More

  ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದ ಆಯ್ಕೆ ನಡೆಯಲಿ

  ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಚುರುಕುಗೊಂಡ ಬೆನ್ನಲ್ಲೇ ಕೈ ಪಾಳಯದಲ್ಲಿ ಅಪಸ್ವರ ಕೇಳಿ ಬಂದಿದ್ದು, ಸರ್ವಾನುಮತದ ಅಧ್ಯಕ್ಷರ ಆಯ್ಕೆಗೆ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಆಗ್ರಹಿಸಿದ್ದಾರೆ.
  ರಾಜ್ಯ ಮಟ್ಟದ ಅಧ್ಯಕ್ಷ ಸ್ಥಾನ ಆಗಿರೋದರಿಂದ ಕೇವಲ 20 ಜನ ಕುಳಿತುಕೊಂಡು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಸಭೆ ನಡೆಸುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಸಲು ವರಿಷ್ಠರಿಗೆ ಮನವಿ ಮಾಡುವುದಾಗಿ ಮಂಗಳವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
  ಕೆಲವು ಸೀಮಿತ ಮುಖಂಡರು ಕುಳಿತು ಸಭೆ ನಡೆಸುವುದು ಸರಿಯಲ್ಲ. ಈ ಹಿಂದೆ ಸರ್ವಾನುಮತರಿಂದ ನಿರ್ಣಯ ಕೈಗೊಳ್ಳದ ಕಾರಣಕ್ಕಾಗಿಯೇ ಅಧಿಕಾರ ಕಳೆದುಕೊಂಡಿದ್ದೇವೆ. ಅಂಥ ನಡೆ ಪುನರಾವರ್ತನೆ ಆಗದಿರಲಿ ಎಂದರು.
  ಸಮುದಾಯ ಹಾಗೂ ಪ್ರಾದೇಶಿಕತೆ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಸರಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ, ಉತ್ತರ ಕರ್ನಾಟಕದಿಂದ ಈಗಾಗಲೇ ಸಾಕಷ್ಟು ಜನ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗೆ ಅಧ್ಯಕ್ಷರಾದವರು ಮರಳಿ ಮಂತ್ರಿಯಾಗದೇ ಹೋದದ್ದು ದುರ್ದೈವದ ಸಂಗತಿ. ಹೀಗಾಗಿ ನಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡ. ಕೊಡುವುದಾದರೆ ಸಿಎಂ ಸ್ಥಾನವೇ ಕೊಡಲಿ. ಜಾತಿ-ಸಮುದಾಯದ ಆಧಾರದ ಮೇಲೆ ಅಧ್ಯಕ್ಷರ ಆಯ್ಕೆ ವಿಚಾರ ವರಿಷ್ಠರಿಗೆ ಬಿಟ್ಟಿದ್ದು ಎಂದರು.
  ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ. ಡಿಕೆಶಿ ಇರಲಿ, ಎಚ್.ಕೆ. ಪಾಟೀಲ ಇರಲಿ ಅಥವಾ ರಾಮಲಿಂಗಾರೆಡ್ಡಿ ಯಾರೇ ಇರಲಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕೆಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts