More

    ಎರಡು ಸ್ಪರ್ಧೆಗಳ ಫಲಿತಾಂಶ ಬಾಕಿ

    ವಿಜಯಪುರ: ಜಿಲ್ಲಾಡಳಿತ, ಜಿಪಂ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಎರಡು ದಿನ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿದ್ದು, ಅಂತಿಮ ದಿನದಂದು ಬಹುಮಾನ ವಿತರಣೆ ವೇಳೆ ಭಾರಿ ಗದ್ದಲ ಉಂಟಾಯಿತು.

    ಕಲಾ ತಂಡಗಳ ಆಯ್ಕೆಯಲ್ಲಿ ತಾರತಮ್ಯ ಎಸಗಲಾಗಿದೆ. ಗೋಲ್‌ಮಾಲ್ ನಡೆದಿದೆ. ಯುವಕರ ಬದಲಾಗಿ ಮುದುಕರಿಗೂ ಅವಕಾಶ ನೀಡಲಾಗಿದೆ. 10 ವರ್ಷಗಳಿಂದ ಒಂದೇ ಕಲಾ ತಂಡ ಬಹುಮಾನ ಪಡೆದುಕೊಳ್ಳುತ್ತಿದೆ. ತಮ್ಮ ಕಲಾ ಪ್ರದರ್ಶನ ಮಾಡಿದರೆ ಅಣ್ಣ ನಿರ್ಣಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡುತ್ತಿಲ್ಲವೆಂಬ ಆರೋಪ ಬಲವಾಗಿ ಕೇಳಿ ಬಂತು.

    ಏನಿದು ಗದ್ದಲ?
    ಭಾನುವಾರ ಸಂಜೆ ಆನಂದ ಮಹಲ್ ಸಾಂಸ್ಕೃತಿಕ ವೇದಿಕೆಯಲ್ಲಿ ಮೇಳಕ್ಕೆ ತೆರೆ ಬೀಳುತ್ತಿದ್ದಂತೆ ಆಯೋಜಕರು ಬಹುಮಾನ ಘೋಷಣೆ ಮಾಡತೊಡಗಿದರು. ಈ ವೇಳೆ ಡೊಳ್ಳು ಹಾಗೂ ಚರ್ಮ ವಾದ್ಯದ ತಂಡಗಳ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಮತ್ತೊಂದು ಕಲಾತಂಡ ತಗಾದೆ ತೆಗೆಯಿತು. ಬರಬರುತ್ತ ವಿವಾದ ದೊಡ್ಡದಾಯಿತು. ಹಲವು ಕಲಾವಿದರು ವೇದಿಕೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ನಿರ್ಣಾಯಕರು ಹಾಗೂ ಆಯೋಜಕರ ವಿರುದ್ಧ ಘೋಷಣೆ ಕೂಗಿದರು. ತಂಡಗಳ ಆಯ್ಕೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು. ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ. ಲೋಣಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಪೊಲೀಸ್ ಇಲಾಖೆ ನೆರವು ಪಡೆಯಬೇಕಾಯಿತು.

    ದಾಖಲೆ ಪರಿಶೀಲನೆಗೆ ಒತ್ತಾಯ
    ಕೆಲವು ಕಲಾವಿದರಿಗೆ ಹೆಚ್ಚಿನ ಸಮಯ ನೀಡಲಾಗಿದೆ. ಕೆಲವು ಸ್ಪರ್ಧೆಗಳಲ್ಲಿ ಹಿರಿಯರು ಭಾಗವಹಿಸಿದ್ದು, ಎಲ್ಲ ಕಲಾವಿದರ ಆಧಾರ್ ಕಾರ್ಡ್ ಬಹಿರಂಗಪಡಿಸಬೇಕು. ತೀರ್ಪುಗಾರರು ಕಲಾವಿದರ ಎಲ್ಲ ವಿಡಿಯೋಗಳನ್ನು ಮತ್ತೊಮ್ಮೆ ಪ್ರದರ್ಶಿಸಬೇಕೆಂದು ಕಾರವಾರದ ಚಂದ್ರಶೇಖರ ಅಂಬಿಗ ಹಾಗೂ ನಾಗರಾಜ ಓಣಿಕೇರಿ ಆಗ್ರಹಿಸಿದರು.

    ತೀರ್ಪುಗಾರರು ಕಲಾವಿದರ ದಾಖಲೆಗಳನ್ನು ಪರಿಶೀಲಿಸಿಲ್ಲ. 25-30 ವರ್ಷದೊಳಗಿನವರು ಭಾಗವಹಿಸಬೇಕು. ಬಹುತೇಕ ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದಾರೆ. ಇದೇನು ಯುವಜನ ಮೇಳವೋ ಇಲ್ಲ ಮುದುಕರ ಮೇಳವೋ? ಎಂದು ಗದಗನ ಸಿದ್ದಪ್ಪ ಕಟ್ಟಿಮನಿ ಪ್ರಶ್ನಿಸಿದರು.
    ಅಂತಿಮವಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರಾದರೂ ಡೊಳ್ಳು ಕುಣಿತ ಹಾಗೂ ಚರ್ಮವಾದ್ಯದ ಫಲಿತಾಂಶ ಬಾಕಿ ಇರಿಸಿ ಉಳಿದವುಗಳನ್ನು ಘೋಷಿಸಲಾಯಿತು. ರಾತ್ರಿಯಾಗುತ್ತಿದ್ದಂತೆ ಎಲ್ಲ ಕಲಾವಿದರು ತವರಿನತ್ತ ಮರಳಿದರು.

    ಫಲಿತಾಂಶದ ವಿವರಣೆ
    ಒಟ್ಟು 17 ಕಲಾ ಪ್ರಕಾರಗಳಲ್ಲಿ ಯುವಕ ಹಾಗೂ ಯುವತಿಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಭಾವಗೀತೆಯಲ್ಲಿ ಗದಗನ ಮೈಲಾರಿ ಕಟ್ಟಿಮನಿ, ಹಾವೇರಿಯ ತಿಪ್ಪೇಶ ಲಕ್ಕಿಕೋಣೆ ಹಾಗೂ ಗುರು ಚಲವಾದಿ, ಯುವತಿಯರ ವಿಭಾಗದಲ್ಲಿ ಗದಗನ ಭೂಮಿಕಾ ಅಡಕಿ, ಋಷಿ ಢವಳಗಿ, ಬಾಗಲಕೋಟೆಯ ಶರಣಮ್ಮ ಭಯ್ಯಪುರ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

    ಲಾವಣಿಯಲ್ಲಿ ಹಾವೇರಿಯ ಮಂಜುನಾಥ ರಾಜನಹಳ್ಳಿ, ಗದಗನ ಮುತ್ತಣ್ಣ ಅಂಗಡಿ, ಬೆಳಗಾವಿಯ ಅಲ್ಲಾಭಕ್ಷ ಹದರಿ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಯುವತಿಯರ ವಿಭಾಗದಲ್ಲಿ ಬೆಳಗಾವಿಯ ಲಕ್ಷ್ಮಿಬಾಯಿ ಮಾದರ ಹಾಗೂ ಬಾಗಲಕೋಟೆಯ ಕಾವ್ಯಾ ಅಕ್ಕಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

    ಗೀಗಿ ಪದಗಳ ಸ್ಪರ್ಧೆಯಲ್ಲಿ ಗದಗನ ಸಿದ್ಧಲಿಂಗೇಶ್ವರಿ ಜಾನಪದ ಕಲಾತಂಡ, ಬೆಳಗಾವಿಯ ರಾಮಕೃಷ್ಣ ಪರಮಹಂಸ ಯುವಕ ಮಂಡಳ ಹಾಗೂ ಬೆಳಗಾವಿಯ ಲಕ್ಷ್ಮಿ ತಂಡ, ಕಾರವಾರದ ದಾಕ್ಷಾಯಣಿ ಯುವತಿ ಮಂಡಳಿ ಅನುಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿವೆ.

    ಏಕಪಾತ್ರಾಭಿನಯದಲ್ಲಿ ಕಾರವಾರದ ನಾಗರಾಜ ಓಣಿಕೇರಿ, ಬಾಗಲಕೋಟೆಯ ಮಾಳೇಶ ಲಕ್ಷ್ಮೇಶ್ವರ, ಬೆಳಗಾವಿಯ ಮಾರುತಿ ಖಾನಾಪುರ, ಯುವತಿಯರ ವಿಭಾಗದಲ್ಲಿ ಬಾಗಲಕೋಟೆಯ ತನುಜಾ ಮೇಲಗಿರಿ, ಬೆಳಗಾವಿಯ ಲಕ್ಷ್ಮಿಬಾಯಿ ಮಾದರ ಹಾಗೂ ಶಾರದಾ ಕಾಂಬಳೆ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.

    ಕೋಲಾಟದಲ್ಲಿ ಯುವಕರ ವಿಭಾಗದಲ್ಲಿ ಕಾರವಾರದ ಚೌಡೇಶ್ವರ ಯುವಕ ಮಂಡಳ, ಬೆಳಗಾವಿಯ ನಾಗಲಿಂಗೇಶ್ವರ ಯುವಕ ಸಂಘ ಹಾಗೂ ಗದಗನ ಹರಳಯ್ಯ ಯುವಕ ಸಂಘ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

    ವೀರಗಾಸೆಯಲ್ಲಿ ಕಾರವಾರದ ವಿಠಲ ಯುವಕ ಮಂಡಳ ಹಾಗೂ ಬೆಳಗಾವಿಯ ವೀರಭದ್ರೇಶ್ವರ ಕಲಾ ತಂಡ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.

    ಜಾನಪದ ಗೀತೆಯಲ್ಲಿ ಕಾರವಾರದ ಜೈ ಶಿವಾಜಿ ಯುವಕ ಸಂಘ, ಗದಗನ ಜೈಭೀಮ ಜಾನಪದ ಕಲಾ ತಂಡ ಹಾಗೂ ಯುವತಿಯರ ವಿಭಾಗದಲ್ಲಿ ಬೆಳಗಾವಿಯ ಲಕ್ಷ್ಮಿದೇವಿ ಕಲಾ ತಂಡ, ಕಾರವಾರದ ದಾಕ್ಷಾಯಣಿ ಯುವತಿ ಮಂಡಳ ಅನುಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿವೆ.

    ಜಾನಪದ ನೃತ್ಯದಲ್ಲಿ ಬೆಳಗಾವಿ ಕವಿರತ್ನ ಕಾಳಿದಾಸ ತಂಡ, ಕಾರವಾರದ ಸತ್ಯ ನಾರಾಯಣ ಹೆಗಡೆ ತಂಡ ಹಾಗೂ ಯುವತಿಯರ ವಿಭಾಗದಲ್ಲಿ ಗದಗನ ಅಕ್ಕಮಹಾದೇವಿ ಯುವತಿ ಮಂಡಳಿ ಮತ್ತು ಬಾಗಲಕೋಟೆಯ ಮುರಾರ್ಜಿ ದೇಸಾಯಿ ಶಾಲೆ ತಂಡ ಅನುಕ್ರಮವಾಗಿ ಮೊದಲೆರಡು ಸ್ಥಾನ ಗಿಟ್ಟಿಸಿಕೊಂಡವು.

    ರಂಗಗೀತೆಯಲ್ಲಿ ಹಾವೇರಿಯ ತಿಪ್ಪೇಶ ಲಕ್ಕಿಕೋಟೆ, ಗದಗನ ಮಹೇಶ ಜಗ್ಗಲ್ ಹಾಗೂ ಮೈಲಾರಿ ಕಟ್ಟಿಮನಿ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರೆ ಯುವತಿಯರ ವಿಭಾಗದಲ್ಲಿ ಬೆಳಗಾವಿಯ ಲಕ್ಷ್ಮಿಬಾಯಿ ಮಾದರ ಮತ್ತು ಗದಗನ ರೇಣುಕಾ ಬೇಲೇರಿ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು.

    ಭಜನೆಯಲ್ಲಿ ಗದಗನ ಮರುಳ ಸಿದ್ಧೇಶ್ವರ ಭಜನಾ ಮಂಡಳಿ, ಬೆಳಗಾವಿಯ ರಾಮಕೃಷ್ಣ ಪರಮಹಂಸ ತಂಡ ಹಾಗೂ ಯುವತಿಯರ ವಿಭಾಗದಲ್ಲಿ ಬೆಳಗಾವಿಯ ಲಕ್ಷ್ಮಿಬಾಯಿ ಯುವತಿ ಮಂಡಳ ಹಾಗೂ ದಾಕ್ಷಾಯಣಿ ಯುವತಿ ಮಂಡಳ ಅನುಕ್ರಮವಾಗಿ ಮೊದಲೆರೆಡು ಸ್ಥಾನ ಪಡೆದವು.

    ಸಣ್ಣಾಟದಲ್ಲಿ ಕಾರವಾರದ ಚೌಡೇಶ್ವರಿ ಯುವಕ ಸಂಘ ಪ್ರಥಮ ಹಾಗೂ ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಅಲಂಕರಿಸಿದವು. ದೊಡ್ಡಾಟದಲ್ಲಿ ವಿಜಯಪುರದ ಸಿದ್ಧಲಿಂಗೇಶ್ವರ ಯುವಕ ಸಂಘ ಹಾಗೂ ಕಾರವಾರದ ಚೌಡೇಶ್ವರಿ ಯುವಕ ಸಂಘ ಅನುಕ್ರಮವಾಗಿ ಮೊದಲೆರಡು ಸ್ಥಾನ ಪಡೆದವು. ಯಕ್ಷಗಾನದಲ್ಲಿ ಕಾರವಾರದ ರಾಮಲಿಂಗೇಶ್ವರ ಯುವಕ ಮಂಡಳ ಪ್ರಥಮ ಸ್ಥಾನ ಪಡೆಯಿತು. ಯುವತಿಯರ ವಿಭಾಗದ ಬೀಸುವ ಕಲ್ಲಿನ ಪದಗಳ ಸ್ಪರ್ಧೆಯಲ್ಲಿ ಕಾರವಾರದ ದಾಕ್ಷಾಯಣಿ ತಂಡ ಪ್ರಥಮ ಹಾಗೂ ಬೆಳಗಾವಿಯ ಸಿಟಿಇ ಸಂಸ್ಥೆ ದ್ವಿತೀಯ ಸ್ಥಾನ ಪಡೆದವು. ಸೋಬಾನ ಪದಗಳ ಸ್ಪರ್ಧೆಯಲ್ಲಿ ಬೆಳಗಾವಿಯ ಬಿಇಡಿ ಕಾಲೇಜು ಹಾಗೂ ಕಾರವಾರದ ದಾಕ್ಷಾಯಣಿ ತಂಡ ಅನುಕ್ರಮವಾಗಿ ಮೊದಲೆರಡು ಸ್ಥಾನ ಪಡೆದವು.

    ಕಾರ್ಯಕ್ರಮ ಚೆನ್ನಾಗಿ ಆಗಿದೆ. ಹೊಸ ಕಲಾವಿದರನ್ನು ಬೆಳೆಸಲು ಅವಕಾಶ ನೀಡಿಲ್ಲ. ಬಹುತೇಕರು ಹಳಬರೇ ಇದ್ದಾರೆ. ಅಣ್ಣ ನಿರ್ಣಾಯಕ-ತಮ್ಮ ಗಾಯಕ. ಸತತ ಅವರಿಗೇ ಬಹುಮಾನ ಕೊಡುತ್ತ ಬಂದಿದ್ದಾರೆ. ಯುವಕರ ಬದಲಾಗಿ ವಯಸ್ಸಾದವರಿಗೆ ಆದ್ಯತೆ ನೀಡಲಾಗಿದೆ. ಪ್ರತಿಭಾವಂತರಿಗೆ ಆದ್ಯತೆ ನೀಡದಿರುವುದು ಬೇಸರ ತರಿಸಿದೆ.
    ಚಂದ್ರಶೇಖರ ಅಂಬಿಗ ಕಾರವಾರ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts