More

    ಇಂಚಲದಲ್ಲಿ ಮಲ್ಲೂರ ಮನೆತನದ ಶಿಕ್ಷಣ ಕ್ರಾಂತಿ: ಸಾಧಕ ಡಿ.ಬಿ. ಮಲ್ಲೂರಗೆ ‘ವಿಜಯರತ್ನ’ ಪುರಸ್ಕಾರ

    ಮನೆಗೊಬ್ಬ ಸೈನಿಕ, ಶಿಕ್ಷಕನ್ನು ಸೃಷ್ಟಿಸುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಉತ್ತರ ಕರ್ನಾಟಕದ ಇಂಚಲ ಗ್ರಾಮ. ಈ ಗ್ರಾಮದಲ್ಲಿ ಶಿಕ್ಷಣ ಕಾಂತ್ರಿಯನ್ನೇ ಮಾಡಿದೆ ಮಲ್ಲೂರ ಕುಟುಂಬ. ತಂದೆ-ಗುರುವಿನ ಮಾರ್ಗದಲ್ಲೇ ಸಾಗಿ ಮಹತ್ತರ ಸಾಧನೆ ಮಾಡಿದ ದೊಡ್ಡನಾಯಕ ಭರಮನಾಯಕ (ಡಿ.ಬಿ.) ಮಲ್ಲೂರ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರನಟ ರಮೇಶ್​ ಅರವಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ನಟಿ ಶರ್ಮಿಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಉತ್ತರ ಕರ್ನಾಟಕಭಾಗದಲ್ಲಿ ಧಾರ್ವಿುಕ, ಆಧ್ಯಾತ್ಮಿಕ, ಸಂಸ್ಕೃತಿ, ಶೈಕ್ಷಣಿಕ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡುತ್ತ ಬಂದಿರುವ ಪುಟ್ಟ ಗ್ರಾಮ ಇಂಚಲ. ಈ ಗ್ರಾಮ ಮನೆಗೊಬ್ಬ ಸೈನಿಕ, ಶಿಕ್ಷಕನ್ನು ಸೃಷ್ಟಿಸುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಅಲ್ಲದೆ, ಈ ಭಾಗದಲ್ಲಿ ಶಿಕ್ಷಣ ಕಾಶಿ ಎಂದೇ ಕರೆಸಿಕೊಳ್ಳುತ್ತಿದೆ. ಇಂಚಲ ಗ್ರಾಮ ಬೈಲಹೊಂಗಲ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿದೆ. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದುಳಿದ ಕುಗ್ರಾಮ ಎಂದು ಕರೆಯಿಸಿಕೊಳ್ಳುತ್ತಿದ್ದ ಇಂಚಲ ಗ್ರಾಮ ಇದೀಗ ಶಿಕ್ಷಣ ಕಾಶಿಯಾಗಿ ಬದಲಾಗಿದ್ದು ದೊಡ್ಡ ಇತಿಹಾಸ. ಡಿ.ಬಿ.ಮಲ್ಲೂರ ಅವರ ತಂದೆ ಭರಮನಾಯಕ ಮಲ್ಲೂರ ಅವರು ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟರು. ಅದನ್ನೇ ಮುಂದುವರಿಸಿಕೊಂಡು ಬಂದ ಕುಟುಂಬ ಅಂದು ಇಂಚಲ ಗ್ರಾಮ ಬದಲಾವಣೆಗೆ ಸಂಕಲ್ಪ ತೊಟ್ಟ ಡಾ.ಶಿವಾನಂದ ಭಾರತೀ ಸ್ವಾಮೀಜಿ ಅವರಿಗೆ ಸಾಥ್​ ನೀಡಿ, ಅವರ ಮಾರ್ಗದರ್ಶನ, ಆಶೀರ್ವಾದದೊಂದಿಗೆ ನಿವೃತ್ತ ಶಿಕ್ಷಕ ದೊಡ್ಡನಾಯಕ ಭರಮನಾಯಕ (ಡಿ.ಬಿ.) ಮಲ್ಲೂರ ಅವರು ಜೊತೆಗೂಡಿ ಗ್ರಾಮದಲ್ಲಿ 1975ರಲ್ಲಿ ಶ್ರೀ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ತದನಂತರ ಗ್ರಾಮದಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉಚಿತ ಶಿಕ್ಷಣ ನೀಡಿದರು. ಪರಿಣಾಮ ಇಂದು ಗ್ರಾಮದ ಪ್ರತಿ ಮನೆಗೊಬ್ಬ ಶಿಕ್ಷಕನಿದ್ದಾನೆ. ಅಲ್ಲದೆ, ಗ್ರಾಮದ ಹಲವರು ಸೈನಿಕರು ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಸದ್ಯ 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 400ಕ್ಕೂ ಅಧಿಕ ಜನರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವರು ಸಲ್ಲಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ತಮಿಳುನಾಡಿನ ಮದ್ರಾಸ್ ರೆಜಿಮೆಂಟ್ನಲ್ಲಿ ಡಿ.ಬಿ. ಮಲ್ಲೂರ ಅವರ ಪುತ್ರ ಯಲ್ಲನಗೌಡ ಮಲ್ಲೂರ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಬ್ರಿಗೇಡಿಯರ್ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆನ್ನುವದು ವಿಶೇಷ.

    1960ರ ಸಂದರ್ಭದಲ್ಲಿ ಈ ಗ್ರಾಮದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಯಾರೂ ಬರುತ್ತಿರಲಿಲ್ಲ. ಈ ಗ್ರಾಮದಲ್ಲಿ ಕೆಲವೇ ಕೆಲ ಶಿಕ್ಷಕರು ಕೂಡ ಪರ ಊರುಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ಈ ಗ್ರಾಮ ಶೈಕ್ಷಣಿಕವಾಗಿ ಬಹಳ ಹಿಂದುಳಿದಿತ್ತು. ಆಗ ಡಾ.ಶಿವಾನಂದ ಭಾರತೀ ಸ್ವಾಮೀಜಿ ಅವರು ಗ್ರಾಮ ಸುಧಾರಣೆ ಸಂಕಲ್ಪಕ್ಕೆ ನಿವೃತ್ತ ಶಿಕ್ಷಕ ಡಿ.ಬಿ. ಮಲ್ಲೂರ ನೇತೃತ್ವ ವಹಿಸಿಕೊಂಡು ಅವರ ಮಾರ್ಗದರ್ಶನದಲ್ಲಿ 1984ರಲ್ಲಿ ಶ್ರೀ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆಯ ಗ್ರಾಮೀಣ ಶಿಕ್ಷಕರ ತರಬೇತಿ ಕೇಂದ್ರ(ಟಿಸಿಎಚ್ ಕಾಲೇಜು) ಆರಂಭಿಸಿದರು. ಬಳಿಕ ಗ್ರಾಮದಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉಚಿತವಾಗಿ ಶಿಕ್ಷಣ ನೀಡಿದರು. ಉಚಿತ ಪ್ರಸಾದ ನಿಲಯ ಆರಂಭಿಸಿದರು. ಅವರ ವಿಶೇಷ ಪ್ರಯತ್ನದಿಂದಾಗಿ ಗ್ರಾಮವು ಶೈಕ್ಷಣಿಕವಾಗಿ ಮುಂದುವರಿದಿದ್ದು, ಶೈಕ್ಷಣಿಕ ಭೂಪಟದಲ್ಲಿ ತನ್ನ ಛಾಪು ಮೂಡಿಸಿದೆ.

    ಸದ್ಯ ಶ್ರೀ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ, ಪ್ರೌಢಶಾಲೆ, ಪಿಯುಸಿ ವಿಜ್ಞಾನ, ಕಲೆ, ವಾಣಿಜ್ಯ, ಬಿಎ, ಬಿ.ಕಾಂ, ಬಿಎಸ್ಸಿ ಸೇರಿ ವಿವಿಧ ಪದವಿ ಹಾಗೂ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೆದಿಕ್ ವೈದ್ಯಕೀಯ ಮಹಾವ್ಯಿದಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರವನ್ನು ಒಳಗೊಂಡಿದೆ. ಅಲ್ಲದೆ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯು ಬೆಂಗಳೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಶಿಕ್ಷಣ ಕ್ರಾಂತಿಯನ್ನು ವಿಸ್ತರಿಸಿಕೊಂಡಿದೆ.

    ಒಟ್ಟಿನಲ್ಲಿ ಇಂಚಲ ಗ್ರಾಮದಲ್ಲಿ 1975ರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಕಲಿಕೆಗಾಗಿ ಪರ ಊರುಗಳಿಗೆ ಅಲೆದಾಡಬಾರದು ಎಂಬ ಉದ್ದೇಶದಿಂದ ಮಕ್ಕಳ ಕಲಿಕೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಮ್ಮ ಗ್ರಾಮದ ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳು ಭಯ ರಹಿತವಾಗಿ ಅಧ್ಯಯನ ಕೈಗೊಳ್ಳಲು ಪೂರಕವಾದ ವಾತಾವರಣ ಕಲ್ಪಿಸಲಾಗಿದೆ. ವಸತಿ ನಿಲಯದಲ್ಲಿ ನೈತಿಕ ಶಿಕ್ಷಣ, ಆಧ್ಯಾತ್ಮ ಮಾರ್ಗದರ್ಶನ ನೀಡಲಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎನ್ನುತ್ತಾರೆ ಶ್ರೀ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆಯ ಚೇರ್ಮನ್ ಜ.ಬಿ.ಮಲ್ಲೂರ.

    ಇಂಚಲದಲ್ಲಿ ಮಲ್ಲೂರ ಮನೆತನದ ಶಿಕ್ಷಣ ಕ್ರಾಂತಿ: ಸಾಧಕ ಡಿ.ಬಿ. ಮಲ್ಲೂರಗೆ 'ವಿಜಯರತ್ನ' ಪುರಸ್ಕಾರ

    ಕೆಳದಿ ಚನ್ನಮ್ಮರ ವಂಶಸ್ಥರ ಪರಿಶ್ರಮ: ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಾಯಕ ಕುಟುಂಬ ಎಂದೇ ಖ್ಯಾತಿ ಪಡೆದುಕೊಂಡಿರುವ ಮಲ್ಲೂರ ಮನೆತನ ಮೂಲತಃ ಐತಿಹಾಸಿಕ ಕೆಳದಿ ಚನ್ನಮ್ಮನ ವಂಶಸ್ಥರು. ಇಂಚಲ ಗ್ರಾಮದ ಸುತ್ತಮುತ್ತಲಿನ 7 ಊರಿನ ನಾಯಕ ಕುಟುಂಬವಾಗಿತ್ತು. ಕೃಷಿ ಪ್ರಧಾನ ಕುಟುಂಬವಾಗಿ ಬಡವರಿಗೆ, ಕೂಲಿ ಕಾರ್ವಿುಕರ, ಹಳ್ಳಿಗಳ ವಿಕಾಸಕ್ಕಾಗಿ ದಶಕಗಳಿಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಅಂದು ಡಿ.ಬಿ. ಮಲ್ಲೂರ ಅವರು ಶಿಕ್ಷಕ ವೃತ್ತಿಗೆ ಸ್ವಯಂ ನಿವೃತ್ತಿ ಪಡೆದುಕೊಂಡು ಶ್ರೀಮಠದ ಸೇವೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಡಾ.ಶಿವಾನಂದ ಭಾರತೀ ಸ್ವಾಮೀಜಿ ಅವರು ಗ್ರಾಮಕ್ಕೆ ಬಂದ ಬಳಿಕ ಮಲ್ಲೂರ ಮನೆತನದ ಸಾಮಾಜಿಕ ಸೇವೆ ಮತ್ತಷ್ಟು ವಿಸ್ತಾರಗೊಂಡಿತ್ತು. 34 ವರ್ಷಗಳಿಂದ ಶ್ರೀ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ಮಲ್ಲೂರ ಕುಟುಂಬ ನಿರ್ವಹಿಸಿಕೊಂಡು ಬರುತ್ತಿದೆ.

    ವಿಜಯ ಡಿಫೆನ್ಸ್ ಆಕಾಡೆಮಿ ಸ್ಥಾಪನೆ: ಸವದತ್ತಿ ತಾಲೂಕಿನ ಇಂಚಲ ಗ್ರಾಮ ದೇಶಸೇವೆಗಾಗಿ ಸೈನಿಕರನ್ನು ಅರ್ಪಿಸುವಲ್ಲಿಯೂ ಖ್ಯಾತಿ ಪಡೆದಿದೆ. ಭಾರತೀಯ ಸೇನೆಯ ಪ್ರಮುಖ ಹುದ್ದೆಗಳಲ್ಲಿ ಊರಿನ ಕುಡಿಗಳು ಸೇವೆಗೈಯ್ಯುತ್ತಿರುವುದು ವಿಶೇಷ. ಗ್ರಾಮೀಣ ಮಕ್ಕಳನ್ನು ಸೈನಿಕರನ್ನಾಗಿ ಸಜ್ಜುಗೊಳಿಸುವ ಉದ್ದೇಶದಿಂದ ಮಲ್ಲೂರ ಮನೆತನದವರು ಶ್ರೀ ಸಿದ್ದರಾಮೇಶ್ವರ ಸೈನಿಕ ತರಬೇತಿ ಕೇಂದ್ರದ ಮೂಲಕ ವಿಜಯ ಡಿಫೆನ್ಸ್ ಆಕಾಡೆಮಿ ಸ್ಥಾಪಿಸಿ, 4 ಎಕರೆ ಜಮೀನಲ್ಲಿ ಎಲ್ಲ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಿದ್ದಾರೆ. ಇದನ್ನು ಸೇನಾ ಮೆಡಲ್ ಪುರಸ್ಕೃತ ನಿವೃತ್ತ ಕ್ಯಾಪ್ಟನ್ ಎಂ.ಎಸ್. ಪೂಜಾರಿ ನಿರ್ವಹಣೆ ಮಾಡುತ್ತಾ ಉತ್ತಮ ತರಬೇತಿ ನೀಡುತ್ತಿದ್ದಾರೆ. ಈ ಆಕಾಡೆಮಿಯಲ್ಲಿ ಪ್ರತಿ ಬ್ಯಾಚ್​ಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಮಲ್ಲೂರ ಕುಟುಂಬದ ಯುವ ಕುಡಿ ಕಾರ್ತಿಕ ಮಲ್ಲೂರ ಇದನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತಾ, ಗ್ರಾಮೀಣ ಭಾಗದ ಮಕ್ಕಳಿಗೆ ಸೇನಾ ತರಬೇತಿ, ಪರೀಕ್ಷಾ ತರಬೇತಿ ನೀಡುತ್ತಿದ್ದಾರೆ ಅಲ್ಲದೆ ಕಾರ್ತಿಕ ಅವರು ಗ್ರಾಮದ ಯುವಕರನ್ನು ಒಗ್ಗೂಡಿಸಿ ಡಿ.ಬಿ. ಮಲ್ಲೂರ ಫೌಂಡೇಷನ್ ಸ್ಥಾಪಿಸಿ, ಅನೇಕ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

    ಚೇರ್ಮನ್ ಡಿ.ಬಿ. ಮಲ್ಲೂರ ಮನದಾಳದ ಮಾತು: ಶಿಕ್ಷಣದಿಂದ ವಂಚಿತವಾಗಿದ್ದ ಇಂಚಲ ಗ್ರಾಮಕ್ಕೆ 1960 ಸಂದರ್ಭದಲ್ಲಿ ಶಿಕ್ಷಕರು ಬರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ 1963 ರಿಂದ 1996ರ ವರೆಗೆ ಇಂಚಲ ಗ್ರಾಮದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದೆ. ಅವತ್ತು ಡಾ.ಶಿವಾನಂದ ಭಾರತೀ ಸ್ವಾಮೀಜಿ ಸಲಹೆ ಮೇರೆಗೆ ಶಿಕ್ಷಕ ವೃತ್ತಿಗೆ ಸ್ವಯಂ ನಿವೃತ್ತಿ ಪಡೆದುಕೊಂಡೆ. ಬಳಿಕ ಶ್ರೀಮಠದ ಸೇವೆಯಲ್ಲಿ ಭಾಗಿಯಾದೆ. 1975ರಲ್ಲಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮಾಡಲಾಯಿತು. ಗ್ರಾಮ ಹೆಣ್ಣು ಮಕ್ಕಳ ಶಿಕ್ಷಣ 4ನೇ ತರಗತಿಗೆ ಸೀಮಿತಗೊಂಡಿತ್ತು. ಬಳಿಕ ಪ್ರೌಢಶಾಲೆ ಆರಂಭಿಸಿ ಉಚಿತ ಶಿಕ್ಷಣ, ಪ್ರಸಾದ ನಿಲಯ ಆರಂಭಿಸಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸೃ್ಕ ಪಾಠ ಶಾಲೆ ಹಾಗೂ 1982ರಲ್ಲಿ ಪಿಯುಸಿ ಕಾಲೇಜು ಆರಂಭಿಸಲಾಯಿತು. ನನ್ನ ಮಗ ಎಂ.ಡಿ. ಮಲ್ಲೂರ ಕೂಡ ಸಹಕಾರ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದ್ದಾರೆ. ಅಥಣಿಯ ಕೃಷ್ಣಾ, ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ, ನಿಪ್ಪಾಣಿಯ ಹಾಲಸಿದ್ದನಾಥ, ಕಾಕತಿಯ ಮಾರ್ಕಡೇಯ, ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯ ವಸಂತದಾದಾ ಸುಗರ್ ಸಂಸ್ಥೆ, ಪುಣೆಯ ಭಾರತೀಯ ಶುಗರ್ಸ್ ಸಂಸ್ಥೆ ಅತ್ಯುತ್ತಮ ವ್ಯವಸ್ಥಾಪಕ ನಿರ್ದೇಶಕ ಪ್ರಶಸ್ತಿ ನೀಡಿದೆ. ಇನ್ನೋರ್ವ ಪುತ್ರ ಯಲ್ಲನಗೌಡ ಮಲ್ಲೂರ ಸೇನೆಯಲ್ಲಿ ಕರ್ನಲ್ ಆಗಿ ಸೇವೆಯಲ್ಲಿದ್ದು, ಶೀಘ್ರ ಬ್ರೀಗೇಡಿಯರ್ ಆಗಲಿದ್ದಾರೆ. ಅವರು ಕಾರ್ಗಿಲ್ ಯುದ್ಧಕ್ಕೂ ಮೊದಲು ಆಪರೇಷನ್ ವಿಜಯ ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಾಗ ವೈರಿಗಳ ಗುಂಡು ಎದೆಗೆ ತಗುಲಿದರೂ ಹೋರಾಟ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತ ಸರ್ಕಾರ ಇವರಿಗೆ ವಿಶಿಷ್ಟ ಸೇನಾ ಪ್ರಶಸ್ತಿಯನ್ನು ಎರಡು ಬಾರಿ ಕೊಡಮಾಡಿದೆ. ಗಾಯಗೊಂಡು ಜೀವನ್ಮರಣಗಳ ಮಧ್ಯೆ ಹೋರಾಡಿದ ಇವರು ಮತ್ತೆ ದೇಶ ಸೇವೆಯ ಛಲ ಬೀಡದೆ ಸೇನೆಗೆ ಮರಳಿದ್ದು ಈತನ ದೇಶ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಈಗ ಇದೆ ರೀತಿ ಶ್ರೀಮಠದ ಸೇವೆ ಧಾರ್ವಿುಕ, ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಮೊಮ್ಮಗ ಕಾರ್ತಿಕ ಎಂ. ಮಲ್ಲೂರ ಮುನ್ನಡೆದಿದ್ದು, ಬಿಇ ಓದಿದರೂ ಉನ್ನತ್ತ ಹುದ್ದೆ ಪಡೆದು ಆರಾಮಾಗಿ ಇರದೆ ಸಮಾಜ ಸೇವೆಗೆ ಜೀನವ ಮುಡುಪಾಗಿಡುವ ಆಶಯ ಹೊಂದಿದ್ದಾನೆ ಎನ್ನುವಾಗ ಡಿ.ಬಿ. ಮಲ್ಲೂರ ಅವರ ಮುಖದಲ್ಲಿ ಸಂತೃಪ್ತಭಾವ ಮೂಡಿತ್ತು.

    ಮಲ್ಲೂರ ಮನೆತನ ಸಮಾಜ ಸುಧಾರಣೆಗಾಗಿ ಶ್ರಮಿಸಿಕೊಂಡು ಬರುತ್ತಿದೆ. ಶ್ರೀಮಠದ ಸೇವೆಯಲ್ಲಿ ಮಲ್ಲೂರ ಕುಟುಂಬ ತೊಡಗಿಸಿಕೊಂಡಿದೆ. ಗ್ರಾಮದ ಸುಧಾರಣೆಗಾಗಿ ಮಲ್ಲೂರ ಕುಟುಂಬ ಕೆಲಸ ಮಾಡಿಕೊಂಡು ಬರುತ್ತಿದೆ. ಪ್ರಶಸ್ತಿ, ಹೆಸರು ಪಡೆದುಕೊಳ್ಳುವುದಕ್ಕಾಗಿ ನಮ್ಮ ಮನೆತನ ಸಮಾಜ ಸೇವೆ ಮಾಡುತ್ತಿಲ್ಲ. ನಮ್ಮದು ಮೂಲತಃ ಕೃಷಿ ಪ್ರಧಾನ ಕುಟುಂಬವಾಗಿದ್ದರಿಂದ ಜನರ ಸೇವೆಯೇ ನಮ್ಮ ಕಾಯಕ. ಇವತ್ತು ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೆದಿಕ್ ವೈದ್ಯಕೀಯ ಮಹಾವ್ಯಿದಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ ಎಂದರೆ ಅದಕ್ಕೆ ಡಾ. ಶಿವಾನಂದ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಅಪಾರ. ನಮ್ಮ ಮನೆತನಕ್ಕೆ ಪ್ರಶಸ್ತಿಗಿಂತ ಗ್ರಾಮೀಣ ಭಾಗದ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವುದು ಮುಖ್ಯ. ಪ್ರಶಸ್ತಿಗಾಗಿ ಯಾವುದೇ ಕೆಲಸಗಳನ್ನು ಮಾಡಿಕೊಂಡು ಬರುತ್ತಿಲ್ಲ. ನಮ್ಮ ಮನೆತನ ಶ್ರೀಮಠದ ಸೇವೆಗಾಗಿಯೇ ಮುಡಿಪಾಗಿದೆ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ ಮಲ್ಲೂರ ಅವರು.

    ಕೃಷಿ ಕಾಯಕದ ಜತೆಗೆ ಮಠದ ಸೇವೆ: ಕೃಷಿ ಕಾಯಕದ ಜತೆಗೆ ಶ್ರೀಮಠದ ಸೇವೆಯಲ್ಲಿ ಭಾಗಿಯಾಗಿದ್ದೇವೆ. ಅಂದು ಶಿಕ್ಷಣದಿಂದ ವಂಚಿತವಾದ ಇಂಚಲ ಗ್ರಾಮ ಇಂದು ಶಿಕ್ಷಣ ಕಾಶಿ ಎಂದು ಖ್ಯಾತಿಗಳಿಸುವ ಮಟ್ಟಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಡಾ.ಶಿವಾನಂದ ಭಾರತೀ ಸ್ವಾಮೀಜಿ, ಡಿ.ಬಿ. ಮಲ್ಲೂರ ಅವರ ಪರಿಶ್ರಮ ಕಾರಣವಾಗಿದೆ. ಕುಟುಂಬವು ನಿರಂತರವಾಗಿ ಶ್ರಮಿಸಿದ ಫಲವಾಗಿಯೇ ಇಂದು ಇಂಚಲ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಶಿವಯೋಗೀಶ್ವರ ಗ್ರಾಮೀಣ ಆಯುರ್ವೆದಿಕ್ ವೈದ್ಯಕೀಯ ಮಹಾವ್ಯಿದಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. 70 ವರ್ಷಗಳಿಂದ ಇಂಚಲ ಗ್ರಾಮದಲ್ಲಿ ವೇದಾಂತ ಪರಿಷತ್ ಶ್ರೀಮಠದಲ್ಲಿ ನಡೆದುಕೊಂಡು ಬರುತ್ತಿದೆ. ಧಾರ್ವಿುಕ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಎಲ್ಲ ಜಾತಿ, ಪಂಗಡದವರು ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವತ್ತು ಇಂಚಲ ಗ್ರಾಮ ಎಷ್ಟು ಅಭಿವೃದ್ಧಿ ಹೊಂದಿದೆ ಎಂದರೆ ಸುಮಾರು 1 ಕೋಟಿ ರೂ. ಅಧಿಕ ಸರ್ಕಾರಿ ಸಂಬಳ ಪಡೆಯುವ ಜನರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಇಲಾಖೆಯ ಸಹಕಾರಿ ಸಂಘಗಳ ಅಪರ ನಿಬಂಧಕ ಮಲ್ಲಿಕಾರ್ಜುನ ದೊಡ್ಡನಾಯಕ ಮಲ್ಲೂರ ವಿಜಯವಾಣಿ ಜತೆಗೆ ಮನದಾಳ ಹಂಚಿಕೊಂಡಿದ್ದಾರೆ.

    ಶ್ರೀಮಠದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವಾನಂದ ಭಾರತೀ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಿ.ಬಿ. ಮಲ್ಲೂರ ಅವರು ಭಾಗದದಲ್ಲಿ ಮಲ್ಲೂರ ಸರ್, ಮಲ್ಲೂರ ಅಜ್ಜ ಎಂದೇ ಪ್ರಖ್ಯಾತವಾಗಿದ್ದು, ಅವರಿಗೆ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಕೊಡಮಾಡುವ ವಿಜಯರತ್ನ ಪ್ರಶಸ್ತಿ ಬಂದಿರುವುದು ತುಂಬ ಸಂತೋಷವಾಗಿದೆ. ನಮ್ಮ ತಂದೆಯ ಸೇವೆ ಗುರುತಿಸಿ ನಮ್ಮ ಕುಟುಂಬಕ್ಕೆ ಪ್ರಶಸ್ತಿ ನೀಡಿರುವುದಕ್ಕೆ ಅಭಿನಂದನೆಗಳು.
    | ಎಂ.ಡಿ. ಮಲ್ಲೂರ ಸಹಕಾರ ಇಲಾಖೆಯ ಸಹಕಾರಿ ಸಂಘಗಳ ಅಪರ ನಿಬಂಧಕರು, ಎಂ.ಡಿ. ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ

    ನನ್ನ ಸೇವೆ ಪರಿಗಣಿಸಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಕೊಡಮಾಡಿರುವ ವಿಜಯರತ್ನ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
    | ಡಿ.ಬಿ.ಮಲ್ಲೂರ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಚೇರ್ಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts