More

    ನಾಳೆ ವಿಜಯವಾಣಿ ಪ್ರೀಮಿಯರ್ ಲೀಗ್​ಗೆ ತೆರೆ: 2ನೇ ದಿನದಲ್ಲೂ ರಂಜನೀಯ ಕ್ರೀಡೆಗಳ ಆಕರ್ಷಣೆ

    ಬೆಂಗಳೂರು: ‘ವಿಜಯವಾಣಿ ಪ್ರೀಮಿಯರ್ ಲೀಗ್’ನ(ವಿಪಿಎಲ್) 4ನೇ ಆವೃತ್ತಿಯ ಕ್ರಿಕೆಟ್ ಲೀಗ್‌ನಲ್ಲಿ ಬ್ಯುರೋ ಬ್ರದರ್ಸ್‌ ತಂಡ ಚಾಂಪಿಯನ್ ಆಗಿದೆ.

    ವಿಜಯವಾಣಿ ಹಾಗೂ ದಿಗ್ವಿಜಯ 24*7 ನ್ಯೂಸ್ ಸಹಯೋಗದಲ್ಲಿ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಿಗ್ವಿಜಯ ಡೇರ್‌ಡೆವಿಲ್ಸ್ ತಂಡದ ವಿರುದ್ಧ ಬ್ಯುರೋ ಬ್ರದರ್ಸ್‌, 6.5 ಓವರ್‌ನಲ್ಲಿ 5 ವಿಕೆಟ್‌ಗೆ 46 ರನ್ ಪೇರಿಸಿ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ದಿಗ್ವಿಜಯ ಡೇರ್‌ಡೆವಿಲ್ಸ್ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು. 45 ರನ್ ಗುರಿ ಬೆನ್ನಟ್ಟಿದ ಬ್ಯುರೋ ಬ್ರದರ್ಸ್‌ ತಂಡದ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನದಿಂದ ಸುಲಭವಾಗಿ ಗೆಲುವಿನ ದಡ ಸೇರಿತು. ಉತ್ತಮ ಪ್ರದರ್ಶನ ತೋರಿದ ವಿನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲೀಗ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಒಟ್ಟು 73 ರನ್ ಮತ್ತು ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದು ಹಾಗೂ 4 ಕ್ಯಾಚ್ ಹಿಡಿಯುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದ ಬ್ಯುರೋ ಬ್ರದರ್ಸ್‌ ತಂಡದ ಮನು, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

    ಇದಕ್ಕೂ ಮುನ್ನ ವಿಜಯವಾಣಿ ಸ್ಟಾರ್ಸ್‌ ಹಾಗೂ ಬ್ಯುರೋ ಬ್ರದರ್ಸ್‌ ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ವಿಜಯವಾಣಿ ಸ್ಟಾರ್ಸ್‌, 8 ಓವರ್‌ನಲ್ಲಿ 5 ವಿಕೆಟ್‌ಗೆ 83 ರನ್ ಚಚ್ಚಿತ್ತು. 84 ರನ್ ಟಾರ್ಗೆಟ್ ಪಡೆದು ಬ್ಯುರೋ ಬ್ರದರ್ಸ್‌, 7.1 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತ್ತು. ವೈಯಕ್ತಿಕವಾಗಿ 47 ರನ್ ಬಾರಿಸಿದ ಮನು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಫೈನಲ್ ಪಂದ್ಯ ಬಳಿಕ ಸೆಲೆಬ್ರಿಟಿ ಇಲೆವೆನ್ ಹಾಗೂ ವಿಪಿಎಲ್ ಇಲೆವೆನ್ ನಡುವೆ ಔಪಚಾರಿಕ ಪಂದ್ಯ ನಡೆಯಿತು. ನಟ ಸತೀಶ್ ನೀನಾಶಂ ನೇತೃತ್ವದ ತಂಡವು ವಿಪಿಎಲ್ ಇಲೆವೆನ್ ವಿರುದ್ಧ ಗೆಲುವು ಸಾಧಿಸಿತು. ಮೊದಲ ಬ್ಯಾಟಿಂಗ್ ಆರಂಭಿಸಿದ ವಿಪಿಎಲ್ ಇಲೆವೆನ್, 10 ಓವರ್‌ನಲ್ಲಿ 5 ವಿಕೆಟ್‌ಗೆ 94 ರನ್ ಪೇರಿಸಿತ್ತು. ನಿಗದಿತ ಮೊತ್ತ ಗುರಿ ಪಡೆದ ಸೆಲೆಬ್ರಿಟಿ ಇಲೆವೆನ್, 9 ಓವರ್‌ನಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ವೈಯಕ್ತಿಕವಾಗಿ 40 ರನ್ ಚಚ್ಚಿದ ಹರ್ಷಗೌಡ, ಮ್ಯಾನ್ ಆಫ್​ ದಿ ಮ್ಯಾಚ್ ಪ್ರಶಸ್ತಿ ಪಡೆದರು.

    VPL_Seasons 4 1

    2ನೇ ದಿನವೂ ಸಂಭ್ರಮ ಆಟ:
    ‘ವಿಪಿಎಲ್’ ಕ್ರೀಡೋತ್ಸವದ ಎರಡನೇ ದಿನವಾದ ಶನಿವಾರವೂ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ರಂಜನೀಯ ಕ್ರೀಡೆಗಳು ಸೇರಿ ಕ್ರಿಕೆಟ್ ಲೀಗ್‌ನ ಸಂಭ್ರಮ ಇನ್ನಷ್ಟು ರಂಗು ಪಡೆಯಿತು. ನಟರಾದ ಗಣೇಶ್, ನೀನಾಂಶ ಸತೀಶ್, ನಿರ್ದೇಶಕ ಸಿಂಪಲ್ ಸುನಿಲ್, ಬಿಗ್‌ಬಾಸ್ ಖ್ಯಾತಿಯ ಶಶಿಕುಮಾರ್ ಸೇರಿ ಇತರೆ ತಾರೆಗಳ ಅಕರ್ಷಣೆಯು ವಿಪಿಎಲ್ ಮೆರುಗು ಹೆಚ್ಚಿಸಿತ್ತು. ವಿಆರ್‌ಎಲ್ ಟ್ರಾವೆಲ್ಸ್ ಪ್ರೈವೇಟ್ ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ, ನಟರಾದ ನೀನಾಸಂ ಸತೀಶ್, ಗಣೇಶ್ ವಿಜೇತರಿಗೆ ಹಾಗೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನ ವಿತರಿಸಿದರು.

    VPL_Seasons_4_Day_2_@_BU

    ಮನಸೆಳೆದ ರಂಜನೀಯ ಕ್ರೀಡೆಗಳು:
    ಕ್ರಿಕೆಟ್ ಜತೆಗೆ ಎರಡನೇ ದಿನವೂ ವಿವಿಧ ರಂಜನೀಯ ಪಂದ್ಯಗಳು ಗಮನಸೆಳೆದವು. ಹಿಂದಿನ ದಿನ ಗಿಫ್ಟ್​ ಪಡೆದವರು ಹಾಗೂ ಗಿಫ್ಟ್​ ಪಡೆದುಕೊಂಡಿದ್ದವರು ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಲು, ಗಿಫ್ಟ್​ ಪಡೆಯಲು ರಿಂಗ್‌ನಲ್ಲಿ ಆಟ ಆಡಿದರು. ಕಪ್‌ನಲ್ಲಿ ಬಾಲ್ ಹಾಕುವ ಸ್ಪರ್ಧೆ, ಹಗ್ಗದ ನಡಿಗೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಪಟದ ನಟಿಯ ಹಣೆಗೆ ಬಿಂದಿ ಇಡುವ ಸ್ಪರ್ಧೆ ಮತ್ತು ಸ್ಲೋ ಸೈಕಲ್ ಸ್ಪರ್ಧೆಗಳು ಆಕರ್ಷಣೆಯಾಗಿದ್ದವು. ವಿಜಯವಾಣಿಯ ಎಲ್ಲ ವಿಭಾಗದ ಉದ್ಯೋಗಿಗಳು ಮೈದಾನಕ್ಕೆ ಆಗಮಿಸಿ ಸಹೋದ್ಯೋಗಿಗಳ ಎಲ್ಲ ತಂಡಗಳಿಗೆ ಸ್ಫೂರ್ತಿ ತುಂಬಿದರು. ಮಹಿಳಾ ಉದ್ಯೋಗಿಗಳು ಸಹ ಪಂದ್ಯಗಳಲ್ಲಿ ಪಾಲ್ಗೊಂಡು ಕ್ರೀಡಾಸಕ್ತಿ ಮೆರೆದರು.

    ಬಹುಮಾನ ವಿತರಣೆ:
    ಪಂದಬಂಧ ಸ್ಪರ್ಧೆಯಲ್ಲಿ ವಿಜೇತ ವಿಜಯವಾಣಿ ಸಹಾಯಕ ಸಂಪಾದಕ ರಾಘವೇಂದ್ರ ಗಣಪತಿ, ಬಿಂದಿ ಇಡುವ ಸ್ಪರ್ಧೆಯಲ್ಲಿ ವಿಜಯ್ ಕುಮಾರ್, ಕಾಲಿಗೆ ಹಗ್ಗ ಕಟ್ಟಿ ಓಡುವ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಶೈಲಜಾ, ಪುರುಷರ ವಿಭಾಗದಲ್ಲಿ ಮಂಜುನಾಥ್ ಯಾದವ್ ಮತ್ತು ಶಿವಕುಮಾರ್, ಸ್ಲೋ ಸೈಕಲ್ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಶೈಲಜಾ ಮತ್ತು ಪುರುಷರ ವಿಭಾಗದಲ್ಲಿ ಪವನ್ ಆಚಾರ್ಯ ವಿಜೇತರಾದರು. ನಟ ಗಣೇಶ್ ಈ ಎಲ್ಲ ವಿಜೇತರಿಗೆ ಬಹುಮಾನ ನೀಡಿದರು.

    VPL_Seasons_4_Day_2_

    ವಿಪಿಎಲ್​ಗೆ ಇಂದು ತೆರೆ
    ವಿಪಿಎಲ್ 4ನೇ ಆವೃತ್ತಿಗೆ ಭಾನುವಾರ(ಏ.2) ತೆರೆಬೀಳಲಿದೆ. ಕೃಷ್ಣರಾವ್ ಪಾರ್ಕ್‌ನಲ್ಲಿ ವಿಪಿಎಲ್‌ನ ಮೂರನೇ ದಿನದಾಟ ನಡೆಯಲಿದೆ. ಬ್ಯಾಡ್ಮಿಂಟನ್, ಬಲೂನ್ ಊದುವ ಸ್ಪರ್ಧೆ, ಪಾಸಿಂಗ್ ದ ಬಾಲ್, ಇಡ್ಲಿ ತಿನ್ನುವ ಸ್ಪರ್ಧೆ ಸೇರಿ ವಿವಿಧ ರಂಜನೀಯ ಆಟಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಪಂದ್ಯಾವಳಿ ಮುಗಿಯಲಿವೆ.

    ಕಾರ್ಯದ ಒತ್ತಡದಿಂದ ಹೊರಬರಲು ವರ್ಷಕ್ಕೊಮ್ಮೆ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಕ್ರೀಡೆ ಆಯೋಜಿಸುವುದೇ ಸುಲಭವಲ್ಲ. ವಿಪಿಎಲ್‌ನಲ್ಲಿ ಎಲ್ಲ ಸಿಬ್ಬಂದಿಗೂ ಪ್ರೋತ್ಸಾಹ ನೀಡುವ ಕ್ರೀಡಾ ಸ್ಫೂರ್ತಿ ತುಂಬುವ ಕೆಲಸವನ್ನು ವಿಜಯವಾಣಿ ಮತ್ತು ದಿಗ್ವಿಜಯ ಮಾಡುತ್ತಿರುವುದು ಶ್ಲಾಘನೀಯ. ಇಂಥ ಕೆಲಸಗಳನ್ನು ಮಾಡುವಲ್ಲಿ ಆನಂದ ಸಂಕೇಶ್ವರ್ ಯಾವಾಗಲೂ ಮುಂದೆ ಇರುತ್ತಾರೆ. ಮುಂದಿನ ವರ್ಷದಿಂದ ವಿಜಯವಾಣಿ ಮತ್ತು ದಿಗ್ವಿಜಯದವರು ಮನಸ್ಸು ಮಾಡಿದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಬಹುದು. ವಿಪಿಎಲ್ ಟೂರ್ನಿಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಸುವಂತಾಗಲಿ.
    | ಗಣೇಶ್.ನಟ

    ನಾವೆಲ್ಲರೂ ಮಜಾ ಮಾಡಿಕೊಂಡು ಕ್ರೀಡೆ ಆಡಿದ್ದವು. ಜೀವನದಲ್ಲಿ ಮೊದಲು ತಾಳ್ಮೆ ಇರಬೇಕು. ಈಗಿನ ಲೈಫ್​ ಫಾಸ್ಟ್​ಫುಡ್​ ಇದ್ದಂತೆ. ಕೆಲವರು ಬೇಗ ಹಣ ಮತ್ತು ಹೆಸರು ಮಾಡಬೇಕೆಂದು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ನಾನು ಸಿನಿಮಾ ರಂಗಕ್ಕೆ ಬಂದು ಹಲವು ವರ್ಷ ಕಳೆದಿದೆ. ಜೀವನದಲ್ಲಿ ನಾವು ಕಷ್ಟಪಟ್ಟಿರುವ ಬಗ್ಗೆ ಯಾರಿಗೂ ಬೇಕಿಲ್ಲ. ಏಕೆಂದರೆ, ಬರೀ ನಮ್ಮ ಯಶಸ್ಸು ಮಾತ್ರ ನೋಡುತ್ತಾರೆ. ಹಾಗಾಗಿ, ಜೀವನದಲ್ಲಿ ತಾಳ್ಮೆ ಎಂಬುದು ಮುಖ್ಯವಾಗಿರುತ್ತದೆ.

    | ನೀನಾಂಶ ಸತೀಶ್,ನಟ

    ಮೂರು ದಿನಗಳ ವಿಪಿಎಲ್ ಕ್ರೀಡಾಕೂಟ ಅಂತಿಮ ಘಟ್ಟಕ್ಕೆ ಬಂದಿದೆ. ಕ್ರಿಕೆಟ್ ಸೇರಿ ಎಲ್ಲ ರಂಜನೀಯ ಕ್ರೀಡೆಗಳು ಹೆಚ್ಚು ಆಕರ್ಷಣೆಯಾಗಿದ್ದವು. ನಾವೆಲ್ಲರೂ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದವು. ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಆರೋಗ್ಯ ಸುಧಾರಣೆಗೆ ವ್ಯಾಯಾಮ ಮಾಡಬೇಕು.
    | ಕೆ.ಎನ್.ಚನ್ನೇಗೌಡ. ವಿಜಯವಾಣಿ ಸಂಪಾದಕ.

    ನಾಲ್ಕು ವರ್ಷದಿಂದ ವಿಪಿಎಲ್ ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ. ವರ್ಷಕ್ಕೊಮ್ಮೆ ಎಲ್ಲ ಸಿಬ್ಬಂದಿ ಒಟ್ಟಿಗೆ ಸೇರಿಸಿ ಕ್ರೀಡೆ ಆಡುವುದರಿಂದ ಪರಸ್ಪರ ಸ್ನೇಹ ಮತ್ತು ಬಾಂಧವ್ಯ ಬೆಳೆಯುತ್ತದೆ. ಕೆಲವರು ಅತ್ಯುತ್ತಮವಾಗಿ ಆಟವಾಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಸ್ಲೋ ಸೈಕ್ಲಿಂಗ್ ಕ್ರೀಡೆ ಆಡುವುದಕ್ಕೆ ತುಂಬ ತಾಳ್ಮೆ ಬೇಕು. ಏಕಾಗ್ರತೆ ಮತ್ತು ಸಮತೋಲನ ಇದ್ದರೆ ಈ ಕ್ರೀಡೆಯಲ್ಲಿ ಗೆಲುವುದಕ್ಕೆ ಸಾಧ್ಯವಾಗುತ್ತದೆ.

    | ಶಿವ ಸಂಕೇಶ್ವರ. ನಿರ್ದೇಶಕ, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿ.

    ಸುದ್ದಿಮನೆಯಲ್ಲಿ ಸದಾ ಒತ್ತಡದ ಕೆಲಸಗಳು ಇದ್ದೇ ಇರುತ್ತದೆ. ವರ್ಷಕೊಮ್ಮೆ ಇಂಥ ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಒತ್ತಡ ನಿವಾರಣೆಗೆ ನಮಗೆ ಸಹಕಾರಿ. ಸ್ಲೋ ಸೈಕಲ್ ಕ್ರೀಡೆಯಲ್ಲಿ ತಾಳ್ಮೆ ಇದ್ದರೆ ಖಂಡಿತವಾಗಿ ಗೆಲುವು ಸಾಧಿಸಬಹುದು. ಕ್ರೀಡೆಯಲ್ಲಿ ಸೋಲು,ಗೆಲುವು ಎಂಬುದು ಕಾಮನ್. ಆದರೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳವುದು ಮುಖ್ಯ.
    | ಸಿದ್ದು ಕಾಳೋಜಿ. ದಿಗ್ವಿಜಯ ಸಂಪಾದಕ.

    IPL 2023; ಭಾನುಕ ರಾಜಪಕ್ಸೆ ಅರ್ಧಶತಕ, ಪಂಜಾಬ್​ ಕಿಂಗ್ಸ್​​​ಗೆ 7ರನ್​ ಜಯ

    ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳ: ತಾಪಮಾನ ಏರಿಕೆಯಾದಂತೆ ಜನರಿಗೆ ಕಾಡಲಿದೆ ಈ ಸಮಸ್ಯೆಗಳು

    ಅತ್ತ ಮಾಡಾಳ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಇತ್ತ ಬಿಜೆಪಿ ಕೋರ್​ ಕಮಿಟಿ ಸಭೆ, ಭಾರಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts