More

    ಜಗದಗಲ ಅಂಕಣ: ಏಳು ಅಧ್ಯಕ್ಷರ ಎಂಟು ಭಾರತ ಭೇಟಿಗಳು…

    ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷ. ಇಬ್ಬರು ಭಾರತೀಯ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹೆಗ್ಗಳಿಕೆಯೂ ಅವರದು. ವಿವಿಧ ಧರ್ವಿುೕಯರ ನಡುವೆ ಸಹಬಾಳ್ವೆಯ ಮಹತ್ವವನ್ನು ಒತ್ತಿ ಹೇಳುತ್ತ ಭಾರತ ಅಮೆರಿಕಾಗಳೆರಡೂ ಬಹುಧರ್ವಿುೕಯ ರಾಷ್ಟ್ರಗಳಾಗಿರುವ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು.

    ಈ ಲೇಖನವನ್ನು ಬರೆಯುವ ಹೊತ್ತಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆಗಳಿನ್ನೂ ನಡೆಸಿರಲಿಲ್ಲ, ಟ್ರಂಪ್​ರ ಪ್ರಸಕ್ತ ಭಾರತ ಭೇಟಿಯ ಅವಲೋಕನಕ್ಕಿದು ಸಮಯವಲ್ಲ. ಹೀಗಾಗಿ, ಅಮೆರಿಕದ ಹಿಂದಿನ ಅಧ್ಯಕ್ಷರುಗಳ ಭಾರತ ಭೇಟಿಯನ್ನು ನೆನಪು ಮಾಡಿಕೊಳ್ಳುವುದಕ್ಕೆ ಇಂದಿನ ‘ಜಗದಗಲ’ವನ್ನು ಮೀಸಲಿಡುತ್ತಿದ್ದೇನೆ.

    ಜಗದಗಲ ಅಂಕಣ: ಏಳು ಅಧ್ಯಕ್ಷರ ಎಂಟು ಭಾರತ ಭೇಟಿಗಳು...ಭಾರತಕ್ಕೆ ಭೇಟಿಯಿತ್ತ ಅಮೆರಿಕದ ಮೊದಲ ಅಧ್ಯಕ್ಷರೆಂದರೆ ಡ್ವೈಟ್ ಡಿ. ಐಸೆನ್​ಹೋವರ್, 1959ರಲ್ಲಿ. ಅಂದಿನ ಅಂತಾರಾಷ್ಟ್ರೀಯ ವಿದ್ಯಮಾನಗಳ ದೃಷ್ಟಿಯಿಂದ ಅದೊಂದು ಆಸಕ್ತಿಕರ ಭೇಟಿ. ಐಸೆನ್​ಹೋವರ್​ರ ಮೊದಲ ಅಧಿಕಾರಾವಧಿಯಲ್ಲಿ (1953-57) ಅಮೆರಿಕ ಪಾಕಿಸ್ತಾನವನ್ನು ತನ್ನ ‘ಸೆಂಟ್ರಲ್ ಟ್ರೀಟಿ ಆರ್ಗನೈಜೇಷನ್’ (ಸೆಂಟೋ-ಸಿಇಎನ್​ಟಿಓ: ಸೆಂಟೋ, ಬಾಗ್ದಾದ್ ಒಪ್ಪಂದ) ಮತ್ತು ‘ಸೌತ್ ಈಸ್ಟ್ ಏಷ್ಯಾ ಟ್ರೀಟಿ ಆರ್ಗನೈಜೇಷನ್’ (ಸಿಯಾಟೋ) ರಕ್ಷಣಾ ಕೂಟಗಳಿಗೆ ಸೇರಿಸಿಕೊಂಡಿತು. ಮುಖ್ಯವಾಗಿ ಚೀನೀ ಕಮ್ಯೂನಿಸ್ಟ್ ವಿಸ್ತರಣವಾದದ ವಿರುದ್ಧವಾಗಿದ್ದ ಸಿಯಾಟೋಗೆ ಸೇರುವಂತೆ ಅಮೆರಿಕ ಭಾರತವನ್ನು ಆಹ್ವಾನಿಸಿತ್ತು. ಆದರೆ ಅಲಿಪ್ತ ನೀತಿಯನ್ನು ಅನುಸರಿಸತೊಡಗಿದ್ದ ಪ್ರಧಾನಿ ಜವಾಹರಲಾಲ್​ನೆಹರೂ ಆ ಆಹ್ವಾನವನ್ನು ತಿರಸ್ಕರಿಸಿದರು. ಇದರಿಂದಾಗಿ ಉಭಯ ದೇಶಗಳ ನಡುವೆ ಪರಸ್ಪರ ವಿಶ್ವಾಸದ ವಾತಾವರಣವಿರಲಿಲ್ಲ. ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್ ಅಂತೂ ನಿರಾಸೆ ಹಾಗೂ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಗಳನ್ನು ಸಮಾನವಾಗಿ ಪರಿಗಣಿಸಿ, ಎರಡರಿಂದಲೂ ಸಮಾನ ಅಂತರ ಕಾಪಾಡಿಕೊಳ್ಳುವ ಅಲಿಪ್ತ ನೀತಿ ‘ನೀತಿಬಾಹಿರ’ ಎಂದು ಡಲೆಸ್ ಕಿಡಿ ಕಾರಿದ್ದರು.

    ಪಾಕಿಸ್ತಾನವನ್ನು ತನ್ನೆರಡು ರಕ್ಷಣಾ ಕೂಟಗಳಿಗೆ ಸೇರಿಸಿಕೊಳ್ಳುವುದಲ್ಲದೆ ಆ ದೇಶದೊಂದಿಗೆ ಅಮೆರಿಕ 1954ರ ಡಿಸೆಂಬರ್​ನಲ್ಲಿ ಪ್ರತ್ಯೇಕವಾಗಿ ರಕ್ಷಣಾ ಒಪ್ಪಂದವೊಂದನ್ನೂ ಮಾಡಿಕೊಂಡಿತ್ತು. ಪರಿಣಾಮವಾಗಿ ಅಮೆರಿಕದಿಂದ ಪಾಕಿಸ್ತಾನಕ್ಕೆ ಹೇರಳ ಶಸ್ತ್ರಾಸ್ತ್ರಗಳು ಹರಿದುಬರತೊಡಗಿದ್ದವು. ಕಮ್ಯೂನಿಸಂ ವಿರುದ್ಧ ಹೋರಾಡಲೆಂದು ಅಮೆರಿಕ ನೀಡುತ್ತಿರುವ ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ವಾಸ್ತವವಾಗಿ ಬಳಸುವುದು ಭಾರತದ ವಿರುದ್ಧವೇ ಎನ್ನುವುದು ಈ ದೇಶದ ಆಕ್ಷೇಪಣೆಯಾಗಿತ್ತು. ಆ ಸಮಯದಲ್ಲಿ ಐಸೆನ್​ಹೋವರ್ ಸರ್ಕಾರ ಭಾರತದ ಆತಂಕವನ್ನು ಪರಿಗಣಿಸಿ, ಅಮೆರಿಕದಿಂದ ಪಡೆದುಕೊಂಡ ಶಸ್ತ್ರಾ್ರಸ್ತ್ರಗಳನ್ನು ಪಾಕಿಸ್ತಾನವೇನಾದರೂ ಭಾರತದ ವಿರುದ್ಧ ಬಳಸುತ್ತಿದೆ ಎನ್ನುವುದು ಸಾಬೀತಾದರೆ ಆ ದೇಶಕ್ಕೆ ಶಸ್ತ್ರಾಸ್ತ್ರಗಳ ಹಾಗೂ ಬಿಡಿ ಭಾಗಗಳ ಪೂರೈಕೆಯನ್ನು ತಕ್ಷಣ ತಡೆಹಿಡಿಯುವುದಾಗಿ ನವದೆಹಲಿಗೆ ಆಶ್ವಾಸನೆಯಿತ್ತಿತು. (ಮುಂದೆ 1965ರಲ್ಲಿ ಅಮೆರಿಕನ್ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಪಾಕಿಸ್ತಾನ ಬಳಸಿದಾಗ ಆಗಿನ ಲಿಂಡನ್ ಜಾನ್ಸನ್ ಆಡಳಿತ ಹಿಂದಿನ ಐಸೆನ್​ಹೋವರ್ ಆಡಳಿತ ಭಾರತಕ್ಕೆ ನೀಡಿದ್ದ ವಾಗ್ದಾನಕ್ಕೆ ಬದ್ಧವಾಗಿ ನಡೆದುಕೊಂಡ ಪರಿಣಾಮವಾಗಿ ಪಾಕಿಸ್ತಾನದ ಕಾಡುವ ಸಾಮರ್ಥ್ಯ ಬಹುವಾಗಿ ಕುಗ್ಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.)

    ಐಸೆನ್​ಹೋವರ್​ರ ಎರಡನೆಯ ಆವಧಿಯಲ್ಲಿ ಭಾರತ ಮತ್ತು ಅಮೆರಿಕಗಳ ಸಂಬಂಧಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದವು. ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲ ಬಗೆಯ ಯುದ್ಧೋಪಕರಣಗಳನ್ನೂ ಭಾರತಕ್ಕೂ ನೀಡಲು ತಾನು ತಯಾರಾಗಿರುವುದಾಗಿ ಅಮೆರಿಕ ಸರ್ಕಾರ ಭಾರತಕ್ಕೆ ಸ್ಪಷ್ಟವಾಗಿ ಹೇಳಿತು. ಆದರೆ ಅವುಗಳನ್ನು ಪಡೆದುಕೊಳ್ಳುವ ಯಾವ ಆಸಕ್ತಿಯೂ ನೆಹರೂರ ಭಾರತ ಸರ್ಕಾರಕ್ಕಿರಲಿಲ್ಲ. ಒಟ್ಟಿನಲ್ಲಿ ಈ ದೇಶದ ಬಗ್ಗೆ ಐಸೆನ್​ಹೋವರ್ ಆಡಳಿತ ತೋರತೊಡಗಿದ ಸದ್ಭಾವನೆ ಅಂತಿಮವಾಗಿ ಅಧ್ಯಕ್ಷರನ್ನು ಭಾರತಕ್ಕೆ ಕರೆತಂದಿತು. ಸೋವಿಯೆತ್ ಚೀನಾ ಮೈತ್ರಿಯಲ್ಲಿ ಬಿರುಕು ಬಿಟ್ಟು ಎರಡು ಕಮ್ಯೂನಿಸ್ಟ್ ದೈತ್ಯರು ಪರಸ್ಪರ ದೂರವಾಗತೊಡಗಿದ್ದ ಆ ದಿನಗಳಲ್ಲಿ ಅಧ್ಯಕ್ಷ ಐಸೆನ್​ಹೋವರ್​ರ ಭಾರತ ಭೇಟಿ ಅಂತಾರಾಷ್ಟ್ರೀಯ ರಂಗದಲ್ಲಿ ಸಹಜವಾಗಿಯೇ ಕುತೂಹಲವನ್ನೂ, ಆಸಕ್ತಿಯನ್ನೂ ಮೂಡಿಸಿತ್ತು. ಆದರೆ ನೆಹರೂ ಸರ್ಕಾರದ ಜಡತ್ವದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಯಾವುದೇ ಮಹತ್ತರ ಬದಲಾವಣೆ ಕಂಡುಬರಲಿಲ್ಲ. ಆದಾಗ್ಯೂ, ಆ ಭೇಟಿ ಎತ್ತಿ ತೋರಿದ್ದು ಸೋವಿಯೆತ್ ಪರವಾಗಿರುವುದು ಭಾರತ ಸರ್ಕಾರವಷ್ಟೇ, ಭಾರತೀಯ ಜನತೆ ಅಮೆರಿಕದ ಬಗ್ಗೆ ಅತೀವ ಸದ್ಭಾವನೆಯನ್ನು ಹೊಂದಿದ್ದಾರೆ ಎನ್ನುವುದನ್ನು. ತಮ್ಮ ಸ್ವಾಗತಕ್ಕೆಂದು ದೆಹಲಿಯಲ್ಲಿ ಸೇರಿದ್ದ ಜನಸಾಗರವನ್ನು ನೋಡಿ ಮನದುಂಬಿಹೋದ ಐಸೆನ್​ಹೋವರ್ ಹೇಳಿದ್ದು ತಾವು ಭೇಟಿ ನೀಡಿದ ಯಾವ ರಾಜಧಾನಿಯಲ್ಲೂ ತಮಗೆ ಸ್ಥಳೀಯ ಜನತೆಯಿಂದ ಈ ಬಗೆಯ ಸ್ವಾಗತ ದೊರೆತಿರಲಿಲ್ಲವೆಂದು.

    ಅದಾಗಿ ಹತ್ತು ವರ್ಷಗಳು ಗತಿಸಿದ ನಂತರ ಅಧ್ಯಕ್ಷ ರಿಚರ್ಡ್ ನಿಕ್ಸನ್ 1969ರಲ್ಲಿ ಭಾರತಕ್ಕೆ ಭೇಟಿ ನೀಡಿದ ಎರಡನೆಯ ಅಧ್ಯಕ್ಷರಾದರು. ಇದೇ ನಿಕ್ಸನ್ ದಶಕದ ಹಿಂದೆ ಐಸೆನ್​ಹೋವರ್ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದರು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬಹುದಾದ ಸ್ವಾರಸ್ಯಕರ ಸಂಗತಿ. ನಿಕ್ಸನ್ ಬಹಿರಂಗವಾಗಿಯೇ ಭಾರತದ ಅಲಿಪ್ತ ನೀತಿಯ ವಿರುದ್ಧವಾಗಿದ್ದವರು. ‘ಅಲಿಪ್ತ ನೀತಿಗೆ ಅಂಟಿಕೊಂಡದ್ದರಿಂದಾಗಿ ಭಾರತ ತನ್ನ ನಿಜವಾದ ಸಾಮರ್ಥ್ಯನ್ನು ಜಗತ್ತಿನ ಮುಂದೆ ಪ್ರದರ್ಶಿಸುವುದರಲ್ಲಿ ವಿಫಲವಾಗಿದೆ’ ಎಂದು ಹೇಳಿದ ನಿಕ್ಸನ್ ಭಾರತವನ್ನು ‘ಎಡವುತ್ತಿರುವ ದೈತ್ಯ’ ಎಂದು ಬಣ್ಣಿಸಿದರು. ಅದೇ ದಿನಗಳಲ್ಲಿ ಭಾರತ ತನ್ನ ಅಲಿಪ್ತ ನೀತಿಯ ಪರದೆಯ ಹಿಂದೆಯೇ ಸೋವಿಯೆತ್ ಯೂನಿಯನ್​ನತ್ತ ಅತಿಯಾಗಿ ವಾಲಿತ್ತು. ಇದೆಲ್ಲದರಿಂದಾಗಿ ಭಾರತ ಮತ್ತು ಅಮೆರಿಕಗಳ ನಡುವೆ ಸಂಬಂಧವೃದ್ಧಿಗೆ ಅವಕಾಶವೇ ಇರಲಿಲ್ಲ. ಮುಂದಿನ ಎರಡು ವರ್ಷಗಳು ಅದನ್ನೇ ಸಾಬೀತುಗೊಳಿಸಿದವು. 1971ರ ಭಾರತ -ಪಾಕಿಸ್ತಾನ ಯುದ್ಧದಲ್ಲಿ ಸೋವಿಯೆತ್ ಯೂನಿಯನ್ ಭಾರತದ ಪರ ಗಟ್ಟಿಯಾಗಿ ನಿಂತರೆ ಅಮೆರಿಕ ಪಾಕಿಸ್ತಾನದ ಬೆನ್ನಿಗೆ ನಿಂತು ಬಂಗಾಳ ಕೊಲ್ಲಿಗೆ ತನ್ನ 56 ಯುದ್ಧನೌಕೆಗಳ ಸೆವೆನ್ತ್ ಫ್ಲೀಟ್ ಅನ್ನು ಕಳುಹಿಸುವುದರ ಮೂಲಕ ಭಾರತವನ್ನು ಹೆದರಿಸಲು ನೋಡಿತು.

    1978ರ ಜನವರಿಯಲ್ಲಿ ಭಾರತಕ್ಕೆ ಬಂದ ಜಿಮ್ಮಿ ಕಾರ್ಟರ್ ಇಲ್ಲಿಗೆ ಭೇಟಿ ನೀಡಿದ ಮೊದಲ ಡೆಮೋಕ್ರಾಟಿಕ್ ಅಧ್ಯಕ್ಷ. ಆ ಭೇಟಿಯ ಸಮಯವೂ ಗಮನಾರ್ಹ. ಸೋವಿಯೆತ್ ಪರವಾಗಿದ್ದ ಇಂದಿರಾ ಗಾಂಧಿ ಚುನಾವಣೆಯಲ್ಲಿ ಪರಾಭವಗೊಂಡು ಜನತಾ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳುಗಳಾಗುತ್ತಿದ್ದವು. ಜನತಾ ನಾಯಕರಂತೂ ತಾವು ಅಧಿಕಾರಕ್ಕೆ ಬಂದರೆ ಭಾರತವನ್ನು ಮಾಸ್ಕೋದಿಂದ ದೂರ ಒಯ್ದು ವಾಷಿಂಗ್​ಟನ್​ಗೆ ಹತ್ತಿರವಾಗಿಸುವುದಾಗಿ ಚುನಾವಣಾ ಪ್ರಚಾರದಲ್ಲಿ ಘೊಷಿಸಿಯೇಬಿಟ್ಟಿದ್ದರು. ಹೀಗಾಗಿ, ನವದೆಹಲಿಗೆ ಜಿಮ್ಮಿ ಕಾರ್ಟರ್ ಭೇಟಿ ಹಲವು ಆಶಾಭಾವನೆಗಳನ್ನು ಉಂಟುಮಾಡಿತ್ತು. ಕಾರ್ಟರ್ ಅಂತೂ ಭಾರತವನ್ನು ‘ಮಹಾ ಪ್ರಜಾಪ್ರಭುತ್ವ’ ಎಂದು ಬಣ್ಣಿಸಿದ್ದಲ್ಲದೆ, ‘ಈ ದೇಶವನ್ನು ಸೋವಿಯೆತ್ ಯೂನಿಯನ್​ನಿಂದ ದೂರ ಒಯ್ದು ತಮ್ಮ ದೇಶಕ್ಕೆ ಹತ್ತಿರವಾಗಿಸಿಕೊಳ್ಳಲು ಶ್ರಮಿಸುವೆ’ ಎಂದು ಉತ್ಸಾಹದಿಂದ ಹೇಳಿಕೊಂಡರು. ಆದರೆ, ವಿದೇಶನೀತಿಯ ಬಗ್ಗೆ ಜನತಾ ಸರ್ಕಾರದಲ್ಲಿ ಏಕಧ್ವನಿ ಇರಲಿಲ್ಲ ಮತ್ತು ಮುಂದಿನ ಒಂದೂವರೆ ವರ್ಷದೊಳಗೆ ಮೊರಾರ್ಜಿ ದೇಸಾಯಿ ಸರ್ಕಾರ ಕುಸಿದುಬಿತ್ತು. ಮುಂದಿನ ಐದು ತಿಂಗಳಲ್ಲಿ ಸೋವಿಯೆತ್ ಸೇನೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದರಿಂದಾಗಿ ಅದನ್ನು ಹೊರಗಟ್ಟುವ ಕಾರ್ಯಯೋಜನೆಯ ಭಾಗವಾಗಿ ಕಾರ್ಟರ್ ಸರ್ಕಾರ ಪಾಕಿಸ್ತಾನವನ್ನೇ ಅಪ್ಪಿಕೊಂಡಿತು.

    ಭಾರತಕ್ಕೆ ಮತ್ತೊಬ್ಬ ಅಮೆರಿಕನ್ ಅಧ್ಯಕ್ಷನ ಭೇಟಿ ತೆಗೆದುಕೊಂಡದ್ದು ಬರೋಬ್ಬರಿ ಇಪ್ಪತ್ತೆರಡು ವರ್ಷಗಳು. 1998ರ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗಳಿಂದಾಗಿ ರೊಚ್ಚಿಗೆದ್ದಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್ ಈ ದೇಶದ ವಿರುದ್ಧ ಹಲವು ದಿಗ್ಭಂದನಗಳನ್ನು ವಿಧಿಸಿದ್ದರು. ಅದೆಲ್ಲವನ್ನೂ ಹಿಂದೆ ಹಾಕಿ ಅವರು 2000ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದು ಈ ದೇಶದ ಜತೆಗೆ ಸಂಬಂಧಗಳನ್ನು ಗಾಢವಾಗಿಸಿಕೊಳ್ಳುವ ಅವರ ವ್ಯಾವಹಾರಿಕ ಪ್ರಯತ್ನವಾಗಿತ್ತು. ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಸಕಾರಾತ್ಮಕ ಸ್ಪಂದನೆಯಿಂದಾಗಿ ಕ್ಲಿಂಟನ್​ರ ಪ್ರಯತ್ನ ಬಹುಮಟ್ಟಿಗೆ ಯಶಸ್ವಿಯಾಗಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಶಕೆಯೊಂದು ಆರಂಭವಾಯಿತು.

    ನಂತರದ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂನಿಯರ್ ಭಾರತ-ಅಮೆರಿಕ ಸಂಬಂಧಗಳನ್ನು ಮತ್ತೊಂದು ಮಜಲಿಗೊಯ್ದರು. 9/11 ಅಲ್-ಖಯೀದಾ ದಾಳಿಗಳ ಪರಿಣಾಮವಾಗಿ ‘ಭಯೋತ್ಪಾದನೆಯ ವಿರುದ್ಧ ಸಮರ’ ಚಾಲನೆಗೊಳಿಸಿದ್ದ ಅವರು ಭಾರತ ಎದುರಿಸುತ್ತಿದ್ದ ಭಯೋತ್ಪಾದನಾ ಆತಂಕಗಳ ಬಗ್ಗೆ ಸಹಾನುಭೂತಿ ಹೊಂದಿದ್ದರು. ನಿಜ ಹೇಳಬೇಕೆಂದರೆ ಅಧ್ಯಕ್ಷ ಬುಷ್​ರ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ನೇರವಾಗಿ ಸಹಕರಿಸಲು, ಅದಕ್ಕಾಗಿ ಕಾಶ್ಮೀರದಲ್ಲಿರುವ ಅವಂತಿಪುರ ವಾಯುನೆಲೆಯನ್ನು ಬಳಸಿಕೊಳ್ಳಲು ವಾಜಪೇಯಿ ಸರ್ಕಾರ ಅಮೆರಿಕಕ್ಕೆ ಸೂಚಿಸಿತ್ತು. ಆದರೆ ಪಾಕಿಸ್ತಾನದ ಭೌಗೋಳಿಕ ಸ್ಥಾನ ಅಂದರೆ ಅಫ್ಘಾನಿಸ್ತಾನದ ಜತೆ ಅದು ಹೊಂದಿದ್ದ ನೇರ ಸಂಪರ್ಕದಿಂದಾಗಿ ಆ ದೇಶವನ್ನೇ ಪ್ರಮುಖ ಸಹಯೋಗಿಯಾಗಿಸಿಕೊಳ್ಳುವ ಒತ್ತಡಕ್ಕೆ ಬುಷ್ ಆಡಳಿತ ಒಳಗಾಯಿತು. 2006ರಲ್ಲಿ ಭಾರತಕ್ಕೆ ಭೇಟಿ ನೀಡಿ ಅವರು ಭಾಷಣದಲ್ಲಿ 2001ರ ಡಿಸೆಂಬರ್​ನಲ್ಲಿ ಭಾರತದ ಪಾರ್ಲಿಮೆಂಟ್ ಮೇಲಾದ ಭಯೋತ್ಪಾದಕ ದಾಳಿಯನ್ನು ‘ಭಾರತದ ಪ್ರಜಾಪ್ರಭುತ್ವದ ಹೃದಯದ ಮೇಲಾದ ದಾಳಿ’ ಎಂದು ಬಣ್ಣಿಸಿದರು. ಮುಂದುವರಿದು ಅವರು ಗಾಂಧಿ, ಜವಾಹರ್​ಲಾಲ್ ನೆಹರೂ ಮತ್ತು ರವೀಂದ್ರನಾಥ್ ಟ್ಯಾಗೋರ್​ರನ್ನು ಉಲ್ಲೇಖಿಸಿದ್ದಲ್ಲದೆ, ‘ಇಪ್ಪತ್ತೊಂದನೆಯ ಶತಮಾನದಲ್ಲಿ ನೀವು ಭಾರತಕ್ಕೆ ಭೇಟಿ ನೀಡಿದರೆ ನೀವು ಗತದಿಂದ ಸ್ಪೂರ್ತಿಯನ್ನೂ ಪಡೆಯುತ್ತೀರಿ, ಭವಿಷ್ಯವನ್ನೂ ಕಾಣುತ್ತೀರಿ’ ಎಂದು ಹೇಳಿದರು. ಎರಡೂ ದೇಶಗಳ ನಡುವೆ ‘ನಾಗರಿಕ ಅಣು ಒಪ್ಪಂದ’ವಾದದ್ದು ಬುಷ್ ಆಡಳಿತಾವಧಿಯಲ್ಲಿ.

    ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷ. ಇಬ್ಬರು ಭಾರತೀಯ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹೆಗ್ಗಳಿಕೆಯೂ ಅವರದು. 2010ರಲ್ಲಿ ಅವರು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಅಫ್ಘಾನಿಸ್ತಾನ ಮತ್ತು ಇರಾಕ್​ನಲ್ಲಿ ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಸಮರ ಇನ್ನೂ ಚಾಲನೆಯಲ್ಲಿತ್ತು. ದೆಹಲಿಯ ಪುರಾನಾ ಕಿಲಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒಬಾಮ ಗಾಂಧಿಯವರ ಶಾಂತಿ ಮತ್ತು ಸಹೋದರತ್ವಗಳ ಸಂದೇಶವನ್ನು ಬಹುವಾಗಿ ಸ್ಮರಿಸಿಕೊಂಡರು. ಜತೆಗೆ ಸ್ವಾಮಿ ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್ ಹೇಳಿಕೆಗಳೂ, ಪಂಚತಂತ್ರದ ಕಥಾವಳಿಯಲ್ಲಿನ ನೀತಿಗಳೂ ಅವರ ಭಾಷಣದಲ್ಲಿ ಸ್ಥಾನ ಪಡೆದುಕೊಂಡಿದ್ದವು.

    2015ರಲ್ಲಿ ಒಬಾಮ 66ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಈ ದೇಶಕ್ಕೆ ಆಗಮಿಸಿದರು. ಸಿರಿಪೋರ್ಟ್ ಆಡಿಟೋರಿಯಂನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ಧರ್ವಿುೕಯರ ನಡುವೆ ಸಹಬಾಳ್ವೆಯ ಮಹತ್ವವನ್ನು ಒತ್ತಿ ಹೇಳುತ್ತ ಭಾರತ ಹಾಗೂ ಅಮೆರಿಕಗಳೆರಡೂ ಬಹುಧರ್ವಿುೕಯ ರಾಷ್ಟ್ರಗಳಾಗಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ‘ನನ್ನ ಪ್ರಕಾರ ವಿವಿಧ ಧರ್ಮಗಳು ಒಂದೇ ತೋಟದ ಹೂಗಳು ಅಥವಾ ಒಂದೇ ಮಹಾವೃಕ್ಷದ ಕೊಂಬೆಗಳು’ ಎಂಬ ಗಾಂಧಿಯವರ ಮಾತು ಒಬಾಮ ಭಾಷಣದಲ್ಲಿ ಕಾಣಿಸಿಕೊಂಡ ಆಕರ್ಷಕ ಅಂಶ.

    ಹೀಗೆ ಐಸೆನ್​ಹೋವರ್ ಅವರಿಂದ ಹಿಡಿದು ಒಬಾಮರವರೆಗೆ ಆರು ಅಧ್ಯಕ್ಷರುಗಳು ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಇವರೆಲ್ಲರ ಭೇಟಿಗಳಿಗೂ ಟ್ರಂಪ್​ರ ಪ್ರಸಕ್ತ ಭೇಟಿಗೂ ಒಂದು ಪ್ರಮುಖ ವ್ಯತ್ಯಾಸವಿದೆ. ಹಿಂದಿನವರೆಲ್ಲರೂ ಭಾರತಕ್ಕೆ ಬರುವ ಹಾದಿಯಲ್ಲಿ ಅಥವಾ ಇಲ್ಲಿಂದ ಹಿಂತಿರುಗುವ ಹಾದಿಯಲ್ಲಿ ಇತರ ದೇಶಗಳಿಗೂ ಭೇಟಿ ನೀಡಿದ್ದರು. ಅವರುಗಳ ಭಾರತ ಭೇಟಿ ಒಂದಕ್ಕಿಂತ ಹೆಚ್ಚು ದೇಶಗಳ ಭೇಟಿಯ ಅಂಗವಾಗಿರುತ್ತಿತ್ತು. ಆದರೆ ಟ್ರಂಪ್ ಕೇವಲ ಭಾರತಕ್ಕಷ್ಟೇ ಭೇಟಿ ನೀಡಿದ್ದಾರೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts