More

    ಸಾಂಕ್ರಾಮಿಕ ರೋಗಗಳ ನಿರ್ಲಕ್ಷೃ, ಮಲೇರಿಯಾ, ಡೆಂಘೆ ರೋಗ ಪ್ರಮಾಣ ಹೆಚ್ಚಳ

    – ಪ್ರಕಾಶ್ ಮಂಜೇಶ್ವರ, ಮಂಗಳೂರು

    ಕರಾವಳಿಯಲ್ಲಿ ಕರೊನಾ ಆತಂಕದ ನಡುವೆ ಮಳೆಗಾಲದ ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚಿನ ಜನರು ನಿರ್ಲಕ್ಷೃ ವಹಿಸಿದಂತೆ ತೋರುತ್ತದೆ. ಆಸ್ಪತ್ರೆಗೆ ತೆರಳಿದರೆ ಎಲ್ಲಿ ಕರೊನಾ ಟೆಸ್ಟ್ ಪಾಸಿಟಿವ್ ಬಂದು ಕ್ವಾರಂಟೈನ್ ಆಗಬೇಕಾಗುತ್ತದೋ ಎನ್ನುವ ಭೀತಿಯಿಂದ ಕೆಲವರು ಪ್ರಾಣಕ್ಕೆ ಸಂಚಕಾರ ತಂದುಕೊಂಡ ಘಟನೆಗಳೂ ನಡೆಯುತ್ತಿವೆ.

    ಪ್ರತಿವರ್ಷದಂತೆ ಈ ವರ್ಷವೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿವೆ.
    ಈ ವರ್ಷ ಆಗಸ್ಟ್ ತನಕ ಜಿಲ್ಲೆಯಲ್ಲಿ ದೃಢಪಟ್ಟ ಮಲೇರಿಯಾ ಪ್ರಕರಣಗಳು ಸುಮಾರು 843. ಇದರಲ್ಲಿ ಅಧಿಕ ಮಳೆಯಾದ ಆಗಸ್ಟ್ ತಿಂಗಳೊಂದರಲ್ಲೇ 190 ಪ್ರಕರಣ ದಾಖಲಾಗಿವೆ. ಜಿಲ್ಲೆಯ ಮಲೇರಿಯಾ ದೃಢಪಟ್ಟ ಪ್ರಕರಣಗಳ ಪೈಕಿ ಶೇ.95ಕ್ಕಿಂತ ಅಧಿಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಈ ವರ್ಷ ಜುಲೈ ತನಕ ಜಿಲ್ಲೆಯಲ್ಲಿ ದಾಖಲಾದ ಡೆಂಘೆ ಪ್ರಕರಣಗಳು 203.

    ಇತರ ಪ್ರದೇಶಗಳಿಗೆ ಹೋಲಿಸಿದರೆ ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 2797 ಮಲೇರಿಯಾ ಹಾಗೂ 1593 ಡೆಂಘೆ ಪ್ರಕರಣಗಳು ದಾಖಲಾಗಿದ್ದು, ಹಲವು ಸಾವು- ನೋವುಗಳಿಗೆ ಕಾರಣವಾಗಿತ್ತು. ಈ ಮೂಲಕ ಸಾಂಕ್ರಾಮಿಕ ರೋಗಗಳು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

    ವೈರಲ್ ಜ್ವರ ಪ್ರಕರಣ ಜಾಸ್ತಿ: ವೈರಲ್ ಜ್ವರ ಪ್ರಕರಣಗಳು ಏರುಗತಿಯಲ್ಲಿದೆ. ಇದು ಬೆನ್ನು, ಕಾಲು ಮುಂತಾದ ಭಾಗಗಳಲ್ಲಿ ನೋವು ಸಹಿತ ಲಕ್ಷಣಗಳನ್ನು ಹೊಂದಿರುವ ಬಗ್ಗೆ ಕೆಲವು ವೈದ್ಯರು ಗಮನ ಸೆಳೆದಿದ್ದಾರೆ. ಕರಾವಳಿಯಲ್ಲಿ ಸಾಮಾನ್ಯವಾಗಿ ವರ್ಷಂಪ್ರತಿ ಮೇ ತಿಂಗಳಿಂದ ನವೆಂಬರ್ ತನಕ ಸಾಂಕ್ರಾಮಿಕ ರೋಗಗಳು ಇರುತ್ತವೆ. ಜ್ವರ, ನೆಗಡಿ, ಮೈಕೈ ನೋವು ಕರೊನಾ ಸಹಿತ ಎಲ್ಲ ಸಾಂಕ್ರಾಮಿಕ ರೋಗಗಳ ಲಕ್ಷಣ. ಆದ್ದರಿಂದ ಜ್ವರ ಪೀಡಿತರು ನಿರ್ಲಕ್ಷೃ ವಹಿಸದೆ ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸುವುದು ಸೂಕ್ತ ಕ್ರಮ ಎನ್ನುತ್ತಾರೆ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್ ಕುಲಾಲ್.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಹರಿದು ಹೋಗುತ್ತಿದ್ದ ನೀರು ಅಲ್ಲಲ್ಲಿ ನಿಲ್ಲಲು ಆರಂಭವಾಗಿದೆ. ಹಲವು ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ಟೆರೇಸ್‌ಗಳಲ್ಲಿ ಮತ್ತೆ ಡೆಂಘೆ ಲಾರ್ವಗಳು ಪತ್ತೆಯಾಗಿವೆ. ಬಂದರು, ದಕ್ಕೆ, ಕಂಕನಾಡಿ ಮುಂತಾದ ಕಡೆ ಸೊಳ್ಳೆ ಉತ್ಪತ್ತಿ ತಾಣಗಳು ಅಧಿಕವಿದೆ. ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಮತ್ತು ಸಕಾಲದಲ್ಲಿ ರೋಗ ಪತ್ತೆ ಕಾರ್ಯದಲ್ಲಿ ಸಾರ್ವಜನಿಕರು ಇಲಾಖೆ ಅಧಿಕಾರಿಗಳ ಜತೆ ಕೈಜೋಡಿಸಬೇಕು.
    -ಡಾ.ನವೀನ್ ಕುಲಾಲ್, ಮಲೇರಿಯಾ ನಿಯಂತ್ರಣಾಧಿಕಾರಿ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts