More

    ಕರೊನಾ ಗೆದ್ದು ಬಂದ ವೃದ್ಧೆ

    ವಿಜಯಪುರ : ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ವೃದ್ಧೆ ಗುಣಮುಖರಾಗಿದ್ದು, ಕರೊನಾಗೆ ಬೆಚ್ಚಿದ್ದ ಗುಮ್ಮಟನಗರಿ ಜನರಲ್ಲಿ ನಿರಾಳ ಭಾವ ಮೂಡಿದೆ.

    ಕರೊನಾ ರೋಗದ ವಿರುದ್ಧ ಹೋರಾಟದ ಫಲವಾಗಿ ನಗರದ ಕೋವಿಡ್-19 ಸೋಂಕಿತೆ 61 ವರ್ಷದ ವೃದ್ಧೆ (ರೋಗಿ ಸಂಖ್ಯೆ 221) ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಹೊಂದಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

    ಏಪ್ರಿಲ್ 9 ರಂದು ಕೋವಿಡ್-19 ಸೋಂಕಿಗೆ ಒಳಗಾಗಿ ತೀವ್ರ ಅಸ್ವಸ್ಥ ರೀತಿಯಲ್ಲಿ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಎರಡು ಬಾರಿ ಪಾರ್ಶ್ವವಾಯು ಪೀಡಿತ ಮತ್ತು ಥೈರಾಯ್ಡಗಳಂತಹ ಕಾಯಿಲೆಗಳಿಂದ ಬಳಲಿ ಗಂಭೀರ ಪರಿಸ್ಥಿತಿಯಲ್ಲಿ 61 ವಯೋಮಾನದ ರೋಗಿ ಸಂಖ್ಯೆ 221 ದಾಖಲಾಗಿದ್ದರು.

    ನಿರಂತರ ಚಿಕಿತ್ಸೆ, ವೈದ್ಯರು ಮತ್ತು ಸಿಬ್ಬಂದಿ, ತಜ್ಞರ ಕಾಳಜಿಯಿಂದಾಗಿ ಮತ್ತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಪಂ ಸಿಇಒ ಗೋವಿಂದರೆಡ್ಡಿ ಅವರ ಸೂಕ್ತ ಮಾರ್ಗದರ್ಶನದಲ್ಲಿ ರೋಗಿ ಸಂಖ್ಯೆ 221 ಸಂಪೂರ್ಣ ಗುಣಮುಖ ಹೊಂದಿದ ಶ್ರೇಯಸ್ಸು ಜಿಲ್ಲಾಡಳಿತ ಮತ್ತು ಜಿಲ್ಲೆಯ ವೈದ್ಯ ಸಿಬ್ಬಂದಿಗೆ ಸಲ್ಲುತ್ತದೆ.

    ಈ ಸಂದರ್ಭದಲ್ಲಿ ರೋಗಿ ನಂ. 221 ಮಾತನಾಡಿ, ಎಲ್ಲ ವೈದ್ಯರಿಗೆ, ಸಿಬ್ಬಂದಿಗೆ ಭಾವುಕರಾಗಿ ಅಭಿನಂದನೆ ಸಲ್ಲಿಸಿದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಸ್ಮರಿಸಿದ ಅವರು ಅತ್ಯುತ್ತಮ ಉಪಚಾರದಿಂದ ಮತ್ತು ಸಿಬ್ಬಂದಿ ಸೇವೆಯಿಂದ ಗುಣಮುಖರಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.

    ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ ಮಾತನಾಡಿ, ತಜ್ಞ ವೈದ್ಯರ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಎಲ್ಲ ಸಿಬ್ಬಂದಿಯ ಅತ್ಯುತ್ತಮ ಸೇವೆಯಿಂದಾಗಿ ಹಾಗೂ ರೋಗಿಯ ಸಹಕಾರದಿಂದ ಕೋವಿಡ್-19 ಸೋಂಕು ನಿವಾರಣೆ ಮಾಡಲು ಸಾಧ್ಯವಾಗಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನೇತೃತ್ವದ ಅಧಿಕಾರಿಗಳ ತಂಡದ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇತರ 36 ರೋಗಿಗಳು ಸಹ ಗುಣಮುಖರಾಗುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

    ರೋಗಿ ಸಂಖ್ಯೆ 221ಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಹರೀಶ್ ಪೂಜಾರಿ ಮಾತನಾಡಿ, ರೋಗಿ ಆಸ್ಪತ್ರೆಗೆ ದಾಖಲಾದಾಗ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು. ಐಸಿಯು ಸೇರಿ ಇತರ ಚಿಕಿತ್ಸೆ ನೀಡಿದ ಲವಾಗಿ ರೋಗಿಯಲ್ಲಿ ಚೇತರಿಕೆ ಕಂಡು ಬಂದು ಗುಣಮುಖರಾಗಿದ್ದಾರೆ. ರೋಗಿಯಲ್ಲಿ ಸದ್ಯಕ್ಕೆ ಯಾವುದೇ ಕರೊನಾ ಲಕ್ಷಣ ಇಲ್ಲ. ಸ್ವಲ್ಪ ವಿಶ್ರಾಂತಿ ಅವಶ್ಯಕತೆಯಿದ್ದು, ಇನ್ನೂ 14 ದಿನ ಹೋಮ್ ಕ್ವಾರಂಟೈನ್ ಮೂಲಕ ತೀವ್ರ ನಿಗಾ ಇಡಲಾಗುವುದು ಎಂದು ತಿಳಿಸಿದರು.

    ಜಿಲ್ಲಾಸ್ಪತ್ರೆ ಆವರಣದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಎಲ್ಲ ವೈದ್ಯಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕಿನಿಂದ ಗುಣಮುಖ ಹೊಂದಿದ ಮಹಿಳೆಗೆ ಶುಭ ಹಾರೈಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಡಾ.ಎಂ.ಬಿ.ಬಿರಾದಾರ, ಡಾ.ಕವಿತಾ, ಡಾ.ಲಕ್ಕಣ್ಣನವರ, ಡಾ. ಈರಣ್ಣ ಧಾರವಾಡಕರ, ಡಾ.ಸಂಪತ್‌ಕುಮಾರ ಗುಣಾರೆ ಸೇರಿದಂತೆ ಇತರ ವೈದ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts