More

    ಚೊಚ್ಚಲ ಸಭೆಗೆ ಸುಜಾತಾ ಸಕಲ ಸಿದ್ಧತೆ

    ವಿಜಯಪುರ: ಮಹಾಮಾರಿ ಕರೊನಾ ಹಿನ್ನೆಲೆ ಬ್ರೇಕ್ ಬಿದ್ದಿದ್ದ ಜಿಪಂ ಸಾಮಾನ್ಯ ಸಭೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು ಅ. 5 ರಂದು ದಿನ ನಿಗದಿಗೊಳಿಸಲಾಗಿದೆ.

    ಪ್ರತೀ ಎರಡು ತಿಂಗಳಿಗೊಮ್ಮೆ ನಡೆಯಬೇಕಿದ್ದ ಸಾಮಾನ್ಯ ಸಭೆ ಕರೊನಾ ಹಿನ್ನೆಲೆ ನಡೆದಿರಲಿಲ್ಲ. ಕಳೆದ ಸುದೀರ್ಘ ಎಂಟು ತಿಂಗಳ ಬಳಿಕ ಸಭೆ ನಡೆಯುತ್ತಿದ್ದು ಹಾಲಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರ ಚೊಚ್ಚಲ ಸಭೆ ಇದಾಗಿದೆ.

    ಡಿ.23, 2019ರಂದು 16ನೇ ಸಾಮಾನ್ಯ ಸಭೆ ನಡೆಸಲಾಗಿತ್ತು. ಆ ಬಳಿಕ ಸಭೆಗೆ ಮುಹೂರ್ತ ಕೂಡಿ ಬಂದಿರಲಿಲ್ಲ. ಇದೀಗ ಸಾಮಾಜಿಕ ಅಂತರದೊಂದಿಗೆ ಸಭೆ ನಡೆಸಲು ಜಿಪಂ ನಿರ್ಧಾರ ಕೈಗೊಂಡಿದೆ.

    ಕಳ್ಳಿಮನಿ ಅವರ ಚೊಚ್ಚಲ ಸಭೆ
    ಜೂ. 30 ರಂದು ನಡೆದ ಜಿಪಂ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಳ್ಳಿಮನಿ ಅವರಿಗೆ ಆ ದಿನದ ಸಭೆ ಹೊರತಾಗಿ ಈವರೆಗೂ ಸಾಮಾನ್ಯ ಸಭೆ ನಡೆಸುವ ಅವಕಾಶ ಸಿಕ್ಕಿರಲಿಲ್ಲ. ಕರೊನಾ ಸಂದರ್ಭ ಇಲಾಖೆವಾರು ಸಭೆ ಕರೆದು ಅಭಿವೃದ್ಧಿ ಕುರಿತು ಮಾಹಿತಿ ಕಲೆ ಹಾಕಿದ್ದಲ್ಲದೇ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದರು. ಇದೀಗ ಕೇಂದ್ರ ಸಂಸತ್ ಹಾಗೂ ರಾಜ್ಯ ವಿಧಾನ ಮಂಡಲ ಅಧಿವೇಶನಗಳೇ ನಡೆಯುತ್ತಿರುವ ಹಿನ್ನೆಲೆ ಜಿಪಂ ಸಾಮಾನ್ಯ ಸಭೆ ನಡೆಸುವ ಗಟ್ಟಿ ಮನಸ್ಸು ಮಾಡಿದ್ದಾರೆ. ಸದರಿ ಸಭೆ ಕಳ್ಳಿಮನಿ ಅವರ ಪಾಲಿಗೆ ಮಹತ್ವದ್ದೆನ್ನಲಾಗಿದೆ.

    ಸವಾಲುಗಳ ಸುರಿಮಳೆ
    ಸದರಿ ಸಭೆಯಲ್ಲಿ 2020-21ನೇ ಸಾಲಿನ ವಿವಿಧ ಇಲಾಖೆಗಳ ಕ್ರಿಯಾಯೋಜನೆಗೆ ಅನುಮೋದಿಸುವುದು ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರ ವಿಷಯಗಳನ್ನು ಚರ್ಚಿಸುವ ಬಗ್ಗೆ ಅಜೆಂಡಾ ಪ್ರತಿಯಲ್ಲಿ ತಿಳಿಸಲಾಗಿದೆ. ಆದರೆ, ಇದಕ್ಕಿಂತ ಹೆಚ್ಚಾಗಿ ಕರೊನಾ ನಿಯಂತ್ರಣ ಹಾಗೂ ಮಳೆ ಹಾನಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.

    ಇನ್ನೊಂದೆಡೆ ನೆರೆ ಆತಂಕ ಎದುರಾಗಿದ್ದು ಅಲ್ಲಲ್ಲಿ ಬೆಳೆ ಹಾನಿ ಸಹ ಸಂಭವಿಸಿದೆ. ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು ಕೃಷಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಆರೋಗ್ಯ, ಶಿಕ್ಷಣ ಇಲಾಖೆ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಬೇಕಿದೆ. ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಪರಿಹಾರ ಕಂಡುಕೊಳ್ಳಬೇಕಿದೆ.

    ಕಳೆದ 16ನೇ ಸಾಮಾನ್ಯ ಸಭೆಯಲ್ಲಿ ಕೆಲವು ಮಹತ್ವದ ಚರ್ಚೆಗಳಾಗಿದ್ದು ಅವುಗಳ ಪ್ರಗತಿ ಪರಿಶೀಲನೆ ನಡೆಸಬೇಕಿದ್ದು ಸಂಬಂಧಿಸಿದ ಸದಸ್ಯರಿಗೆ ಸಮಜಾಯಿಷಿ ನೀಡಬೇಕು. ಕೆಲ ಸಮಸ್ಯೆಗಳಿನ್ನೂ ಸಮಸ್ಯೆಗಳಾಗಿಯೇ ಉಳಿದಿದ್ದು ಅಧಿಕಾರಿ ವರ್ಗಕ್ಕೆ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕಿದ್ದು ಅದಕ್ಕಾಗಿ ಕಳ್ಳಿಮನಿ ಸಕಲ ತಯಾರಿಯಲ್ಲಿರುವುದಾಗಿ ತಿಳಿಸಿದ್ದಾರೆ.

    ಅಧ್ಯಕ್ಷೆಯಾದ ಬಳಿಕ ಮೊದಲ ಬಾರಿಗೆ ಸಭೆ ನಡೆಸುತ್ತಿದ್ದು ಸಾಕಷ್ಟು ಸವಾಲುಗಳಿವೆ. ಅದಕ್ಕಾಗಿ ಸೂಕ್ತ ತಯಾರಿ ಮಾಡಿಕೊಂಡಿರುವೆ. ಈಗಾಗಲೇ ಇಲಾಖೆವಾರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಆದರೆ, ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದು ಮಹತ್ವದ ವಿಷಯಗಳ ಬಗ್ಗೆ ಸಮಗ್ರ ಚರ್ಚೆಯಾಗಲಿದೆ.
    ಸುಜಾತಾ ಕಳ್ಳಿಮನಿ, ಜಿಪಂ ಅಧ್ಯಕ್ಷೆ

    ಕರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿಕೊಂಡು ಸಭೆ ನಡೆಸಲು ಸಿದ್ಧತೆ ನಡೆದಿದೆ. ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕಾೃನಿಂಗ್ ಮೂಲಕ ಆರೋಗ್ಯ ತಪಾಸಣೆ ನಡೆಸಲಾಗುವುದು. ಸಭಾಂಗಣದಲ್ಲಿ ಜಾಗೆ ಸಾಲದಿದ್ದರೆ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲಾಗುವುದು.
    ಎನ್.ಕೆ. ಗೋಠೆ, ಮುಖ್ಯ ಯೋಜನಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts