More

    ಪುನರ್‌ನಿರ್ಮಾಣ ಕಾಮಗಾರಿ ಮುಂದುವರಿಸಿ

    ವಿಜಯಪುರ: ನೆರೆ ಹಾವಳಿಯಿಂದ ಉಂಟಾದ ಹಾನಿಗೆ ಸಂಬಂಧಿಸಿದ ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸೋಮವಾರ ಲೋಕೊಪಯೋಗಿ ಇಲಾಖೆ, ಸಮಾಜಕಲ್ಯಾಣ ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ನೆರೆಹಾವಳಿ ಸಂದರ್ಭದಲ್ಲಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕಾಮಗಾರಿಗಳು, ಚಾಲ್ತಿಯಲ್ಲಿರುವ ಕಾಮಗಾರಿಗಳು ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು.

    ವಿಭಾಗವಾರು ಕಾಮಗಾರಿ

    ಅದರಂತೆ ಜಿಲ್ಲೆಯ 8 ವಿಧಾನಸಭಾವಾರು ಕಾಮಗಾರಿಗಳಿಗೆ ವಿಶೇಷ ಒತ್ತು ನೀಡಬೇಕು. ನೂತನ ಕಾಮಗಾರಿಗಳ ಟೆಂಡರ್‌ಗೆ ಸಂಬಂಧಪಟ್ಟಂತೆ ಹಣಕಾಸು ಇಲಾಖೆಯ ಅನುಮತಿಯಿಂದ ಕ್ರಮಕೈಗೊಳ್ಳುವಂತೆ ತಿಳಿಸಿದ ಅವರು, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ವಸತಿ ಶಾಲೆ, ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಬೇಕು. ಲಾಕ್‌ಡೌನ್ ಜಾರಿ ಮತ್ತು ಸಂಕಷ್ಟ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರಸ್ತೆ ಮತ್ತು ಚರಂಡಿ ಕೆಲಸಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳದಂತೆ ತಿಳಿಸಿದರು.

    ವಿವಿಧ ರಸ್ತೆ ಕಾಮಗಾರಿ

    ವಿಜಯಪುರ ಮತ್ತು ಹುಬ್ಬಳ್ಳಿ ಹೆದ್ದಾರಿ ನಿರ್ಮಿಸಲಾಗಿದ್ದು, ಇದರಡಿ ಶಿಲ್ಕು ಉಳಿದಿರುವ 40 ಕೋಟಿ ರೂ. ಪುನರ್‌ಬಳಕೆಗೆ ಸಂಬಂಧಪಟ್ಟಂತೆ ಈಗಾಗಲೇ ಕಳುಹಿಸಲಾಗಿರುವ ಪ್ರಸ್ತಾವನೆ ಮಂಜೂರಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದರಂತೆ ವಿಜಯಪುರ-ಕಾರಜೋಳ ಮಧ್ಯದ 21 ಕಿಮೀ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಹೊಂದಲು ಹೆಚ್ಚುವರಿ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅನುದಾನ ಬೇಡಿಕೆ, ಪರಿಷ್ಕೃತ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರಿಗೆ ಸೂಚಿಸಿದರು.

    ಅದರಂತೆ ವಿಜಯಪುರ ನಗರದ ಇಟಗಿ ಪೆಟ್ರೋಲ್ ಪಂಪ್‌ದಿಂದ ಗೋದಾವರಿ ಹೋಟೆಲ್‌ವರೆಗೆ ನಿರ್ಮಿಸಬೇಕಾದ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆಗೆ ಅನುಮೋದನೆ ಪಡೆದು ಕಾಮಗಾರಿ ಆರಂಭಕ್ಕೆ ವಿಶೇಷ ಗಮನ ನೀಡಬೇಕು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಒತ್ತನ್ನು ನೀಡುತ್ತಿದ್ದು, ಕರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ. ಕರೊನಾ ಪರಿಸ್ಥಿತಿ ಸುಧಾರಣೆಗೊಂಡ ನಂತರ ಆದ್ಯತೆ ಮೇಲೆ ಈ ಕಾಮಗಾರಿಗಳಿಗೆ ಗಮನ ನೀಡಲಾಗುವುದು ಎಂದರು.

    ಕೂಲಿಕಾರರಿಗೆ ನೆರವು

    ರಸ್ತೆಯ ಬದಿ ಚರ್ಮಗಾರಿಕೆ(ಚಮ್ಮಾರಿಕೆ) ಮಾಡುವ ಬಡ ಕೂಲಿಗಾರಿಕೆ ಕುಟುಂಬಗಳ ನೆರವಿಗಾಗಿ ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೂ ಮುಖ್ಯಮಂತ್ರಿಗಳ ಕಳಕಳಿಯ ಲವಾಗಿ ಪ್ರತಿಯೊಬ್ಬರಿಗೆ 5 ಸಾವಿರ ರೂ. ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಜಿಲ್ಲೆಯ ಸಮಾಜ ಕಲ್ಯಾಣ ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಮಂಜೂರಾಗಿರುವ ಮತ್ತು ಅವಶ್ಯಕತೆ ಇರುವ ನಿವೇಶನ ಮಾಹಿತಿಯನ್ನು ಸಲ್ಲಿಸಬೇಕು. ಈಗಾಗಲೇ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಸಾಂಸ್ಥಿಕ ಕ್ವಾರಂಟೈನ್‌ಗೆ ಬಳಸಲಾಗುತ್ತಿರುವ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಜನರಿಗೆ ಊಟ, ಉಪಾಹಾರ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

    ಅದರಂತೆ ಭೂ ಒಡೆತನ ಯೋಜನೆಯಡಿ ಅರ್ಹ ಲಾನುಭವಿಗಳಿಗೆ ಜಮೀನು ನೀಡುವ ಕುರಿತಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಳಗಾವಿ ಉಪ ಪ್ರಧಾನ ವ್ಯವಸ್ಥಾಪಕರಿಗೆ ಇರುವ ಪ್ರಸ್ತಾವನೆ ಪರಿಶೀಲಿಸುವ ಅಧಿಕಾರವನ್ನು ಮೊಟಕುಗೊಳಿಸಿ ಜಿಲ್ಲಾಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿಎಂ ಕಾರಜೋಳ ತಿಳಿಸಿದರು.

    ಸಭೆ ಬಳಿಕ ಬೀದಿ ಬದಿ ಚರ್ಮಗಾರಿಕೆ(ಚಮ್ಮಾರಿಕೆ) ಮಾಡುವ ಬಡ ಕುಟುಂಬಗಳಿಗೆ ಮಂಜೂರಾದ 5000 ರೂ.ಗಳ ಮಂಜೂರಾತಿ ಪತ್ರವನ್ನು ವಿತರಿಸಿದರು. ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ, ಸಹಾಯಕ ಅಭಿಯಂತರ ಆರ್.ಕೆ. ಮಜುಂದಾರ್, ಆರ್.ಕೆ. ಕತ್ತಿ, ಎಸ್.ಎನ್. ಕರೂರ, ಎಂ.ಎಸ್. ನಿಡೋಣಿ, ಜಿ.ಎಸ್. ಪಾಟೀಲ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts