More

    ಪಂಚ್ ಕಾ JOY​ | ನೂತನ ವರ್ಷದ NEWತನ ಎಷ್ಟು ದಿನ? ಎಷ್ಟು ಕಾಲ?

    ಎರಡು ಸಾವಿರದ ಹತ್ತೊಂಬತ್ತು ರಾಜೀನಾಮೆ ಕೊಟ್ಟು ಹೊರಟು ಹೋಯಿತು. ಅದರ ಜಾಗದಲ್ಲಿ ಹೊಸ ವರ್ಷ ಎರಡು ಸಾವಿರದ ಪಂಚ್ ಕಾ JOY​ | ನೂತನ ವರ್ಷದ NEWತನ ಎಷ್ಟು ದಿನ? ಎಷ್ಟು ಕಾಲ?ಇಪ್ಪತ್ತು ಬಂದು ಗಂಭೀರವಾಗಿ ಕುಳಿತಿದೆ. ಗಾಂಭೀರ್ಯ ಯಾಕೆ ಅಂತೀರಾ? ಇಪ್ಪತ್ತು ಅಂದರೆ ಟ್ವೆಂಟಿ. ಟೀನ್ ಏಜಿನ ಹುಡುಗಾಟವೆಲ್ಲ ನೈಂಟೀನ್ ಮುಗಿಯುತ್ತಲೆ ಕಡಿಮೆಯಾಗಬೇಕು. ಈಗಲೂ ವಾಹನಗಳಿಗೆ ಬೆಂಕಿ ಹಚ್ಚುವುದು, ಪೊಲೀಸರಿಗೆ ಕಲ್ಲು ಹೊಡೆಯುವುದು ಮುಂತಾದ ಪುಂಡಾಟ ಮಾಡಿದರೆ ಪುನಃ ಸ್ಟೋನ್ ಏಜಿಗೆ ಮರಳಿದಂತಾಗುತ್ತದೆ. ಹೊಸ ವರ್ಷ ಅಂತ ನಾವು ಹೇಳುತ್ತೇವಾದರೂ ಅದು ವರ್ಷವಿಡೀ ಹೊಸತಾಗಿರುವುದಿಲ್ಲ. ನಾನು ಈ ಲೇಖನವನ್ನು ಹೊಸ ವರ್ಷದ ದಿನವೇ ಬರೆಯುತ್ತಿರುವೆ. ಆದರೆ ನೀವು ಓದುವಾಗ ಹೊಸ ವರ್ಷ ಐದು ದಿನಗಳಷ್ಟು ಹಳತಾಗಿರುತ್ತದೆ. ಹೊಸತು ಅನ್ನುವುದು ತಾತ್ಕಾಲಿಕ. ಕಾಲ ಎಲ್ಲವನ್ನೂ ಹಳೆಯದನ್ನಾಗಿ ಮಾಡುತ್ತದೆ. ಆದರೂ ನಮಗೆ ಹೊಸತು ಅಂದರೆ ಅದೇನೋ ಖುಷಿ, ಸಂಭ್ರಮ. ನಗರದ ಯುವಕ ಯುವತಿಯರಂತೂ ಡಿಸೆಂಬರ್ 31ರ ರಾತ್ರಿ ಹನ್ನೆರಡು ಗಂಟೆಯವರೆಗೂ ನಿದ್ದೆ ಬಿಟ್ಟು ಹೊಸ ವರ್ಷದ ಆಗಮನಕ್ಕೆ ಕಾದಿದ್ದರು. ಹ್ಯಾಪಿ ನ್ಯೂ ಇಯರ್ ಎಂದು ಕೇಳುವವರ ಇಯರ್ ತೂತಾಗುವಂತೆ ಚೀರಾಡಿದ್ದರು. ಕುಡಿದು ತೂರಾಡಿದ್ದರು.

    ಬಹಳಷ್ಟು ಜನರು ಸಿಗರೇಟು ಬಿಡುವುದು, ವಾಕಿಂಗ್ ಶುರು ಮಾಡುವುದು, ಜಿಮ್ಮಿಗೆ ಹೋಗುವುದು ಮುಂತಾದ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಹೊಸ ವರ್ಷ ಬರಲಿ ಎಂದು ಕಾಯುತ್ತಾರೆ. ಹೊಸ ವರ್ಷದಲ್ಲಿ ಮಾಡಿದ ಸಂಕಲ್ಪ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಅನ್ನುವ ನಂಬಿಕೆಯೇ ಇದಕ್ಕೆ ಕಾರಣ. ನಾನು ಹಾಸ್ಯ ಸಾಹಿತಿ ಮತ್ತು ಹಾಸ್ಯ ಭಾಷಣಕಾರನಾಗಿದ್ದರೂ ನಗುವುದು ಕಡಿಮೆ. ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರಂತೆ ಯಾವಾಗಲೂ ಚಿಂತಾಕ್ರಾಂತನಾಗಿ ಕುಳಿತಿರುತ್ತೇನೆ ಎಂಬ ಗಂಭೀರ ಆರೋಪ ನನ್ನ ಮೇಲಿದೆ. ಇದರಿಂದ ಮುಕ್ತನಾಗುವ ಉದ್ದೇಶದಿಂದ ನಾನು ಹೊಸ ವರ್ಷದಲ್ಲಿ ಸದಾನಂದಗೌಡರಂತೆ ಸದಾ ಆನಂದದಿಂದ ನಗುನಗುತ್ತಾ ಇರಬೇಕೆಂಬ ಸಂಕಲ್ಪ ಮಾಡಿದೆ. ಗಂಡ ನಗಬೇಕಾದರೆ ಹೆಂಡತಿಯ ಸಹಕಾರ ಬೇಕಲ್ಲವೆ? ಆದ್ದರಿಂದ ನನ್ನವಳ ಬಳಿ ಪ್ರೀತಿಯಿಂದ ಕಾವ್ಯಮಯವಾಗಿ ಹೀಗೆ ಹೇಳಿದೆ:

    ‘ಬಾ ಪ್ರಿಯೆ!

    ನಗುನಗುತ್ತ ಸ್ವಾಗತಿಸೋಣ

    ಹೊಸವರ್ಷವನ್ನು

    ಮರೆತು ಬಿಡೋಣ ಎಲ್ಲ

    ಹಳೆಯ ಗೋಳು ಅನಿಷ್ಠಗಳನ್ನು’

    ಅವಳೆಂದಳು ‘ಹಾಗೇ ಮಾಡೋಣು

    ಆದರೆ

    ಮರೆಯುವುದು ಹೇಗೆ ನಿನ್ನನ್ನು?’

    ಮಡದಿಯ ಈ ಪ್ರತಿಕ್ರಿಯೆಯಿಂದ ಸದಾ ನಗಬೇಕೆಂಬ ನನ್ನ ಹೊಸ ವರ್ಷದ ಸಂಕಲ್ಪಕ್ಕೆ ಅಲ್ಲೇ ಎಳ್ಳುನೀರು ಬಿಟ್ಟೆ.

    ಹಳೆಯ ಮತ್ತು ಹೊಸ ನೋಟುಗಳಿಗೆ ಮೌಲ್ಯದಲ್ಲಿ ವ್ಯತ್ಯಾಸವಿಲ್ಲದಿದ್ದರೂ ಬ್ಯಾಂಕಿಗೆ ಬರುವ ಎಲ್ಲಾ ಗ್ರಾಹಕರಿಗೂ ಹೊಚ್ಚ ಹೊಸ ಗರಿಗರಿ ನೋಟುಗಳೇ ಬೇಕು. ಈ ವಿಷಯದಲ್ಲಿ ಕ್ಯಾಶ್ ಕೌಂಟರಿನಲ್ಲಿ ಆಗಾಗ ವಾಗ್ವಾದ, ಜಗಳ ನಡೆಯುತ್ತಲೇ ಇರುತ್ತದೆ. ಹೊಸತು ಎಲ್ಲರನ್ನೂ ಆಕರ್ಷಿಸುತ್ತದೆ. ರಸ್ತೆಯಲ್ಲಿ ಹೊಸ ಕಾರು ಹೋಗುತ್ತಿದ್ದರೆ ಅನೇಕರು ಅದರತ್ತ ಒಂದು ಮೆಚ್ಚುಗೆಯ ನೋಟ ಹರಿಸುತ್ತಾರೆ. ಹೊಸ ಬಟ್ಟೆ ಧರಿಸಿಕೊಂಡು ಕಾಲೇಜಿಗೆ ಹೋದಾಗ ಮಿತ್ರರು ಅದನ್ನು ಗುರುತಿಸಿದರೆ ನಮಗೆ ಸಂತೋಷವಾಗುತ್ತದೆ. ನ್ಯೂ ಪಿಂಚ್ ಎಂದು ಜೋರಾಗಿ ಚಿವುಟಿದರೂ ನೋವಾಗುವುದಿಲ್ಲ. ಮನೆಯಲ್ಲಿ ಮದುವೆ ನಿಶ್ಚಯವಾದರೆ ಹಳೆಯ ಗೋಡೆಗಳೆಲ್ಲ ಮೇಕಪ್ ಮಾಡಿಸಿಕೊಂಡು ಹೊಸದರಂತೆ ಕಾಣುತ್ತವೆ. ಹಳೆಯ ಪೀಠೋಪಕರಣಗಳ ಜಾಗದಲ್ಲಿ ಹೊಸತು ಬರುತ್ತದೆ. ನಮಗೆ ಮಾತ್ರವಲ್ಲ ಬಂಧು ಮಿತ್ರರಿಗೆ ಕೊಡಲು ಹೊಸ ಬಟ್ಟೆ ಖರೀದಿಸುತ್ತೇವೆ. ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಒಟ್ಟಿಗೆ ಹೋಗುವಾಗ ಹಲವು ಜೊತೆ ಕಣ್ಣುಗಳು ಅವರನ್ನು ತಿನ್ನುವಂತೆ ನೋಡುತ್ತವೆ. ಅಂದಹಾಗೆ ಮದುವೆಯಾಗಿ ಎಷ್ಟು ಸಮಯದವರೆಗೆ ‘ಹೊಸದಾಗಿ ಮದುವೆಯಾದವರು’ ಅನ್ನಬಹುದು? ಕೆಲವರು ಮಧುಚಂದ್ರ ಮುಗಿಯುವವರೆಗೆ, ಕೆಲವರು ವಿವಾಹವಾಗಿ ಒಂದು ವರ್ಷದತನಕ ತಾವು ಹೊಸ ಮದುಮಕ್ಕಳೆಂದು ಭಾವಿಸುತ್ತಾರೆ. ಇನ್ನು ಕೆಲವು ರಸಿಕ ಶಿಖಾಮಣಿಗಳು

    ಅದೇ ಬೀದಿ ಅದೇ ಮನೆ

    ಆದರೂ ಡಿಛಿನೂತನ

    ಅದೇ ಮಂಚ ಅದೇ ಜೋಡಿ

    ಆದರೂ ರೋಮಾಂಚನ!

    ಎನ್ನುತ್ತ ವಿವಾಹದ ಬೆಳ್ಳಿಹಬ್ಬ ಮುಗಿದರೂ ಹೊಸದಾಗಿ ಮದುವೆಯಾದವರಂತೆ ವರ್ತಿಸುತ್ತಾರೆ. ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿ ತುಂಬ ತಡವಾಗಿ ಮದುವೆಯಾಗುವ ಮದುಮಕ್ಕಳು ಮದುವೆಗೆ ಮುನ್ನವೇ ಮುದಿಮಕ್ಕಳಾಗಿರುತ್ತಾರೆ. ಆದರೂ ಛಾಯಾಗ್ರಾಹಕರ ಒತ್ತಾಯಕ್ಕೆ ಆಪ್ತ, ಆಕರ್ಷಕ ಭಂಗಿಗಳಲ್ಲಿ ಕುಂತು ನಿಂತು ಹೊಸದಾಗಿ ಮದುವೆಯಾದವರ ಪೋಸ್ ಕೊಡಬೇಕಾಗುತ್ತದೆ.

    ಹೊಸ ವರ್ಷ ಬಂದಿದೆ ಎಂದು ಸೂಚಿಸುವುದು ಕಾಲ. ಹೊಸತನ್ನು ಹಳೆಯದನ್ನಾಗಿ ಮಾಡುವವನೂ ಅದೇ ಕಾಲರಾಯ. ನಮ್ಮ ಕಡೆ ‘ಹಳತಾದ್ಯೋ ಹಾಳಾದ್ಯೊ’ ಅನ್ನುವ ಗಾದೆ ಇದೆ. ಉಪಕರಣಗಳು, ಯಂತ್ರಗಳು ಹಳತಾದಾಗ ಅವುಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಬಿಡಿ ಭಾಗಗಳು ಸವೆದು ಹೋಗಿ ಕೊನೆಗೊಂದು ದಿನ ಕೆಟ್ಟು ಕೂರುತ್ತವೆ. ಆಗ ಅವುಗಳನ್ನು ದುರಸ್ತಿ ಮಾಡಿಸಿದರೆ ಸ್ವಲ್ಪ ಕಾಲ ತಳ್ಳಬಹುದು. ಈಚೆಗೆ ನನ್ನ ಹಳೆಯ ಚಪ್ಪಲಿಯ ಉಂಗುಷ್ಠ ಕಿತ್ತು ಹೋಗಿತ್ತು. ಮಾರ್ಕೆಟ್ಟಿಗೆ ಹೋಗುವಾಗ ಅದನ್ನು ರಿಪೇರಿ ಮಾಡಿಸಿಕೊಂಡು ಬರೋಣವೆಂದು ಕಾರಿನಲ್ಲಿ ಇಟ್ಟುಕೊಂಡೆ. ಜೆಪಿ ನಗರದಿಂದ ಬಸವನಗುಡಿಯವರೆಗೆ ದಾರಿಯಲ್ಲಿ ಚಪ್ಪಲಿ ದುರಸ್ತಿ ಮಾಡುವ ಒಂದು ಅಂಗಡಿಯೂ ಕಾಣಲಿಲ್ಲ. ಹಿಂದೆಲ್ಲ ದಾರಿಯುದ್ದಕ್ಕೂ ಅಲ್ಲಲ್ಲಿ ಕುಳಿತಿರುತ್ತಿದ್ದ ಶೂ ಪಾಲಿಷ್ ಮಾಡುವವರು, ಚಪ್ಪಲಿ ಹೊಲಿದು ಕೊಡುವ ಚಮ್ಮಾರರು, ಕೊಡೆ, ಬ್ಯಾಗು ರಿಪೇರಿ ಮಾಡುವವರು ಈಗ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ದೇಶ ಅಭಿವೃದ್ಧಿ ಹೊಂದಿದೆ ಎನ್ನುವುದಕ್ಕೆ ಇದೇ ಪುರಾವೆ ಅನ್ನೋಣವೆ? ಹದಿನೈದು ದಿನಗಳಿಂದ ನಾನು ಹಳೆಯ ಚಪ್ಪಲಿಯನ್ನು ಕಾರಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದುದನ್ನು ಗಮನಿಸಿದ ನನ್ನ ಮಡದಿ ‘ಹ್ವಾಯ್ ನಿಮ್ಗೆ ಮಂಡಿ ಹಾಳಾಯಿತ್ತಾ? ಇಷ್ಟೊಳ್ಳೆ ಕಾರಲ್ಲಿ ಆ ಹಳಿ ಹರ್ಕಟಿ ಮೆಟ್ಟನ್ನ ಇಟ್ಕಂಡು ಮೆರ್ಸುದು ಎಂತಕೆ? ಅದನ್ನ ಬಿಸಾಕಿ ಹೊಸ್ತ್ ತಕಣಿ ಕಾಂಬೊ’ ಅಂದಳು. ಹೀಗಾಗಿ ಹಳತನ್ನು ಬಿಡಲು ಮನಸ್ಸಿಲ್ಲದಿದ್ದರೂ ಅವಳ ಅಪ್ಪಣೆಯಂತೆ ಕೇವಲ ರೂ. 899.99 ಕೊಟ್ಟು ಹೊಸ ಚಪ್ಪಲಿಯನ್ನು ಖರೀದಿಸಿದೆ.

    ಹಾಳಾದ ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಸಿ ಮರಳಿ ಉಪಯೋಗಿಸುವ ಸಂಪ್ರದಾಯ ಈಗ ಮರೆಯಾಗುತ್ತಿದೆ. ಉಪಯೋಗಿಸು ಬಿಸಾಕು ಎನ್ನುವ ಯೂಸ್ ಆಂಡ್ ಥ್ರೋ ಪಾಲಿಸಿ ಜನಪ್ರಿಯವಾಗುತ್ತಿದೆ. ಕೆಲವು ಹಳೆಯ ವಸ್ತುಗಳನ್ನು ಎಸೆಯಲು ಮನಸ್ಸು ಬರುವುದಿಲ್ಲ. ಆಗ ಅವುಗಳನ್ನು ಮಾರಾಟ ಮಾಡುವ ಬಗ್ಗೆ ಯೋಚಿಸಬಹುದು. ನಮ್ಮ ಬಾಲ್ಯದಲ್ಲಿ ಹಳೆಯ ಬಟ್ಟೆಗಳನ್ನು ತೆಗೆದುಕೊಂಡು ಅವುಗಳ ಬದಲಿಗೆ ಹೊಸ ಅಲ್ಯೂಮಿನಿಯಂ ಪಾತ್ರೆಗಳನ್ನು ಕೊಡುವವರು ಮನೆಗೆ ಬರುತ್ತಿದ್ದರು. ವರ್ಷದಲ್ಲಿ ಒಂದೋ ಎರಡೋ ಬಾರಿ ಬರುವ ಅವರನ್ನು ಕಂಡಾಗ ನಮ್ಮೂರ ಹೆಂಗಸರಿಗೆ ಖುಷಿಯೋ ಖುಷಿ. ಈಗ ಹಳೆಯ ವಸ್ತುಗಳನ್ನು ಮಾರಲು ನೆರವಾಗುವ ಹಲವು ಜಾಲತಾಣಗಳಿವೆ. ಮೊಬೈಲ್ ಮೂಲಕ ಮನೆಯಲ್ಲಿರುವ ನಿಮಗೆ ಬೇಡದ ಹಳೆಯ ವಸ್ತುಗಳನ್ನೆಲ್ಲ ಸುಲಭವಾಗಿ ಮಾರಬಹುದು. ಕೆಲವು ವರ್ಷಗಳ ಹಿಂದೆ ಹಳೆಯದನ್ನು ತಂದು ಹೊಸದನ್ನು ಕೊಂಡುಹೋಗಿ ಅನ್ನುವುದು ಮಾರಾಟವನ್ನು ಹೆಚ್ಚಿಸಲು ವ್ಯಾಪಾರಿಗಳು ಹಬ್ಬಗಳ ಸಂದರ್ಭದಲ್ಲಿ ಮಾತ್ರ ಬಳಸುವ ಮಾರಾಟ ತಂತ್ರವಾಗಿತ್ತು. ಈಗ ವಾಹನ ಮತ್ತು ಗೃಹೋಪಯೋಗಿ ವಸ್ತುಗಳನ್ನು ಮಾರುವವರೆಲ್ಲ ನೀವು ಹೊಸದನ್ನು ಖರೀದಿಸುವುದಾದರೆ ಹಳೆಯದನ್ನು ಕೊಳ್ಳಲು ನಾವು ಸದಾ ಸಿದ್ಧ ಅನ್ನುತ್ತಾರೆ.

    ಹಳೆಯದಾಗುವುದು ವಸ್ತುಗಳು ಮಾತ್ರ ಅಲ್ಲ. ಕಾಲನ ಜಾಲದಲ್ಲಿ ಸಿಕ್ಕಿಕೊಂಡಿರುವ ನಾವೂ ಕೂಡಾ ಕ್ಷಣ ಕ್ಷಣಕ್ಕೂ ಹಳತಾಗುತ್ತಾ ಹೋಗುತ್ತೇವೆ. ಅದರ ಲಕ್ಷಣಗಳು ಬೇಡವೆಂದರೂ ಎದ್ದು ಕಾಣುತ್ತವೆ.

    ಯೌವನದಲ್ಲಿ ಹೆಣ್ಣಿನ

    ತುಟಿ ತೊಂಡೆ ಹಣ್ಣು

    ಹಲ್ಲು ದಾಳಿಂಬೆ ಹಣ್ಣು

    ಗಲ್ಲ ಸೇಬು ಹಣ್ಣು

    ವಯಸ್ಸಾದ ಮೇಲೆ

    ತಲೆಗೂದಲು ಹಣ್ಣು!

    ನಮ್ಮ ದೇಹ ನಾನು ಹಳತಾಗುತ್ತಿರುವೆ ಅನ್ನುವ ಸೂಚನೆಯನ್ನು ಹಲವು ರೀತಿಯಲ್ಲಿ ನೀಡುತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ಸಿದ್ಧವಿರುವುದಿಲ್ಲ. ಕೂದಲಿಗೆ ಬಣ್ಣ ಹಚ್ಚುವುದು, ಬೋಳು ತಲೆಯನ್ನು ಮುಚ್ಚಲು ವಿಗ್ ಧರಿಸುವುದು, ಕೂದಲು ಕೃಷಿ ಮಾಡಿಕೊಳ್ಳುವುದು, ಫೇಷಿಯಲ್ ಮೊದಲಾದ ತಂತ್ರಗಳ ಮೂಲಕ ಮದುವೆ ಮನೆಯಲ್ಲಿ ನಾವೂ ಮದುಮಕ್ಕಳಂತೆ ಮಿಂಚಲು ಪ್ರಯತ್ನಿಸುತ್ತೇವೆ. ಇವೆಲ್ಲ ತಾತ್ಕಾಲಿಕ ಉಪಾಯಗಳು. ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಹಳೆಯ ಯಂತ್ರಗಳನ್ನು ರಿಪೇರಿ ಮಾಡಿಸುವ ಹಾಗೆ ವಯಸ್ಸಾದ ದೇಹಕ್ಕೂ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಅಗತ್ಯ. ಇದಕ್ಕಾಗಿ ಗೃಹೋಪಯೋಗಿ ವಸ್ತುಗಳಿಗೆ ಎಎಮ್ ಮಾಡುವಂತೆ ನಮ್ಮ ದೇಹಕ್ಕೆ ವೈದ್ಯಕೀಯ ವಿಮೆ ಮಾಡಿಸಿಕೊಳ್ಳಬೇಕು.

    ಮನಸ್ಸು ಹೊಸದನ್ನು ಬಯಸುವುದು ಸಹಜ. ಹಾಗೆಂದ ಮಾತ್ರಕ್ಕೆ ಹಳತನ್ನು ಸಾರಾಸಗಟಾಗಿ ತಿರಸ್ಕರಿಸುವುದು ಎಷ್ಟು ಸರಿ? ಹಳೆಯದು ಹೊನ್ನು (ಓಲ್ಡ್ ಈಸ್ ಗೋಲ್ಡ್) ಅನ್ನುವ ಹೇಳಿಕೆ ತುಂಬಾ ಹಳೆಯದಾದರೂ ಹಲವು ವಿಷಯಗಳಲ್ಲಿ ಅದು ಈಗಲೂ ನಿಜ. ಹೊಸ ವೈದ್ಯರಿಗಿಂತ ಹಳೆಯ ನರ್ಸೆ ಉತ್ತಮ ಅನ್ನುವ ಮಾತಿದೆ. ಹಳೆಯ ಚಿತ್ರಗೀತೆಗಳ ಸಾಹಿತ್ಯ, ಮಾಧುರ್ಯ ಇಂದಿನವರನ್ನೂ ಆಕರ್ಷಿಸುತ್ತದೆ ಎನ್ನುವುದಕ್ಕೆ ಅವುಗಳ ರಿಮಿಕ್ಸ್ ಬರುತ್ತಿರುವುದೇ ಸಾಕ್ಷಿ. ಹಳೆಯ ನಾಣ್ಯ ಹಾಗೂ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಇರುವವರು ಹಳೆಯದನ್ನು ಎಷ್ಟು ಹಣ ಬೇಕಾದರೂ ಕೊಟ್ಟು ಖರೀದಿಸುತ್ತಾರೆ. ಹಳೆಯ ಫೋಟೋಗಳನ್ನು ನೋಡಿದಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು, ನೆನಪುಗಳನ್ನು ವರ್ಣಿಸಲು ಅಸಾಧ್ಯ. ಅದೆಲ್ಲ ಏಕೆ? ಹೊಸ ವರ್ಷವನ್ನು ಆಚರಿಸಲು ಅನೇಕರು ಕುಡಿಯುವ ವಿಸ್ಕಿ ಹಳೆಯದಾದಷ್ಟೂ ಅದರ ಬೆಲೆ ಹೆಚ್ಚು!

    ಇದೇನು? ನೀವೂ ಸಂಪ್ರದಾಯವಾದಿಗಳಂತೆ ಭೂತಾರಾಧನೆ ಶುರುಮಾಡಿದಿರಾ? ಅಂತ ಗಾಬರಿಯಾಗದಿರಿ. ಹೊಸ ಜೀವನ ಶೈಲಿಯನ್ನು ಸ್ವಾಗತಿಸುವ ಭರದಲ್ಲಿ ಹಳೆಯದರ ಬಗ್ಗೆ, ಹಳಬರ ಬಗ್ಗೆ ಅನಾದರ ಬೇಡ ಅನ್ನುವುದಷ್ಟೆ ನನ್ನ ಕಳಕಳಿ. ಯಾಕೆ? ಅನ್ನುವಿರಾದರೆ ನಾನು ಎಲ್ಲೋ ಓದಿದ ಈ ಹಳೆಯ ಕಿರುಗತೆಯನ್ನು ಓದಿ. ತನ್ನ ಮುದಿ ತಂದೆಯನ್ನು ಸಾಕಲಾಗದೆ ಬೇಸತ್ತ ಮಗ ಒಂದು ದಿನ ಆತನನ್ನು ಬೆಟ್ಟದ ಆಚೆಗಿರುವ ಕಣಿವೆಯಲ್ಲಿ ಬಿಸಾಕಲು ನಿರ್ಧರಿಸಿದ. ತಾತನನ್ನು ಅಪ್ಪ ಬುಟ್ಟಿಯಲ್ಲಿ ಹಾಕಿಕೊಂಡು ಹೋಗುವುದನ್ನು ನೋಡಿದ ಆರು ವರ್ಷದ ಮೊಮ್ಮಗ ತಾನೂ ಬರುತ್ತೇನೆ ಎಂದ. ಬೆಟ್ಟದ ತುದಿಯಿಂದ ಅಪ್ಪ ಮುದುಕನನ್ನು ಬುಟ್ಟಿ ಸಮೇತ ಎಸೆಯಲು ಸಜ್ಜಾದಾಗ ಮೊಮ್ಮಗ ‘ಅಪ್ಪಾ ತಾತನ ಜತೆಗೆ ಬುಟ್ಟಿಯನ್ನು ಬಿಸಾಕ ಬೇಡ’ ಅಂದ. ‘ಯಾಕೆ’ ಎಂಬ ಪ್ರಶ್ನೆಗೆ ಅವನು ಕೊಟ್ಟ ಉತ್ತರ ‘ನೀನು ಮುದುಕನಾದಾಗ ನಿನ್ನನ್ನು ಬಿಸಾಕಲು ಅದು ನನಗೆ ಬೇಕಾಗುತ್ತೆ.’

    ಮುಗಿಸುವ ಮುನ್ನ:

    ಹೊಸದೆನ್ನುವಂತೆ ಸವಿಯೋಣ

    ಬದುಕಿನ ಪ್ರತಿದಿನ, ಪ್ರತಿಕ್ಷಣ

    ಒಂದೇ ದಿನದಲ್ಲಿ

    ಮುಗಿಯದಿರಲಿ

    ನೂತನ ವರ್ಷದ ನ್ಯೂ(ಛಿಡಿ)ತನ!

    (ಲೇಖಕರು ಕವಿ ಹಾಗೂ ನಾಟಕಕಾರರು)

    ಪ್ರತಿಕ್ರಿಯಿಸಿ: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts