More

    ಜರೂರ್ ಮಾತು ಅಂಕಣ: ಸಣ್ಣ ಸ್ಪಂದನೆಯೂ ದೊಡ್ಡ ಬದಲಾವಣೆ ತರಬಲ್ಲದು!

    ಪ್ರಪಂಚದಲ್ಲಿ ಸಮಸ್ಯೆಗಳಿಗೆ ಕೊನೆ ಎಂಬುದೇ ಇಲ್ಲ. ಎಲ್ಲಿ ನೋಡಿದರೂ ಸಮಸ್ಯೆಗಳ ಬೃಹತ್ ಪಟ್ಟಿಯೇ. ಆದರೆ, ಏಕೆ ಹೀಗಾಗುತ್ತಿದೆ ಎಂದು ಎಂದಾದರೂ ಯೋಚಿಸಿದ್ದೇವೆಯೇ? ದೂರುವವರ, ಸಮಸ್ಯೆಗಳ ಬಗ್ಗೆ ರ್ಚಚಿಸುವವರ ಸಂಖ್ಯೆಯೇ ಜಾಸ್ತಿಯಾಗುತ್ತಿದ್ದು, ಸ್ಪಂದಿಸುವವರು ಕಡಿಮೆಯಾಗುತ್ತಿದ್ದಾರೆ. ಎಷ್ಟೋ ಜನರು ‘ನಾನೊಬ್ಬನೇ ಶ್ರಮಿಸಿದರೆ ಈ ಸಮಾಜ ಉದ್ಧಾರ ಆಗಿಬಿಡುತ್ತ?’ ಎಂಬ ಸಬೂಬು ನೀಡುತ್ತ ದೂರವುಳಿದು ಬಿಡುತ್ತಾರೆ. ಇಡೀ ಜರೂರ್ ಮಾತು ಅಂಕಣ: ಸಣ್ಣ ಸ್ಪಂದನೆಯೂ ದೊಡ್ಡ ಬದಲಾವಣೆ ತರಬಲ್ಲದು!ಸಮಾಜವನ್ನು ಉತ್ಕರ್ಷಕ್ಕೇರಿಸಲು ಸಾಧ್ಯವಾಗದಿದ್ದರೂ ಒಬ್ಬ ನೊಂದವರ, ದುಃಖಿತರ, ಕಷ್ಟದಲ್ಲಿ ಇರುವವರ ಕಣ್ಣೀರು ಒರೆಸಿದರೂ ಸಾಕು; ಮಾನವ ಕಲ್ಯಾಣದ ಹಾದಿಯಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಿಸಿದಂತೆಯೇ. ಇದಕ್ಕೆಲ್ಲ ಹಣವೇ ಬೇಕು ಅಂತಲ್ಲ. ಒಂದಿಷ್ಟು ದಯೆ, ಕರುಣೆ, ಮಾನವೀಯ ಸಂವೇದನೆ ಇದ್ದರೆ ಅಂತಃಕರಣದ ಬಲದಿಂದ ಅದ್ಭುತವಾದದ್ದನ್ನೇ ಸಾಧಿಸಬಹುದು. ಕೆಲ ಸಮಸ್ಯೆಗಳಿಗಾದರೂ ಮದ್ದರೆಯುತ್ತ ಆತ್ಮಸಂತೃಪ್ತಿ ನಮ್ಮದಾಗಿಸಿಕೊಳ್ಳಬಹುದು.

    ‘ಆನೆಯು ದೊಡ್ಡದಾದ ಗಾತ್ರವನ್ನು ಹೊಂದಿದೆ. ಆದರೂ ಅದು ಸಣ್ಣ ಅಂಕುಶಕ್ಕೆ ವಶವಾಗುತ್ತದೆ. ಅಂಕುಶವೇನು ಆನೆಯಷ್ಟು ದೊಡ್ಡದೆ? ದೀಪವನ್ನು ಹಚ್ಚಿದರೆ ಕತ್ತಲೆಯು ನಾಶವಾಗುತ್ತದೆ. ಕತ್ತಲೆಯೇನು ದೀಪದಷ್ಟೇ ಇರುತ್ತದೆಯೇ? ವಜ್ರಾಯುಧದಿಂದ ಪರ್ವತಗಳೇ ಮುರಿದು ಬೀಳುತ್ತವೆ. ಪರ್ವತಗಳೇನು ವಜ್ರಾಯುಧದಷ್ಟು ಚಿಕ್ಕವೇ?’-ಎಂದು ಕೇಳಿದ್ದಾನೆ ಆಚಾರ್ಯ ಚಾಣಕ್ಯ. ಹಾಗೇ ಸಮಸ್ಯೆ ಎಷ್ಟೇ ದೊಡ್ಡದಾಗಿದ್ದರೂ ಸಣ್ಣ ಸ್ಪಂದನೆಯ ಹಾದಿಯೂ ದೊಡ್ಡ ಪರಿಣಾಮ ಬೀರಿ, ಆ ಸಮಸ್ಯೆಯನ್ನೇ ಸೋಲಿಸಬಲ್ಲದು. ‘ದಾನ ಮಾಡುವುದರಲ್ಲಿ, ತಪಸ್ಸಿನಲ್ಲಿ, ಶೌರ್ಯದಲ್ಲಿ, ವಿಶೇಷವಾದ ಜ್ಞಾನದಲ್ಲಿ, ವಿನಯಶೀಲತೆಯಲ್ಲಿ, ನೀತಿಶಾಸ್ತ್ರ ಪಾಂಡಿತ್ಯದಲ್ಲಿ ಆಶ್ಚರ್ಯ ಪಡುವಂಥದು ಏನೂ ಇಲ್ಲ. ಭೂಮಿತಾಯಿಯು ಅಂತಹ ಅನೇಕ ರತ್ನಪ್ರಾಯರಾದ ವ್ಯಕ್ತಿಗಳಿಂದ ಕಂಗೊಳಿಸುತ್ತಿದ್ದಾಳೆ’ ಎಂದಿರುವ ಚಾಣಕ್ಯ ನಮ್ಮ ದೇಶ ಬೇಡುವ ಕೈಯಲ್ಲ, ನೀಡುವ ಕೈ ಎಂದು ತುಂಬ ಹಿಂದೆಯೇ ಹೇಳಿದ್ದಾನೆ.

    ಕೆಲವರು ಸಾಧನೆಯ ಎತ್ತರಕ್ಕೆ ಏರುತ್ತಾರೆ ಮತ್ತು ಆ ಯಶಸ್ಸನ್ನು ನಿರ್ವಹಿಸುವ ಭರದಲ್ಲೇ ಅಹಂನ ಕೋಟೆಯಲ್ಲಿ ಬಂಧಿತರಾಗುತ್ತಾರೆ. ಮತ್ತೊಂದು ಸಾಧಕವರ್ಗ. ಅವರು ಸಾಧನೆಯ ಎತ್ತರಕ್ಕೆ ಏರಿದರೂ, ಉಳಿದವರನ್ನು ಅದೇ ಎತ್ತರಕ್ಕೆ ತರಲು ಶ್ರಮಿಸುತ್ತಾರೆ. ಸಮಾಜದಿಂದ ಪಡೆದುದ್ದನ್ನು, ಸಮಾಜಕ್ಕೆ ಮತ್ತೆ ಅರ್ಪಿಸಬೇಕು ಎಂಬ ಕಾಳಜಿಯಿಂದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಪೈಕಿ ಇತ್ತೀಚಿನ ದಿನಗಳಲ್ಲಿ ಗಮನ ಸೆಳೆಯುತ್ತಿರುವ, ಮಾದರಿ ಕಾರ್ಯಗಳಿಂದಲೇ ಇತರರಲ್ಲೂ ಪ್ರೇರಣೆ ತುಂಬುತ್ತಿರುವ ಸ್ಪೂರ್ತಿಚಿಲುಮೆ ಪ್ರಣಿತಾ ಸುಭಾಷ್.

    ಚಿತ್ರರಂಗ ಪ್ರವೇಶಿಸಿ ಒಂದು ದಶಕ ಪೂರೈಸಿರುವ ಪ್ರಣಿತಾ ಸ್ಯಾಂಡಲ್​ವುಡ್, ಟಾಲಿವುಡ್ ನಂತರ ಬಾಲಿವುಡ್​ಗೂ ಭರ್ಜರಿ ಎಂಟ್ರಿ ಪಡೆದಿದ್ದಾರೆ. 2010ರಲ್ಲಿ ಕನ್ನಡ ಚಿತ್ರ ‘ಪೊರ್ಕಿ’ಯಿಂದ ಸಿನಿಪಯಣ ಆರಂಭಿಸಿದ ಅವರು ಈವರೆಗೆ 20ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ‘ಹಂಗಾಮಾ-2’, ‘ಭುಜ್-ದ ಪ್ರೖೆಡ್ ಆಫ್ ಇಂಡಿಯಾ’, ‘ರಾಮನ ಅವತಾರ’ ಚಿತ್ರಗಳು ಮುಂಬರುವ ದಿನಗಳಲ್ಲಿ ಬಿಡುಗಡೆ ಆಗಲಿವೆ. ಹತ್ತಾರು ಯೋಜನೆಗಳು, ಹಲವು ಭಾಷೆಗಳ ಚಿತ್ರಗಳು, ಶೂಟಿಂಗ್​ನ ಗಡಿಬಿಡಿ-ಇದೆಲ್ಲದರ ನಡುವೆಯೂ ಪ್ರಣಿತಾ ಸಮಾಜದ ಬಗೆಗಿನ ಬದ್ಧತೆ ಮರೆತಿಲ್ಲ. ಸಾಮಾಜಿಕ ಕಾರ್ಯಕರ್ತರಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರವಾದಿ ವಿಚಾರಗಳ ದನಿಯಾಗಿ, ಉತ್ತಮ ವಾಗ್ಮಿಯಾಗಿ, ಪ್ರಮುಖ ವಿಚಾರಗಳ ಬಗ್ಗೆ ಅರಿವು ಮೂಡಿಸುವ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಣಿತಾ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅವರು ಸರ್ಕಾರಿ ಶಾಲೆಗಳಿಗೆ ಹೋಗಿ ಬೆಂಚಿನ ಮೇಲೆ ಕೂತು, ಮಕ್ಕಳಲ್ಲಿ ಒಂದಾಗಿ ಅವರ ಸಮಸ್ಯೆ, ಆಸಕ್ತಿಗಳಿಗೆ ಕಿವಿಯಾಗುತ್ತಾರೆ. ಕೊಳೆಗೇರಿ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು, ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಅಲ್ಲಿನ ಮುಗ್ಧ ಮನಸುಗಳಿಗೆ ಕಾಳಜಿ, ಪ್ರೀತಿ ಹಂಚುತ್ತಾರೆ.

    ಸೆಲೆಬ್ರಿಟಿಗಳಾದವರು ಜನಸಾಮಾನ್ಯರ ಕೈಗೆ ಎಟಕುವುದಿಲ್ಲ; ತಮ್ಮದೇ ಲೋಕದಲ್ಲಿ ಇರುತ್ತಾರೆ ಎಂಬ ಗ್ರಹಿಕೆ ಸಾಮಾನ್ಯವಾದದ್ದು. ಆದರೆ, ಪ್ರಣಿತಾ ಬಡವರ ಮುಖದಲ್ಲಿ ನಗು ಅರಳಿಸಲೆಂದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಾರೆ. ಪ್ರಣಿತಾರ ತಂದೆ-ತಾಯಿ ಇಬ್ಬರೂ ಬೆಂಗಳೂರಿನಲ್ಲಿ ವೈದ್ಯರು. ಜತೆಗೆ ಸಾಮಾಜಿಕ ಕಳಕಳಿಯುಳ್ಳವರು. ಹಾಗಾಗಿ, ಬಾಲ್ಯದಿಂದಲೇ ಪ್ರಣಿತಾ ಮೇಲೆ ಆ ಸಂಸ್ಕಾರಗಳ ಗಾಢಪ್ರಭಾವವಿದೆ. ಅಪ್ಪ-ಅಮ್ಮ ತಿಂಗಳಿಗೊಮ್ಮೆ ರಕ್ತದಾನ ಶಿಬಿರ ಹಮ್ಮಿಕೊಂಡಾಗ ಮಗಳನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ರಕ್ತದ ಅವಶ್ಯಕತೆ, ರೋಗಿಗಳ ಸಂಕಟ, ಅದರಲ್ಲೂ ಬಡರೋಗಿಗಳ ಪರದಾಟವನ್ನೆಲ್ಲ ಹತ್ತಿರದಿಂದ ಕಂಡ ಪ್ರಣಿತಾ ತನ್ನಿಂದ ಸಾಧ್ಯವಾದಷ್ಟು ನೆರವು ನೀಡಬೇಕು, ಒಂದಿಷ್ಟು ಜನರ ದುಃಖ ಕಡಿಮೆ ಮಾಡಬೇಕು ಎಂದು ಸಂಕಲ್ಪಿಸಿಕೊಂಡರು. ವೃತ್ತಿಜೀವನದಲ್ಲಿ ಯಶಸ್ಸು ಸಿಕ್ಕ ಬಳಿಕ ಆ ಬದ್ಧತೆಯನ್ನು ಮರೆಯದೆ ‘ಪ್ರಣಿತಾ ಫೌಂಡೇಷನ್’ ಸ್ಥಾಪಿಸಿದರು. ಈ ಫೌಂಡೇಷನ್ (ಕ್ಟಚ್ಞಜಿಠಿಜಚ ಊಟ್ಠ್ಞಚಠಿಜಿಟ್ಞ) ಹಲವು ಕ್ಷೇತ್ರ ಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮುಖ್ಯವಾಗಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವುದು.

    ‘ಸರ್ಕಾರಿ ಶಾಲೆಗಳು ಉಚಿತ ಶಿಕ್ಷಣ ನೀಡುತ್ತಿರುವುದು ಪ್ರಶಂಸಾರ್ಹ ಸಂಗತಿ. ನಮ್ಮಲ್ಲಿ ಬಡತನದ ಪ್ರಮಾಣ ಹೆಚ್ಚಿದೆ. ಹಾಗಾಗಿ, ಸರ್ಕಾರಿ ಶಾಲೆಗಳು ಬಲಗೊಳ್ಳಬೇಕು. ಮುಖ್ಯವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ಅಂತರ ಕಡಿಮೆ ಆಗಬೇಕು’ ಎನ್ನುವ ಪ್ರಣಿತಾ, ಹಾಸನ ಜಿಲ್ಲೆಯ ಶಾಂತಿಗ್ರಾಮ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ಆ ಮೂಲಕ ಶಾಲೆಯನ್ನು ಎಲ್ಲ ಆಯಾಮಗಳಲ್ಲೂ ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಪರಿಣಾಮ, ಒಂದೇ ವರ್ಷದಲ್ಲಿ ಮಕ್ಕಳ ಸಂಖ್ಯೆ 26ರಿಂದ 80ಕ್ಕೆ ಹೆಚ್ಚಿದೆ. ಅಲ್ಲದೆ, ಹಾಸನ ಮತ್ತು ಬೆಂಗಳೂರು ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮೂಲಸೌಕರ್ಯವಿರದೆ ಅಂದಗೆಟ್ಟಿದ್ದ ಶಾಲೆಗಳಲ್ಲಿ ಕ್ರಿಯೇಟಿವ್ ಪೇಂಟಿಂಗ್ ಮಾಡಿಸಿ, ಅತ್ಯಾಕರ್ಷಕಗೊಳಿಸಿದ್ದಾರೆ. ಶೌಚಗೃಹ ಸೌಲಭ್ಯ ಇಲ್ಲದ್ದರಿಂದ ಎಷ್ಟೋ ಕಡೆ ಬಾಲಕಿಯರು ಶಾಲೆಗೆ ಬರುತ್ತಿರಲಿಲ್ಲ ಅಥವಾ ಮಧ್ಯದಲ್ಲೇ ಶಾಲೆಯನ್ನು ಬಿಡುತ್ತಿದ್ದರು. ಇಂಥ ಹಲವು ಶಾಲೆಗಳನ್ನು ಗುರುತಿಸಿ, ಫೌಂಡೇಷನ್ ವತಿಯಿಂದ ಶೌಚಗೃಹ ನಿರ್ವಿುಸಲಾಗಿದೆ. ಆ ಬಳಿಕ ಬಾಲಕಿಯರ ಪ್ರವೇಶ ಸಂಖ್ಯೆಯೂ ಹೆಚ್ಚಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ಇಂಗ್ಲಿಷ್ ಶಿಕ್ಷಕರ ಕೊರತೆಯಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯತ್ತಿರುವುದನ್ನು ಕಂಡು, ಇಂಗ್ಲಿಷ್ ಶಿಕ್ಷಕರನ್ನು ಒದಗಿಸಿದ್ದಾರೆ. ವಿಜ್ಞಾನ ಪ್ರಯೋಗಾಲಯಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದರಿಂದ ಮಕ್ಕಳು, ಶಿಕ್ಷಕರು, ಪಾಲಕರು, ಗ್ರಾಮಸ್ಥರಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಹುಮ್ಮಸ್ಸು ಕೂಡ ಗರಿಗೆದರಿದೆ. ‘ಆ ಮಕ್ಕಳ ಮುಖದಲ್ಲಿ ಆತ್ಮವಿಶ್ವಾಸದ ನಗು ನೋಡುವುದೇ ದೊಡ್ಡ ಖುಷಿ, ಸಾರ್ಥಕತೆ’ ಎನ್ನುವ ಪ್ರಣಿತಾ, ಸಮಯ ಸಿಕ್ಕಾಗಲೆಲ್ಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಾರೆ.

    ಕೋವಿಡ್ ಅವಧಿಯ ಲಾಕ್​ಡೌನ್ ಎಷ್ಟೆಲ್ಲ ಸಮಸ್ಯೆಗಳನ್ನು ತಂದೊಡ್ಡಿತು ಎಂಬುದು ಗೊತ್ತಿರುವಂಥದ್ದೇ. ದುಡಿಮೆಯೇ ನಿಂತುಹೋಗಿದ್ದರಿಂದ ಬದುಕಿನ ಬಂಡಿ ಸ್ತಬ್ಧವಾಗಿದ್ದರ ಪರಿಣಾಮ ಘೋರ. ಚಿತ್ರರಂಗದಲ್ಲಿ ದುಡಿಯುವ ದಿನಗೂಲಿ ಕಾರ್ವಿುಕರು ಕಷ್ಟ ಹೇಳಿಕೊಂಡಾಗ, ಅದಕ್ಕೆ ಸ್ಪಂದಿಸಿ ನೆರವು ನೀಡಿದ ಪ್ರಣಿತಾ, ಈ ಯೋಜನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದರು. ಕ್ರೌಡ್ ಫಂಡಿಂಗ್ ಮೂಲಕ 18-20 ಲಕ ್ಷ ರೂ. ಸಂಗ್ರಹವಾಯಿತು. ಪೌರ ಕಾರ್ವಿುಕರು, ಆಟೋ ಚಾಲಕರು ಸೇರಿ ಕಡುಬಡವರ 500 ಕುಟುಂಬಗಳನ್ನು ಗುರುತಿಸಿ, ಅವರ ಜೀವನಾಧಾರಕ್ಕೆ ತಿಂಗಳಿಗೆ 2 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೇ ವರ್ಗಾಯಿಸಿದರು. ಆ ಹೊತ್ತಲ್ಲಿ ಎಷ್ಟೋ ಜನರು ಅರೆಹೊಟ್ಟೆ ಮಲಗುತ್ತಿದ್ದಾರೆ ಎಂಬುದನ್ನು ಮನಗಂಡು, ಊಟ ಒದಗಿಸುವ ಯೋಜನೆಗೆ ಚಾಲನೆ ನೀಡಿದರು. ಇದಕ್ಕಾಗಿ ಕಮ್ಯುನಿಟಿ ಕಿಚನ್ ಸ್ಥಾಪಿಸಿದರು. ಅಡುಗೆ ತಯಾರಿ, ಶುಚಿತ್ವ, ಪೌಷ್ಟಿಕಾಂಶ, ಊಟದ ವಿತರಣೆ- ಹೀಗೆ ಇಡೀ ಪ್ರಕ್ರಿಯೆಯನ್ನು ಪ್ರಣಿತಾ ನಿರ್ವಹಿಸಿದರು. ಅವರ ಯುವಪಡೆಯೊಂದಿಗೆ ಸೇರಿಕೊಂಡು 21 ದಿನಗಳಲ್ಲೇ (ಮೊದಲ ಲಾಕ್​ಡೌನ್ ಅವಧಿ) 75 ಸಾವಿರ ಊಟಗಳನ್ನು ಒದಗಿಸಿದರು, ನಂತರದ ದಿನಗಳಲ್ಲಿ ಆಹಾರಧಾನ್ಯಗಳ ನೂರಾರು ಕಿಟ್​ಗಳನ್ನು ಒದಗಿಸಿದರು. ಆಟೋ ಚಾಲಕರಿಗೆ ಸ್ಯಾನಿಟೈಸರ್, ಪೊಲೀಸ್ ಠಾಣೆ, ಮೆಟ್ರೋ ನಿಲ್ದಾಣ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸ್ಟಾ್ಯಂಡ್ ವ್ಯವಸ್ಥೆ ಮಾಡಿಸಿದರು.

    ‘ಕೋವಿಡ್​ನ ಲಾಕ್​ಡೌನ್ ಅವಧಿ ಮರೆಯಲಾರದಂಥ ಪಾಠಗಳನ್ನು ಕಲಿಸಿತು’ ಎನ್ನುವ ಪ್ರಣಿತಾ, ಪ್ರತಿಯೊಂದು ಸಾಮಾಜಿಕ ಕಾರ್ಯದಲ್ಲೂ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಾರೆ. ಆ ದುಃಖ, ನೋವು ಕಂಡು ಅದು ತನ್ನದೇ ಜಗತ್ತು ಎಂದು ಭಾವಿಸಿ, ಸಾಂತ್ವನ ತುಂಬುತ್ತಾರೆ, ಒಂದಿಷ್ಟು ನಲಿವು ಹಂಚುತ್ತಾರೆ.

    ‘ಖ್ಯಾತ ನಟಿಯಾಗಿರುವ ನಿಮಗೆ ಇದೆಲ್ಲ ಯಾಕೆ ಬೇಕು?’ ಅಂತ ಯಾರೂ ಪ್ರಶ್ನೆ ಮಾಡಿ ಕಿಚಾಯಿಸಿಲ್ಲವೇ, ಎಂದು ಕೇಳಿದಾಗ, ‘ಹೌದು, ಸಮಾಜಸೇವೆ ಎಂದರೆ ಯಾವುದಾದರೂ ಒಂದು ‘ಉದ್ದೇಶ’ ಇಟ್ಟುಕೊಂಡೇ ಮಾಡುತ್ತಾರೆ ಎಂಬ ಭಾವನೆ ತುಂಬ ಜನರಲ್ಲಿದೆ. ಅದು ಬಹಳ ವಿಚಿತ್ರವೆನಿಸುತ್ತದೆ. ಸಮಾಜಕಾರ್ಯಕ್ಕೆ ಸಂಬಂಧಿಸಿದ ಪೋಸ್ಟ್​ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದಾಗ ಕೆಲವರು ‘ಇದೆಲ್ಲ ಏಕೆ?’ ಎಂದು ಪ್ರಶ್ನಿಸಿದ್ದಾರೆ. ಆದರೆ, ಸಮಾಜದಿಂದ ತುಂಬ ಪಡೆದುಕೊಂಡಿರುವ ನಾವು ಕೊಂಚವಾದರೂ ವಾಪಸ್ ಕೊಡಬೇಕು’ ಎಂದಾಗ ಅವರ ಮುಖದಲ್ಲಿ ಚೆಂದದ ನಗುವಿನ ಜತೆ, ಖಚಿತತೆಯೂ ಮಿಳಿತವಾಗಿತ್ತು.

    ಹೊರರಾಜ್ಯಗಳಲ್ಲೂ ಸೇವಾ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಪ್ರಣಿತಾ ಇಂಥ ಸಾಮಾಜಿಕ ಕಳಕಳಿಯ ಕಥಾಹಂದರದ ಚಿತ್ರದಲ್ಲಿ ನಟಿಸಲೂ ಆಸಕ್ತಿ ಹೊಂದಿದ್ದಾರೆ. ‘ತಂದೆ-ತಾಯಿಗೆ ನನ್ನ ನಟನೆಗಿಂತ, ಸಮಾಜಮುಖಿ ಕಾರ್ಯಗಳೇ ಹೆಚ್ಚು ಖುಷಿ ಕೊಡುತ್ತವೆ. ಫೌಂಡೇಷನ್ ವತಿಯಿಂದ ಮತ್ತಷ್ಟು ರಚನಾತ್ಮಕ ಕಾರ್ಯಗಳನ್ನು ಮುಂದುವರಿಸಲಾಗುವುದು’ ಎನ್ನುವ ಪ್ರಣಿತಾ ಯುವಮನಸ್ಸುಗಳನ್ನು ಸೇವಾಕಾರ್ಯಗಳತ್ತ ಕರೆದೊಯ್ಯುತ್ತಿದ್ದಾರೆ.

    ಹೃದಯದೊಳಗೆ ಪ್ರೀತಿ ತುಂಬಿಕೊಂಡು, ಅದನ್ನು ಹಂಚುತ್ತ ಸಾಗಿದರೆ ನೋವಿನ ಗಾಯಗಳೆಲ್ಲ ಮಾಯವಾಗಬಲ್ಲವು. ನಮ್ಮ ಒಂದಿಷ್ಟು ಸಮಯವನ್ನಾದರೂ ಸಮಾಜಕ್ಕೆ ಅರ್ಪಿಸಿದರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿಲ್ಲ. ಅಲ್ಲವೇ?

    (ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts