More

    4997 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

    ವಿಜಯಪುರ: ತೀವ್ರ ಕುತೂಹಲ ಕೆರಳಿಸಿರುವ ಗ್ರಾಪಂ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯಲಿದ್ದು, ಒಟ್ಟು 4997 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
    ಈಗಾಗಲೇ ಚುನಾವಣೆಗೆ ಕರ್ತವ್ಯ ನಿರತ ಅಧಿಕಾರಿಗಳು ಮತಗಟ್ಟೆಗೆ ಪ್ರಯಾಣ ಬೆಳೆಸಿದ್ದು, ಮಂಗಳವಾರ ಬೆಳಗ್ಗೆ 7ಗಂಟೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ವಿಜಯಪುರ ತಾಲೂಕಿನ 17, ಬಬಲೇಶ್ವರ-15, ತಿಕೋಟಾ-14, ಬಸವನಬಾಗೇವಾಡಿ-15, ಕೊಲ್ಹಾರ-8, ನಿಡಗುಂದಿ-8, ಮುದ್ದೇಬಿಹಾಳ- 20 ಹಾಗೂ ತಾಳಿಕೋಟೆ ತಾಲೂಕಿನ 14 ಗ್ರಾಪಂ ಹೀಗೆ 111 ಗ್ರಾಪಂಗಳಿಗೆ ಪ್ರಥಮ ಹಂತದಲ್ಲಿ ಚುನಾವಣೆ ನಡೆಯಲಿದೆ. ಪ್ರಥಮ ಹಂತದ ಮತದಾನದಲ್ಲಿ ಒಟ್ಟು 6,88,767 ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಅದರಲ್ಲಿ 3,53,699 ಪುರುಷರು, 3,34,981 ಮಹಿಳೆಯರು ಹಾಗೂ 67 ಇತರ ವರ್ಗದ ಮತದಾರರಿದ್ದಾರೆ.

    ಮತಗಟ್ಟೆ ವಿವರ

    ಪ್ರಥಮ ಹಂತದ ಚುನಾವಣೆಗಾಗಿ ಜಿಲ್ಲಾಡಳಿತ 1007 ಮತಗಟ್ಟೆಗಳನ್ನು ಸ್ಥಾಪಿಸಿದೆ. ಆ ಪೈಕಿ ವಿಜಯಪುರ ತಾಲೂಕಿನಲ್ಲಿ-168, ಬಬಲೇಶ್ವರ-155, ತಿಕೋಟಾ-132, ಬ.ಬಾಗೇವಾಡಿ-144, ಕೊಲ್ಹಾರ-60, ನಿಡಗುಂದಿ -61, ಮುದ್ದೇಬಿಹಾಳ-164 ಹಾಗೂ ತಾಳಿಕೋಟೆಯಲ್ಲಿ 123 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 209 ಸೂಕ್ಷ್ಮ, 109 ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದೆ.

    7880 ಸಿಬ್ಬಂದಿ ನಿಯೋಜನೆ

    ಜಿಲ್ಲೆಯಲ್ಲಿ ನಡೆಯಲಿರುವ ಪ್ರಥಮ ಹಾಗೂ ದ್ವಿತೀಯ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಒಟ್ಟಾರೆ 7880 ಸಿಬ್ಬಂದಿ ನಿಯೋಜಿಸಲಾಗಿದೆ. ಆ ಪೈಕಿ ಪ್ರಥಮ ಹಂತದ ಚುನಾವಣೆಗಾಗಿ 4431 ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದ್ದು, ಉಳಿದ ಸಿಬ್ಬಂದಿಯನ್ನು ಎರಡನೇಯ ಹಂತದ ಚುನಾವಣೆಗೆ ನಿಯೋಜಿಸಲಾಗಿದೆ.
    ಪ್ರಥಮ ಹಂತದ ಚುನಾವಣೆಗಾಗಿ 1007 ಮತಗಟ್ಟೆ ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಅಧಿಕಾರಿ), 3021 ಮತಗಟ್ಟೆ ಅಧಿಕಾರಿ (ಪೋಲಿಂಗ್ ಆಫೀಸರ್-1 ಮತ್ತು ಆಫೀಸರ್-2)ಗಳನ್ನು ನಿಯೋಜಿಸಲಾಗಿದೆ. ಅದೇ ತೆರನಾಗಿ ಪ್ರಥಮ ಹಂತದ ಚುನಾವಣೆಗಾಗಿ 403 ಸಿಬ್ಬಂದಿ ಸೇವೆಯನ್ನು ಕಾಯ್ದಿರಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

    358 ವಾಹನಗಳ ನಿಯೋಜನೆ

    ಪ್ರಥಮ ಹಾಗೂ ದ್ವಿತೀಯ ಹಂತದ ಚುನಾವಣೆಗಾಗಿ ಬಸ್, ಮಿನಿ ಬಸ್, ಕ್ರೂಸರ್ ಸೇರಿದಂತೆ ಒಟ್ಟು 358 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಆ ಪೈಕಿ ಪ್ರಥಮ ಹಂತದ ಚುನಾವಣೆಗಾಗಿ 223 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. 151 ಸರ್ಕಾರಿ ಬಸ್, 44 ಮಿನಿ ಬಸ್, 12 ಕ್ರೂಸರ್ ಹಾಗೂ ವಿವಿಧ ಜೀಪ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 16 ವಾಹನಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಕರೊನಾ ಮುಂಜಾಗ್ರತೆ

    ಮಹಾಮಾರಿ ಕರೊನಾ ಹಿನ್ನೆಲೆ ಸೂಕ್ತ ಮುಂಜಾಗ್ರತೆಯೊಂದಿಗೆ ಚುನಾವಣೆ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಪೂರ್ಣಗೊಳಿಸಿದೆ.
    ಪ್ರತಿ ಮತದಾರರಿಗೂ ಥರ್ಮಲ್ ಸ್ಕಾೃನ್ ಮಾಡಿ ಮತಗಟ್ಟೆ ಒಳಗಡೆ ಪ್ರವೇಶ ನೀಡಲಾಗುತ್ತಿದೆ. ಈ ಬಾರಿ ಮತಗಟ್ಟೆ ಅಧಿಕಾರಿಗಳಿಗೆ ಥರ್ಮಲ್ ಸ್ಕಾೃನಿಂಗ್ ಉಪಕರಣ ಸಹ ನೀಡಲಾಗಿದೆ. ಮತದಾರರ ಯಾದಿ, ಮತಪೆಟ್ಟಿಗೆ ಹಾಗೂ ಮತದಾರರ ಬೆರಳುಗಳಿಗೆ ಹಚ್ಚುವ ಶಾಹಿ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ನಿಯೋಜಿತ ವಾಹನದಲ್ಲಿ ಸಿಬ್ಬಂದಿ ಮತಗಟ್ಟೆ ಕೇಂದ್ರ ಪ್ರವೇಶಿಸಿದ್ದಾರೆ.
    ಬಬಲೇಶ್ವರದ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರ, ತಿಕೋಟಾದ ಎ.ಬಿ. ಜತ್ತಿ ಪಪೂ ಮಹಾವಿದ್ಯಾಲಯ, ಬ. ಬಾಗೇವಾಡಿ ಬಸವೇಶ್ವರ ಸರ್ಕಾರಿ ಪಪೂ ಮಹಾವಿದ್ಯಾಲಯ, ಕೊಲ್ಹಾರದ ಸರ್ಕಾರಿ ಪ್ರೌಢಶಾಲೆ, ನಿಡಗುಂದಿಯ ಗ್ರಾವಿವ ಸಂಘದ ಸ್ವತಂತ್ರ ಪಪೂ ಮಹಾವಿದ್ಯಾಲಯ, ಮುದ್ದೇಬಿಹಾಳದ ಎಂಜಿವಿಸಿ ಕಾಲೇಜು, ತಾಳಿಕೋಟೆ ತಾಲೂಕಿನಲ್ಲಿ ಎಸ್.ಕೆ. ಪಪೂ ಮಹಾವಿದ್ಯಾಲಯದಲ್ಲಿ ತೆರೆಯಲಾಗಿದ್ದ ಮಸ್ಟರಿಂಗ್ ಕೇಂದ್ರದಿಂದ ಸಿಬ್ಬಂದಿ ನಿಯೋಜಿತ ಸ್ಥಳಕ್ಕೆ ತೆರಳಿದರು.

    ಮಸ್ಟರಿಂಗ್ ಕೇಂದ್ರಗಳ ಪರಿಶೀಲನೆ

    ಮತದಾನ ಹಿನ್ನೆಲೆ ಸೋಮವಾರ ಜಿಲ್ಲಾಧಿಕಾರಿ ಸುನೀಲಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ಕೈಗೊಂಡ ಸಿದ್ಧತೆ ಪರಿಶೀಲಿಸಿದರು. ತಿಕೋಟಾ, ಬಬಲೇಶ್ವರ ಮತ್ತಿತರ ಕಡೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪೊಲೀಸ್ ಅಧೀಕ್ಷಕ ಎಸ್‌ಪಿ ಅನುಪಮ್ ಅಗರವಾಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts