More

    ರಫೆಲ್ ಹೊತ್ತು ತಂದ ವಿಜಯಪುರ ವಿದ್ಯಾರ್ಥಿ

    ಪರಶುರಾಮ ಭಾಸಗಿ ವಿಜಯಪುರ

    ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನ ರಫೆಲ್ ತರಲು ಹೋದ ಸೈನಿಕರ ಪೈಕಿ ಓರ್ವ ವಿಜಯಪುರದಲ್ಲಿ ವ್ಯಾಸಂಗ ಮಾಡಿರುವುದು ಬರದ ನಾಡಿನ ಹಿರಿಮೆಗಳಲ್ಲೊಂದಾಗಿದೆ !
    ಇಲ್ಲಿನ ಸೈನಿಕ ಶಾಲೆಯ ವಿದ್ಯಾರ್ಥಿ ಅರುಣಕುಮಾರ್ ಅವರೇ ರಫೆಲ್ ತರಲು ಹೋದ ಸೈನಿಕ. ಭಾರತೀಯ ವಾಯು ನೆಲೆಯ ಬಹುದಿನದ ಕನಸಾಗಿದ್ದ ರಫೆಲ್ ಯುದ್ಧ ವಿಮಾನ ಖರೀದಿ ಈಗ ನನಸಾಗಿದ್ದು ಮೊದಲ ಹಂತದಲ್ಲಿ ಐದು ಯುದ್ಧ ವಿಮಾನಗಳು ಹಸ್ತಾಂತರಿಸಲ್ಪಟ್ಟಿವೆ. ಆ ಐದು ವಿಮಾನಗಳ ಪೈಕಿ ಒಂದನ್ನು ಅರುಣಕುಮಾರ್ ಭಾರತಕ್ಕೆ ತರುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಅರುಣಕುಮಾರ ಮೂಲತಃ ಬಿಹಾರ ರಾಜ್ಯದವರು. ಇವರ ಪೂರ್ಣ ವ್ಯಾಸಂಗ ಮಾತ್ರ ವಿಜಯಪುರದಲ್ಲಾಗಿದೆ. 6 ರಿಂದ ದ್ವಿತೀಯ ಪಿಯುಸಿ ವರೆಗೆ ವ್ಯಾಸಂಗ ಮಾಡಿರುವ ಅರುಣಕುಮಾರ 2002ರಲ್ಲಿ ತೇರ್ಗಡೆಯಾಗಿದ್ದರು.

    ಎನ್‌ಡಿಎ ತರಬೇತಿ

    ದ್ವಿತೀಯ ಪಿಯುಸಿ ನಂತರ ಅರುಣಕುಮಾರ ಎನ್‌ಡಿಎನಲ್ಲಿ 3 ವರ್ಷ ವಿಶೇಷ ತರಬೇತಿ ಪಡೆದಿದ್ದರು. ಆ ಬಳಿಕ ವಾಯು ಸೇನೆಯಲ್ಲಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸದ್ಯ ವಿಂಗ್ ಕಮಾಂಡರ್ ಆಗಿರುವ ಅರುಣಕುಮಾರ ಅತ್ಯಂತ ತೀಕ್ಷ್ಣಮತಿಯಾಗಿದ್ದು ಸಕಲ ಕಲಾವಲ್ಲಭರೆನಿಸಿಕೊಂಡಿದ್ದಾರೆ.
    ವಿದ್ಯಾರ್ಥಿ ದಿಸೆಯಲ್ಲಿಯೇ ಇವರು ಪ್ರತೀ ರಂಗದಲ್ಲೂ ಮುಂದಿದ್ದರು. ಡಿಸ್ಟಿಂಕ್ಷನ್‌ನಲ್ಲೇ ತೇರ್ಗಡೆಯಾಗುತ್ತಿದ್ದ ಅರುಣಕುಮಾರ ಹಾಕಿ, ಕುದುರೆ ಸವಾರಿ, ಈಜು ಸ್ಪರ್ಧೆ, ಬಾಸ್ಕೆಟ್ ಬಾಲ್ ಪಂದ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಮಾತ್ರವಲ್ಲ ವಿಜಯ ನಗರ ಸದನ ಎಂಬ ವಿದ್ಯಾರ್ಥಿ ನಿಲಯದ ಕ್ಯಾಪ್ಟನ್ ಸಹ ಆಗಿದ್ದರೆಂದು ಅವರ ಗುರುಗಳಾದ ಜಿ. ಶ್ರೀರಾಮಮೂರ್ತಿ ಹೆಮ್ಮೆಯಿಂದ ಹೇಳುತ್ತಾರೆ. ಒಟ್ಟಿನಲ್ಲಿ ಅತ್ಯಾಧುನಿಕ ಯುದ್ದ ವಿಮಾನವನ್ನು ಚಲಾಯಿಸಿಕೊಂಡು ಸೇನೆ ಮಡಿಲಿಗೆ ಹಾಕಿದ ಕೀರ್ತಿಗೆ ಅರುಣಕುಮಾರ ಭಾಜನವಾಗಿದ್ದು ಅವರ ಕಲಿಕೆ ಕ್ಷೇತ್ರವಾದ ಜಿಲ್ಲೆಗೂ ಹೆಮ್ಮೆ ತರಿಸಿದೆ.

    ಅರುಣಕುಮಾರ ಅತ್ಯಂತ ಚತುರ ವಿದ್ಯಾರ್ಥಿ. ಆಟೋಟಗಳಲ್ಲಿ ಮಾತ್ರವಲ್ಲ ಪಾಠದಲ್ಲೂ ಸದಾ ಮುಂದಿರುತ್ತಿದ್ದ. ನಾಯಕತ್ವದ ಗುಣ ಆತನಿಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಇತ್ತು. ರಫೆಲ್ ಯುದ್ಧ ವಿಮಾನ ತರುವಲ್ಲಿ ನನ್ನ ವಿದ್ಯಾರ್ಥಿಯೂ ಇದ್ದಾನೆಂಬುದೇ ಹೆಮ್ಮೆಯ ವಿಷಯ.
    ಜಿ. ಶ್ರೀರಾಮಮೂರ್ತಿ, ಕಲಿಸಿದ ಗುರು

    ವಿಂಗ್ ಕಮಾಂಡರ್ ಅರುಣಕುಮಾರ ಅಂಥವರನ್ನು ಸೇನೆಗೆ ಸೇರುವಲ್ಲಿ ಪ್ರಮುಖ ಪಾತ್ರವಹಿಸಿರುವ ವಿಜಯಪುರ ಸೈನಿಕ ಶಾಲೆ ಕೀರ್ತಿ ಅಗಾಧವಾದದ್ದು. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸೇನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಆದರೆ, ರಫೆಲ್‌ನಂಥ ಅತ್ಯಾಧುನಿಕ ವಿಮಾನ ತರುವಲ್ಲಿ ನಮ್ಮ ಶಾಲೆ ವಿದ್ಯಾರ್ಥಿ ಇರುವುದು ಸಂತಸ ತರಿಸಿದೆ.
    ಕ್ಯಾಪ್ಟನ್ ವಿನಯ ತಿವಾರಿ, ಪ್ರಾಂಶುಪಾಲರು ಸೈನಿಕ ಶಾಲೆ

    ರಫೆಲ್ ಹೊತ್ತು ತಂದ ವಿಜಯಪುರ ವಿದ್ಯಾರ್ಥಿ
    ರಫೆಲ್ ಹೊತ್ತು ತಂದ ವಿಜಯಪುರ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts