More

    ಮಣ್ಣಲ್ಲಿ ಮಣ್ಣಾದ ಚಂದನವನದ ಲೀಲಮ್ಮ: ಕಲಾದೇವಿಗೆ ಕನ್ನಡ ಚಿತ್ರರಂಗದಿಂದ ಭಾವುಕ ವಿದಾಯ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ನಿನ್ನೆ (ಡಿ.08) ಸಂಜೆ ಕೊನೆಯುಸಿರೆಳೆದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ, ಎಲ್ಲರ ನೆಚ್ಚಿನ ಲೀಲಮ್ಮ ಇಂದು (ಡಿ.09) ಸಂಜೆ ಮಣ್ಣಲ್ಲಿ ಮಣ್ಣಾದರು. ಇಡೀ ಕನ್ನಡ ಚಿತ್ರರಂಗ ಪ್ರೇಮಮಯಿಗೆ ಭಾವುಕ ವಿದಾಯ ಹೇಳಿತು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲೀಲಾವತಿಯವರ ಅಂತ್ಯಕ್ರಿಯೆ ನೆರವೇರಿತು. ಬಂಟ ಸಂಪ್ರದಾಯದಂತೆ ಪುತ್ರ ವಿನೋದ್​ ರಾಜ್​ ಅವರು ಅಂತಿಮ ವಿಧಿವಿಧಾನಗಳನ್ನು ನೆಡೆಸಿಕೊಟ್ಟರು. ರಾಜಕೀಯ ನಾಯಕರು ಮತ್ತು ಕನ್ನಡ ಚಿತ್ರರಂಗದ ಕಲಾವಿದರು ಲೀಲಮ್ಮರ ಅಂತಿಮ ಪಯಣಕ್ಕೆ ಭಾವುಕ ವಿದಾಯ ಹೇಳಿದರು.

    ನಿನ್ನೆ ಸಂಜೆ ವಯೋಸಹಜ ಕಾಯಿಲೆ ಹಾಗೂ ಹೃದಯಾಘಾತದಿಂದ ಲೀಲಮ್ಮ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ನಕ್ಷತ್ರವೊಂದು ಮಿಂಚಿ ಮರೆಯಾಗಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಬದುಕಿನ ಉದ್ದಕ್ಕೂ ಕಷ್ಟಗಳು, ಅವಮಾನಗಳನ್ನು ಎದುರಿಸಿ ಮತ್ತು ನೋವನ್ನು ನುಂಗಿ ಬದುಕಿದರು. ತಮ್ಮ ಜೀವನವನ್ನು ಮಗನಿಗಾಗಿಯೇ ಮುಡಿಪಾಗಿಟ್ಟರು. ಪುತ್ರ ವಿನೋದ್​ ರಾಜ್​ ಕೂಡ ತಾಯಿಗಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟರು. ಆದರೆ, ವಿಧಿಯ ಕರೆಗೆ ಲೀಲಮ್ಮ ಓಗೊಟ್ಟಿದ್ದು, ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾರೆ.

    1938ರಲ್ಲಿ ಲೀಲಾ ಕಿರಣ್​ ಆಗಿ ಜನಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಲೀಲಾವತಿಯಾಗಿ ಗುರುತಿಸಿಕೊಂಡ ಕನ್ನಡಿಗರ ನೆಚ್ಚಿನ ಲೀಲಮ್ಮ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. 50 ವರ್ಷದ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡವೊಂದರಲ್ಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಡಾ. ರಾಜ್​ಕುಮಾರ್​ ಜತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಾಂ ಸಿನಿಮಾಗಳಲ್ಲಿನ ಅವರ ಅಭಿನಯ ಎಂದಿಗೂ ಮರೆಯುವಂತಿಲ್ಲ. ಇದಿಷ್ಟೇ ಅಲ್ಲದೆ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 70 ದಶಕದಲ್ಲಿ ಮುಂಚೂಣಿ ನಾಯಕಿಯರಲ್ಲಿ ಲೀಲಾವತಿ ಕೂಡ ಒಬ್ಬರಾಗಿದ್ದರು. ತಮ್ಮ ಸಮಾಜಮುಖಿ ಕೆಲಸಗಳಿಂದ ಪ್ರೇಮಮಯಿ ಎನಿಸಿಕೊಂಡು ಲೀಲಮ್ಮ ಇಂದು ಮತ್ತೆಂದು ಬಾರದ ಲೋಕಕ್ಕೆ ಪಯಣಿಸಿರುವುದು ಕಲಾ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ.

    ಕನ್ನಡದ ಚಿತ್ರರಂಗದ ‘ನಂದಾದೀಪ’ ಲೀಲಮ್ಮರ ಅಪರೂಪದ ಫೋಟೋಗಳು ಇಲ್ಲಿವೆ…

    ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts