More

    ಸಾಲ ಬಾಕಿ ಇರುವ ವಾಹನ ಖರೀದಿಸಿ ನಕಲಿ ಎನ್‌ಒಸಿ ಸೃಷ್ಟಿಸಿ ಕಾರು ಮಾರಾಟ! ಬ್ಯಾಂಕ್​-ಗ್ರಾಹಕರಿಗೆ ವಂಚಿಸುತ್ತಿದ್ದ ಮೂವರು ಖಾಕಿ ಬಲೆಗೆ

    ಬೆಂಗಳೂರು: ಬ್ಯಾಂಕ್ ಸಾಲ ಬಾಕಿ ಇರುವ ಕಾರುಗಳನ್ನು ಖರೀದಿ ಮಾಡಿ ನಕಲಿ ಎನ್‌ಒಸಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

    ಸೋಲದೇವನಹಳ್ಳಿ ನಿವಾಸಿ ಸಿ. ಪ್ರಭಾಕರ (40), ಚಾಮರಾಜಪೇಟೆಯ ಆರ್. ಕಿರಣ್ (44) ಮತ್ತು ಮಂಡ್ಯ ಜಿಲ್ಲೆ ನಾಗಮಂಗಲ ನಿವಾಸಿ ಎಸ್. ಪ್ರಕಾಶ ಅಲಿಯಾಸ್ ಚೀಟಿ ಪ್ರಕಾಶ (33) ಬಂಧಿತರು. 90 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 7 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಭಾಕರ ಮತ್ತು ಪ್ರಕಾಶ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದರು. ಇನ್ನೂ ಕಿರಣ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಬ್ಯಾಂಕ್ ಹೆಸರಿನಲ್ಲಿ ನಕಲಿ ಎನ್‌ಒಸಿ ಮತ್ತು ಸಿದ್ಧಪಡಿಸಿಕೊಂಡು ತನ್ನ ಸಹಚರರಿಗೆ ನೀಡುತ್ತಿದ್ದ.

    ಪ್ರಭಾಕರ್ ಮತ್ತು ಪ್ರಕಾಶ್, ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವ್ಯವಹಾರದ ವೇಳೆ ಬ್ಯಾಂಕ್ ಸಾಲ ಇರುವ ವಾಹನಗಳ ಮಾಲೀಕರ ಪರಿಚಯ ಆಗುತ್ತಿತ್ತು. ಅಂತಹವರಿಗೆ ಪುಸಲಾಯಿಸಿ ಬಾಕಿ ಇರುವ ಸಾಲವನ್ನು ಬ್ಯಾಂಕ್‌ಗೆ ಪಾವತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಕಡಿಮೆ ಬೆಲೆಗೆ ಅವರ ಬಳಿ ಕಾರುಗಳನ್ನು ಖರೀದಿ ಮಾಡುತ್ತಿದ್ದರು.

    ನಂತರ ಕಾರಿನ ಮೇಲೆ ಯಾವ ಬ್ಯಾಂಕ್‌ನಲ್ಲಿ ಸಾಲವಿದೆ ಎಂದು ತಿಳಿದುಕೊಂಡು ಕಿರಣ್‌ಗೆ ಮಾಹಿತಿ ನೀಡುತ್ತಿದ್ದರು. ಕಿರಣ್, ಆ ಕಾರಿನ ನೋಂದಣಿ ಮತ್ತು ಸಂಬಂಧಪಟ್ಟ ಬ್ಯಾಂಕ್‌ಗೆ ಹೋಲಿಕೆ ಆಗುವಂತೆ ಕಾರಿನ ಮೇಲಿನ ಸಾಲ ಪೂರ್ಣ ಪಾವತಿ ಮಾಡಲಾಗಿದೆ ಎಂದು ನಕಲಿ ಎನ್‌ಒಸಿ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪತ್ರವನ್ನು ಸೃಷ್ಟಿಸುತ್ತಿದ್ದ.

    ನಕಲಿ ದಾಖಲೆಗಳನ್ನು ಇಟ್ಟುಕೊಂಡು ಪ್ರಭಾಕರ ಮತ್ತು ಪ್ರಕಾಶ್, ಸಾಲ ಬಾಕಿ ಇರುವ ಕಾರಗಳನ್ನು ಅಮಾಯಕರಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಸಾಲ ಬಾಕಿ ಇರುವ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ ಮಾಡಿದ್ದರು.

    ಅಸಲಿ ಕಾರು ಮಾಲೀಕನಿಗೆ ವಿಷಯ ತಿಳಿದು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಇನ್‌ಸ್ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಕಳೆದ 5 ವರ್ಷದಿಂದ ಆರೋಪಿಗಳು ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. 2017ರಲ್ಲಿ ಪ್ರಭಾಕರ್ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಮೇಲೆ ಮತ್ತೆ ದಂಧೆ ಶುರು ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರ್‌ಟಿಒ ಕಚೇರಿಗೂ ವಂಚನೆ: ನಕಲಿ ಎನ್‌ಒಸಿ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪ್ರಮಾಣ ಪತ್ರಗಳನ್ನೇ ಆರ್‌ಟಿಒ ಕಚೇರಿಗೆ ಕೊಟ್ಟು ಸಾಲ ಇಲ್ಲವೆಂದು ದಾಖಲೆಯಲ್ಲಿ ಬದಲು ಮಾಡುತ್ತಿದ್ದರು. ಇದರಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವರು ಸಹ ನಂಬಿ ಮೋಸಕ್ಕೆ ಒಳಗಾಗುತ್ತಿದ್ದರು.

    ಬ್ಯಾಂಕ್, ಗ್ರಾಹಕರಿಗೆ ಮೋಸ: ಬ್ಯಾಂಕ್ ಸಾಲದ ಮೇಲೆ ಕಾರು ಖರೀದಿ ಮಾಡಿರುವ ಮೊದಲ ಮಾಲೀಕ ಮತ್ತು ವಂಚಕರಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವರಿಗೂ ಮೋಸ ಆಗುತ್ತಿತ್ತು. ಇದಲ್ಲದೆ, ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿ ಕಾರು ಮಾಲೀಕನ ವಿಳಾಸ ಸಿಗದೆ ಪತ್ತೆಗೆ ಸಂಕಷ್ಟವಾಗಿತ್ತು.

    ಗದಗದಲ್ಲಿ ಶಿಕ್ಷಕನಿಂದಲೇ ಮಗನ ಕೊಲೆ: ಚಿಕಿತ್ಸೆ ಫಲಿಸದೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಸಾವು

    ಬಾಳಿ ಬದುಕಬೇಕಿದ್ದ ಮಗ-ಸೊಸೆ ಜತೆ ಸಾವಿನ ಮನೆಯ ಕದ ತಟ್ಟಿದ ತಾಯಿ! ಕಿರಿ ಮಗನ ತಪ್ಪಿಗೆ ನಡೆದೇ ಹೋಯ್ತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts