More

    Web Exclusive: ಕೆ-ಸೆಟ್ ಪರೀಕ್ಷೆಗೆ ದೊರೆಯದ ಹಾಲ್​ ಟಿಕೆಟ್, ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳು

    • ಮಂಜುನಾಥ ಟಿ.ಭೋವಿ ಮೈಸೂರು

    ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಏ.11ರಂದು ನಡೆಯಲಿದ್ದು, ಪ್ರವೇಶ ಪತ್ರ ದೊರೆಯದ ಕಾರಣ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.

    ಯುಜಿಸಿಯಿಂದ ಮಾನ್ಯತೆ ಪಡೆದಿರುವ ಮೈಸೂರು ವಿಶ್ವವಿದ್ಯಾಲಯ ಕೆ-ಸೆಟ್ ಕೇಂದ್ರ ಈ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಭ್ಯರ್ಥಿಗಳು ಆಪಾದಿಸಿದ್ದಾರೆ. ಆದರೆ, ಇದನ್ನು ತಳ್ಳಿ ಹಾಕಿರುವ ವಿವಿ, ಹೆಚ್ಚುವರಿ ಸಮಯ ನೀಡಿದ್ದರೂ ನಿಗದಿತ ಕಾಲಾವಕಾಶದಲ್ಲಿ ಪ್ರವೇಶ ಪತ್ರ ಡೌನ್​ಲೋಡ್ ಮಾಡಿಕೊಳ್ಳದಿದ್ದರೆ ಕೊನೆ ಘಳಿಗೆಯಲ್ಲಿ ಏನು ಮಾಡಲು ಆಗುವುದಿಲ್ಲ ಎಂದು ಸಮಜಾಯಿಷಿ ನೀಡಿದೆ.

    ಪರೀಕ್ಷಾ ಪ್ರವೇಶ ಪತ್ರವನ್ನು ಮೈಸೂರು ವಿವಿ ವೆಬ್​ಸೈಟ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಗೆ ಸೀಮಿತ ದಿನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ನೆಟ್​ವರ್ಕ್ ಸಮಸ್ಯೆಯ ಕಾರಣ ಕೆಲ ಅಭ್ಯರ್ಥಿಗಳಿಗೆ ಪ್ರವೇಶಪತ್ರ ಪಡೆದುಕೊಳ್ಳಲು ಆಗಿಲ್ಲ. ಈಗ ಪ್ರಯತ್ನಿಸಿದರೆ ಪ್ರವೇಶ ಪತ್ರ ದೊರೆಯುತ್ತಿಲ್ಲ ಎಂದು ಮೈಸೂರಿನ ಕೆ.ಜಿ.ಕೊಪ್ಪಲಿನ ಬಿ.ಗಣೇಶ್ ಅಳಲು ತೋಡಿಕೊಂಡಿದ್ದಾರೆ.

    ಈ ಸಮಸ್ಯೆ ಕುರಿತು ಸಮರ್ಪಕ ಉತ್ತರವೂ ಸಿಗುತ್ತಿಲ್ಲ. ಕೆ-ಸೆಟ್ ಕೇಂದ್ರದ ಕಚೇರಿಗೆ ಕರೆ ಮಾಡಿದರೂ ಯಾರೂ ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ, ಪರೀಕ್ಷೆ ಎದುರಿಸಲು ಸಿದ್ಧರಾಗಿರುವ ಅನೇಕ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಮೈಸೂರು ವಿವಿ ಕುಲಪತಿಯವರು ತುರ್ತಾಗಿ ಅಭ್ಯರ್ಥಿಗಳ ಸಮಸ್ಯೆ ಪರಿಹರಿಸಬೇಕಿದೆ ಎಂದು ನಾಗಮಂಗಲ ಅಭ್ಯರ್ಥಿಯೊಬ್ಬರು ಆಗ್ರಹಿಸಿದ್ದಾರೆ.

    ಹಾಲ್​ಟಿಕೆಟ್ ಆಧಾರದ ಮೇಲೆ ಪ್ರಶ್ನೆಪತ್ರಿಕೆ!: ಡೌನ್​ಲೋಡ್ ಮಾಡಿಕೊಂಡ ಹಾಲ್​ಟಿಕೆಟ್ ಆಧಾರದ ಮೇಲೆ ಪ್ರಶ್ನೆಪತ್ರಿಕೆಗಳ ಸರಿಯಾಗಿ ಹೊಂದಿಸಿ ಬಂಡಲ್ ಸಿದ್ಧಪಡಿಸಿ, ವಿಷಯವಾರು ಜೋಡಿಸಲಾಗುತ್ತದೆ. ಬಂಡಲ್​ಗಳು ಈಗಾಗಲೇ ನೋಡಲ್ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಅಧಿಸೂಚನೆಯಲ್ಲೇ ಸ್ಪಷ್ಟವಾಗಿ ವಿವರಿಸಲಾಗಿದೆ. ಹಾಲ್​ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಕೆ-ಸೆಟ್ ಸಂಯೋಜಕ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.

    ಮುಷ್ಕರದಿಂದ ನಮ್ಮ ಪರೀಕ್ಷೆಗೆ ತೊಂದರೆ ಆಗುವುದಿಲ್ಲ. ಈಗಾಗಲೇ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿವೆ. ಜತೆಗೆ, ಯುಜಿಸಿಯಿಂದ ವೀಕ್ಷಕರು ಈಗಾಗಲೇ ಬಂದಿದ್ದು, ನಿಯೋಜನೆಗೊಂಡ ಅಧ್ಯಾಪಕರು ಕೂಡ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದಾರೆ. ಈ ಹಂತದಲ್ಲಿ ಪರೀಕ್ಷೆಯನ್ನು ಮುಂದೂಡುವ ಪ್ರಮೇಯ ಬರಲ್ಲ. ಹೀಗೆ ಮಾಡಿದರೆ ಕೆಟ್ಟ ಹೆಸರು ಬರಲಿದೆ ಎಂದು ತಿಳಿಸಿದರು.

    83 ಸಾವಿರ ಅಭ್ಯರ್ಥಿಗಳು: ಕೆ-ಸೆಟ್ ಪರೀಕ್ಷೆ ಬರೆಯಲು ಈ ಸಲ 83 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 2020ರ ಸೆಪ್ಟೆಂಬರ್ 27ರಂದು ನಡೆದ ಪರೀಕ್ಷೆಗೆ 1,06,396 ಅಭ್ಯರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ 79,717 ಜನರು ಪರೀಕ್ಷೆಗೆ ಬರೆದಿದ್ದರು. ಇದರಲ್ಲಿ 5,495 ಜನರು ಉತ್ತೀರ್ಣರಾಗಿ ಉಪನ್ಯಾಸರಾಗಲು ಅರ್ಹತೆ ಪಡೆದಿದ್ದರು. ಆದರೆ, ಕಡಿಮೆ ಹಂತದಲ್ಲಿ ಮತ್ತೊಂದು ಪರೀಕ್ಷೆ ನಡೆಸುತ್ತಿರುವುದರಿಂದ ಅಭ್ಯರ್ಥಿಗಳ ಸಂಖ್ಯೆ ಇಳಿಕೆಯಾಗಿದೆ.

    ಮೈಸೂರು, ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ಸೇರಿ ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ಭಾನುವಾರ ಬೆಳಗ್ಗೆ ಸಾಮಾನ್ಯ ಪರೀಕ್ಷೆ ಮತ್ತು ಮಧ್ಯಾಹ್ನ ಐಚ್ಛಿಕ ವಿಷಯಗಳ ಪರೀಕ್ಷೆ ಜರುಗಲಿದೆ. ಯುಜಿಸಿ ಮಾರ್ಗಸೂಚಿಯಂತೆ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಜೀವಶಾಸ್ತ್ರ, ಗಣಿತ ಸೇರಿ ಒಟ್ಟು 41 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.

    ಮುಷ್ಕರದ ತಲೆಬಿಸಿ: ಈ ಪರೀಕ್ಷೆಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಕೆಎಸ್​ಆರ್​ಟಿಸಿ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದು, ಸಾರಿಗೆ ಬಸ್​ಗಳ ಸೇವೆ ಸ್ತಬ್ಧವಾಗಿದೆ. ಖಾಸಗಿ ವಾಹನಗಳನ್ನು ಬಳಸಿಕೊಂಡು ಪ್ರಯಾಣಿಕರ ಬವಣೆ ನೀಗಿಸಲಾಗುತ್ತಿದೆ.

    ಆದರೆ, ಅಸ್ತವ್ಯಸ್ತಗೊಂಡಿರುವ ಬಸ್ ಸಂಚಾರ ವ್ಯವಸ್ಥೆಗೆ ಪೂರ್ಣಪ್ರಮಾಣ ಪರಿಹಾರ ದೊರೆತಿಲ್ಲ. ಅನಿಶ್ಚಿತೆತೆ ಕಾಮೋಡ ಕವಿದಿದ್ದು, ನಿಯಮಿತವಾಗಿ ಎಂದಿನಂತೆ ಬಸ್ ಸೇವೆ ದೊರೆಯುವ ಸ್ಪಷ್ಟತೆ ಸಿಗುತ್ತಿಲ್ಲ. ಬಹಳಷ್ಟು ಮಾರ್ಗದಲ್ಲಿ ಖಾಸಗಿ ಬಸ್​ಗಳೂ ಓಡಾಟ ನಡೆಸುತ್ತಿಲ್ಲ. ಅದಕ್ಕಾಗಿ ಗಂಟೆಗಟ್ಟಲೇ ಕಾಯಬೇಕಿದೆ. ಇಂತಹ ಸಂದರ್ಭದಲ್ಲಿ ವಿವಿಧ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರಬೇಕು. ಅಲ್ಲಿಯಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕಿದೆ. ಆದರೆ, ಸುಗಮ ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಸಮಸ್ಯೆಯಾಗಲಿದೆ ಎಂದು ಕೆಲ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ

    ಇದೇ ರೀತಿಯ ಸಮಸ್ಯೆಯನ್ನು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಎದುರಿಸಿದ್ದಾರೆ. ಉನ್ನತ ಶಿಕ್ಷಣ ಅಭ್ಯಾಸ ಮಾಡುತ್ತಿರುವ ಬಹಳಷ್ಟು ವಿದ್ಯಾರ್ಥಿಗಳು ಕೆ-ಸೆಟ್ ಪರೀಕ್ಷೆಯನ್ನೂ ತೆಗೆದುಕೊಂಡಿದ್ದಾರೆ. ಆದರೆ, ವಿದ್ಯಾರ್ಥಿ ಬಸ್​ಪಾಸ್ ಅನ್ನು ಖಾಸಗಿ ಬಸ್ ನಿರ್ವಾಹಕರು ಮಾನ್ಯ ಮಾಡುವುದಿಲ್ಲ. ಹೀಗಾಗಿ, ಇವರೆಲ್ಲ ಹಣ ನೀಡಿ ಸಂಚರಿಸಬೇಕಾಗುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೊರೆಯಾಗಲಿದೆ. ಆದ್ದರಿಂದ ಹಾಲ್​ಟಿಕೆಟ್ ಸಮಸ್ಯೆ ಮತ್ತು ಮುಷ್ಕರ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಮುಂದೂಡಬೇಕು. ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಬಹಳಷ್ಟು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

    ಕೋಟ್

    *ಹಾಲ್​ಟಿಕೆಟ್ ಡೌನ್​ಲೋಡ್ ಮಾಡಿಕೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಹೆಚ್ಚುವರಿಯಾಗಿ 5 ದಿನಗಳ ಕಾಲಾವಕಾಶ ನೀಡಲಾಗಿತ್ತು. ಕೇಲ ಅಭ್ಯರ್ಥಿಗಳು ಡೌನ್​ಲೋಡ್ ಮಾಡಿಕೊಂಡಿಲ್ಲ. ಅಂತಿಮ ಹಂತದಲ್ಲಿ ಏನು ಮಾಡಲು ಬರುವುದಿಲ್ಲ.

    | ಪ್ರೊ.ಎಚ್. ರಾಜಶೇಖರ್ ಕೆ-ಸೆಟ್ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts