More

    ವಿಡಿಎಸ್ ಕ್ಲಾಸಿಕ್ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ.

    ಗದಗ: ನಗರದ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಪ್ರಾಥಮಿಕ ಶಾಲೆಯಲ್ಲಿ ಶಾಲಾಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ  ಹುಯಿಲಗೋಳ, ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಹಾಗೂ ಸಿ ಆರ್ ಪಿ ಗಳಾದ ಶ್ರೀ ರವಿ. ಎಂ. ಹೆಬ್ಬಳ್ಳಿ ರವರು ಜಂಟಿಯಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ,  ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಕಾಗದು ಜೊತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ, ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಿದ್ದ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳ ಪ್ರತಿಭೆ ಅನಾವರಣಕೊಂದು ಉತ್ತಮ ವೇದಿಕೆಯಾಗಿದೆ. ಮಾಹಿತಿ ಸುಲಭವಾಗಿ ಸಿಗುವ ಇಂದಿನ ದಿನಗಳಲ್ಲಿ ತರಗತಿಗೆ ಹೊಸತನ್ನು ತರಬೇಕು ಮತ್ತು ವಿದ್ಯಾರ್ಥಿಗಳಿಗೆ ಸಹಾನುಭೂತಿ ಮತ್ತು ದಯೆಯಿಂದ ಕಳಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

    ಕ್ಲಸ್ಟರ್ ಸಂಖ್ಯೆ  ೪ ರ ಸಿಆರ್‌ಪಿ ಗಳಾದ ಶ್ರೀ ರವಿ. ಎಂ. ಹೆಬ್ಬಳ್ಳಿ ರವರು ವಿಜ್ಞಾನ ಕ್ಷೇತ್ರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕ್ಲಾಸಿಕ್ ಪ್ರಾಥಮಿಕ ಶಾಲಾ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಕ್ಕಳು ತಯಾರಿಸಿಕೊಂಡು ಬಂದಿರುವ ವಿವಿಧ ಮಾದರಿಯ ವಸ್ತುಗಳ ಬಗ್ಗೆ ವಿವರಗಳನ್ನು ನೀಡುತ್ತಿರುವುದನ್ನು ಕಂಡು ಸಂತೋಷವಾಯಿತು. 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವು  ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜೊತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಗಿದೆ ಎಂದು ನುಡಿದರು.

     ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು  ಶಾಲೆಯಲ್ಲಿ ಓದುವ ಮಕ್ಕಳು ಪುಸ್ತಕದ ಹುಳುವಾಗದೆ ಇತರೆ ವಿಷಯಗಳ ಬಗ್ಗೆ, ಪಠ್ಯೇತರ ಚಟುವಟಿಕೆಯ ಬಗ್ಗೆಯೂ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಾಗಿದೆ. ವಸ್ತುಪ್ರದರ್ಶನದಲ್ಲಿ ಭಾಗವಹಿಸುವಾಗ ಮಕ್ಕಳು ಹಿಂಜರಿಕೆಯನ್ನು ಬಿಟ್ಟು ತಮಗೆ ತೋಚಿದ ವಿಷಯಗಳ ಬಗ್ಗೆ ಮಾದರಿಯನ್ನು ಮಾಡಿಕೊಂಡು ಆಸಕ್ತಿಯಿಂದ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

    ವಿಜ್ಞಾನ ವಸ್ತು ಪ್ರದರ್ಶನ ಆರಂಭವಾಗುತ್ತಿದ್ದಂತೆ ವಿವಿಧ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ಪ್ರಸ್ತುತಪಡಿಸಿದರು.  ಹನಿ ನೀರಾವರಿ ಪದ್ಧತಿ, ಪಿನ್ ಹೋಲ್ ಕ್ಯಾಮೆರಾ, ರಕ್ತ ಸಂಚಲನಾ ಮಾದರಿ, ವ್ಯವಸಾಯ ಪದ್ಧತಿ,  ಭೂಕಂಪನ ಎಚ್ಚರಿಕೆ ಗಂಟೆ, ನೀರಿನ ರಾಕೆಟ್ ಮಾದರಿ, ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ಪಕ್ಷಿಯ ಜೀವನ ಚಕ್ರ, ಜಲವಿದ್ಯುತ್ ಶಕ್ತಿ ಮಾದರಿ, ಸ್ಟೇಟಸ್ಕೋಪ ಮಾದರಿ, ನೀರಿನ ಶುದ್ಧೀಕರಣ ಮಾದರಿ, ಸರಳ ಲೋಲಕದ ಮಾದರಿ, ಅಣೆಕಟ್ಟಿನ ಮಾದರಿ, ಜ್ವಾಲಾಮುಖಿಯ ಮಾದರಿ, ಪವನ ಶಕ್ತಿ, ರೋಬೋಟ್ ಮಾದರಿ, ವಾಯುಮಾಲಿನ್ಯ ಮಾದರಿ, ಹಗಲು ರಾತ್ರಿಯ ಮಾದರಿ, ಜಲಚಕ್ರದ ಮಾದರಿ ಹಾಗೂ ವಿಜ್ಞಾನದ ಇತರೆ ಮಾದರಿಗಳನ್ನು ವಿಕ್ಷಿಸಲಾಯಿತು.

     ಪ್ರದರ್ಶನದ ಕೊನೆಯಲ್ಲಿ ಎಲ್ಲಾ ಅತಿಥಿ ಮಹನಿಯರು ವಿಭಿನ್ನ ಮಾದರಿಗಳು ಮತ್ತು ಯೋಜನೆಗಳನ್ನು ಸೂಕ್ಷ್ಮತೆಯಿಂದ ವೀಕ್ಷಿಸಿ, ಪರಿಶೀಲಿಸಿದ ನಂತರ ಮಕ್ಕಳ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಅತ್ಯುತ್ತಮ ಪ್ರಯತ್ನಗಳಿಗಾಗಿ ಪ್ರಮಾಣ ಪತ್ರ ನೀಡಿದರು ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣವರ  ಹಾಗೂ ಶ್ರೀಮತಿ ಶ್ವೇತಾ ಮೇಲಗಿರಿ ರವರಿಗೆ ಆಡಳಿತ ಮಂಡಳಿಯವರು ಕೃತಜ್ಞತೆಗಳನ್ನು ಸಲ್ಲಿಸಿದರು.

    ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ, ಸಿ ಆರ್ ಪಿ ಗಳಾದ ಶ್ರೀ ರವಿ. ಎಂ . ಹೆಬ್ಬಳ್ಳಿ, ಮುಖ್ಯೋಪಾಧ್ಯಾಯರಾದ ಶ್ರೀ ಎಂ . ಆರ್. ಡೊಳ್ಳಿನ, ಶಾಲೆಯ ಸಮಸ್ತ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts