಮ-ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸುವ ಮೂಲಕ ಮಾದರಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಕರ್ನಾಟಕ ಅಳವಡಿಸಿಕೊಂಡಿದೆ. ಜಾತಿ/ ಪ್ರವರ್ಗವಾರು ಮೀಸಲಾತಿ ನಿಗದಿ ಮಾಡಬೇಕಿದೆ. ಹೀಗಾಗಿ ಮಹಿಳೆಯರಿಗೆ ಶೇ. 50ಕ್ಕೂ ಅಧಿಕ ಸ್ಥಾನಗಳು ಲಭ್ಯವಾಗುತ್ತಿವೆ.

    ಪತಿಯ ಅಧಿಕಾರ: ಗ್ರಾಪಂ ಚುನಾವಣೆಗಳಿಗೆ ಸ್ಪರ್ಧಿಸುವ, ಆಯ್ಕೆಯಾಗುವ ಮಹಿಳೆಯರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಾಗಬೇಕಿದೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಮನೆಯವರು ಅವಕಾಶ ನೀಡಿದರೆ ಮಾತ್ರ ಮಹಿಳಾ ಮೀಸಲಾತಿ ಸೌಲಭ್ಯ ಸಾರ್ಥಕವಾಗುತ್ತದೆ. ಬಹುತೇಕ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಮಹಿಳೆ ಬದಲಾಗಿ ಆಕೆಯ ಪತಿ ಅಧಿಕಾರ ನಡೆಸುತ್ತಿರುವುದು ಕಾಣಸಿಗುತ್ತವೆ. ಇದನ್ನು ಗಮನಿಸಿದರೆ, ಪುರುಷ ಪ್ರಧಾನ ವ್ಯವಸ್ಥೆ ಮುಂದುವರಿಯುವ ಅಪಾಯ ಇದೆ ಎನ್ನುವುದು ಮಹಿಳಾ ಮೀಸಲಾತಿಪರ ಇರುವವರ ಆತಂಕವಾಗಿದೆ.

    ಉತ್ತಮ ಆಡಳಿತಕ್ಕೆ ಸಾಕ್ಷಿ: ಪಂಚಾಯಿತಿ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿರುವುದರಿಂದ ಮಹಿಳೆಯರು ರಾಜಕೀಯವಾಗಿ ಸಬಲರಾಗಿದ್ದಾರೆಯೇ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಮಹಿಳೆ ಗ್ರಾಪಂ ಸದಸ್ಯೆ ಇರಲಿ, ಜಿಪಂ ಅಧ್ಯಕ್ಷೆ ಇರಲಿ ಅವರ ಆಡಳಿತದಲ್ಲಿ ಆಕೆಯ ಪತಿ ಇಲ್ಲವೆ ಮಕ್ಕಳು ಅಧಿಕಾರ ಚಲಾಯಿಸುತ್ತಿರುತ್ತಾರೆ. ಹಲವು ಕಡೆ ಪುರುಷರೇ ಬೆರಗಾಗುವಂತೆ ದಕ್ಷತೆಯಿಂದ ಅಧಿಕಾರ ಚಲಾಯಿಸಿ ಹೆಸರು ಮಾಡಿದ ಮಹಿಳೆಯರೂ ಇದ್ದಾರೆ. ಆದರೆ, ಅವರ ಸಂಖ್ಯೆ ವಿರಳವಾಗಿದೆ.

    ಅರ್ಧಕ್ಕಿಂತ ಅಧಿಕ ಸ್ಥಾನ ಮೀಸಲು: ಬೆಳಗಾವಿ ಜಿಲ್ಲೆಯಲ್ಲಿ 14 ತಾಲೂಕುಗಳಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಸ್ಥಾನ ಮೀಸಲಾಗಿವೆ. ಬೆಳಗಾವಿ ತಾಲೂಕಿನ 1,037 ಗ್ರಾಪಂ ಸ್ಥಾನಗಳಲ್ಲಿ 534 ಸ್ಥಾನ ಮಹಿಳೆಯರಿಗೆ, ಖಾನಾಪುರದಲ್ಲಿ 623 ಸ್ಥಾನಗಳಲ್ಲಿ 327, ಹುಕ್ಕೇರಿ ತಾಲೂಕಿನಲ್ಲಿ 880ರಲ್ಲಿ 453, ಬೈಲಹೊಂಗಲ 518ರಲ್ಲಿ 268, ಕಿತ್ತೂರು 234ರಲ್ಲಿ 120, ಗೋಕಾಕ 620ರಲ್ಲಿ 319, ಮೂಡಲಗಿ 347ರಲ್ಲಿ 177, ಸವದತ್ತಿ 657ರಲ್ಲಿ 340, ರಾಮದುರ್ಗ 520ರಲ್ಲಿ 268, ಚಿಕ್ಕೋಡಿ 667ರಲ್ಲಿ 377, ನಿಪ್ಪಾಣಿ 498ರಲ್ಲಿ 254, ಅಥಣಿ 741ರಲ್ಲಿ
    382, ಕಾಗವಾಡ 207ರಲ್ಲಿ 106, ರಾಯಬಾಗ ತಾಲೂಕಿ ನಲ್ಲಿ 646 ಸ್ಥಾನಗಳಲ್ಲಿ 330 ಸ್ಥಾನಗಳು ಮೀಸಲಾಗಿವೆ.

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts