More

    ಅಮೃತಧಾರೆ ಅಂಕಣ: ಅಸ್ತಿತ್ವದ ಭವ್ಯತೆಯೇ ವಿಶಾಲ ಎಂಬುದನ್ನು ಅರಿಯೋಣ

    ಭೂಮಿ ಸರಿಯಾದ ಸಮಯಕ್ಕೆ ತಿರುಗುತ್ತಿದೆ. ಅದೇನೂ ಚಿಕ್ಕ ಘಟನೆಯಲ್ಲ. ಎಲ್ಲ ನಕ್ಷತ್ರಪುಂಜಗಳು ಉತ್ತಮವಾಗಿ ಸಾಗುತ್ತಿವೆ, ಇಡೀ ಬ್ರಹ್ಮಾಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಮ್ಮ ತಲೆಯಲ್ಲಿ ಕೊರೆಯುತ್ತಿರುವ ಒಂದು ಕೆಟ್ಟ ಯೋಚನೆ ಇದೆ, ಹಾಗಾಗಿ ಇದು ಕೆಟ್ಟ ದಿನ.

    ಯಾರೋ ಒಬ್ಬರು, ‘ನಾನು ಯೋಚಿಸುತ್ತೇನೆ, ಆದ್ದರಿಂದ ನಾನಿದ್ದೇನೆ’ ಎಂದು ಹೇಳಿದರು!

    ಅಮೃತಧಾರೆ ಅಂಕಣ: ಅಸ್ತಿತ್ವದ ಭವ್ಯತೆಯೇ ವಿಶಾಲ ಎಂಬುದನ್ನು ಅರಿಯೋಣಆದರಿದು ನಿಜವಾಗಿಯೂ ಸತ್ಯವೇ? ಗಮನಿಸೋಣ. ನೀವು ‘ಇರು’ವುದರಿಂದಲೇ ನಿಮಗೆ ಆ ಯೋಚನೆಯನ್ನು ಹುಟ್ಟಿಸಲು ಸಾಧ್ಯ, ಅಲ್ಲವೇ? ಆಲೋಚನಾ ಪ್ರಕ್ರಿಯೆ ಎಷ್ಟು ಅನಿಯಂತ್ರಿತವಾಗಿದೆ ಮತ್ತು ಗಮನವು ಅಸ್ತಿತ್ವದಿಂದ ಯೋಚನೆಗಳಿಗೆ ಎಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ, ನೀವು ಯೋಚಿಸುತ್ತಿರುವುದರಿಂದಷ್ಟೆ ನೀವು ಇರುವುದು ಎಂದು ನಂಬಲಾರಂಭಿಸಿದ್ದೀರಿ. ಪೆದ್ದುಪೆದ್ದಾದ ಆಲೋಚನೆಗಳಿಲ್ಲದೆಯೂ ಅಸ್ತಿತ್ವವಿದೆ. ನಿಜವಾಗಿಯೂ ಏನನ್ನು ಯೋಚಿಸಬಹುದು? ಸಂಗ್ರಹಿಸಿರುವ ಮತ್ತು ಮರುಬಳಸುತ್ತಿರುವ ಮಾಹಿತಿಯ ಅಸಂಬದ್ಧತೆಯಷ್ಟೆ. ತಲೆಗೆ ತುಂಬಿಸಿರುವ ವಿಚಾರವನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಯೋಚಿಸಲು ಸಾಧ್ಯವೇ? ಮಾಡುತ್ತಿರುವುದು ಹಳೆ ಮಾಹಿತಿಯ ಮರುಬಳಕೆಯಷ್ಟೆ. ಈ ಮರುಬಳಕೆ ಎಷ್ಟು ಮಹತ್ವದ್ದಾಗಿಬಿಟ್ಟಿದೆಯೆಂದರೆ ಜನ, ‘ನಾನು ಯೋಚಿಸುತ್ತೇನೆ, ಆದ್ದರಿಂದ ನಾನು ಇದ್ದೇನೆ’ ಎಂದು ಹೇಳುವ ಧೈರ್ಯ ಮಾಡುತ್ತಾರೆ. ಅದು ಜಗತ್ತಿನ ಜೀವನ ವಿಧಾನವಾಗಿಬಿಟ್ಟಿದೆ.

    ನೀವಿರುವುದರ ಕಾರಣದಿಂದ ಮಾತ್ರ ನಿಮಗೆ ಯೋಚಿಸಲು ಸಾಧ್ಯ. ನೀವು ನಿರ್ಧರಿಸಿದರೆ, ಸಂಪೂರ್ಣವಾಗಿದ್ದು, ಯೋಚಿಸದೇ ಇರಬಹುದು. ಜೀವನದ ಅತ್ಯಂತ ಸುಂದರವಾದ ಕ್ಷಣಗಳು-ಆನಂದದ ಕ್ಷಣಗಳು, ಸಂತೋಷ, ಭಾವೋತ್ಕರ್ಷದ, ಸಂಪೂರ್ಣ ಶಾಂತಿಯ ಕ್ಷಣಗಳು- ಅವು ಯಾವುದರ ಬಗ್ಗೆಯೂ ಯೋಚಿಸದಿದ್ದ ಕ್ಷಣಗಳು. ಅವು ನಿಜವಾಗಿಯೂ ಜೀವಿಸುತ್ತಿದ್ದ ಕ್ಷಣಗಳು.

    ಜೀವಂತ ಚೇತನವಾಗಬೇಕೇ ಅಥವಾ ಆಲೋಚನಾ ಜೀವಿಯಾಗಬೇಕೇ? ಈಗ, ತೊಂಬತ್ತು ಪ್ರತಿಶತದಷ್ಟು ಸಮಯ ಜೀವನದ ಬಗ್ಗೆ ಯೋಚಿಸುತ್ತಿದ್ದೀರೆ ವಿನಃ ಜೀವಿಸುತ್ತಿಲ್ಲ. ಇಲ್ಲಿಗೆ ಬಂದಿರುವುದು ಜೀವನವನ್ನು ಅನುಭವಿಸುವುದಕ್ಕೋ ಅಥವಾ ಜೀವನದ ಬಗ್ಗೆ ಯೋಚಿಸುವುದಕ್ಕೋ? ಪ್ರತಿಯೊಬ್ಬರೂ ತಮ್ಮದೇ ಆದ ಅಸಂಬದ್ಧತೆಯನ್ನು ತಾವು ಬಯಸಿದ ರೀತಿಯಲ್ಲಿ ಯೋಚಿಸಬಹುದು; ಇದಕ್ಕೆ ವಾಸ್ತವದೊಂದಿಗೆ ಯಾವುದೇ ಸಂಬಂಧವಿರಬೇಕು ಎಂದಿಲ್ಲ. ಜೀವನ ಪ್ರಕ್ರಿಯೆಗೆ ಹೋಲಿಸಿದರೆ ಮಾನಸಿಕ ಪ್ರಕ್ರಿಯೆ ಬಹಳ ಚಿಕ್ಕದು, ಆದರೆ ಈಗದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಮತ್ತೊಮ್ಮೆ ಜೀವನ ಪ್ರಕ್ರಿಯೆಗೆ ಮಹತ್ವ ನೀಡಬೇಕಾಗಿದೆ.

    ಅರಿಸ್ಟಾಟಲ್​ರನ್ನು ‘ಆಧುನಿಕ ತರ್ಕದ ಪಿತಾಮಹ’ ಎಂದು ಕರೆಯಲಾಗುತ್ತದೆ; ಅವರ ತರ್ಕ ದೋಷರಹಿತವಾಗಿತ್ತು. ಅವರು ವೈಚಾರಿಕತೆಯಲ್ಲಿ ಮೇಧಾವಿಯಾಗಿದ್ದರು ಎಂಬುದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಆದರೆ ಅವರು ತರ್ಕವನ್ನು ಜೀವನದ ಎಲ್ಲ ಆಯಾಮಗಳಿಗೆ ವಿಸ್ತರಿಸಲು ಪ್ರಯತ್ನಿಸಿದರು ಮತ್ತು ಅನೇಕ ವಿಧಗಳಲ್ಲಿ ಅವರು ಅಶಕ್ತರಾಗಿದ್ದರು.

    ಒಂದು ದಿನ, ಅರಿಸ್ಟಾಟಲ್ ಕಡಲತೀರದಲ್ಲಿ ನಡೆಯುತ್ತಿದ್ದರು. ಅದ್ಭುತವಾದ ಸೂರ್ಯಾಸ್ತವು ಕಣ್ಣ ಮುಂದಿತ್ತು, ಆದರೆ ಅಂತಹ ‘ಸಣ್ಣ ದೈನಂದಿನ ಘಟನೆ’ಗಳಿಗೆ ಅವರ ಬಳಿ ಸಮಯವಿರಲಿಲ್ಲ. ಅವರು ಅಸ್ತಿತ್ವದ ಕೆಲ ದೊಡ್ಡ ಸಮಸ್ಯೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರು, ಏಕೆಂದರೆ ಅರಿಸ್ಟಾಟಲ್​ರಿಗೆ, ಅಸ್ತಿತ್ವ ಒಂದು ಸಮಸ್ಯೆ ಮತ್ತು ತಾನದನ್ನು ಪರಿಹರಿಸುತ್ತೇನೆ ಎಂದವರು ನಂಬಿದ್ದರು. ಗಂಭೀರವಾಗಿ ಯೋಚಿಸುತ್ತ, ಕಡಲತೀರದುದ್ದಕ್ಕೂ ನಡೆಯುತ್ತಿದ್ದರು. ಅಲ್ಲೇ ಇನ್ನೊಬ್ಬ ವ್ಯಕ್ತಿ ಏನನ್ನೋ ವೇಗವಾಗಿ ಮಾಡುತ್ತಿದ್ದರು. ಎಷ್ಟು ವೇಗವಾಗಿ ಎಂದರೆ, ಅರಿಸ್ಟಾಟಲ್​ಗೂ ಅವರನ್ನು ನಿರ್ಲಕ್ಷಿಸಲಾಗಲಿಲ್ಲ.

    ತಮ್ಮದೇ ಅಸಂಬದ್ಧತೆ ಬಗ್ಗೆ ಹೆಚ್ಚು ಯೋಚಿಸುವ ಜನರು ಸುತ್ತಲಿನ ಜೀವ-ಜೀವನವನ್ನು ನಿರ್ಲಕ್ಷಿಸುತ್ತಾರೆ. ಆದರೆ ಅರಿಸ್ಟಾಟಲ್​ಗೆ ಈ ವ್ಯಕ್ತಿಯನ್ನು ನಿರ್ಲಕ್ಷಿಸಲಾಗಲಿಲ್ಲ. ಆ ವ್ಯಕ್ತಿ ಏನು ಮಾಡುತ್ತಿದ್ದಾರೆಂದು ಅರಿಸ್ಟಾಟಲ್ ಸೂಕ್ಷ್ಮವಾಗಿ ಗಮನಿಸಿದರು. ಆತ ಸಮುದ್ರದವರೆಗೂ ಹೋಗಿ, ಹಿಂತಿರುಗುತ್ತಿದ್ದರು; ಮತ್ತೆ ಮತ್ತೆ ಸಮುದ್ರದವರೆಗೂ ಹೋಗಿ, ಹಿಂತಿರುಗುತ್ತಿದ್ದರು. ಅದೂ ಬಹಳ ವೇಗವಾಗಿ. ಅರಿಸ್ಟಾಟಲ್ ನಿಂತು, ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಆ ವ್ಯಕ್ತಿ, ‘ನನಗೆ ತೊಂದರೆ ಕೊಡಬೇಡಿ, ನಾನು ಬಹಳ ಮುಖ್ಯವಾದದ್ದನ್ನು ಮಾಡುತ್ತಿದ್ದೇನೆ’ ಎಂದು ಹೇಳಿ ಕೆಲಸವನ್ನು ಮುಂದುವರಿಸಿದರು.

    ಇದು ಅರಿಸ್ಟಾಟಲ್​ರ ಕುತೂಹಲವನ್ನು ಇನ್ನಷ್ಟು ಕೆರಳಿಸಿತು. ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಕೇಳಿದರು.

    ಆ ವ್ಯಕ್ತಿ, ಮತ್ತೆ ‘ನನಗೆ ತೊಂದರೆ ಕೊಡಬೇಡಿ, ನಾನು ಬಹಳ ಮುಖ್ಯವಾದದ್ದನ್ನು ಮಾಡುತ್ತಿದ್ದೇನೆ’ ಎಂದರು.

    ಇವರು, ‘ಏನದು ಮುಖ್ಯವಾದದ್ದು?’ ಎಂದು ಕೇಳಿದರು. ಆತ ತಾನು ಮರಳಿನಲ್ಲಿ ಅಗೆದ ಚಿಕ್ಕ ಗುಂಡಿಯನ್ನು ತೋರಿಸಿ, ‘ನಾನು ಈ ಗುಂಡಿಗೆ ಸಮುದ್ರವನ್ನು ತುಂಬುತ್ತಿದ್ದೇನೆ’ ಎಂದರು. ಅವರ ಕೈಯಲ್ಲಿ ಒಂದು ಚಮಚವಿತ್ತು.

    ಅರಿಸ್ಟಾಟಲ್ ಇದನ್ನು ನೋಡಿ ನಕ್ಕರು. ಅರಿಸ್ಟಾಟಲ್ ಎಂತಹ ವ್ಯಕ್ತಿಯೆಂದರೆ, ಒಂದೂ ನಗೆಯಿಲ್ಲದೆ ಒಂದು ವರ್ಷವನ್ನು ಕಳೆಯಬಲ್ಲಂಥವರು, ಏಕೆಂದರೆ ಅವರಲ್ಲಿ ಪ್ರಬಲವಾಗಿದ್ದಿದು ಬುದ್ಧಿಶಕ್ತಿ. ನಗಲು ಹೃದಯ ಬೇಕು. ಬುದ್ಧಿಶಕ್ತಿಯಿಂದ ನಗಲು ಸಾಧ್ಯವಿಲ್ಲ; ಅದು ಕೇವಲ ವಿಶ್ಲೇಷಿಸಬಹುದಷ್ಟೆ.

    ಆದರೆ ಅರಿಸ್ಟಾಟಲ್ ಕೂಡ ಇದನ್ನು ನೋಡಿ ನಗುತ್ತ, ‘ಇದು ಹಾಸ್ಯಾಸ್ಪದ! ನೀವು ಹುಚ್ಚರಾಗಿರಬೇಕು. ಈ ಸಮುದ್ರ ಎಷ್ಟು ವಿಶಾಲವಾಗಿದೆ ಎಂದು ತಿಳಿದಿದೆಯೇ? ಈ ಸಣ್ಣ ಹೊಂಡಕ್ಕೆ ಈ ಸಮುದ್ರವನ್ನು ಹೇಗೆ ಖಾಲಿ ಮಾಡಬಹುದು? ಅದೂ, ಒಂದು ಚಮಚದೊಂದಿಗೆ? ದಯವಿಟ್ಟು ಇದನ್ನು ಬಿಟ್ಟುಬಿಡಿ; ಇದು ಹುಚ್ಚು, ನನ್ನ ಮಾತು ಕೇಳಿ’ ಎಂದರು.

    ಆ ವ್ಯಕ್ತಿ ಅರಿಸ್ಟಾಟಲ್​ರನ್ನು ನೋಡುತ್ತ, ಚಮಚವನ್ನು ಕೆಳಗೆ ಎಸೆದು, ‘ನನ್ನ ಕೆಲಸ ಈಗಾಗಲೇ ಮುಗಿದಿದೆ’ ಎಂದರು.

    ಅದಕ್ಕೆ ಅರಿಸ್ಟಾಟಲ್, ‘ಏನು ನಿಮ್ಮ ಮಾತಿನ ಅರ್ಥ? ಸಮುದ್ರವನ್ನು ಖಾಲಿ ಮಾಡುವ ಮಾತಿರಲಿ, ಹೊಂಡವೂ ತುಂಬಿಲ್ಲ. ಕೆಲಸ ಮುಗಿದಿದೆ ಎಂದು ಹೇಗೆ ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.

    ಆ ಇನ್ನೊಬ್ಬ ವ್ಯಕ್ತಿಯ ಹೆಸರು ಹೆರಾಕ್ಲಿಟಸ್. ಅವರು ಎದ್ದುನಿಂತು, ‘ನಾನೊಂದು ಚಮಚದೊಂದಿಗೆ ಈ ಹೊಂಡಕ್ಕೆ ಸಮುದ್ರವನ್ನು ತುಂಬಲು ಪ್ರಯತ್ನಿಸುತ್ತೇನೆ. ಇದು ತಿಳಿಗೇಡಿತನ, ಹುಚ್ಚುತನ ನಾನದನ್ನು ನಿಲ್ಲಿಸಬೇಕು ಎಂದಲ್ಲವೇ ನೀವು ಹೇಳುತ್ತಿರುವುದು. ನೀವೇನು ಮಾಡಲು ಪ್ರಯತ್ನಿಸುತ್ತಿದ್ದೀರಿ? ಈ ಅಸ್ತಿತ್ವವೆಷ್ಟು ವಿಶಾಲವಾಗಿದೆಯೆಂದು ನಿಮಗೆ ತಿಳಿದಿದೆಯೇ? ಇಲ್ಲಿ, ಇಂತಹ ಮತ್ತು ಅನೇಕ ಕೋಟ್ಯಂತರ ಸಮುದ್ರಗಳಿರಬಹುದು. ನೀವದನ್ನು ತಲೆಯ ಸಣ್ಣ ಹೊಂಡಕ್ಕೆ ತುಂಬಲು ಪ್ರಯತ್ನಿಸುತ್ತಿದ್ದೀರಿ; ಮತ್ತದನ್ನು ಮಾಡುತ್ತಿರುವುದಾದರೂ ಯಾವುದರೊಂದಿಗೆ? ಆಲೋಚನೆಗಳು ಎಂದು ಕರೆಯಲ್ಪಡುವ ಚಮಚದೊಂದಿಗೆ. ದಯವಿಟ್ಟು ಅದನ್ನು ಬಿಟ್ಟುಬಿಡಿ. ಇದು ತಿಳಿಗೇಡಿತನ’ ಎಂದರು.

    ಜೀವನಾನುಭವದ ಆಯಾಮಗಳನ್ನು ತಿಳಿದುಕೊಳ್ಳಬೇಕೆಂದಿದ್ದರೆ, ಅದನ್ನು ನೀವೆಂದಿಗೂ ಕ್ಷುಲ್ಲಕ ಆಲೋಚನೆಯೊಂದಿಗೆ ತಿಳಿಯಲಾಗುವುದಿಲ್ಲ. ಎಷ್ಟು ಉತ್ತಮವಾಗಿ ಯೋಚಿಸುತ್ತೀರಿ ಎಂಬುದು ಮುಖ್ಯವಲ್ಲ, ಮಾನವ ಆಲೋಚನೆ ಕ್ಷುಲ್ಲಕವೇ. ನಿಮ್ಮೊಳಗೆ ಐನ್​ಸ್ಟೈನ್​ನ ಮಿದುಳು ಕಾರ್ಯನಿರ್ವಹಿಸುತ್ತಿದ್ದರೂ ಅದು ಕ್ಷುಲ್ಲಕವೇ, ಏಕೆಂದರೆ ಆಲೋಚನೆ ಜೀವನಕ್ಕಿಂತ ದೊಡ್ಡದಾಗಿರಲು ಸಾಧ್ಯವಿಲ್ಲ. ಅದು ಕೇವಲ ರ್ತಾಕವಾಗಿದ್ದು, ಎರಡು ಧ್ರುವಗಳ ನಡುವೆ ಕಾರ್ಯನಿರ್ವಹಿಸುತ್ತದೆ. ಜೀವನವನ್ನು ಅದರ ಅಗಾಧತೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ, ಆಲೋಚನೆಗಳು, ತರ್ಕ, ಬುದ್ಧಿಶಕ್ತಿಗಿಂತ ಹೆಚ್ಚಿನದ್ದೇನೋ ಬೇಕು.

    ಇದು ನಿಮಗಿರುವ ಆಯ್ಕೆ: ಒಂದೋ ಸೃಷ್ಟಿಯೊಂದಿಗೆ ಬದುಕಲು ಕಲಿಯುತ್ತೀರಿ ಅಥವಾ ತಲೆಯಲ್ಲಿ ನಿಮ್ಮದೇ ಆದ ಅಸಂಬದ್ಧ ಸೃಷ್ಟಿಯನ್ನು ರಚಿಸುತ್ತೀರಿ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಈಗ, ಹೆಚ್ಚಿನವರು ಯೋಚನೆಗಳಲ್ಲಿ ಜೀವಿಸುತ್ತಿದ್ದಾರೆ. ಅದೊಂದು ಮಾನಸಿಕ ಆಯಾಮ, ಅಸ್ತಿತ್ವದ ಆಯಾಮವಲ್ಲ. ಆ ಕಾರಣದಿಂದ ಅದು ಯಾವುದೇ ಕ್ಷಣದಲ್ಲಿ ಕುಸಿಯಬಹುದಾದ್ದರಿಂದ ಅವರು ಅಭದ್ರರಾಗಿದ್ದಾರೆ.

    ಭೂಮಿ ಸರಿಯಾದ ಸಮಯಕ್ಕೆ ತಿರುಗುತ್ತಿದೆ. ಅದೇನೂ ಚಿಕ್ಕ ಘಟನೆಯಲ್ಲ. ಎಲ್ಲ ನಕ್ಷತ್ರಪುಂಜಗಳು ಉತ್ತಮವಾಗಿ ಸಾಗುತ್ತಿವೆ, ಇಡೀ ಬ್ರಹ್ಮಾಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಮ್ಮ ತಲೆಯಲ್ಲಿ ಕೊರೆಯುತ್ತಿರುವ ಒಂದು ಕೆಟ್ಟ ಯೋಚನೆ ಇದೆ, ಹಾಗಾಗಿ ಇದು ಕೆಟ್ಟ ದಿನ.

    ಬೇಕಾದುದನ್ನು ಯೋಚಿಸುವ ಸ್ವಾತಂತ್ರ್ಯ ನಿಮಗಿದೆ. ಹಾಗಿರುವಾಗ ಸವಿಯಾದುದನ್ನು ಏಕೆ ಯೋಚಿಸಬಾರದು? ಸಮಸ್ಯೆ ಇಷ್ಟೇ: ನಿಮ್ಮ ಬಳಿ ಇರುವ ಕಂಪ್ಯೂಟರ್​ನ ಕೀಪ್ಯಾಡ್ ಕಂಡುಹಿಡಿಯಲು ನೀವು ತಲೆಕೆಡಿಸಿಕೊಂಡಿಲ್ಲ. ಕೀಪ್ಯಾಡ್ ಇದ್ದಿದ್ದರೆ, ಸರಿಯಾದ ಪದಗಳನ್ನು ಟೈಪ್ ಮಾಡಿದ್ದಿರಬಹುದು, ಅಲ್ಲವೇ? ಕೀಪ್ಯಾಡ್ ಇಲ್ಲ, ಆದರೆ ಆದಿಮಾನವನಂತೆ ಕಂಪ್ಯೂಟರ್​ನ್ನು ಕುಟ್ಟುತ್ತಿದ್ದೀರಿ. ಹಾಗಾಗಿ ತಪ್ಪಾದ ಪದಗಳೇ ಬರುತ್ತಿವೆ. ಇದನ್ನು ಕಂಪ್ಯೂಟರ್​ನೊಂದಿಗೆ ಮಾಡಿ ನೋಡಿ; ಫಲಿತಾಂಶ ಕೆಟ್ಟದಾಗಿ ಕಾಣುತ್ತದೆ.

    ನಿಮ್ಮ ‘ಇರು’ವಿಕೆಗಿಂತ ನೀವು ದೂಡ್ಡವರು, ಎಂದು ನೀವು ಯೋಚಿಸುವ ಕಾರಣ ಜೀವನದ ದೃಷ್ಟಿಕೋನವನ್ನು ಕಳೆದುಕೊಂಡಿದ್ದೀರಿ. ಬ್ರಹ್ಮಾಂಡದಲ್ಲಿ, ಹೋಲಿಕೆಯ ಚಿತ್ರದಲ್ಲಿ ನೋಡಿಕೊಂಡರೆ, ಒಂದು ಧೂಳಿನ ಕಣಕ್ಕಿಂತಲೂ ಸಣ್ಣವರು. ಹೀಗಿದ್ದರೂ, ಒಂದು ಧೂಳಿನ ಕಣಕ್ಕಿಂತಲೂ ಸಣ್ಣದಾಗಿರುವ ಯೋಚನೆ ಅಸ್ತಿತ್ವದ ಸ್ವರೂಪವನ್ನು ನಿರ್ಧರಿಸಬೇಕೆಂದು ಯೋಚಿಸುತ್ತೀರಿ. ನಾನು ಏನನ್ನು ಯೋಚಿಸುತ್ತೇನೆ ಮತ್ತು ನೀವು ಏನನ್ನು ಯೋಚಿಸುತ್ತೀರ ಎನ್ನುವುದಕ್ಕೆ ಯಾವುದೇ ಪ್ರಾಮುಖ್ಯ ಇಲ್ಲ. ಏಕೈಕ ವಾಸ್ತವವಾಗಿರುವ ಅಸ್ತಿತ್ವದ ಭವ್ಯತೆಯೇ ಮುಖ್ಯವಾದುದು.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts