More

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್

    ಹುಬ್ಬಳ್ಳಿ: ಸಾರಿಗೆ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮುಹೂರ್ತ ಸಮಾರಂಭ ಭಾನುವಾರ ಸಂಭ್ರಮದ ನಡುವೆ ಅದ್ದೂರಿಯಾಗಿ ನೆರವೇರಿತು. ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಹಿರಿಯ ನಟರಾದ ಅನಂತನಾಗ್, ವಿನಯಾಪ್ರಸಾದ್ ಪಾಲ್ಗೊಂಡು ಸಮಾರಂಭಕ್ಕೆ ತಾರಾ ಮೆರುಗು ನೀಡಿದರು. ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ವಿಆರ್​ಎಲ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾನುವಾರ ಮಧ್ಯಾಹ್ನ 12.45ಕ್ಕೆ ನಟ ಗಣೇಶ್ ಕ್ಲ್ಯಾಪ್ ಮಾಡಿ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಲಾಂಛನ ಬಿಡುಗಡೆಯೂ ಇದೇ ವೇಳೆ ನಡೆಯಿತು.

    ‘ವಿಜಯಾನಂದ’ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರ ನಿರ್ವಹಿಸುತ್ತಿರುವ ಹಿರಿಯ ನಟ ಅನಂತನಾಗ್, ಗಣೇಶ್ ಮನ್ಷಾ ಅವರ ಪಾತ್ರ ನಿರ್ವಹಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಶ್ರೀಮತಿ ಚಂದ್ರಮ್ಮಾ ಬಿ. ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ವಿನಯಾಪ್ರಸಾದ್, ಡಾ. ವಿಜಯ ಸಂಕೇಶ್ವರ ಅವರ ಪಾತ್ರಧಾರಿ ನಿಹಾಲ್ ರಜಪೂತ್, ಆನಂದ ಸಂಕೇಶ್ವರ ಪಾತ್ರಧಾರಿ ಭರತ್ ಭೂಪಣ್ಣ ಮತ್ತಿತರ ಗಣ್ಯರ ಉಪಸ್ಥಿತಿಯಿಂದ ಕಾರ್ಯಕ್ರಮ ಕಳೆಗಟ್ಟಿತು. ಮುಹೂರ್ತ ಸಮಾರಂಭ ಆರಂಭದಲ್ಲಿ ಪಂ. ಸಮೀರಣಾಚಾರ್ಯ ಕಂಠಪಲ್ಲಿ ಅವರ ನೇತೃತ್ವದಲ್ಲಿ ವಿಧಿವತ್ತಾಗಿ ಪೂಜಾ ಕೈಂಕರ್ಯದೊಂದಿಗೆ ನೆರವೇರಿತು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಲಲಿತಾ ಸಂಕೇಶ್ವರ, ವಾಣಿ ಸಂಕೇಶ್ವರ, ಭಾರತಿ, ದೀಪಾ, ಗಾಯತ್ರಿ ಅನಂತನಾಗ್ ಪಾಲ್ಗೊಂಡರು.

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
    ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ವಿಆರ್​ಎಲ್ ಪ್ರಧಾನ ಕಚೇರಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕ್ಲ್ಯಾಪ್ ಮಾಡುವ ಮೂಲಕ ‘ವಿಜಯಾನಂದ’ ಚಿತ್ರದ ಚಿತ್ರೀಕರಣಕ್ಕೆ ಭಾನುವಾರ ಚಾಲನೆ ನೀಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ, ಅನಂತನಾಗ್, ರವಿಚಂದ್ರನ್, ನಿಹಾಲ್ ರಜಪೂತ, ಇತರರು ಇದ್ದರು.

    ಸಮಾರಂಭ ಉದ್ದೇಶಿಸಿ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಕನ್ನಡ ಮತ್ತು ಬಹುಭಾಷಾ ಚಲನಚಿತ್ರವನ್ನು ನಿರ್ವಿುಸುವ ಇರಾದೆ ಇದೆ. ಇಂತಿಷ್ಟೇ ಚಿತ್ರ ನಿರ್ವಿುಸುವ ಯಾವುದೇ ಟಾರ್ಗೆಟ್ ಹಾಕಿಕೊಳ್ಳುವುದಿಲ್ಲ. ಭಾರತೀಯ ಸಂಸ್ಕೃತಿ, ಸಂಸ್ಕಾರ ಮೇಳೈಸಿರುವ ಸದಭಿರುಚಿಯ ವಿಭಿನ್ನ ಚಿತ್ರಗಳನ್ನು ನಿರ್ವಿುಸಲಾಗುವುದು ಎಂದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ, ಸೂಕ್ತ ಅವಕಾಶ ಸಿಗದೆ ವಂಚಿತರಾಗಿದ್ದಾರೆ. ಇಂಥ ಹೊಸ ಪ್ರತಿಭೆಗಳಿಗೆ ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಅವಕಾಶ ಒದಗಿಸಿಕೊಡಲಿದೆ. ಹಳ್ಳಿಯಿಂದ ಬಂದವರೂ ಚಿತ್ರರಂಗದಲ್ಲಿ ಭವಿಷ್ಯ ಕಾಣಲು ಇದರಿಂದ ಸಹಕಾರಿಯಾಗಲಿದೆ. ಹಳ್ಳಿಯಿಂದ ಬಂದವರು, ಬೆಂಗಳೂರು ಕಾಣದಂತಹವರು ಇಂದು ದೇಶದ ನಾನಾ ಭಾಗದಲ್ಲಿ ವಿಆರ್​ಎಲ್ ಶಾಖೆಯಲ್ಲಿ ಮ್ಯಾನೇಜರ್​ಗಳಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
    ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ವಿಆರ್​ಎಲ್ ಪ್ರಧಾನ ಕಚೇರಿಯಲ್ಲಿ ‘ವಿಜಯಾನಂದ’ ಚಿತ್ರದ ಮುಹೂರ್ತ ಸಮಾರಂಭಕ್ಕೆ ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ ಅವರು ಚಾಲನೆ ನೀಡಿದರು. ನಟಿ ವಿನಯಾಪ್ರಸಾದ್, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಗಾಯತ್ರಿ ಅನಂತನಾಗ್, ಸಿರಿ ಪ್ರಹ್ಲಾದ, ಭಾರತಿ, ರಿಶಿಕಾ ಶರ್ಮಾ ಇತರರು ಇದ್ದರು.

    ಸವಾಲು ಹಾಕಿ ಸಾಧಿಸಿ ತೋರಿಸಿದೆ…

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್‘17ನೇ ವರ್ಷದವನಾಗಿದ್ದಾಗ ಮನೆತನದ ಉದ್ಯಮ ಮಾಡಕೂಡದು ಎಂದು ನಿರ್ಧರಿಸಿದೆ. ಒಂದು ಲಾರಿ ಖರೀದಿಸಿದೆ. ಆಗ ಟೀಕಿಸಿದವರು ಅನೇಕರು. ಟೀಕಿಸಿದ ಒಬ್ಬಾತನಿಗೆ, ‘ನಿನ್ನ ಮನೆ ಮುಂದೆ ನನ್ನ ಸ್ವಂತದ ನಾಲ್ಕು ಲಾರಿ ನಿಲ್ಲಿಸುತ್ತೇನೆ’ ಎಂದು ಸವಾಲು ಹಾಕಿದ್ದೆ. ಐದು ಲಾರಿ ಆತನ ಮನೆಮುಂದೆ ನಿಲ್ಲಿಸಿದೆ. ಇದೀಗ ಈ ಲಾರಿಗಳ ಸಂಖ್ಯೆ 5031ಕ್ಕೆ ಏರಿದೆ. ಈ ಮೂಲಕ ವಿಆರ್​ಎಲ್ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ ಕಂಪನಿ ಎಂದೆನಿಸಿಕೊಂಡಿದೆ. 130 ಕೋಟಿ ಜನಸಂಖ್ಯೆ ಮಧ್ಯೆ ಸಾರಿಗೆ ಉದ್ಯಮದಲ್ಲಿ ನಾನೇ ಅತಿದೊಡ್ಡ ಸಾಧಕ ಎನ್ನುವ ಹೆಮ್ಮೆ ಇದೆ’ ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು. ನಾವು ಎಂದಿಗೂ ಇನ್ನೊಬ್ಬರೊಂದಿಗೆ ತುಲನೆ ಮಾಡಿಕೊಳ್ಳಬಾರದು. ಇನ್ನೊಬ್ಬರೊಂದಿಗೆ ಪೈಪೋಟಿಗೂ ಇಳಿಯಬಾರದು. ಅಂದುಕೊಂಡಿದ್ದನ್ನು ಸಾಧಿಸುವ ನಿಟ್ಟಿನಲ್ಲಿ ಕಷ್ಟಪಟ್ಟು, ಶ್ರದ್ಧೆಯಿಂದ ಕೆಲಸ ಮಾಡಬೇಕು. ಆಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ. ಜೀವನದಲ್ಲಿ ನಿವೃತ್ತಿ ಎನ್ನುವ ಗೆರೆ ಹಾಕಿಕೊಳ್ಳಬಾರದು. ಕೆಲಸ ಮಾಡುವ ಸಂಸ್ಥೆಯನ್ನು ನನ್ನದು ಎಂದುಕೊಳ್ಳಬೇಕು. ಆವಾಗ ಅವಕಾಶ ಹಾಗೂ ಸ್ಥಾನಗಳು ಅರಸಿ ಬರುತ್ತವೆ. ವಿಆರ್​ಎಲ್ ಸಂಸ್ಥೆಯಂತೆ ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಕೂಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡು ಸಾಧನೆ ಮಾಡಲಿದೆ ಎನ್ನುವ ವಿಶ್ವಾಸವಿದೆ ಎಂದರು.

    ಸಿನಿಮಾದಲ್ಲಿ ಜೀವನ ಸಾರ

    ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ನಾನು ಇಷ್ಟ ಪಡುವ ಸಿನಿಮಾ. ಜೀವನ ಹೇಗೆ ನಡೆಸಬೇಕು, ಸವಾಲನ್ನು ಹೇಗೆ ಎದುರಿಸಬೇಕು ಎನ್ನುವ ಪಾಠ ಈ ಸಿನಿಮಾಗಳಲ್ಲಿವೆ. ವಿಜಯಾನಂದದಲ್ಲೂ ಇಂಥದೇ ಸಂದೇಶ ಇದೆ. ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಅಡಿ ಮುಂಬರುವ ಎಲ್ಲ ಚಿತ್ರಗಳಲ್ಲಿ ಸದಭಿರುಚಿಯ ಸಾಮಾಜಿಕ ಸಂದೇಶಗಳು ಇರಲಿವೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಮಗ 15 ವರ್ಷದವನಿದ್ದಾಗ ಸಾಲದ ಲಿಸ್ಟ್ ಕೊಟ್ಟೆ..

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
    ‘ವಿಜಯಾನಂದ’ ಚಿತ್ರದ ಚಿತ್ರೀಕರಣ ವೇಳೆ ಡಾ. ವಿಜಯ ಸಂಕೇಶ್ವರ ಅವರ ಪಾತ್ರಧಾರಿ ನಿಹಾಲ್ ರಜಪೂತ, ಡಾ. ಸಂಕೇಶ್ವರ ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರಧಾರಿ ಅನಂತನಾಗ್ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ.

    ‘ಆನಂದ ಸಂಕೇಶ್ವರ ನನ್ನ ಜತೆಗೆ ಸಂಸ್ಥೆ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ನಾನು ಆಪರೇಷನ್​ಗಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಆಗ ಮಗನನ್ನು ಕರೆದು, ನಾನು ಮಾಡಿದ ಸಾಲದ ಪಟ್ಟಿಯನ್ನು ನೀಡಿದೆ. ಆಗಿನ್ನು ಆನಂದ ಕೇವಲ 15 ವರ್ಷದ ಬಾಲಕ. ಕಳೆದ 15 ವರ್ಷಗಳಿಂದ ಆನಂದ ಸಂಕೇಶ್ವರ ಮೇಲೆ ಕಂಪನಿಯ ಭಾರ ಹೆಚ್ಚಾಗಿದೆ. ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಒಳ್ಳೆಯ ಫಲಿತಾಂಶವನ್ನೇ ನೀಡಿದ್ದಾರೆ. ಅದೇ ರೀತಿ ಸಿನಿಮಾರಂಗದಲ್ಲಿಯೂ ಸಾಧನೆ ಮಾಡಲಿದ್ದಾರೆ ಎಂಬ ಭರವಸೆ ನನಗಿದೆ’ ಎಂದರು ಡಾ. ವಿಜಯ ಸಂಕೇಶ್ವರ.

    ಶ್ರದ್ಧೆ, ಪರಿಶ್ರಮವೇ ಯಶಸ್ಸಿಗೆ ದಾರಿ

    ‘ಶ್ರದ್ಧೆ ಮತ್ತು ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿ. ಎಷ್ಟೇ ಕಷ್ಟ ಬಂದರೂ ಸೋಲಬಾರದು. ಈ ಗುಣ ಅಳವಡಿಸಿಕೊಂಡ ವ್ಯಕ್ತಿ ಸಾಧಕನಾಗುತ್ತಾನೆ. ಇಂತಹ ಗುಣ ನಮ್ಮ ತಂದೆ ಡಾ. ಸಂಕೇಶ್ವರ ಅವರಲ್ಲಿದೆ. ನನಗೆ ಅವರು ಸದಾ ಮಾರ್ಗದರ್ಶನ ಮಾಡುತ್ತಿರುತ್ತಾರೆ’ ಎಂದು ಚಿತ್ರ ನಿರ್ವಪಕ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಹೇಳಿದರು. ಸಾರಿಗೆ ಉದ್ಯಮವು ಭಾರತದಲ್ಲಿ ಶೇ.85 ಅಸಂಘಟಿತವಾಗಿದೆ. ವಿಆರ್​ಎಲ್ ಬೃಹತ್ ಸಂಸ್ಥೆಯಾಗಿ ಸುಸಜ್ಜಿತ ರೀತಿಯಲ್ಲಿ ಸಂಘಟಿತವಾಗಿದೆ. ಶಿಸ್ತು, ಪ್ರಾಮಾಣಿಕತೆ, ತೊಡಗಿಸಿಕೊಳ್ಳುವಿಕೆ ಈ ಸಂಸ್ಥೆಯ ಸಿಬ್ಬಂದಿಯಲ್ಲಿದೆ. ಹೀಗಾಗಿ, ಸಂಸ್ಥೆ ಎತ್ತರಕ್ಕೆ ಬೆಳೆದಿದೆ.

    ಡಾ. ಸಂಕೇಶ್ವರ ಅವರು ನಿಜ ಸಾಧಕರಾಗಿದ್ದು, ಸರ್ಕಾರ ಅವರಿಗೆ ನವೆಂಬರ್ 8ರಂದು ಪದ್ಮಶ್ರೀ ಪ್ರದಾನ ಮಾಡಲಿದೆ. ಅವರ ಯಶೋಗಾಥೆಯ ಚಿತ್ರವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ವಿಶ್ವಾಸವಿದೆ. ವಿಜಯಾನಂದ ಚಿತ್ರದ ಬಳಿಕ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ವಿುಸಲಿದ್ದೇವೆ ಎಂದು ಹೇಳಿದರು.

    ನನಗೂ ಹೀರೋ ಆಗುವ ಕನಸಿತ್ತು…

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಇತ್ತು ಎಂಬ ವಿಚಾರವನ್ನು ಡಾ. ವಿಜಯ ಸಂಕೇಶ್ವರ ಅವರು ಮುಹೂರ್ತ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ‘ಚಿತ್ರೋದ್ಯಮದಲ್ಲಿ ಗುರುತಿಸಿಕೊಳ್ಳಬೇಕು, ಹೀರೋ ಆಗಬೇಕು ಎಂಬ ಕನಸಿತ್ತು. ಆ ಕನಸನ್ನು ನಟ ರಮೇಶ್ ಅರವಿಂದ್ ಅವರ ಬಳಿ ಹೇಳಿಕೊಂಡಿದ್ದೆ. ಆದರೆ, ಉದ್ಯಮ ಬೆಳೆದಂತೆ ನನಗೇ ಗೊತ್ತಾಗದ ಹಾಗೇ ಅಭಿಮಾನಿಗಳು ಹೆಚ್ಚಾದರು. ನಿಮ್ಮ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನೋಡಿ ಸ್ಪೂರ್ತಿ ಪಡೆಯುತ್ತೇವೆ. ಸ್ನೇಹಿತರು ಸಿಕ್ಕರೆ, ನಿಮ್ಮ ಭೇಟಿಯಿಂದ ಚಾರ್ಜ್ ಆಗಿ ಬಿಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಇದೆಲ್ಲವೂ ಬಹಳ ದಿನಗಳ ತಪಸ್ಸು. ಮನುಷ್ಯ ಕೊನೇ ಉಸಿರು ಇರುವವರೆಗೂ ತಿನ್ನುತ್ತಲೇ ಇರುತ್ತಾನೆ. ದುಡಿದೇ ತಿನ್ನಬೇಕು ಎಂಬುದು ನನ್ನ ಇರಾದೆ. 72 ವರ್ಷ ವಯಸ್ಸು ನನಗೆ. ವರ್ಷದ 365 ದಿನವೂ ಕೆಲಸ ಮಾಡುತ್ತೇನೆ’ ಎಂಬುದು ಡಾ. ಸಂಕೇಶ್ವರರ ಮಾತು.

    ಆರೇಳು ತಿಂಗಳಲ್ಲಿ ಸಿನಿಮಾ ತೆರೆಗೆ

    ‘ವಿಜಯಾನಂದ’ ಚಲನಚಿತ್ರದ ಚಿತ್ರೀಕರಣವು ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯಲಿದೆ. ಹಾವೇರಿ ಜಿಲ್ಲೆಯ ಅಗಡಿ ತೋಟದಲ್ಲಿ 50-60 ದಶಕಗಳಲ್ಲಿರುವಂತೆ ಗದಗ ನಗರದ ಸೆಟ್ ಹಾಕಲಾಗುತ್ತಿದೆ. ಹೈದರಾಬಾದ್​ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲೂ ಚಿತ್ರೀಕರಣ ನಡೆಯಲಿದೆ. ಸುಮಾರು 90 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. 6-7 ತಿಂಗಳಲ್ಲಿ ಚಿತ್ರವು ತೆರೆಗೆ ಬರಲಿದೆ ಎಂದು ಆನಂದ ಸಂಕೇಶ್ವರ ತಿಳಿಸಿದರು. ಪ್ರತಿಭಾವಂತ ಹೊಸ ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿಯೇ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಆಡಿಷನ್ ನಡೆಸಲಾಯಿತು. ಹುಬ್ಬಳ್ಳಿಯಲ್ಲಿ 5 ಸಾವಿರಕ್ಕೂ ಅಧಿಕ, ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಕಲಾವಿದರು ಆಡಿಷನ್​ನಲ್ಲಿ ಪಾಲ್ಗೊಂಡರು ಎಂದು ತಿಳಿಸಿದರು.

    ನಾನೇ ಹೀರೋ…

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
    ‘ವಿಜಯಾನಂದ’ ಚಿತ್ರದ ಚಿತ್ರೀಕರಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ನಾಯಕನಟ ನಿಹಾಲ್ ರಜಪೂತ, ಹಿರಿಯ ನಟ ಅನಂತನಾಗ್ ಇದ್ದರು.

    ನಿಮ್ಮ ಅಚ್ಚುಮೆಚ್ಚಿನ ಹೀರೋ ಯಾರು ಎನ್ನುವ ನಿರೂಪಕಿ ಪ್ರಶ್ನೆಗೆ ಡಾ. ವಿಜಯ ಸಂಕೇಶ್ವರ ಅವರ ಪ್ರತಿಕ್ರಿಯೆ ಸ್ವಾರಸ್ಯಕರ ಹಾಗೂ ಮಾದರಿ ಎನ್ನುವಂತಿತ್ತು. ‘ನನ್ನ ಅಚ್ಚುಮೆಚ್ಚಿನ ಹೀರೋ ನಾನೇ’ ಎಂದರು. ‘ನನ್ನ ನೆಚ್ಚಿನ ಹೀರೋಯಿನ್ ಎಂದರೆ ನನ್ನ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ’ ಎಂದು ಹೇಳುವ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ‘ತಾವೇ ಹೀರೋ ಹಾಗೂ ಪತ್ನಿಯೇ ಹಿರೋಯಿನ್ ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಇರಬೇಕು’ ಎಂದೂ ಅವರು ಹೇಳಿದರು.

    ಕಾಶ್ಮೀರದಲ್ಲೂ ವಿಆರ್​ಎಲ್ ಶಾಖೆ

    ಕಾಶ್ಮೀರದ ಶ್ರೀನಗರದಲ್ಲೂ ವಿಆರ್​ಎಲ್ ಲಾಜಿಸ್ಟಿಕ್ಸ್​ನ ಶಾಖೆ ಇರಬೇಕು ಎನ್ನುವ ಆಸೆ ಇತ್ತು. ಮುಂಬರುವ ದೀಪಾವಳಿಗೆ ಶ್ರೀನಗರ ಸೇರಿ ಕಾಶ್ಮೀರದ ನಾಲ್ಕು ಊರುಗಳಲ್ಲಿ ಶಾಖೆಗಳು ಆರಂಭವಾಗಲಿವೆ. ಪ್ರಸ್ತುತ ಒಂದು ವರ್ಷದಲ್ಲಿ 100 ಹೊಸ ಶಾಖೆಗಳನ್ನು ತೆರೆಯುವ ಇಚ್ಛೆಯಿತ್ತು. ಕೇವಲ 2 ತಿಂಗಳಲ್ಲಿ 45 ಶಾಖೆಗಳು ಆರಂಭವಾಗಿವೆ. ಈ ಸಾಧನೆಗೆ ಸಂಸ್ಥೆಯ ಸಿಬ್ಬಂದಿ ಶ್ರಮವೇ ಕಾರಣ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಸಂಕೇಶ್ವರರು ಒಟಿಟಿಗೂ ಧುಮುಕಲಿ…

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್ಇತ್ತೀಚೆಗೆ ಒಟಿಟಿ ವೇದಿಕೆಗಳ ಬಳಕೆ ಹೆಚ್ಚಾಗುತ್ತಿದೆ. ಈ ವೇದಿಕೆಯತ್ತಲೂ ನೀವೇಕೆ ಧುಮುಕಬಾರದು ಎಂಬ ಸಲಹೆಯನ್ನು ವಿಜಯ ಸಂಕೇಶ್ವರ ಅವರಿಗೆ ಹಿರಿಯ ನಟ ಅನಂತನಾಗ್ ನೀಡಿದ್ದಾರೆ. ‘ಇತ್ತೀಚೆಗಷ್ಟೇ ನಾನು ವಿಜಯ ಸಂಕೇಶ್ವರರ ಮನೆಗೆ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಒಂದಷ್ಟು ಚರ್ಚೆ ನಡೆಯಿತು. ಎಲ್ಲೆಡೆ ಒಟಿಟಿ ಪ್ರಯತ್ನಗಳಾಗುತ್ತಿವೆ. ನೀವು ಆ ಥರದ ವೇದಿಕೆ ಸೃಷ್ಟಿಸಲು ಗಂಭೀರವಾಗಿ ವಿಚಾರಿಸಬಹುದು ಎಂದು ಹೇಳಿದ್ದೆ. ಅದಕ್ಕವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುದನ್ನು ನೋಡಬೇಕಿದೆ. ಅದೇ ರೀತಿ ಈ ಸಂಸ್ಥೆಯಿಂದ ಹೆಚ್ಚೆಚ್ಚು ಸಿನಿಮಾಗಳು ಬರಬೇಕು’ ಎಂದು ಭೇಟಿಯ ಮಾತುಕತೆಯನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

    ಡಾ. ವಿಜಯ ಸಂಕೇಶ್ವರ ಅವರು ರಿಯಲ್ ಹೀರೋ. ಕನ್ನಡ ಸಿನಿಮಾ ಚಿತ್ರರಂಗಕ್ಕೆ ಅವರು ಆಗಮಿಸಿದ್ದು ತುಂಬಾ ಖುಷಿಯಾಗಿದೆ. ಡಾ. ಸಂಕೇಶ್ವರ ಅವರ ವಿಜಯಾನಂದ ಚಿತ್ರವು ಜನಕ್ಕೆ ದೊಡ್ಡ ಸ್ಪೂರ್ತಿಯಾಗಲಿದೆ.

    | ಕ್ರೇಜಿಸ್ಟಾರ್ ರವಿಚಂದ್ರನ್

     

    ವಿಜಯಾನಂದ ಚಿತ್ರ ವಿಜಯ ಸಾಧಿಸಿ ಆನಂದ ನೀಡಲಿದೆ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಸಂಸ್ಥೆಗೆ ಸ್ವಾಗತ.

    | ಗೋಲ್ಡನ್ ಸ್ಟಾರ್ ಗಣೇಶ್

     

    ಕೋವಿಡ್ ಹಾವಳಿ ನಂತರದಲ್ಲಿ ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಪ್ರವೇಶದ ಮೂಲಕ ಕನ್ನಡ ಚಲನಚಿತ್ರ ಉದ್ಯಮವು ಈಗ ಪುನರುಜ್ಜೀವನ ಕಂಡಿದೆ. ಇವತ್ತಿನ ‘ವಿಜಯಾನಂದ’ ಚಲನಚಿತ್ರಕ್ಕೆ ಕ್ಲ್ಯಾಪ್ ಹಾಕುವ ಮೂಲಕ ಹೊಸ ಭರವಸೆ ಮೂಡಿದೆ. ಬಹಳಷ್ಟು ಕಲಾವಿದರು, ತಂತ್ರಜ್ಞರ ಜೀವನದಲ್ಲಿ ಮತ್ತೆ ಹೊಸ ಉತ್ಸಾಹ ಹೊಮ್ಮಿದೆ.

    | ವಿನಯಾಪ್ರಸಾದ್ ನಟಿ

     

    ಕನ್ನಡ ಚಲನಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿದೆ. ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ಸ್​ವತಿಯಿಂದ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ವಿಶ್ವಾಸ ಮೂಡಿದೆ. ‘ವಿಜಯಾನಂದ’ ಚಲನಚಿತ್ರವೂ ಜನಮಾನಸದಲ್ಲಿ ಉಳಿಯಲಿದೆ.

    | ಶೈನ್ ಶೆಟ್ಟಿ ನಟ

    ವೆಬ್​ಸರಣಿಯಲ್ಲಿಯೂ ಡಾ. ಸಂಕೇಶ್ವರ ಯಶೋಗಾಥೆ

    ‘ಡಾ. ವಿಜಯ ಸಂಕೇಶ್ವರ ಅವರ ಸಾಧನೆ ಬಗ್ಗೆ ತಿಳಿಯುತ್ತಾ ಹೋದೆ. ಸಾಕಷ್ಟು ಕುತೂಹಲಭರಿತ ಅಂಶಗಳು ಲಭಿಸಿದವು. ಕನ್ನಡ ಚಿತ್ರರಂಗಕ್ಕೆ ‘ಬಯೋಪಿಕ್’ ಆಧಾರಿತ ಚಲನಚಿತ್ರವೊಂದನ್ನು ಕೊಡಬೇಕು ಅನ್ನಿಸಿತು. ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದೆ. ಅವರು ಒಪ್ಪಿಕೊಂಡರು. ಇದು ನನ್ನ ಸುದೈವ. ಹಾಗಾಗಿಯೇ ‘ವಿಜಯಾನಂದ’ ಚಲನಚಿತ್ರಕ್ಕೆ ಕೈ ಹಾಕಿದೆ ಎಂದು ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ ಹೇಳಿದರು.

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
    ಸುದ್ದಿಗೋಷ್ಠಿಯಲ್ಲಿ ಡಾ. ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ, ಅನಂತನಾಗ್, ವಿನಯಾಪ್ರಸಾದ್, ನಿಹಾಲ್ ರಜಪೂತ, ರಿಶಿಕಾ ಶರ್ಮಾ, ಶೈನ್ ಶೆಟ್ಟಿ ಇತರರು ಇದ್ದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರ ಸುಮಾರು ಎರಡು ಗಂಟೆಗಳ ಅವಧಿಯದ್ದಾಗಿರಲಿದೆ. ಡಾ. ಸಂಕೇಶ್ವರ ಅವರ ಸಂಪೂರ್ಣ ಜೀವನವನ್ನು ಈ ಸೀಮಿತ ಅವಧಿಯಲ್ಲಿ ಕಟ್ಟಿಕೊಡಲು ಕಷ್ಟ. ಹೀಗಾಗಿ, ವೆಬ್​ಸೀರಿಸ್ ಮೂಲಕ ವಿವರಣಾತ್ಮಕವಾಗಿ ತೋರಿಸುವ ಉದ್ದೇಶವಿದೆ ಎಂದರು. ‘ಉತ್ತರ ಕರ್ನಾಟಕದ ಪ್ರತಿಭಾವಂತ ನಟ ನಿಹಾಲ್ ರಜಪೂತ ಅವರು ಡಾ. ವಿಜಯ ಸಂಕೇಶ್ವರ ಪಾತ್ರ ಮಾಡುತ್ತಿದ್ದಾರೆ. ಡಾ.ವಿಜಯ ಸಂಕೇಶ್ವರರ ತಂದೆ ಪಾತ್ರದಲ್ಲಿ ಅನಂತನಾಗ್, ತಾಯಿ ಪಾತ್ರದಲ್ಲಿ ವಿನಯಾಪ್ರಸಾದ್ ನಟಿಸಲಿದ್ದಾರೆ. ಆನಂದ ಸಂಕೇಶ್ವರರ ಪಾತ್ರವನ್ನು ಭರತ ಭೂಪಣ್ಣ, ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರವನ್ನು ಸಿರಿ ಪ್ರಹ್ಲಾದ, ಶ್ರೀಮತಿ ವಾಣಿ ಸಂಕೇಶ್ವರ ಪಾತ್ರವನ್ನು ಅರ್ಚನಾ ಕೊಟ್ಟಿಗಿ ಮಾಡಲಿದ್ದಾರೆ. ಶೈನ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಅವರು ಗಣೇಶ ಮನ್ಷಾ ಪಾತ್ರ ನಿರ್ವಹಿಸಿದ್ದು, ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ. 4 ಹಾಡುಗಳನ್ನು ಕೊಟ್ಟಿದ್ದೇವೆ. ಒಂದು ರೊಮ್ಯಾನ್ಸ್ ಸಾಂಗ್ ಇದೆ. ಉಳಿದವು ಜನರಲ್ಲಿ ಸ್ಪೂರ್ತಿ ತುಂಬಲಿವೆ ಎಂದು ರಿಶಿಕಾ ಹೇಳಿದರು. ಡಾ. ಸಂಕೇಶ್ವರ ಅವರು ಸಾರಿಗೆ ರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ನಿರ್ದೇಶಕಿ ರಿಶಿಕಾ ತಂದಿಟ್ಟ ಸ್ಕ್ರಿಪ್ಟ್ ನೋಡಿ ಒಪ್ಪಿಕೊಂಡೆ. ಇದು ನನಗೊಲಿದು ಬಂದ ಸದಾವಕಾಶ ಎಂದು ಹಿರಿಯ ನಟ ಅನಂತನಾಗ್ ಹೇಳಿದರು. ನಿಹಾಲ್ ರಜಪೂತ ಮಾತನಾಡಿ, ‘ನನ್ನ ಜೀವನದಲ್ಲಿ ಸ್ಮರಣೀಯ ದಿನವಿದು ಎಂದರು.

    PHOTOS| ವಿಜಯಾನಂದ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕಲರ್​ಫುಲ್​ ಫೋಟೋ ಝಲಕ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts