More

    ಶೇ. 70 ರಷ್ಟು ಬಿಜೆಪಿ ಬೆಂಬಲಿತರ ಆಯ್ಕೆ

    ವಿಜಯಪುರ: ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 70 ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
    ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ವಿಚಾರವನ್ನು ಆಯಾ ಗ್ರಾಮದ ಮುಖಂಡರಿಗೆ ಬಿಡಿ. ಅವರ ತೀರ್ಮಾನದಂತೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆರಿಸಿ ತರಬೇಕು. ಆಯಾ ಊರಿನ ಮುಖಂಡರು ಮತ್ತು ಪಕ್ಷದ ಮುಖಂಡರು ಚರ್ಚಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಸುಲಭವಾಗಲಿದೆ. ಅಲ್ಲದೆ, ಮೀಸಲಾತಿ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

    ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ಬಿಜೆಪಿ ಆಡಳಿತ ಇರಬೇಕು ಹಾಗೂ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ಕನಸು ನನಸಾಗಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
    ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗ್ರಾಮ ಪಂಚಾಯಿತಿಯಲ್ಲೂ ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ ರಾಮರಾಮ್ಯ ನಿರ್ಮಾಣದ ಕನಸು ನನಸಾಗಲಿದೆ ಎಂದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಬೂತ್‌ಮಟ್ಟದಲ್ಲಿ ಪಂಚರತ್ನ ಸಮಿತಿ ರಚಿಸಬೇಕು. ಈ ಸಮಿತಿಯೇ ಯಾರು ಚುನಾವಣೆಗೆ ನಿಲ್ಲಬೇಕು ಎಂಬುದನ್ನು ನಿರ್ಧರಿಸಲಿದೆ ಎಂದರು.
    ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ವಾರ್ ರೂಂ, ಕಾಲ್ ಸೆಂಟರ್ ರಚನೆ ಮಾಡಬೇಕು. ಪಂಚಾಯಿತಿ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದ ಪಕ್ಷದ ವಿಚಾರಗಳನ್ನು, ಸಲಹೆ, ಸೂಚನೆಗಳನ್ನು ಹಂಚಿಕೊಳ್ಳಬೇಕು ಎಂದರು. ಶಾಸಕ ಪಿ.ರಾಜೀವ ಮಾತನಾಡಿ, ದೇಶದಲ್ಲಿ ಕಾರ್ಯಕರ್ತರ ಕೈಗೆ ಅಧಿಕಾರ ಕೊಟ್ಟ ಪಕ್ಷ ಬಿಜೆಪಿ. ಗ್ರಾಮ ಮಟದಲ್ಲಿ ಯಾವುದೇ ಗೊಂದಲ ಇಲ್ಲದಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಒಮ್ಮತದಿಂದ ಕಣಕ್ಕಿಳಿಸಿ ಅಧಿಕಾರಕ್ಕೆ ತರಬೇಕೆಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳಿಸಿದರು. ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು ಎಂದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಚಂದ್ರಶೇಖರ ಕವಟಗಿ, ರವೀಂದ್ರ ಲೋಣಿ, ಗೂಳಪ್ಪ ಶೆಟಗಾರ, ಮಲ್ಲಮ್ಮ ಜೋಗೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts