More

    ವಿದ್ಯಮಾನ: ಬಂಗಾಳ ಅಸ್ಮಿತೆ v/s ರಾಷ್ಟ್ರೀಯತೆ

    ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಇರುವಂತೆಯೇ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಧಿಕಾರ ಕೈತಪ್ಪದಂತೆ ಹಲವು ತಂತ್ರಗಳನ್ನು ಹೆಣೆಯುತ್ತಿದ್ದರೆ, ಶಕ್ತಿವರ್ಧಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯತೆಯ ಆಧಾರದಲ್ಲೇ ಜನರೆದುರು ಹೋಗುತ್ತಿದೆ. ಬಿಹಾರ ಯಶಸ್ಸಿನಿಂದ ಬೀಗಿರುವ ಓವೈಸಿ ಕೂಡ ಬಂಗಾಳದ ಚುನಾವಣಾ ಕಣ ಪ್ರವೇಶಿಸಿದ್ದಾರೆ. ಈ ನಡುವೆ ರಾಜಕೀಯ ಹಿಂಸಾಚಾರ ಆತಂಕ ಮೂಡಿಸಿದ್ದು, ಬಂಗಾಳ ದಂಗಲ್ ಬಗ್ಗೆ ವಿವರಿಸಿದ್ದಾರೆ ರವೀಂದ್ರ ಎಸ್. ದೇಶಮುಖ್.

    ಮೂರು ದಶಕಗಳಿಗೂ ಹೆಚ್ಚು ಕಾಲದ ಕಮ್ಯುನಿಸ್ಟ್ ಕೋಟೆಯನ್ನು ಛಿದ್ರ ಮಾಡಿ 2011ರಲ್ಲಿ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ‘ಏಕಲಾ ಚಲೋ ರೇ’ ಘೋಷಣೆ ಮೂಲಕ ಸಂಚಲನ ಮೂಡಿಸಿದ್ದ ಮಮತಾ ಈ ಬಾರಿಯೂ ಬಂಗಾಳಿ ಅಸ್ಮಿತೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆ. ‘ಹೊರಗಿನ’ ಪಕ್ಷಗಳಿಗೆ ಬಂಗಾಳಿಗಳು ಮನ್ನಣೆ ನೀಡುವುದಿಲ್ಲ ಎಂದು ಹೇಳುತ್ತಿದ್ದರೂ, 2019ರ ಲೋಕಸಭಾ ಚುನಾವಣೆ ಫಲಿತಾಂಶ ಅವರೊಳಗೆ ಕಳವಳ ಮೂಡಿಸಿರುವುದು ಸುಳ್ಳಲ್ಲ. 294 ಸದಸ್ಯಬಲದ ವಿಧಾನಸಭೆಯಲ್ಲಿ ಕಳೆದ ಬಾರಿ (2016) ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ 42ರಲ್ಲಿ 18 ಸ್ಥಾನ ತನ್ನದಾಗಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆ, ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿರುವುದು ಸ್ಪಷ್ಟ. ಈ ನಡುವೆ, ಬಿಹಾರ ಚುನಾವಣೆಯಲ್ಲಿ ಸಿಕ್ಕಿರುವ ಯಶಸ್ಸಿನಿಂದ ಬೀಗುತ್ತಿರುವ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಬಂಗಾಳದಲ್ಲೂ ತಮ್ಮ ಪಕ್ಷ ವಿಧಾನಸಭೆಯಲ್ಲಿ ಖಾತೆ ತೆರೆಯುವ ವಿಶ್ವಾಸ ಹೊಂದಿದ್ದಾರೆ. ಆದರೆ, ಓವೈಸಿ ಪಕ್ಷದ ಸ್ಪರ್ಧೆಯಿಂದ ನಷ್ಟವಾಗುವುದು ಟಿಎಂಸಿಗೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

    ಸಿಎಎ ವಿರೋಧಿ ಚಳವಳಿಯನ್ನು ಮುಂದಿಟ್ಟುಕೊಂಡು ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾದ ಮಮತಾ, ಚುನಾವಣಾ ಪ್ರಚಾರದಲ್ಲೂ ಇದನ್ನೇ ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರಿಗೆ ಟಿಎಂಸಿ ಸರ್ಕಾರ ಎಲ್ಲ ಅನುಕೂಲತೆಗಳನ್ನು ಮಾಡಿಕೊಟ್ಟಿದೆ, ಈ ಮೂಲಕ ಆಂತರಿಕ ಭದ್ರತೆಯನ್ನು ನಿರ್ಲಕ್ಷಿಸಿದೆ ಎಂಬುದು ಬಿಜೆಪಿ ಆರೋಪ. 2021ರ ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದರೂ, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆದರೆ, ಆರೋಪ-ಪ್ರತ್ಯಾರೋಪಗಳ ಹಂತ ದಾಟಿ ರಾಜಕೀಯ ಹಿಂಸಾಚಾರ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ, ಟಿಎಂಸಿ ಪಕ್ಷಗಳ ಹಲವು ಕಾರ್ಯಕರ್ತರು ಹತ್ಯೆಗೀಡಾಗಿದ್ದು, ವೈಷಮ್ಯದ ಸ್ಥಿತಿ ತಾರಕಕ್ಕೆ ಏರುತ್ತಿದೆ. ಮುಂದೆ ಇದು ತೀವ್ರ ಹಿಂಸಾಚಾರದ ಸ್ವರೂಪ ಪಡೆದುಕೊಂಡರೆ ಅದನ್ನು ನಿಭಾಯಿಸಲು ಕಡುಕಷ್ಟ ಪಡಬೇಕಾದಿತು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸದ ವೇಳೆ ಅವರ ಬೆಂಗಾವಲು ಪಡೆ ಮೇಲೆ ಕಲ್ಲುತೂರಾಟ ನಡೆದಿರುವುದು ಇಂಥ ಘಟನೆಗಳಿಗೆ ತಾಜಾ ನಿದರ್ಶನ.

    ವಿದ್ಯಮಾನ: ಬಂಗಾಳ ಅಸ್ಮಿತೆ v/s ರಾಷ್ಟ್ರೀಯತೆ

    ಜಿದ್ದಾಜಿದ್ದಿನ ಸ್ಪರ್ಧೆ

    ಪ.ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಆಧಾರದ ಮೇಲೆ ಮತಬೇಟೆಗೆ ಮುಂದಾಗಿದೆ. ಟಿಎಂಸಿ ಕೂಡ ಮಮತಾ ಬ್ಯಾನರ್ಜಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳಲಿದೆ. ಅದಕ್ಕೆಂದೆ, ‘ಬಾಂಗ್ಲಾರ್ ಗೂರ್ಬೊ ಮಮತಾ’ (ಬಂಗಾಳಿಯರ ಹೆಮ್ಮೆ) ಎಂಬ ಅಭಿಯಾನವನ್ನೂ ಪ್ರಾರಂಭಿಸಿದೆ. ಸಂಘಟನೆ, ವರ್ಚಸ್ಸು ಕಳೆದುಕೊಂಡಿರುವ ಎಡಪಕ್ಷಗಳು ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ, ನೇರ ಫೈಟ್ ನಡೆಯುವುದು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ.

    ವಿದ್ಯಮಾನ: ಬಂಗಾಳ ಅಸ್ಮಿತೆ v/s ರಾಷ್ಟ್ರೀಯತೆರಕ್ತರಂಜಿತ ರಾಜಕಾರಣ

    ಹಿಂದೆ ಎಡಪಕ್ಷಗಳು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರದ ಘಟನೆ ನಡೆಯುತ್ತಿದ್ದವು. ಈಗ ಅದೇ ಸ್ಥಿತಿ ಮರುಕಳಿ ಸಿದ್ದು, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿವೆ. ಜನರು ಯಾವೆಲ್ಲ ಬೆಳವಣಿಗೆ ಗಳನ್ನು ಕಂಡು ರೋಸಿ ಹೋಗಿದ್ದರೋ ಮತ್ತೆ ಅದೇ ರೀತಿಯ ಘಟನೆಗಳು ನಡೆಯುತ್ತಿರುವುದು ಶೋಚನೀಯ.

    ಕಮಲಕ್ಕೆ ಸವಾಲು

    • ಇತರ ರಾಜ್ಯಗಳಂತೆ ಪ.ಬಂಗಾಳದಲ್ಲಿ ಕಮಲ ಅರಳಿಸುವುದು ಬಿಜೆಪಿ ಪಾಲಿಗೆ ಸುಲಭವಲ್ಲ.
    • ರಾಷ್ಟ್ರೀಯ ವಿಚಾರಗಳನ್ನು ಮುಂದಿಡುತ್ತಿರುವ ಅದು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಮಾತನಾಡ ದಿದ್ದರೆ ಜನ ಒಪ್ಪಿಕೊಳ್ಳುವುದು ಕಷ್ಟ.
    • ಬೆರಳೆಣಿಕೆಯಷ್ಟು ನಾಯಕರನ್ನು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಗೆ ಸಮರ್ಥ ನೇತಾರರಿಲ್ಲ.
    • ಮಮತಾ ವಿರುದ್ಧ ಪ್ರಬಲ ರಾಜಕೀಯ ಅಸ್ತ್ರ ಹುಡುಕಲು ಈಗಲೂ ಕಷ್ಟಪಡುತ್ತಿದೆ. ಆಡಳಿತವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಸಾಧ್ಯವಾಗುತ್ತಿಲ್ಲ.
    • ಪ.ಬಂಗಾಳದ ಬಗ್ಗೆ ತನ್ನ ಕನಸು ಏನು ಎಂಬುದನ್ನೂ ಸ್ಪಷ್ಟವಾಗಿ ಕಟ್ಟಿಕೊಟ್ಟಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಸಂಘಟನೆ ಇಲ್ಲ.
    • ಶೇಕಡ 30ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಟಿಎಂಸಿಯ ಭದ್ರ ಮತಬ್ಯಾಂಕ್ ಎಂಬ ಮಾತಿದೆ. ಇದನ್ನು ಭೇದಿಸಲು ಬಿಜೆಪಿ ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂಬುದು ಸ್ಪಷ್ಟಗೊಂಡಿಲ್ಲ.

    ಕರಗುತ್ತಿದೆ ಮಮತೆ

    • ತೃಣಮೂಲ ಕಾಂಗ್ರೆಸಿನ ಕೆಳಹಂತದ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿರುವ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಟಿಎಂಸಿ ಪರ ಚುನಾವಣೆ ತಂತ್ರ ರೂಪಿಸುತ್ತಿರುವ ಪ್ರಶಾಂತ್ ಕಿಶೋರ್ ಈ ವಿಷಯವನ್ನು ಮಮತಾ ಗಮನಕ್ಕೆ ತಂದಿದ್ದಾರೆ.
    • ಪಕ್ಷ ಮತ್ತು ಸರ್ಕಾರದೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಮಮತಾ ಭಾವನಾತ್ಮಕ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ.
    • ಪಕ್ಷದಲ್ಲಿ ಆಂತರಿಕ ಕಲಹವೂ ಜೋರಾಗಿದೆ. ನೀರಾವರಿ ಮತ್ತು ಸಾರಿಗೆ ಸಚಿವ ಸುಮೇದು ಅಧಿಕಾರಿ ಸೇರಿ ಹಲವು ನಾಯಕರು ಈಗಾಗಲೇ ಪಕ್ಷ ತ್ಯಜಿಸಿದ್ದರೆ, ಮತ್ತೆ ಕೆಲವರು ತುದಿಗಾಲಿನಲ್ಲಿ ನಿಂತಿದ್ದಾರೆ.
    • ಕೇಂದ್ರ ಸರ್ಕಾರದೊಂದಿಗೆ ಸತತ ಸಂಘರ್ಷದಲ್ಲಿ ತೊಡಗಿರುವ ಮಮತಾ ನಡೆಯಿಂದ ಕೇಂದ್ರದ ಹಲವು ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಿಲ್ಲ. ಈ ಬಗ್ಗೆ ಬಹಳಷ್ಟು ಜನರಲ್ಲಿ ಅಸಮಾಧಾನ ಮನೆಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts