More

    ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್​

    | ಸತೀಶ್ ಕಂದಗಲ್​ಪುರ ಬೆಂಗಳೂರು

    ಕುಳಿತುಕೊಳ್ಳುವುದಕ್ಕೆ ಕುರ್ಚಿ ಇಲ್ಲ, ಕುಡಿಯಲು ನೀರಿಲ್ಲ, ಶೌಚಗೃಹವಂತೂ ಇಲ್ಲವೇ ಇಲ್ಲ. ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ಇಟ್ಟಿಲ್ಲ. ಹೋಗಲಿ ಕೆಲಸವನ್ನಾದರೂ ಮಾಡಿಸಿಕೊಳ್ಳೋಣ ಎಂದರೆ ಅಧಿಕಾರಿಗಳೇ ಕೈಗೆ ಸಿಗುತ್ತಿಲ್ಲ. ಕರೊನೋತ್ತರ ಕಾಲದಲ್ಲಿ ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸರ್ವೆಸಾಮಾನ್ಯವಾಗಿರುವ ಸ್ಥಿತಿ ಇದು!

    ರಾಜ್ಯದಲ್ಲಿ ಕರೊನಾ ಸೋಂಕು ಪ್ರಕರಣ ಇಳಿಮುಖವಾಗಿ ಕಾಲೇಜು, ಚಿತ್ರಮಂದಿರ, ಸಾರಿಗೆ ವ್ಯವಸ್ಥೆ, ಶಾಪಿಂಗ್ ಮಾಲ್ ಸಹಿತ ಅನೇಕ ಚಟುವಟಿಕೆಗಳು ಮರು ಆರಂಭಗೊಂಡು ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ ಸರ್ಕಾರಿ ಕಚೇರಿಗಳು ಮಾತ್ರ ಇನ್ನೂ ಲಾಕ್​ಡೌನ್ ಮೂಡ್​ನಿಂದ ಹೊರಬಂದಿಲ್ಲ. ಸರ್ಕಾರಿ ಸೌಲಭ್ಯಕ್ಕಾಗಿ ಪ್ರತಿನಿತ್ಯ ಪರಿತಪಿಸುತ್ತಿರುವ ಜನ ಅಧಿಕಾರಿಗಳನ್ನು ಭೇಟಿ ಮಾಡಲಾಗದೆ, ಮೂಲ ಸೌಕರ್ಯವೂ ಇಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ. ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ಸಂಪೂರ್ಣವಾಗಿ ತೆರವಾಗಿಲ್ಲ. ಸರ್ಕಾರಿ ಸೇವೆ ಪಡೆಯಲು ಹೋಗುವ ಜನರಿಗೆ ಕೋವಿಡ್ ನೆಪದಲ್ಲಿ ಅಧಿಕಾರಿಗಳು ಭೇಟಿ ನಿರಾಕರಿಸುತ್ತಿದ್ದಾರೆ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಆದಾಗ್ಯೂ ಸರ್ಕಾರಿ ಮತ್ತು ಬ್ಯಾಂಕಿಂಗ್ ಕಚೇರಿಗಳಲ್ಲಿ ಕೋವಿಡ್ ನಿಯಮಾವಳಿ ನೆಪದಲ್ಲಿ ಜನರಿಗೆ ಮೂಲಸೌಕರ್ಯ ಸೌಲಭ್ಯ ನಿರಾಕರಿಸಲಾಗುತ್ತಿದೆ.

    ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್​

    ರಾಜ್ಯದಲ್ಲಿ ಕಳೆದ 9 ತಿಂಗಳಿಂದ 8.82 ಲಕ್ಷ ಕರೊನಾ ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ 8.46 ಲಕ್ಷ ಮಂದಿ ಗುಣಮುಖರಾಗುತ್ತಿದ್ದಾರೆ. ಆಗಸ್ಟ್, ಸೆಪ್ಟಂಬರ್​ನಲ್ಲಿ 10 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ವರದಿಯಾಗುತ್ತಿತ್ತು. ಇದೀಗ ಈ ಪ್ರಮಾಣ ಸರಾಸರಿ 2 ಸಾವಿರಕ್ಕೆ ಇಳಿಕೆಯಾಗಿದೆ. ಹೀಗಾಗಿ ಬೇರೆಲ್ಲ ಚಟುವಟಿಕೆ ಆರಂಭವಾಗಿರುವಂತೆ ಸರ್ಕಾರಿ ಕಚೇರಿಗಳ ಸಹ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯ.

    ಡಿಸಿ ಕಚೇರಿ ಅಧ್ವಾನ

    ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೊನಾ ಸೋಂಕಿನ ಭಯದಿಂದ ಸಾರ್ವಜನಿಕರಿಗೆ ಅವಕಾಶವೇ ಇಲ್ಲ. ಒಂದು ವೇಳೆ ಪ್ರಶ್ನೆ ಮಾಡಿ ಕಾವಲು ಸಿಬ್ಬಂದಿ ದಾಟಿಕೊಂಡು ಕಚೇರಿ ಪ್ರವೇಶ ಮಾಡಿದವರಿಗೆ ಅಧಿಕಾರಿ ಭೇಟಿ ಮಾಡುವವರೆಗೆ ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆಯಿಲ್ಲ. ಜಿಲ್ಲಾಧಿಕಾರಿ ಕೊಠಡಿ ಇರುವ ಮಹಡಿ ಮಾತ್ರ ಸ್ವಚ್ಛವಾಗಿದ್ದು, ಉಳಿದೆಲ್ಲ ಕಡೆ ಭೂತ ಬಂಗಲೆಯಂತೆ ಕಾಣುತ್ತಿದೆ. ಮಹಿಳೆಯರ ಶೌಚಗೃಹಗಳು ಬಾಗಿಲು ಹಾಕಿದ್ದು, ಪೇಪರ್, ಪ್ಲಾಸ್ಟಿಕ್ ಬಾಟಲ್, ಕವರ್​ಗಳಂತಹ ಕಸದ ರಾಶಿ ಹಾಕಲಾಗಿದೆ.

    ಎಲ್ಲೆಲ್ಲಿ ಸಮಸ್ಯೆ?

    ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಗಳು, ತಾಲೂಕು, ಜಿಲ್ಲಾಧಿಕಾರಿ ಕಚೇರಿ, ಕಂದಾಯ, ಕಾರ್ವಿುಕ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸಮಸ್ಯೆ ಹೆಚ್ಚಾಗಿದೆ.

    ಕೈಗೆ ಸಿಗದ ಸಿಬ್ಬಂದಿ: ಸರ್ಕಾರಿ ಕಚೇರಿಗಳಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಸಾರ್ವಜನಿಕ ಭೇಟಿಗೆ ಅವಕಾಶ ಎಂದು ಫಲಕ ಹಾಕಲಾಗಿರುತ್ತದೆ. ಆದರೆ, ಬೆಳಗ್ಗೆಯಿಂದ ಕಚೇರಿಯಲ್ಲಿದ್ದು, ಪ್ರಭಾವಿಗಳನ್ನು ಭೇಟಿ ಮಾಡುವ ಅಧಿಕಾರಿಗಳು ಜನಸಾಮಾನ್ಯರ ಭೇಟಿ ವೇಳೆಗೆ ಫೀಲ್ಡ್ ವಿಸಿಟ್, ಕೋವಿಡ್ ಕೆಲಸ ಎಂದು ನೆಪ ಹೇಳಿ ಕಚೇರಿಗಳಿಂದ ಕಾಲ್ಕೀಳುತ್ತಾರೆ. ಇನ್ನೂ ಕೆಲವು ಅಧಿಕಾರಿಗಳು ಕರೊನಾ ಸೋಂಕು, ಕ್ವಾರಂಟೈನ್ ಎಂದು ಸಾಲು-ಸಾಲು ರಜೆ ಪಡೆದು ಮನೆಯಲ್ಲಿರುತ್ತಾರೆ. ಅಧಿಕಾರಿಗಳು ಜನಸಾಮಾನ್ಯರನ್ನು ಭೇಟಿ ಮಾಡದ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ.

    ವೃದ್ಧರು, ಮಹಿಳೆಯರಿಗೆ ನರಕ: ಕರೊನಾ ಬರುವುದಕ್ಕಿಂತ ಮೊದಲು ಕಚೇರಿಗಳ ಲ್ಲಿದ್ದ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಮುಚ್ಚಲಾಗಿದೆ. ಶೌಚಗೃಹಕ್ಕೆ ಬೀಗ ಜಡಿ ಯಲಾಗಿದೆ. ಕೆಲವೆಡೆ ಪುರುಷರ ಶೌಚಗೃಹ ಮಾತ್ರ ತೆರೆದಿವೆ. ಪಿಂಚಣಿ, ಮಾಸಿಕ ವೃದ್ಯಾಪ್ಯ ಮತ್ತು ವಿಧವಾ ವೇತನ ಪಡೆಯಲು ಬ್ಯಾಂಕ್, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಬರುವ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಸೂಕ್ತ ಆಸನ, ಶೌಚಗೃಹ ಸೌಲಭ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಕೋವಿಡ್ ಸುರಕ್ಷತೆಗೆ ಅಧಿಕಾರಿಗಳು ಮಾಡಿಕೊಂಡ ವ್ಯವಸ್ಥೆ, ಸಾರ್ವಜನಿಕರಿಗೆ ಸುರಕ್ಷತೆಗೆ ಇಲ್ಲದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts