

Company Calls: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಮಾರ್ಟ್ಫೋನ್ ಯುಗದಲ್ಲಂತು ನಮ್ಮವರಿಂದ ಬರುವ ಫೋನ್ ಕಾಲ್, ಮೆಸೇಜ್ಗಿಂತಲೂ ಕಂಪನಿ, ಫ್ರಾಡ್ ಕರೆಗಳು, ಮೆಸೇಜ್‌ಗಳು ಬರುವುದೇ ಹೆಚ್ಚು. ಕೆಲವೊಮ್ಮೆ, ನಮ್ಮವರ ಅರ್ಜೆಂಟ್ ಕಾಲ್ಗಳಿಗೆ ತೊಂದರೆ ಮಾಡುವ ಫೇಕ್ ಕಾಲ್ಸ್ಗಳಿಂದ ಅನೇಕರು ಕಿರಿಕಿರಿ ಅನುಭವಿಸುತ್ತಾರೆ. ಅಸಲಿಗೆ, ನಿಮ್ಮ ಫೋನ್ನಲ್ಲೇ ಇರುವ ಸೆಟ್ಟಿಂಗ್ನಿಂದ ನೀವು ಇಂತಹ ಸ್ಪ್ಯಾಮ್ ಅಲರ್ಟ್ಗಳಿಂದ ಫ್ರೀ ಆಗಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಎಐ ಟೆಕ್ನಾಲಜಿ ಬಳಸಿಕೊಂಡು ವಂಚಕರು ಹೊಸ ಹೊಸ ರೀತಿಯಲ್ಲಿ ಜನರನ್ನು ಮೋಸದ ಜಾಲಕ್ಕೆ ಕೆಡವಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಈ ನಿಟ್ಟಿನಲ್ಲಿ, ಅನಗತ್ಯ ಕರೆಗಳು ಮತ್ತು ಮೆಸೇಜ್ಗಳಿಗೆ ಕಡಿವಾಣ ಹಾಕಲೆಂದೇ ಟ್ರೂಕಾಲರ್ನಂತಹ ಆ್ಯಪ್ಗಳು ಕಾಲ್ ಮಾಡುವವರ ಮಾಹಿತಿಯನ್ನು ಬಹಿರಂಗ ಪಡಿಸುತ್ತೆ. ಆದರೂ ಕೆಲವೊಮ್ಮೆ ಫೇಕ್ ಕಾಲ್ಗಳು ಮತ್ತು ಮೆಸೇಜ್‌ಗಳು ಗೊತ್ತೇ ಆಗುವುದಿಲ್ಲ.
ಟ್ರಾಯ್ (TRAI) ಒದಗಿಸಿರುವ ಡು ನಾಟ್ ಡಿಸ್ಟರ್ಬ್ (DND) ಸೇವೆಯನ್ನು ಎಲ್ಲ ಟೆಲಿಕಾಂ ನೆಟ್‌ವರ್ಕ್‌ಗಳ ಗ್ರಾಹಕರು ಈಗ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್ ತೆರೆಯಿರಿ. ಅಲ್ಲಿ START 0 ಎಂದು ಟೈಪ್ ಮಾಡಿ. 1909 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ. ಇಲ್ಲವೇ 1909 ಸಂಖ್ಯೆಗೆ ಕರೆ ಮಾಡಿ, ಐವಿಆರ್ ಸೂಚನೆಗಳನ್ನು ಅನುಸರಿಸಬಹುದು. ಈ ಸೇವೆ ಸಕ್ರಿಯಗೊಳ್ಳಲು ಸುಮಾರು 24 ಗಂಟೆಗಳ ಕಾಲಾವಕಾಶದ ಅಗತ್ಯವಿದೆ.
ಇದಲ್ಲದೆ, ಟ್ರಾಯ್ ಡಿಎನ್‌ಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸ್ಪ್ಯಾಮ್ ಕರೆಗಳ ವಿರುದ್ಧ ನೇರವಾಗಿ ದೂರು ದಾಖಲಿಸಬಹುದು. ದೂರು ಸಲ್ಲಿಸಿದ ಬಳಿಕ ನಿಮಗೆ ರೆಫರೆನ್ಸ್ ನಂಬರ್ ದೊರೆಯಲಿದ್ದು, ಅದರ ಮೂಲಕ ದೂರಿನ ಸ್ಥಿತಿ ಅಂದರೆ ಸ್ಟೇಟಸ್ ಅನ್ನು ಚೆಕ್ ಮಾಡಲು ಅವಕಾಶವಿದೆ.
ಜಿಯೋ ಗ್ರಾಹಕರು MyJio ಆ್ಯಪ್ ಮೂಲಕವೇ ಡಿಎನ್‌ಡಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಮೊದಲು ಈ ಆ್ಯಪ್ ತೆರೆಯಿರಿ. ಬಳಿಕ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ, 'Mobile Settings' ವಿಭಾಗಕ್ಕೆ ಹೋಗಿ. ಅಲ್ಲಿ 'Service Settings' ಆಯ್ಕೆ ಮಾಡಿ, ನಂತರ 'Do Not Disturb' ಮೇಲೆ ಟ್ಯಾಪ್ ಮಾಡಿ. ಇಲ್ಲಿ ನಿಮಗೆ Full DND ಅಥವಾ Partial DND ಆಯ್ಕೆಗಳು ಕಾಣಿಸುತ್ತವೆ. ಅಗತ್ಯಕ್ಕೆ ತಕ್ಕ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ಸೇವೆಯನ್ನು ಆ್ಯಕ್ಟೀವ್ ಮಾಡಿ.
ಏರ್‌ಟೆಲ್ ಬಳಕೆದಾರರು ತಮ್ಮ ಫೋನ್‌ನಲ್ಲಿ Airtel Thanks ಆ್ಯಪ್ ತೆರೆಯಬೇಕು. ಬಳಿಕ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ವಿಭಾಗವನ್ನು ಆಯ್ಕೆ ಮಾಡಿ, ಅದರಲ್ಲಿರುವ 'Set DND' ಆಯ್ಕೆಗೆ ಹೋಗಿ. ನಂತರ 'Manage' ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ ಡಿಎನ್‌ಡಿ ಆಯ್ಕೆಯನ್ನು ಆರಿಸಿ 'Submit' ಬಟನ್ ಒತ್ತಿದರೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ವೊಡಾಫೋನ್ ಐಡಿಯಾ (Vi) ಗ್ರಾಹಕರು Vi ಆ್ಯಪ್‌ನ 'My Account' ವಿಭಾಗಕ್ಕೆ ಹೋಗಬೇಕು. ಅಲ್ಲಿ 'Find Services' ಅಡಿಯಲ್ಲಿ ಕಾಣಿಸುವ DND ಆಯ್ಕೆಯನ್ನು ಆರಿಸಿಕೊಳ್ಳಿ. ಬಳಿಕ Full DND ಅಥವಾ Partial DND ಆಯ್ಕೆ ಮಾಡಿ ಸಲ್ಲಿಸಿ. ಇನ್ನು ಬಿಎಸ್‌ಎನ್‌ಎಲ್ ಗ್ರಾಹಕರು, ಎಸ್‌ಎಂಎಸ್ ಅಥವಾ ಕರೆ ಮೂಲಕ ಡಿಎನ್‌ಡಿ ಸೇವೆ ಸಕ್ರಿಯಗೊಳಿಸಬಹುದು. ಇದಕ್ಕಾಗಿ 1909 ಸಂಖ್ಯೆಗೆ START 0 ಎಂದು ಮೆಸೇಜ್ ಕಳುಹಿಸಬಹುದು. ಇಲ್ಲವೇ 1909ಕ್ಕೆ ಕರೆ ಮಾಡಿ ಐವಿಆರ್ ಸೂಚನೆಗಳನ್ನು ಅನುಸರಿಸಬಹುದು,(ಏಜೆನ್ಸೀಸ್).