More

    ಪೌರಕಾರ್ಮಿಕರಿಗಿಲ್ಲ ಮೂರು ತಿಂಗಳ ಪಗಾರ

    ಪರಶುರಾಮ ಭಾಸಗಿ ವಿಜಯಪುರ

    ಕರೊನಾ ಮಹಾಮಾರಿ ನಡುವೆಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವವರಿಗೆ ಇಡೀ ದೇಶವೇ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದೇನೋ ಸರಿ, ಆದರಿಲ್ಲಿ ಸಕಾಲಕ್ಕೆ ಸಂಬಳ ಸಿಗದೆ ಪೌರ ಕಾರ್ಮಿಕರು ಪರದಾಡುತ್ತಲೇ ಇದ್ದಾರೆ !
    ಮಹಾನಗರ ಪಾಲಿಕೆಗೆ ಕೆಲಸಕ್ಕೆ ಸೇರಿದಾಗಿನಿಂದ ಈವರೆಗೂ ಸಕಾಲಕ್ಕೆ ಸಂಬಳವಾಗಿಲ್ಲ, ಕಳೆದ ನಾಲ್ಕು ತಿಂಗಳಾಯಿತು, ಸಂಬಳ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬುದು ಪೌರ ಕಾರ್ಮಿಕರ ಅಂಬೋಣ. ಆದರೆ, ಕೇವಲ 3 ತಿಂಗಳ ಸಂಬಳ ಮಾತ್ರ ಪಾವತಿಸಬೇಕಿದೆ ಎಂಬುದು ಅಧಿಕಾರಿಗಳ ಸಮರ್ಥನೆ.

    ಸಿಬ್ಬಂದಿ ವಿವರ

    ಪಾಲಿಕೆಯಲ್ಲಿ 131 ಕಾಯಂ ಪೌರಕಾರ್ಮಿಕರಿದ್ದು, ಇವರಿಗೆ ಸಕಾಲಕ್ಕೆ ಸಂಬಳವಾಗುತ್ತಿದೆ. ಆದರೆ, 456 ಹೊರಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿದ್ದು, ಆಟೋ ಡ್ರೈವರ್, ಹೆಲ್ಪರ್, ಮೇಲ್ವಿಚಾರಕರು, ಲೋಡರ್, ಕ್ಲೀನರ್ ಹೀಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡುವವರು ಸಂಬಳವಿಲ್ಲದೆ ಸಂಕಟ ಅನುಭವಿಸುತ್ತಿದ್ದಾರೆ.

    ತಿಂಗಳಿಗೆ ಬೇಕು ರೂ.1.25 ಕೋಟಿ

    ಪ್ರತಿ ತಿಂಗಳು ವೇತನ ಪಾವತಿಗೆ 1.25 ಕೋಟಿ ರೂ. ಅನುದಾನ ಬೇಕು. ಮೂರು ತಿಂಗಳ ಸಂಬಳ ಎಂದುಕೊಂಡರೆ 3.75 ಕೋಟಿ ರೂ. ಅನುದಾನ ಬೇಕು. ಮೂರು ತಿಂಗಳಿಂದ ವೇತನ ಬಂದಿಲ್ಲವೆಂದು ಅಧಿಕಾರಿಗಳೇ ತಿಳಿಸುತ್ತಾರೆ. ಪರಿಸ್ಥಿತಿ ಹೀಗಾದರೆ ಕರೊನಾದಂಥ ಕಡುಕಷ್ಟಕರ ಸನ್ನಿವೇಶದಲ್ಲಿ ಜೀವನ ನಿರ್ವಹಿಸುವುದು ಹೇಗೆ ಎಂಬುದು ಕಾರ್ಮಿಕರ ಅಳಲು.

    ಸ್ಯಾನಿಟೈಸರ್ ಇಲ್ಲ

    ಪೌರ ಕಾರ್ಮಿಕರಿಗೆ ಕರೊನಾ ನಿಯಂತ್ರಣಕ್ಕೆ ಸೂಕ್ತ ಸಾಧನಗಳೂ ಇಲ್ಲ. ಸ್ಯಾನಿಟೈಸರ್ ಬದಲಿ ಸಾಬೂನು ನೀಡಲಾಗಿದೆ. ಗ್ಲೌಸ್‌ಗಳು ಸಮರ್ಪಕವಾಗಿಲ್ಲ. ಮಾಸ್ಕ್ ನೀಡಿದರೂ ಪೌರ ಕಾರ್ಮಿಕರು ಅದನ್ನು ಸರಿಯಾಗಿ ಬಳಸದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಸಗುಡಿಸುತ್ತಿರುವುದು ಕಂಡು ಬಂದಿದೆ. ಹೀಗೆ ಹತ್ತು ಹಲವು ಸಮಸ್ಯೆಗಳ ಮಧ್ಯೆಯೂ ನಿತ್ಯ ನಗರ ಶುಚಿಗೊಳಿಸುಸುವ ಕಾರ್ಯದಲ್ಲಿ ತಲ್ಲೀನರಾಗಿರುವ ಕಾರ್ಮಿಕರ ಸೇವೆಗೆ ನಿಜಕ್ಕೂ ಚಪ್ಪಾಳೆ ತಟ್ಟಲೇಬೇಕು.

    ಪೌರಕಾರ್ಮಿಕರಿಗೆ ಮೂರು ತಿಂಗಳ ಸಂಬಳ ನೀಡಿಲ್ಲ. ಇದೀಗ ಅನುದಾನ ಬಂದಿದೆ. ಸಂಜೆಯೊಳಗೆ (ಏ.6ರಂದು) ಖಜಾನೆ ಮೂಲಕ ಕಾರ್ಮಿಕರ ಖಾತೆಗೆ ಸಂಬಳ ಪಾವತಿಸಲಾಗುವುದು.
    ಶ್ರೀಹರ್ಷಾ ಶೆಟ್ಟಿ, ಆಯುಕ್ತರು ಮಹಾನಗರ ಪಾಲಿಕೆ ವಿಜಯಪುರ

    ಪೌರಕಾರ್ಮಿಕರಿಗಿಲ್ಲ ಮೂರು ತಿಂಗಳ ಪಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts